Wednesday, January 17, 2024

ಕುಂಚ ಕಲಾವಿದ ಹಫೀಜ್ ಉರ್ ರಹಮಾನ್ ನಿಧನ

 ಭದ್ರಾವತಿ:  ತಾಲೂಕು ಕುಂಚ ಕಲಾವಿದರ ಸಂಘದ ಖಜಾಂಚಿ ಹಫೀಜ್ ಉರ್ ರಹಮಾನ್(51) ಗುರುವಾರ  ಬೆಳಗ್ಗೆ  ನಿಧನ  ಹೊಂದಿದರು.
    ಪತ್ನಿ, ಪುತ್ರಿ ಹಾಗೂ ಇಬ್ಬರು ಪುತ್ರರರು ಇದ್ದರು. ಕಳೆದ ಸುಮಾರು 2 ತಿಂಗಳಿನಿಂದ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು.  ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.
       ರಹಮಾನ್ ಅವರು ಜಮಾತೇ ಇಸ್ಲಾಂಮೀ ಹಿಂದ್ ಸಂಘಟನೆ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
       ಇವರ ನಿಧನಕ್ಕೆ ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.


ಜ.೧೯ರಂದು ಕ.ದ.ಸಂ.ಸ ಸುವರ್ಣ ಮಹೋತ್ಸವಕ್ಕೆ ಚಾಲನೆ : ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳು

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ಮಾಹಿತಿ

ಭದ್ರಾವತಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ಮಾತನಾಡಿದರು.
    ಭದ್ರಾವತಿ : ಪ್ರೊ. ಬಿ.ಕೃಷ್ಣಪ್ಪರವರು ೧೯೭೪-೭೫ರಲ್ಲಿ ನಗರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಘಟಿಸಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಆಶಯಗಳನ್ನು ಮೂಲ ಉದ್ದೇಶವಾಗಿಟ್ಟುಕೊಂಡು ಚಳುವಳಿಯನ್ನು ಆರಂಭಿಸಿದರು.     ಪ್ರಸ್ತುತ ಸಮಿತಿ ೫೦ ವರ್ಷಗಳನ್ನು ಪೂರೈಸಿದ್ದು, ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಸುವರ್ಣ ಮಹೋತ್ಸವ ಆಚರಣೆ ಹಮ್ಮಿಕೊಳ್ಳಲಾಗಿದೆ. ಜ.೧೯ರಂದು ಸುವರ್ಣ ಮಹೋತ್ಸವಕ್ಕೆ ನಗರದಲ್ಲಿ ಚಾಲನೆ ನೀಡಲಾಗುವುದು ಎಂದು ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ತಿಳಿಸಿದರು.
    ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ದೇಶದಲ್ಲಿ ಆರ್‌ಎಸ್‌ಎಸ್ ಹೇಗೆ ತನ್ನದೇ ಆದ ಸೈದ್ಧಾಂತಿಕ ನೆಲಗಟ್ಟಿನಲ್ಲಿ ಬಲಿಷ್ಠವಾಗಿ ಬೆಳೆದು ನಿಂತಿದೆಯೋ, ಅದೇ ರೀತಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾದ್ಯಂತ ಎಲ್ಲಾ ೩೧ ಜಿಲ್ಲೆಗಳಲ್ಲಿ ಬೆಳೆದು ನಿಂತಿದೆ. ಪ್ರೊ. ಬಿ. ಕೃಷ್ಣಪ್ಪ ಅವರು ೧೯೭೪ರಲ್ಲಿ ವಿಐಎಸ್‌ಎಲ್ ಕಾರ್ಮಿಕನ ಜೊತೆ ನಡೆದ ಅಸ್ಪೃಶ್ಯತೆ ನಡವಳಿಕೆ ಖಂಡಿಸಿ ಕಾರ್ಮಿಕರನ್ನು ಸಂಘಟಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಚಳುವಳಿಗೆ ನಾಂದಿ ಹಾಡಿದರು ಎಂದರು.
    ಸಮಿತಿ ನಡೆಸಿದ ಹೋರಾಟದ ಫಲವಾಗಿ ಬಗರ್‌ಹುಕುಂ ಚಳುವಳಿ, ಬೆತ್ತಲೆ ಸೇವೆ ಪದ್ಧತಿ ನಿಷೇಧ, ಜಾತಿನಿಂದನೆ ಕಾಯಿದೆ, ಪಿಟಿಸಿಲ್ ಕಾಯಿದೆ ಸೇರಿದಂತೆ ಅನೆಕ ಕಾಯಿದೆಗಳು ಜಾರಿಗೆ ಬಂದಿವೆ ಎಂದರು.
    ಜಾತಿ, ವರ್ಗ, ಧರ್ಮಬೇದವಿಲ್ಲದೆ ಎಲ್ಲಾ ರೀತಿಯ ಶೋಷಿತ ಜನರ ಧ್ವನಿಯಾಗಿ ಜನ್ಮತಾಳಿದ ಸಂಘಟನೆಗೆ ಇದೀಗ ೫೦ ವರ್ಷ ತುಂಬುತ್ತಿದ್ದು, ಇದರ ಸವಿನೆನಪಿಗಾಗಿ ಚಳುವಳಿಯ ತವರು ನೆಲದಲ್ಲಿ ಸುವರ್ಣಮಹೋತ್ಸವಕ್ಕೆ ಚಾಲನೆ ನೀಡಲಾಗುತ್ತಿದೆ.  ಈ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.
    ಸಮಿತಿ ಜಿಲ್ಲಾ ಸಂಚಾಲಕ ಚಿನ್ನಯ್ಯ ಮಾತನಾಡಿ, ಶೋಷಿತರ ಧ್ವನಿಯಾಗಿ ಜ. ೧೯ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ ರಂಗಪ್ಪ ವೃತ್ತ, ಜೈಭೀಮ್ ನಗರದಿಂದ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.  ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದವರೆಗೂ ಮೆರವಣಿಗೆ ಸಾಗಲಿದೆ. ನಂತರ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಪ್ರೊ. ಬಿ. ಕೃಷ್ಣಪ್ಪನವರ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಲಾಗುವುದು. ಕಾರ್ಯಕ್ರಮವನ್ನು ಶಾಕ ಬಿ.ಕೆ.ಸಂಗಮೆಶ್ವರ್ ಉದ್ಘಾಟಿಸಲಿದ್ದಾರೆ. ಪ್ರೊ. ಬಿ.ಕೃಷ್ಣಪ್ಪನವರು ಹುಟ್ಟುಹಾಕಿರುವ ಈ ಸಂಘಟನೆ ಯಾವುದೇ ಒಂದು ವರ್ಗ, ವ್ಯಕ್ತಿಗೆ ಸೇರಿದ ಸ್ವತ್ತಲ್ಲ.  ಈ ಕಾರ್ಯಕ್ರಮದ ಧ್ಯೇಯವಾಕ್ಯ ದಲಿತರ ಐಕ್ಯತೆ ಸಂಘರ್ಷ-ಆರದ ಶೋಷಿತರ ಹಣತೆ ಎಂಬ ಶೀರ್ಷಿಕೆಯನ್ನು ಹೊಂದಿದೆ. ಸುವರ್ಣ ಮಹೋತ್ಸವದ ಅಂಗವಾಗಿ ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಜ.೨೦ ತ್ತು ೨೧ರಂದು ಬಿಜಾಪುರ, ಆಲಮಟ್ಟಿ ಡ್ಯಾಂ, ಹರ್ಡೇಕರ್ ಮಂಜಪ್ಪ ಸ್ಮಾರಕ ಭವನದಲ್ಲಿ ಅಧ್ಯಯನ ಶಿಬಿರವನ್ನು ಏರ್ಪಡಿಸಲಾಗಿದೆ. ಅದೇ ರೀತಿ ಜಿಲ್ಲಾಮಟ್ಟದಲ್ಲಿ ಸಹ ಸಮಾವೇಶಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
      ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಸಂಚಾಲಕ ಕೆ. ರಂಗನಾಥ, ಪ್ರಮುಖರಾದ ಕಾಣಿಕ್ ರಾಜ್, ಸಂದೀಪ, ಈಶ್ವರಪ್ಪ, ನರಸಿಂಹ, ಪ್ರಸನ್ನ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶ್ರೀ ಸಿದ್ದರಾಮೇಶ್ವರರು ಕೇವಲ ಒಂದು ಜಾತಿಗೆ ಸೀಮಿತವಾಗಿರದ ಸಮಾಜ ಸುಧಾರಕರು : ಡಾ. ಧನಂಜಯ

