Sunday, March 19, 2023

ಇಬ್ಬರ ಸೆರೆ : ೨೩೦ ಗ್ರಾಂ. ತೂಕದ ಗಾಂಜಾ ವಶ


    ಭದ್ರಾವತಿ, ಮಾ. ೧೯ : ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ ಸುಮಾರು ೨೩೦ ಗ್ರಾಂ ತೂಕದ ಗಾಂಜಾ ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
    ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ ಹೊಸಮನೆ ಶಿವಾಜಿ ಸರ್ಕಲ್ ಠಾಣೆ ಪೊಲೀಸರು ದಾಳಿ ನಡೆಸಿದ್ದು, ಸುಮಾರು ೬,೦೦೦ ರು. ಮೌಲ್ಯದ ೨೩೦ ಗ್ರಾಂ. ತೂಕದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.

ಬಂಜಾರ ಸಮುದಾಯದವರು ಹೆಚ್ಚು ಸಂಘಟಿತರಾಗಿ ಅಭಿವೃದ್ಧಿಗೆ ಕೈಜೋಡಿಸಿ : ಬಿ.ಕೆ ಮೋಹನ್

ಭದ್ರಾವತಿ ಬುಳ್ಳಾಪುರ ಗ್ರಾಮದಲ್ಲಿ ಮಿಲ್ಟ್ರಿಕ್ಯಾಂಪ್ ಶ್ರೀ ಶ್ರೀನಿವಾಸ ಸ್ವಾಮಿ ದೇವಸ್ಥಾನ ಸಮೀಪ ಬಂಜಾರ ಭವನ ನಿರ್ಮಾಣಕ್ಕೆ ಮಂಜೂರಾತಿಯಾಗಿರುವ ಸುಮಾರು ೧ ಎಕರೆ ಜಾಗದಲ್ಲಿ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು ಹಾಗು ತಾಲೂಕು ಬಂಜಾರ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕಾಂಪೌಂಡ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ಹಾಗು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಉದ್ಘಾಟಿಸಿ ಮಾತನಾಡಿದರು.
    ಭದ್ರಾವತಿ, ಮಾ. ೧೯ : ಬಂಜಾರ ಸಮುದಾಯದವರು ಹೆಚ್ಚು ಸಂಘಟಿತರಾಗುವ ಮೂಲಕ ಸಮಾಜದ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕೆಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಹೇಳಿದರು.
    ನಗರದ ಬುಳ್ಳಾಪುರ ಗ್ರಾಮದಲ್ಲಿ ಮಿಲ್ಟ್ರಿಕ್ಯಾಂಪ್ ಶ್ರೀ ಶ್ರೀನಿವಾಸ ಸ್ವಾಮಿ ದೇವಸ್ಥಾನ ಸಮೀಪ ಬಂಜಾರ ಭವನ ನಿರ್ಮಾಣಕ್ಕೆ ಮಂಜೂರಾತಿಯಾಗಿರುವ ಸುಮಾರು ೧ ಎಕರೆ ಜಾಗದಲ್ಲಿ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು ಹಾಗು ತಾಲೂಕು