ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮಾಜಿ ಅಧ್ಯಕ್ಷ ಡಿ. ಮಂಜುನಾಥ್ ಭದ್ರಾವತಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಭದ್ರಾವತಿ, ನ. ೧೭: ಈ ಹಿಂದೆ ನನ್ನ ಅಧಿಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಸಾಹಿತ್ಯ ಪರಿಷತ್ ಚಟುವಟಿಕೆಗಳು ಸಕ್ರಿಯವಾಗಿದ್ದು, ಪ್ರಸ್ತುತ ಅಧ್ಯಕ್ಷರ ಅವಧಿಯಲ್ಲಿ ಕ್ರಿಯಾಶೀಲತೆ ಎಂಬುದು ಮರೆಯಾಗಿದೆ. ಈ ಹಿನ್ನಲೆಯಲ್ಲಿ ಹೊಸತನದೊಂದಿಗೆ ಸಾಹಿತ್ಯ ಪರಿಷತ್ ಚಟುವಟಿಕೆಗಳನ್ನು ಮುನ್ನಡೆಸಿಕೊಂಡು ಹೋಗಲು ಈ ಬಾರಿ ಚುನಾವಣೆಗೆ ಸ್ಪರ್ಧಿಸಲಾಗಿದೆ. ಪರಿಷತ್ತಿನ ಮತದಾರರು ನನ್ನನ್ನು ಬೆಂಬಲಿಸಬೇಕೆಂದು ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಡಿ. ಮಂಜುನಾಥ್ ಮನವಿ ಮಾಡಿದರು.
ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿರುವ ಡಿ.ಬಿ ಶಂಕರಪ್ಪ ಅವರ ತಂಡ ಅವರ ಅಧಿಕಾರದ ಅವಧಿಯಲ್ಲಿ ಯಾವುದೇ ಸಾಹಿತ್ಯಪರ ಚಟುವಟಿಕೆಗಳನ್ನು ಕೈಗೊಂಡಿಲ್ಲ. ಕೇವಲ ನನ್ನ ವಿರುದ್ಧ ಅಪಪ್ರಚಾರ ಕೈಗೊಂಡಿರುವುದು ಅವರ ಸಾಧನೆಯಾಗಿದೆ ಎಂದು ಆರೋಪಿಸಿದರು.
ನಾನು ೨ ಬಾರಿ ನನ್ನ ಅಧಿಕಾರದ ಅವಧಿಯಲ್ಲಿ ನಿರಂತರವಾಗಿ ಜಿಲ್ಲಾದ್ಯಂತ ಚಟುವಟಿಕೆಗಳನ್ನು ನಡೆಸಿಕೊಂಡು ಬರುವ ಮೂಲಕ ಸಕ್ರಿಯವಾಗಿರಿಸಿದ್ದು, ಅಲ್ಲದೆ ಸರ್ಕಾರದಿಂದ ಹಲವು ಬಾರಿ ಅನುದಾನಗಳನ್ನು ಮಂಜೂರಾತಿ ಮಾಡಿಸುವ ಮೂಲಕ ಜಿಲ್ಲಾ ಕೇಂದ್ರ ಹಾಗು ತಾಲೂಕು ಕೇಂದ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ. ನನ್ನ ಅವಧಿಯಲ್ಲಿ ಪೂರ್ಣಗೊಳ್ಳದ ಕೆಲವು ಅಭಿವೃದ್ಧಿ ಕಾರ್ಯಗಳನ್ನು ಪ್ರಸ್ತುತ ಅವಧಿಯ ಅಧ್ಯಕ್ಷರು ಪೂರ್ಣಗೊಳಿಸದಿರುವುದು ಮಾತ್ರವಲ್ಲದೆ ಯಾವುದೇ ಹೊಸ ಅಭಿವೃದ್ಧಿ ಕಾರ್ಯಗಳನ್ನು ಸಹ ಕೈಗೊಳ್ಳದಿರುವುದು ಅವರ ಅವಧಿಯಲ್ಲಿನ ಕಾರ್ಯ ಕ್ಷಮತೆಯನ್ನು ಎದ್ದು ತೋರಿಸುತ್ತದೆ ಎಂದರು.
ಇದೀಗ ಪುನಃ ಚುನಾವಣೆಗೆ ನಾನು ಸ್ಪರ್ಧಿಸಿದ್ದು, ನ.೨೧ರ ಭಾನುವಾರ ನಡೆಯಲಿರುವ ಮತದಾನ ಕಾರ್ಯದಲ್ಲಿ ಪರಿಷತ್ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ನನ್ನನ್ನು ಬೆಂಬಲಿಸಬೇಕೆಂದು ಮನವಿ ಮಾಡಿದ ಅವರು, ಜಿಲ್ಲೆಯಾದ್ಯಂತ ಪ್ರತಿಯೊಬ್ಬ ಮತದಾರರ ಮನೆ ಮನೆಗೆ ಕೈಗೊಂಡಿರುವ ಪ್ರಚಾರ ಕಾರ್ಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಿನ್ನಲೆಯಲ್ಲಿ ಈ ಬಾರಿ ಆಯ್ಕೆಯಾಗುವ ವಿಶ್ವಾಸವಿದೆ ಎಂದರು.
ಪ್ರಮುಖರಾದ ಡಾ. ರಿಯಾಜ್ ಬಾಷಾ, ಕೋಗಲೂರು ತಿಪ್ಪೇಸ್ವಾಮಿ, ತಿಮ್ಮಪ್ಪ, ಕೋಡ್ಲುಯಜ್ಞಯ್ಯ, ಅನ್ನಪೂರ್ಣಸತೀಶ್, ಗುರು, ಚಂದ್ರಪ್ಪ ಸೇರಿದಂತೆ ಇನ್ನಿತರರು ಮಾತನಾಡಿ ಡಿ. ಮಂಜುನಾಥ್ ಅವರು ೨ ಬಾರಿ ಅಧ್ಯಕ್ಷರಾಗಿ ಎಲ್ಲರ ಸಹಕಾರದೊಂದಿಗೆ ಸಾಕಷ್ಟು ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಪರಿಷತ್‌ನಲ್ಲಿ ಕ್ರಿಯಾಶೀಲತೆ ತಂದುಕೊಟ್ಟಿದ್ದರು. ಈ ಹಿನ್ನಲೆಯಲ್ಲಿ ಮತದಾರರು ಡಿ. ಮಂಜುನಾಥ್ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಕೆ.ಟಿ ಪ್ರಸನ್ನ, ಪುಷ್ಪಾವತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment