ಶಾರದ ಅಪ್ಪಾಜಿ ಪತ್ರಿಕಾಗೋಷ್ಠಿಯಲ್ಲಿ ಆರೋಪ, ಫೆ.೩ರ ಹೋರಾಟ ಬೆಂಬಲಿಸಲು ಮನವಿ
![](https://blogger.googleusercontent.com/img/a/AVvXsEjQBpQX5BEn46nRYsOMmfpIr0mlG8mDn16dF56C9Mk7V-PbY6t--myObTGDgQhhCJmbb2wW_bl9crfTi7L9yg8RIgYvRTC9AwtZNLyb1zWM-sHHJMpnM8QG1M3cC0s3EVpcW39SRpzo5ORsGc72KRZjhjM3Z_bryavq9teb8gXacVerLcE5BLxoaspCTQ=w400-h180-rw)
ಭದ್ರಾವತಿ ಹಳೇನಗರದ ಪತ್ರಿಕಾಭವನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾರದ ಅಪ್ಪಾಜಿ ಮಾತನಾಡಿದರು.
ಭದ್ರಾವತಿ, ಜ. ೩೧: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಹಾಗು ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಪಕ್ಷದ ಚುನಾಯಿತ ಪ್ರತಿನಿಧಿಗಳು ಹಾಗೂ ಮುಖಂಡರುಗಳು ನಿರಾಸಕ್ತಿ ಹೊಂದಿದ್ದಾರೆ. ಅವರಿಗೆ ಕಾರ್ಮಿಕರ ಸಂಕಷ್ಟಗಳು ಅರಿವಿಗೆ ಬರುತ್ತಿಲ್ಲ. ಬದಲಾಗಿ ಈ ಎರಡು ಕಾರ್ಖಾನೆಗಳ ಸಮಸ್ಯೆಗಳನ್ನು ಇವರುಗಳು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆಂದು ಜೆಡಿಎಸ್ ಪಕ್ಷದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾರದ ಅಪ್ಪಾಜಿ ಆರೋಪಿಸಿದರು.
ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಖಾನೆ ಉಳಿವಿನ ಬಗ್ಗೆ ಪಕ್ಷದ ನಿಲುವು ಹಾಗು ಹೋರಾಟಗಳ ಬಗ್ಗೆ ಮಾಹಿತಿ ನೀಡಿದರು. ನನ್ನ ಪತಿ ದಿವಂಗತ ಎಂ.ಜೆ ಅಪ್ಪಾಜಿಯವರು ಕಾರ್ಮಿಕರ ಪರವಾಗಿ ನಡೆಸಿದ ಹೋರಾಟಗಳು ಇಂದಿಗೂ ನೆನಪಿಗೆ ಬರುತ್ತಿವೆ. ಪ್ರಸ್ತುತ ಅವರು ನಡೆಸಿದ ಹೋರಾಟದಂತೆ ನಾನು ಸಹ ಹೋರಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಹೋರಾಟಕ್ಕೆ ಶಕ್ತಿ ತುಂಬಲು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ಫೆ. ೩ರಂದು ನಗರಕ್ಕೆ ಆಗಮಿಸಲಿದ್ದಾರೆ ಎಂದರು.
ನಾನು ಓರ್ವ ಕಾರ್ಮಿಕನ ಪತ್ನಿಯಾಗಿ ಕಾರ್ಮಿಕರು ಹಾಗೂ ಅವರ ಅವಲಂಬಿತರ ನೋವು, ಸಂಕಷ್ಟಗಳನ್ನು ಅರಿತುಕೊಂಡಿದ್ದೇನೆ. ಈ ಹೋರಾಟ ಕೇವಲ ಕಾರ್ಮಿಕರ ಬದುಕಿನ ಪ್ರಶ್ನೆಯಲ್ಲ ಬದಲಾಗಿ ನಗರದ ಜನತೆಯ ಭವಿಷ್ಯದ ಪ್ರಶ್ನೆಯಾಗಿದೆ. ಹಾಗಾಗಿ ಈ ಅಳಿವು-ಉಳಿವಿನ ಹೋರಾಟದಲ್ಲಿ ನಗರದ ಎಲ್ಲಾ ಜನರು ಭಾವಹಿಸಿ ಬೆಂಬಲ ನೀಡಬೇಕೆಂದು ಕರೆ ನೀಡಿದರು.