ಬಂಜಾರ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕಾಂಪೌಂಡ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ಹಾಗು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂಜಾರ ಸಮಾಜದವರಿದ್ದು, ಆದರೂ ಸಹ ಸಂಘಟನೆ ಕೊರತೆಯಿಂದಾಗಿ ಸಮಾಜದ ಅಭಿವೃದ್ಧಿ ಕಾರ್ಯಗಳು ಹಿಂದುಳಿದಿವೆ. ಶ್ರಮಜೀವಿಗಳಾದ ಬಂಜಾರರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹಾಗು ಸಮುದಾಯ ಸಮಾಜದ ಮುಖ್ಯ ವಾಹಿನಿಯಲ್ಲಿ     ಗುರುತಿಸಿಕೊಳ್ಳಲು ಹೆಚ್ಚು ಸಂಘಟಿತರಾಗಬೇಕಾದ ಅವಶ್ಯಕತೆ ಇದೆ ಎಂದರು.
    ಸಮಾಜದ ಪ್ರಮುಖರು ಹಾಗು ಶಾಸಕರು ಕೈಗೊಂಡ ಪ್ರಯತ್ನದಿಂದಾಗಿ ನಗರದ ಹೃದಯ ಭಾಗದಲ್ಲಿ ಸುಮಾರು ೫ ರಿಂದ ೬ ಕೋ. ರು. ಮೌಲ್ಯದ ಭೂಮಿ ಸಮುದಾಯಕ್ಕೆ ಲಭಿಸಿರುವುದು ಸಂತಸದ ಸಂಗತಿಯಾಗಿದೆ. ಈ ಭೂಮಿ ಸದ್ಬಳಕೆಯಾಗಬೇಕು. ಈ ನಿಟ್ಟಿನಲ್ಲಿ ಸಮುದಾಯದಲ್ಲಿ ಉಳ್ಳವರು ಸೇರಿದಂತೆ ಎಲ್ಲರೂ ಸಹ ತಮ್ಮ ಕೈಲಾದಷ್ಟು ನೆರವನ್ನು ನೀಡುವ ಮೂಲಕ ಸುಸಜ್ಜಿತವಾದ ಭವನ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
    ಉದ್ಯಮಿ ಬಿ.ಕೆ ಜಗನ್ನಾಥ್ ಮಾತನಾಡಿ, ಶಾಸಕರು ಹಾಗು ಸಮುದಾಯದವರ ಪ್ರಯತ್ನದಿಂದ, ಸೇವಾಲಾಲ್ ಕೃಪೆಯಿಂದಾಗಿ ನಗರದ ಹೃದಯ ಭಾಗದಲ್ಲಿ ಭೂಮಿ ಲಭಿಸಿರುವುದು ಇಂದು ಬಂಜಾರ ಸಮುದಾಯವರು ಸುವರ್ಣ ಅಕ್ಷರಗಳಲ್ಲಿ ಬರೆದಿಡಬೇಕಾದ ದಿನವಾಗಿದೆ. ಇದನ್ನು ನೆನಪಿನಲ್ಲಿಟ್ಟುಕೊಂಡು ಸಮುದಾಯದ ಎಲ್ಲರೂ ಈ ಭೂಮಿ ಸದ್ಬಳಕೆಯಾಗುವ ನಿಟ್ಟಿನಲ್ಲಿ ಸಮುದಾಯದ ಅಭಿವೃದ್ಧಿಗೆ ಎಲ್ಲಾ ರೀತಿಯಿಂದಲೂ ಕೈಜೋಡಿಸಬೇಕೆಂದರು.
    ಬಂಜಾರ ಸಂಘದ ಅಧ್ಯಕ್ಷ ಪ್ರೇಮ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಉಪತಹಸೀಲ್ದಾರ್ ಮಂಜಾನಾಯ್ಕ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕಾಂತರಾಜ್, ಬಂಜಾರ ರೈತರ ಸಂಘದ ರಾಜ್ಯಾಧ್ಯಕ್ಷ ಕೃಷ್ಣಾನಾಯ್ಕ, ಈ ಭಾಗದ ನಗರಸಭಾ ಸದಸ್ಯ ಉದಯ್‌ಕುಮಾರ್, ಕಾಂಗ್ರೆಸ್ ಪಕ್ಷದ ಮುಖಂಡ ಎಚ್. ರವಿಕುಮಾರ್, ಪ್ರವೀಣ್‌ನಾಯ್ಕ, ರವಿನಾಯ್ಕ ಸೇರಿದಂತೆ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮೋತಿನಾಯ್ಕ ಕಾರ್ಯಕ್ರಮ ನಿರೂಪಿಸಿದರು.

