Wednesday, January 17, 2024

ಜ.೧೯ರಂದು ಕ.ದ.ಸಂ.ಸ ಸುವರ್ಣ ಮಹೋತ್ಸವಕ್ಕೆ ಚಾಲನೆ : ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳು

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ಮಾಹಿತಿ

ಭದ್ರಾವತಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ಮಾತನಾಡಿದರು.
    ಭದ್ರಾವತಿ : ಪ್ರೊ. ಬಿ.ಕೃಷ್ಣಪ್ಪರವರು ೧೯೭೪-೭೫ರಲ್ಲಿ ನಗರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಘಟಿಸಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್‌ರವರ ಆಶಯಗಳನ್ನು ಮೂಲ ಉದ್ದೇಶವಾಗಿಟ್ಟುಕೊಂಡು ಚಳುವಳಿಯನ್ನು ಆರಂಭಿಸಿದರು.     ಪ್ರಸ್ತುತ ಸಮಿತಿ ೫೦ ವರ್ಷಗಳನ್ನು ಪೂರೈಸಿದ್ದು, ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಸುವರ್ಣ ಮಹೋತ್ಸವ ಆಚರಣೆ ಹಮ್ಮಿಕೊಳ್ಳಲಾಗಿದೆ. ಜ.೧೯ರಂದು ಸುವರ್ಣ ಮಹೋತ್ಸವಕ್ಕೆ ನಗರದಲ್ಲಿ ಚಾಲನೆ ನೀಡಲಾಗುವುದು ಎಂದು ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ತಿಳಿಸಿದರು.
    ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ದೇಶದಲ್ಲಿ ಆರ್‌ಎಸ್‌ಎಸ್ ಹೇಗೆ ತನ್ನದೇ ಆದ ಸೈದ್ಧಾಂತಿಕ ನೆಲಗಟ್ಟಿನಲ್ಲಿ ಬಲಿಷ್ಠವಾಗಿ ಬೆಳೆದು ನಿಂತಿದೆಯೋ, ಅದೇ ರೀತಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯಾದ್ಯಂತ ಎಲ್ಲಾ ೩೧ ಜಿಲ್ಲೆಗಳಲ್ಲಿ ಬೆಳೆದು ನಿಂತಿದೆ. ಪ್ರೊ. ಬಿ. ಕೃಷ್ಣಪ್ಪ ಅವರು ೧೯೭೪ರಲ್ಲಿ ವಿಐಎಸ್‌ಎಲ್ ಕಾರ್ಮಿಕನ ಜೊತೆ ನಡೆದ ಅಸ್ಪೃಶ್ಯತೆ ನಡವಳಿಕೆ ಖಂಡಿಸಿ ಕಾರ್ಮಿಕರನ್ನು ಸಂಘಟಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಚಳುವಳಿಗೆ ನಾಂದಿ ಹಾಡಿದರು ಎಂದರು.
    ಸಮಿತಿ ನಡೆಸಿದ ಹೋರಾಟದ ಫಲವಾಗಿ ಬಗರ್‌ಹುಕುಂ ಚಳುವಳಿ, ಬೆತ್ತಲೆ ಸೇವೆ ಪದ್ಧತಿ ನಿಷೇಧ, ಜಾತಿನಿಂದನೆ ಕಾಯಿದೆ, ಪಿಟಿಸಿಲ್ ಕಾಯಿದೆ ಸೇರಿದಂತೆ ಅನೆಕ ಕಾಯಿದೆಗಳು ಜಾರಿಗೆ ಬಂದಿವೆ ಎಂದರು.
    ಜಾತಿ, ವರ್ಗ, ಧರ್ಮಬೇದವಿಲ್ಲದೆ ಎಲ್ಲಾ ರೀತಿಯ ಶೋಷಿತ ಜನರ ಧ್ವನಿಯಾಗಿ ಜನ್ಮತಾಳಿದ ಸಂಘಟನೆಗೆ ಇದೀಗ ೫೦ ವರ್ಷ ತುಂಬುತ್ತಿದ್ದು, ಇದರ ಸವಿನೆನಪಿಗಾಗಿ ಚಳುವಳಿಯ ತವರು ನೆಲದಲ್ಲಿ ಸುವರ್ಣಮಹೋತ್ಸವಕ್ಕೆ ಚಾಲನೆ ನೀಡಲಾಗುತ್ತಿದೆ.  ಈ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.
    ಸಮಿತಿ ಜಿಲ್ಲಾ ಸಂಚಾಲಕ ಚಿನ್ನಯ್ಯ ಮಾತನಾಡಿ, ಶೋಷಿತರ ಧ್ವನಿಯಾಗಿ ಜ. ೧೯ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ ರಂಗಪ್ಪ ವೃತ್ತ, ಜೈಭೀಮ್ ನಗರದಿಂದ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.  ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದವರೆಗೂ ಮೆರವಣಿಗೆ ಸಾಗಲಿದೆ. ನಂತರ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಪ್ರೊ. ಬಿ. ಕೃಷ್ಣಪ್ಪನವರ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಲಾಗುವುದು. ಕಾರ್ಯಕ್ರಮವನ್ನು ಶಾಕ ಬಿ.ಕೆ.ಸಂಗಮೆಶ್ವರ್ ಉದ್ಘಾಟಿಸಲಿದ್ದಾರೆ. ಪ್ರೊ. ಬಿ.ಕೃಷ್ಣಪ್ಪನವರು ಹುಟ್ಟುಹಾಕಿರುವ ಈ ಸಂಘಟನೆ ಯಾವುದೇ ಒಂದು ವರ್ಗ, ವ್ಯಕ್ತಿಗೆ ಸೇರಿದ ಸ್ವತ್ತಲ್ಲ.  ಈ ಕಾರ್ಯಕ್ರಮದ ಧ್ಯೇಯವಾಕ್ಯ ದಲಿತರ ಐಕ್ಯತೆ ಸಂಘರ್ಷ-ಆರದ ಶೋಷಿತರ ಹಣತೆ ಎಂಬ ಶೀರ್ಷಿಕೆಯನ್ನು ಹೊಂದಿದೆ. ಸುವರ್ಣ ಮಹೋತ್ಸವದ ಅಂಗವಾಗಿ ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಜ.೨೦ ತ್ತು ೨೧ರಂದು ಬಿಜಾಪುರ, ಆಲಮಟ್ಟಿ ಡ್ಯಾಂ, ಹರ್ಡೇಕರ್ ಮಂಜಪ್ಪ ಸ್ಮಾರಕ ಭವನದಲ್ಲಿ ಅಧ್ಯಯನ ಶಿಬಿರವನ್ನು ಏರ್ಪಡಿಸಲಾಗಿದೆ. ಅದೇ ರೀತಿ ಜಿಲ್ಲಾಮಟ್ಟದಲ್ಲಿ ಸಹ ಸಮಾವೇಶಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
      ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಸಂಚಾಲಕ ಕೆ. ರಂಗನಾಥ, ಪ್ರಮುಖರಾದ ಕಾಣಿಕ್ ರಾಜ್, ಸಂದೀಪ, ಈಶ್ವರಪ್ಪ, ನರಸಿಂಹ, ಪ್ರಸನ್ನ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

No comments:

Post a Comment