ಭದ್ರಾವತಿ ತಾಲೂಕು ಆಡಳಿತ ಮತ್ತು ಬೋವಿ ಜನಾಂಗದ ಅಭಿವೃದ್ಧಿ ಸಂಘ ವತಿಯಿಂದ ಬುಧವಾರ ತಾಲೂಕು ಪಂಚಾಯಿತಿ ಆವರಣದಲ್ಲಿ ಆಯೋಜಿಸಲಾಗಿದ್ದ ಶ್ರೀ ಶಿವಯೋಗಿ ಕಾಯಕಯೋಗಿ ಶ್ರೀ ಸಿದ್ದರಾಮೇಶ್ವರರ ಸಿದ್ದರಾಮೇಶ್ವರರ ೮೫೧ನೇ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಅವರನ್ನು ಸನ್ಮಾನಿಸಲಾಯಿತು.
    ಭದ್ರಾವತಿ: ಶ್ರೀ ಸಿದ್ದರಾಮೇಶ್ವರರು ಕೇವಲ ಭೋವಿ ಸಮಾಜಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರು ಒಬ್ಬ ಸಮಾಜ ಸುಧಾರಕರಾಗಿದ್ದು, ಅವರ ಕಾಲಾವಧಿಯಲ್ಲಿ ಕೈಗೊಂಡಿರುವ ಜನಪರವಾದ ಕಾರ್ಯಗಳು ಇಂದಿಗೂ ಉಳಿದುಕೊಂಡಿವೆ ಎಂದು ಎನ್.ಆರ್ ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ ಪ್ರಾಂಶುಪಾಲ ಡಾ. ಧನಜಂಯ ಹೇಳಿದರು.  
    ತಾಲೂಕು ಆಡಳಿತ ಮತ್ತು ಬೋವಿ ಜನಾಂಗದ ಅಭಿವೃದ್ಧಿ ಸಂಘ ವತಿಯಿಂದ ಬುಧವಾರ ತಾಲೂಕು ಪಂಚಾಯಿತಿ ಆವರಣದಲ್ಲಿ ಆಯೋಜಿಸಲಾಗಿದ್ದ ಶ್ರೀ ಶಿವಯೋಗಿ ಕಾಯಕಯೋಗಿ ಶ್ರೀ ಸಿದ್ದರಾಮೇಶ್ವರರ ಸಿದ್ದರಾಮೇಶ್ವರರ ೮೫೧ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಶ್ರೀ ಸಿದ್ದರಾಮೇಶ್ವರರು ೧೨ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರ ಅನುಭವ ಮಂಟಪದಲ್ಲಿನ ವಚನಗಾರರ ಪೈಕಿ ಒಬ್ಬರಾಗಿದ್ದರು. ಅವರು ಸಮಾಜದಲ್ಲಿ ಶೋಷಣೆಗೆ ಒಳಗಾಗಿದ್ದ ವಡ್ಡರ ಪರವಾಗಿ ತಮ್ಮ ನಿಲುವುಗಳನ್ನು ಸಮಾಜಕ್ಕೆ ತಿಳಿಯಪಡಿಸುವ ಜೊತೆಗೆ ಸಮಾಜದಲ್ಲಿನ ಎಲ್ಲಾ ಸಮುದಾಯಗಳಿಗೂ ಮಾರ್ಗದರ್ಶಕರಾಗಿದ್ದರು. ಅಲ್ಲದೆ ಅವರ ಅವಧಿಯಲ್ಲಿ ಹಲವಾರು ಜನಪರ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಸಮಜದ ಅಭಿವೃದ್ಧಿಗೆ ಮುನ್ನುಡಿ ಬರೆದಿದ್ದರು. ಅವರ ಆದರ್ಶತನ, ಚಿಂತನೆಗಳನ್ನು ಸ್ವಲ್ಪಮಟ್ಟಿಗಾದರೂ ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕಾಗಿದೆ. ಭೋವಿ ಜನಾಂಗದವರು ಸೇರಿದಂತೆ ಸಮಾಜದಲ್ಲಿ ಶೋಷಣೆಗೆ ಒಳಗಾಗಿರುವ ಎಲ್ಲಾ ಸಮುದಾಯಗಳು ಸಹ ಇಂದು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಅವರನ್ನುಶಿಕ್ಷಣವಂತರನ್ನಾಗಿಸಬೇಕಾಗಿದೆ ಎಂದರು.


