Wednesday, November 17, 2021

ಬಾರಂದೂರು ಅಂಗನವಾಡಿಯಲ್ಲಿ ಕಳ್ಳತನ : ದೂರು ದಾಖಲು

ಭದ್ರಾವತಿ ತಾಲೂಕಿನ ಬಾರಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿಯೊಂದರಲ್ಲಿ ಕಳ್ಳತನ ನಡೆದಿದ್ದು, ಘಟನಾ ಸ್ಥಳಕ್ಕೆ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ, ಉಪಾಧ್ಯಕ್ಷೆ ಸುಮಾ ಪರಮೇಶ್ವರ್, ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
    ಭದ್ರಾವತಿ, ನ. ೧೭: ತಾಲೂಕಿನ ಬಾರಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿಯೊಂದರಲ್ಲಿ ಕಳ್ಳತನ ನಡೆದಿದ್ದು, ಈ ಸಂಬಂಧ ಕಾಗದನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
    ರಾತ್ರಿ ವೇಳೆ ಕಳ್ಳತನ ನಡೆಸಲಾಗಿದ್ದು, ೨ ಎರಡು ಸಿಲಿಂಡರ್, ದಿನಸಿ ಸಾಮಗ್ರಿಗಳನ್ನು ಕಳವು ಮಾಡಲಾಗಿದೆ. ಘಟನಾ ಸ್ಥಳಕ್ಕೆ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ, ಉಪಾಧ್ಯಕ್ಷೆ ಸುಮಾ ಪರಮೇಶ್ವರ್, ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪೊಲೀಸರಿಗೆ ದೂರು ದಾಖಲಿಸಿದರು.

ಜಿಲ್ಲೆಯಲ್ಲಿ ಕಸಾಪ ಚುಟುವಟಿಕೆಗಳು ಸಕ್ರಿಯಗೊಳಿಸಲು ನನ್ನನ್ನು ಬೆಂಬಲಿಸಿ : ಡಿ. ಮಂಜುನಾಥ್

ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮಾಜಿ ಅಧ್ಯಕ್ಷ ಡಿ. ಮಂಜುನಾಥ್ ಭದ್ರಾವತಿಯಲ್ಲಿ ಬುಧವಾರ  ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
    ಭದ್ರಾವತಿ, ನ. ೧೭: ಈ ಹಿಂದೆ ನನ್ನ ಅಧಿಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಸಾಹಿತ್ಯ ಪರಿಷತ್ ಚಟುವಟಿಕೆಗಳು ಸಕ್ರಿಯವಾಗಿದ್ದು, ಪ್ರಸ್ತುತ ಅಧ್ಯಕ್ಷರ ಅವಧಿಯಲ್ಲಿ ಕ್ರಿಯಾಶೀಲತೆ ಎಂಬುದು ಮರೆಯಾಗಿದೆ. ಈ ಹಿನ್ನಲೆಯಲ್ಲಿ ಹೊಸತನದೊಂದಿಗೆ ಸಾಹಿತ್ಯ ಪರಿಷತ್ ಚಟುವಟಿಕೆಗಳನ್ನು ಮುನ್ನಡೆಸಿಕೊಂಡು ಹೋಗಲು ಈ ಬಾರಿ ಚುನಾವಣೆಗೆ ಸ್ಪರ್ಧಿಸಲಾಗಿದೆ. ಪರಿಷತ್ತಿನ ಮತದಾರರು ನನ್ನನ್ನು ಬೆಂಬಲಿಸಬೇಕೆಂದು ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಮನವಿ ಮಾಡಿದರು.
    ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿರುವ ಡಿ.ಬಿ ಶಂಕರಪ್ಪ ಅವರ ತಂಡ ಅವರ ಅಧಿಕಾರದ ಅವಧಿಯಲ್ಲಿ ಯಾವುದೇ ಸಾಹಿತ್ಯಪರ ಚಟುವಟಿಕೆಗಳನ್ನು ಕೈಗೊಂಡಿಲ್ಲ. ಕೇವಲ ನನ್ನ ವಿರುದ್ಧ ಅಪಪ್ರಚಾರ ಕೈಗೊಂಡಿರುವುದು ಅವರ ಸಾಧನೆಯಾಗಿದೆ ಎಂದು ಆರೋಪಿಸಿದರು.
    ನಾನು ೨ ಬಾರಿ ನನ್ನ ಅಧಿಕಾರದ ಅವಧಿಯಲ್ಲಿ ನಿರಂತರವಾಗಿ ಜಿಲ್ಲಾದ್ಯಂತ ಚಟುವಟಿಕೆಗಳನ್ನು ನಡೆಸಿಕೊಂಡು ಬರುವ ಮೂಲಕ ಸಕ್ರಿಯವಾಗಿರಿಸಿದ್ದು, ಅಲ್ಲದೆ ಸರ್ಕಾರದಿಂದ ಹಲವು ಬಾರಿ ಅನುದಾನಗಳನ್ನು ಮಂಜೂರಾತಿ ಮಾಡಿಸುವ ಮೂಲಕ ಜಿಲ್ಲಾ ಕೇಂದ್ರ ಹಾಗು ತಾಲೂಕು ಕೇಂದ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ.  ನನ್ನ ಅವಧಿಯಲ್ಲಿ ಪೂರ್ಣಗೊಳ್ಳದ ಕೆಲವು ಅಭಿವೃದ್ಧಿ ಕಾರ್ಯಗಳನ್ನು ಪ್ರಸ್ತುತ ಅವಧಿಯ ಅಧ್ಯಕ್ಷರು ಪೂರ್ಣಗೊಳಿಸದಿರುವುದು ಮಾತ್ರವಲ್ಲದೆ ಯಾವುದೇ ಹೊಸ ಅಭಿವೃದ್ಧಿ ಕಾರ್ಯಗಳನ್ನು ಸಹ ಕೈಗೊಳ್ಳದಿರುವುದು ಅವರ ಅವಧಿಯಲ್ಲಿನ ಕಾರ್ಯ ಕ್ಷಮತೆಯನ್ನು ಎದ್ದು ತೋರಿಸುತ್ತದೆ ಎಂದರು.
    ಇದೀಗ ಪುನಃ ಚುನಾವಣೆಗೆ ನಾನು ಸ್ಪರ್ಧಿಸಿದ್ದು, ನ.೨೧ರ ಭಾನುವಾರ ನಡೆಯಲಿರುವ ಮತದಾನ ಕಾರ್ಯದಲ್ಲಿ ಪರಿಷತ್ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ನನ್ನನ್ನು ಬೆಂಬಲಿಸಬೇಕೆಂದು ಮನವಿ ಮಾಡಿದ ಅವರು, ಜಿಲ್ಲೆಯಾದ್ಯಂತ ಪ್ರತಿಯೊಬ್ಬ ಮತದಾರರ ಮನೆ ಮನೆಗೆ ಕೈಗೊಂಡಿರುವ ಪ್ರಚಾರ ಕಾರ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಈ ಬಾರಿ ಆಯ್ಕೆಯಾಗುವ ವಿಶ್ವಾಸವಿದೆ ಎಂದರು.
    ಪ್ರಮುಖರಾದ ಡಾ. ರಿಯಾಜ್ ಬಾಷಾ, ಕೋಗಲೂರು ತಿಪ್ಪೇಸ್ವಾಮಿ, ತಿಮ್ಮಪ್ಪ, ಕೋಡ್ಲುಯಜ್ಞಯ್ಯ, ಅನ್ನಪೂರ್ಣಸತೀಶ್, ಗುರು, ಚಂದ್ರಪ್ಪ ಸೇರಿದಂತೆ ಇನ್ನಿತರರು ಮಾತನಾಡಿ ಡಿ. ಮಂಜುನಾಥ್ ಅವರು ೨ ಬಾರಿ ಅಧ್ಯಕ್ಷರಾಗಿ ಎಲ್ಲರ ಸಹಕಾರದೊಂದಿಗೆ ಸಾಕಷ್ಟು ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಪರಿಷತ್‌ನಲ್ಲಿ ಕ್ರಿಯಾಶೀಲತೆ ತಂದುಕೊಟ್ಟಿದ್ದರು. ಈ ಹಿನ್ನಲೆಯಲ್ಲಿ ಮತದಾರರು ಡಿ. ಮಂಜುನಾಥ್ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಕೆ.ಟಿ ಪ್ರಸನ್ನ, ಪುಷ್ಪಾವತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ದಿವಂಗತ ಪುನೀತ್ ರಾಜ್‌ಕುಮಾರ್‌ಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ : ಕೃತಜ್ಞತೆ