ಹಿರಿಯರು ಮಕ್ಕಳಿಗೆ ಧಾರ್ಮಿಕ ಆಚರಣೆ ಹೇಳಿಕೊಟ್ಟಾಗ ಮಾತ್ರ ಧರ್ಮ, ಸಂಸ್ಕೃತಿ ಉಳಿಸಿಕೊಳ್ಳಲು ಸಾಧ್ಯ

ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಶಾಖಾ ಮಠ ಯಡೆಯೂರು ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ

ಸರ್ಕಾರಿ ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷ ಹಾಗು ಜೇಡಿಕಟ್ಟೆ ಮರುಳ ಸಿದ್ದೇಶ್ವರ ಧಾರ್ಮಿಕ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯನವರ ತಾಯಿ ನಾಗಮ್ಮನವರ ಪುಣ್ಯಸ್ಮರಣೆ ಅಂಗವಾಗಿ ಭದ್ರಾವತಿ ಸಿದ್ದಾರೂಢ ನಗರದ ಶ್ರೀ ಶಂಕರಮಠದ ಮಿನಿಹಾಲ್‌ನಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಶಿವಗಣಾರಾಧನೆ ಕಾರ್ಯಕ್ರಮದಲ್ಲಿ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಶಾಖಾ ಮಠ ಯಡೆಯೂರು ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಅಶೀರ್ವಚನ ನೀಡಿದರು.
    ಭದ್ರಾವತಿ, ಮಾ. ೧೯ : ಮನೆಯ ಹಿರಿಯರು ಮಕ್ಕಳಿಗೆ ಧಾರ್ಮಿಕ ಆಚರಣೆಗಳನ್ನು ಹೇಳಿಕೊಡುವ ಮೂಲಕ ಅವುಗಳ ಅನುಷ್ಠಾನಕ್ಕೆ ತರಲುಪ್ರಯತ್ನಿಸಬೇಕು. ಆಗ ಮಾತ್ರ ಧರ್ಮ, ಸಂಸ್ಕೃತಿ ಉಳಿಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಲಿಂಗಾಯತರು ಲಿಂಗಧಾರಣೆ ಮಹತ್ವ ಅರಿತುಕೊಳ್ಳಬೇಕೆಂದು  ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಶಾಖಾ ಮಠ ಯಡೆಯೂರು ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
    ಸರ್ಕಾರಿ ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷ ಹಾಗು ಜೇಡಿಕಟ್ಟೆ ಮರುಳ ಸಿದ್ದೇಶ್ವರ ಧಾರ್ಮಿಕ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯನವರ ತಾಯಿ ನಾಗಮ್ಮನವರ ಪುಣ್ಯಸ್ಮರಣೆ ಅಂಗವಾಗಿ ಸಿದ್ದಾರೂಢ ನಗರದ ಶ್ರೀ ಶಂಕರಮಠದ ಮಿನಿಹಾಲ್‌ನಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಶಿವಗಣಾರಾಧನೆ ಕಾರ್ಯಕ್ರಮದಲ್ಲಿ ಶ್ರೀಗಳು ಉಪಸ್ಥಿತರಿದ್ದು ಆಶೀರ್ವಚನ ನೀಡಿದರು.
    ಕುಟುಂಬದ ಹಿರಿಯರು ಮರಣ ಹೊಂದಿದಾಗ ದುಃಖಿಸುವ ಬದಲು ಅವರ ಆತ್ಮಕ್ಕೆ ಗೌರವ ತಂದು ಕೊಡುವ ರೀತಿಯಲ್ಲಿ ನಡೆದುಕೊಳ್ಳಬೇಕು. ಪ್ರತಿಯೊಬ್ಬರಿಗೂ ಸಾವು ಖಚಿತ. ಆದರೆ ನಮ್ಮ ಬದುಕಿನಲ್ಲಿ ರೂಢಿಸಿಕೊಳ್ಳುವ ಧರ್ಮ, ಸಂಸ್ಕಾರ ಬಹಳ ಮುಖ್ಯ. ಲಿಂಗಾಯತರು ಲಿಂಗಧಾರಣೆ ಮಾಡಿದರೆ ಸಾಲದು ಅದರ ಮಹತ್ವ, ಶಕ್ತಿ ಅರಿತು ಕೊಳ್ಳಬೇಕು. ಪ್ರತಿದಿನ ಅದರ ಆರಾಧನೆಯಲ್ಲಿ ತೊಡಗಬೇಕೆಂದರು.
    ಕುಟುಂಬದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು. ಅದರಲ್ಲೂ ಹಿರಿಯರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಸಮಾಜದಲ್ಲಿ ಹಣ, ಆಸ್ತಿ ಯಾವುದೂ ಮುಖ್ಯವಲ್ಲ. ನೆಮ್ಮದಿ ಬಹಳ ಮುಖ್ಯ. ಇದನ್ನು ಕಂಡುಕೊಳ್ಳುವ ಮಾರ್ಗ ತಿಳಿದುಕೊಳ್ಳಬೇಕೆಂದರು.
    ಹಿರೇಮಠ ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಂಬಲದೇವನಹಳ್ಳಿ ಶ್ರೀ ಉಜ್ಜಿನೇಶ್ವರ ಶಿವಾಚಾರ್ಯ ಸ್ವಾಮೀಜಿ, ಬೀರೂರು ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಅಧ್ಯಕ್ಷ ಸುರೇಶಯ್ಯ, ಯುವ  ಘಟಕದ ಅಧ್ಯಕ್ಷ ಮಂಜುನಾಥ್, ಶ್ರೀ ಶಂಕರಮಠದ ವ್ಯವಸ್ಥಾಪಕ ಶಾಂತಕುಮಾರ್, ಓಂಕಾರಪ್ಪ, ಸಿದ್ದಲಿಂಗಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಪೂರ್ಣಿಮಾ ಸಿದ್ದಲಿಂಗಯ್ಯ ನಿರೂಪಿಸಿದರು.