ಭದ್ರಾವತಿಯಲ್ಲಿ ತಾಲೂಕು ಆಡಳಿತ ಮತ್ತು ಬೋವಿ ಜನಾಂಗದ ಅಭಿವೃದ್ಧಿ ಸಂಘ ವತಿಯಿಂದ ಬುಧವಾರ ತಾಲೂಕು ಪಂಚಾಯಿತಿ ಆವರಣದಲ್ಲಿ ಆಯೋಜಿಸಲಾಗಿದ್ದ ಶ್ರೀ ಶಿವಯೋಗಿ ಕಾಯಕಯೋಗಿ ಶ್ರೀ ಸಿದ್ದರಾಮೇಶ್ವರರ ಸಿದ್ದರಾಮೇಶ್ವರರ ೮೫೧ನೇ ಜಯಂತಿ ಕಾರ್ಯಕ್ರಮ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
    ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ ಸೇರಿದಂತೆ ಇನ್ನಿತರರು ಮಾತನಾಡಿ, ಸಮಾಜದಲ್ಲಿ ಎಲ್ಲರೂ ಸಮಾನರು ಎಂಬ ಸಂದೇಶವನ್ನು ೧೨ನೇ ಶತಮಾನದಲ್ಲಿಯೇ ವಚನಗಾರರು ತಿಳಿಸಿಕೊಟ್ಟಿದ್ದಾರೆ. ನಾವುಗಳು ಆದರ್ಶ ವ್ಯಕ್ತಿಗಳನ್ನು ಜಾತಿ, ಧರ್ಮ, ಪಂಥಗಳ ಆಧಾರದ ಮೇಲೆ ಗುರುತಿಸದೆ ಅವರ ಅದರ್ಶತನ ಮೈಗೂಡಿಸಿಕೊಳ್ಳಬೇಕು. ಆಗ ಮಾತ್ರ ಜಯಂತಿ ಕಾರ್ಯಕ್ರಮಗಳಿಗೆ ಅರ್ಥ ಬರುತ್ತದೆ ಎಂದರು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಆದರ್ಶ ವ್ಯಕ್ತಿಗಳಿಗೆ ಅವಮಾನ ಮಾಡುವ ರೀತಿಯಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಆಚರಿಸಬಾರದು. ಇದನ್ನು ಆಯಾ ಸಮಾಜದವರು ಹಾಗು ಕಾರ್ಯಕ್ರಮದ ಜವಾಬ್ದಾರಿ ವಹಿಸಿಕೊಳ್ಳುವ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯವರು ಅರ್ಥ ಮಾಡಿಕೊಳ್ಳಬೇಕು. ಆದರ್ಶ ವ್ಯಕ್ತಿಗಳ ಕಾರ್ಯಕ್ರಮಗಳಿಗೆ ಪ್ರತಿಯೊಬ್ಬರು ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಆಗ ಮಾತ್ರ ಆ ಕಾರ್ಯಕ್ರಮಗಳು ಸಾರ್ಥಕಗೊಳ್ಳುತ್ತವೆ ಎಂದರು.
    ಶಾಸಕ ಬಿ. ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಈ ರೀತಿಯ ತಪ್ಪುಗಳಿಗೆ ಅವಕಾಶ ಮಾಡಿಕೊಡಬಾರದು. ಎಲ್ಲರೂ ಒಗ್ಗೂಡಬೇಕು. ಆದರ್ಶ ವ್ಯಕ್ತಿಗಳ ಜಯಂತಿಗಳನ್ನು ಆಚರಿಸುವ ಮೂಲಕ ಅವರ ಆದರ್ಶತನಗಳನ್ನು ಮೈಗೂಡಿಸಿಕೊಳ್ಳಬೇಕೆಂದರು.
    ಭೋವಿ ಜನಾಂಗದ ಅಭಿವೃದ್ಧಿ ಸಂಘದ ಅಧ್ಯಕ್ಷ ಶಿವಣ್ಣ ತಹಸೀಲ್ದಾರ್ ಕೆ.ಆರ್ ನಾಗರಾಜು, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಂ.  ಗಂಗಣ್ಣ, ನಗರಸಭೆ ಪೌರಾಯುಕ್ತ ಪ್ರಕಾಶ್ ಚನ್ನಪ್ಪನವರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗೋಪಾಲಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪೃಥ್ವಿರಾಜ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಚಿನ್ನಯ್ಯ, ಮುಖಂಡರಾದ ಎಸ್. ಕುಮಾರ್, ಸುಕನ್ಯಾ ರಾಜ್, ಚೌಡಯ್ಯ, ತಮ್ಮಯ್ಯ, ಶಿವು ಪಾಟೀಲ್, ಜಲ್ಲಿ ರಾಮಣ್ಣ, ಕೃಷ್ಣ, ಸಿದ್ಧ ಭೋವಿ ವೈ. ಮಂಜುನಾಥ್, ನಾಗೇಶ, ವಿಠಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸ್ವಾಗತಿಸಿದರು. ಎಸ್.ಕೆ ಮೋಹನ್ ನಿರೂಪಿಸಿದರು. ಸುಮತಿ ಕಾರಂತ್ ತಂಡದಿಂದ ನಾಡಗೀತೆ, ಪ್ರಾರ್ಥನೆ  ನಡೆಯಿತು.