ಪಕ್ಷದ ನಗರ ಘಟಕದ ಅಧ್ಯಕ್ಷ ಆರ್. ಕರುಣಾ ಮೂರ್ತಿ ಮಾತನಾಡಿ, ವಿಐಎಸ್‌ಎಲ್ ಕಾರ್ಖಾನೆ ಖಾಸಗೀಕರಣಗೊಳಿಸಲು ಪ್ರಯತ್ನಿಸಲಾಗಿ ಜಾಗತಿಕ ಮಟ್ಟದಲ್ಲಿ ಟೆಂಡರ್ ಕರೆದರೂ ಸಹ ಯಾರೂ ಮುಂದೆ ಬರಲಿಲ್ಲ ಎಂಬ ಸಂಸದರ ಸ್ಪಷ್ಟನೆ ಸರಿಯಲ್ಲ. ಇದು ಬೇಜವಾಬ್ದಾರಿಯಿಂದ ಕೂಡಿದೆ. ಕಾರ್ಖಾನೆ ಹಾಗು ಕಾರ್ಮಿಕರ ಭವಿಷ್ಯದ ದೃಷ್ಟಿಯಿಂದ ತಾವು ಜಿಲ್ಲೆಯ ಜನಪ್ರತಿನಿಧಿಯಾಗಿ ಇದರ ಬಗ್ಗೆ ವಿಶೇಷ ಆಸಕ್ತಿಯನ್ನು ಹೊಂದಿ ಖಾಸಗಿ ಕಂಪನಿಯವರನ್ನು ಕರೆತಂದು ಕಾರ್ಖಾನೆ ನಡೆಸುವಂತೆ ಮಾಡುವುದು ಅವರ ಜವಾಬ್ದಾರಿಯಾಗಿದೆ ಎಂದರು.
ನಗರಸಭೆ ಮಾಜಿ ಸದಸ್ಯ, ಹಿರಿಯ ಮುಖಂಡ ಕರಿಯಪ್ಪ ಮಾತನಾಡಿ, ತಾವು ಕಾರ್ಮಿಕರ ಪರ ಇದ್ದೇವೆ. ಇದರ ಬಗ್ಗೆ ಪ್ರಯತ್ನ ಮಾಡುತ್ತೇವೆ ಎಂದು ಹೇಳುವುದು. ಹಿಂದಿನ ಅವಧಿಯ ಸರ್ಕಾರಗಳು ಇದರ ಬಗ್ಗೆ ಸರಿಯಾದ ನಿಲುವುಗಳನ್ನು ತೆಗೆದುಕೊಳ್ಳಲಿಲ್ಲ ಎಂದು ಆರೋಪಿಸುವುದು ಹಾಗೂ ತಾವು ಈ ಬಾರಿ ಚುನಾವಣೆಯಲ್ಲಿ ಗೆದ್ದು ಮಂತ್ರಿಯಾಗಿ ಕಾರ್ಖಾನೆಯ ಪುರಾರಂಭಕ್ಕೆ ಪ್ರಯತ್ನಿಸುತ್ತೇನೆ ಎಂಬಿತ್ಯಾದಿ ಹೇಳಿಕೆಗಳನ್ನು ನೀಡುವುದನ್ನು ನೋಡಿದರೆ ಶಾಸಕ ಬಿ.ಕೆ ಸಂಗಮೇಶ್ವರ ಹಾಗೂ ಸಂಸದ ಬಿ.ವೈ ರಾಘವೇಂದ್ರರವರುಗಳ ರಾಜಕೀಯ ಜೀವನಕ್ಕೆ ಈ ಕಾರ್ಖಾನೆ ಸಮಸ್ಯೆ ಆಹಾರವಾಗಿದೆ. ಇದರ ಮೇಲೆ ಅವರು ರಾಜಕಾರಣ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಫೆ.೩ ರಂದು ಹಮ್ಮಿಕೊಳ್ಳಲಾಗಿರುವ ಹೋರಾಟದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ವಿಧಾನಪರಿಷತ್ ಸದಸ್ಯ ಭೋಜೇಗೌಡ, ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಪಾಲ್ಗೊಳ್ಳಲಿದ್ದು, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರನ್ನು ಸಹ ಕರೆತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮುಖಂಡರುಗಳು ಮಾಹಿತಿ ನೀಡಿದರು.
ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜೆ.ಪಿ ಯೋಗೀಶ್, ಶಿಮೂಲ್ ಮಾಜಿ ಅಧ್ಯಕ್ಷ ಡಿ. ಆನಂದ್, ನಗರಸಭೆ ಸದಸ್ಯರಾದ ಉದಯ್‌ಕುಮಾರ್, ಮಂಜುಳಾ ಸುಬ್ಬಣ್ಣ, ಮಾಜಿ ಸದಸ್ಯರಾದ ಮುತುರ್ಜಾ ಖಾನ್, ಮೈಲಾರಪ್ಪ, ವಿಶಾಲಾಕ್ಷಿ, ಮುಖಂಡರಾದ ಡಿ.ಟಿ.ಶ್ರೀಧರ್, ಲೋಕೇಶ್ವರ ರಾವ್, ಲೋಕೇಶ್, ಆಹಮದ್, ಅಮೋಸ್, ಉಮೇಶ್, ಶ್ರೀಧರ್ ನಾಯ್ಕ್, ಭಾಗ್ಯಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.