ಪುನೀತ್ ರಾಜ್‌ಕುಮಾರ್ ಜನ್ಮದಿನ 'ನೇತ್ರದಾನ' ದಿನವಾಗಿಸಿ


    ಭದ್ರಾವತಿ, ನ. ೧೬: ಇತ್ತೀಚೆಗೆ ನಿಧನ ಹೊಂದಿದ ಚಲನಚಿತ್ರ ನಟ, ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಘೋಷಣೆ ಮಾಡಿರುವುದಕ್ಕೆ ನಗರದ ಚಾಮೇಗೌಡ ಏರಿಯಾ ಬಿ.ಎಚ್ ರಸ್ತೆ ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘ ಕೃತಜ್ಞತೆ ಸಲ್ಲಿಸಿದೆ.
    ಪುನೀತ್ ರಾಜ್‌ಕುಮಾರ್‌ರವರ ಸಾಧನೆ ಅಪಾರವಾಗಿದ್ದು, ಪ್ರತಿಯೊಬ್ಬರ ಮನದಾಳದ ವ್ಯಕ್ತಿಯಾಗಿ ನೆಲೆ ನಿಂತಿದ್ದಾರೆ. ಅವರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮರಣೋತ್ತರವಾಗಿ ಪ್ರಶಸ್ತಿ ನೀಡಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಈ ಹಿನ್ನಲೆಯಲ್ಲಿ ಬೊಮ್ಮಾಯಿಯವರಿಗೆ ಅಭಿಮಾನಿಗಳು, ಸಮಸ್ತ ನಾಗರೀಕರ ಪರವಾಗಿ ಸಂಘ ಕೃತಜ್ಞತೆ ಸಲ್ಲಿಸುತ್ತದೆ. ಇದರ ಜೊತೆಗೆ ಪುನೀತ್ ರಾಜ್‌ಕುಮಾರ್‌ರವರು ತಮ್ಮ ನೇತ್ರಗಳನ್ನು ದಾನ ಮಾಡುವ ಮೂಲಕ ೪ ಜನರ ಬದುಕಿನಲ್ಲಿ ಬೆಳಕಾಗಿ ಇತರರಿಗೆ ಸ್ಪೂರ್ತಿದಾಯಕರಾಗಿದ್ದಾರೆ. ಈ ಹಿನ್ನಲೆಯಲ್ಲಿ ಅವರ ಜನ್ಮದಿನವನ್ನು 'ನೇತ್ರದಾನ' ದಿನವಾಗಿ ಘೋಷಿಸಬೇಕೆಂದು ಮನವಿ ಮಾಡುತ್ತದೆ ಎಂದು ಸಂಘದ ಅಧ್ಯಕ್ಷ ವೆಂಕಟೇಶ್, ನಗರಸಭಾ ಸದಸ್ಯ ಜಾರ್ಜ್ ತಿಳಿಸಿದ್ದಾರೆ.

ನ.೧೯ರಂದು ಶಾಂತಿಯುತ ಪ್ರತಿಭಟನೆ

    ಭದ್ರಾವತಿ, ನ. ೧೭: ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸದಿರುವಂತೆ ಹಾಗು ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲೆ ನಡೆಯುತ್ತಿರುವ ಅತಿಕ್ರಮ ಪ್ರವೇಶ ಮತ್ತು ಫಾಸ್ಟರ್‌ಗಳ ಮೇಲೆ ನಡೆಯುತ್ತಿರುವ ಹಲ್ಲೆ ಪ್ರಕರಣಗಳನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗು ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನ.೧೯ ರಂದು ಬೆಳಿಗ್ಗೆ ೧೧ ಗಂಟೆಗೆ ತಾಲೂಕು ಕಛೇರಿ ಮುಂಭಾಗ ಅಖಿಲ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಹ್ಯೂಮನ್ ರೈಟ್ಸ್ ವತಿಯಿಂದ ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
    ಕ್ರೈಸ್ತ ಸಮುದಾಯದ ಚರ್ಚ್‌ಗಳು ಮತ್ತು ಧಾರ್ಮಿಕ ಸಂಘ-ಸಂಸ್ಥೆಗಳ ಗಣತಿ ನಡೆಸಬೇಕೆಂಬ ಹಿಂದುಳಿದ ವರ್ಗಗಳ ಇಲಾಖೆಯ ಆದೇಶವನ್ನು ಸಹ ತಕ್ಷಣ ಹಿಂಪಡೆಯಬೇಕೆಂದು ಪ್ರತಿಭಟನೆಯಲ್ಲಿ ಆಗ್ರಹಿಸಲಾಗುವುದು. ಕ್ರೈಸ್ತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರತಿಭಟನೆ ಯಶಸ್ವಿಗೊಳಿಸುವಂತೆ ಹಳೇನಗರದ ವೇಲಾಂಗಣಿ ಆರೋಗ್ಯ ಮಾತೆ ದೇವಾಲಯದ ಧರ್ಮ ಕೇಂದ್ರದ ಗುರು ಫಾದರ್ ಸ್ಟೀವನ್ ಡೇಸಾ ಮತ್ತು ನ್ಯೂಟೌನ್ ಅಮಲೋದ್ಭವಿ ಮಾತೆ ದೇವಾಲಯದ ಪಾಲನಾ ಪರಿಷತ್ ಕಾರ್ಯದರ್ಶಿ ಅಂತೋಣಿ ವಿಲ್ಸನ್ ಕೋರಿದ್ದಾರೆ.