ಭದ್ರಾವತಿ ಬುಳ್ಳಾಪುರ ಗ್ರಾಮದಲ್ಲಿ ಮಿಲ್ಟ್ರಿಕ್ಯಾಂಪ್ ಶ್ರೀ ಶ್ರೀನಿವಾಸ ಸ್ವಾಮಿ ದೇವಸ್ಥಾನ ಸಮೀಪ ಬಂಜಾರ ಭವನ ನಿರ್ಮಾಣಕ್ಕೆ ಮಂಜೂರಾತಿಯಾಗಿರುವ ಸುಮಾರು ೧ ಎಕರೆ ಜಾಗದಲ್ಲಿ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು ಹಾಗು ತಾಲೂಕು ಬಂಜಾರ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕಾಂಪೌಂಡ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ಹಾಗು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಉದ್ಘಾಟಿಸಿ ಮಾತನಾಡಿದರು.
ಭದ್ರಾವತಿ, ಮಾ. ೧೯ : ಬಂಜಾರ ಸಮುದಾಯದವರು ಹೆಚ್ಚು ಸಂಘಟಿತರಾಗುವ ಮೂಲಕ ಸಮಾಜದ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕೆಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಹೇಳಿದರು.
ನಗರದ ಬುಳ್ಳಾಪುರ ಗ್ರಾಮದಲ್ಲಿ ಮಿಲ್ಟ್ರಿಕ್ಯಾಂಪ್ ಶ್ರೀ ಶ್ರೀನಿವಾಸ ಸ್ವಾಮಿ ದೇವಸ್ಥಾನ ಸಮೀಪ ಬಂಜಾರ ಭವನ ನಿರ್ಮಾಣಕ್ಕೆ ಮಂಜೂರಾತಿಯಾಗಿರುವ ಸುಮಾರು ೧ ಎಕರೆ ಜಾಗದಲ್ಲಿ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು ಹಾಗು ತಾಲೂಕು ಬಂಜಾರ ಸಂಘದ ವತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕಾಂಪೌಂಡ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ಹಾಗು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂಜಾರ ಸಮಾಜದವರಿದ್ದು, ಆದರೂ ಸಹ ಸಂಘಟನೆ ಕೊರತೆಯಿಂದಾಗಿ ಸಮಾಜದ ಅಭಿವೃದ್ಧಿ ಕಾರ್ಯಗಳು ಹಿಂದುಳಿದಿವೆ. ಶ್ರಮಜೀವಿಗಳಾದ ಬಂಜಾರರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹಾಗು ಸಮುದಾಯ ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳಲು ಹೆಚ್ಚು ಸಂಘಟಿತರಾಗಬೇಕಾದ ಅವಶ್ಯಕತೆ ಇದೆ ಎಂದರು.
ಸಮಾಜದ ಪ್ರಮುಖರು ಹಾಗು ಶಾಸಕರು ಕೈಗೊಂಡ ಪ್ರಯತ್ನದಿಂದಾಗಿ ನಗರದ ಹೃದಯ ಭಾಗದಲ್ಲಿ ಸುಮಾರು ೫ ರಿಂದ ೬ ಕೋ. ರು. ಮೌಲ್ಯದ ಭೂಮಿ ಸಮುದಾಯಕ್ಕೆ ಲಭಿಸಿರುವುದು ಸಂತಸದ ಸಂಗತಿಯಾಗಿದೆ. ಈ ಭೂಮಿ ಸದ್ಬಳಕೆಯಾಗಬೇಕು. ಈ ನಿಟ್ಟಿನಲ್ಲಿ ಸಮುದಾಯದಲ್ಲಿ ಉಳ್ಳವರು ಸೇರಿದಂತೆ ಎಲ್ಲರೂ ಸಹ ತಮ್ಮ ಕೈಲಾದಷ್ಟು ನೆರವನ್ನು ನೀಡುವ ಮೂಲಕ ಸುಸಜ್ಜಿತವಾದ ಭವನ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಉದ್ಯಮಿ ಬಿ.ಕೆ ಜಗನ್ನಾಥ್ ಮಾತನಾಡಿ, ಶಾಸಕರು ಹಾಗು ಸಮುದಾಯದವರ ಪ್ರಯತ್ನದಿಂದ, ಸೇವಾಲಾಲ್ ಕೃಪೆಯಿಂದಾಗಿ ನಗರದ ಹೃದಯ ಭಾಗದಲ್ಲಿ ಭೂಮಿ ಲಭಿಸಿರುವುದು ಇಂದು ಬಂಜಾರ ಸಮುದಾಯವರು ಸುವರ್ಣ ಅಕ್ಷರಗಳಲ್ಲಿ ಬರೆದಿಡಬೇಕಾದ ದಿನವಾಗಿದೆ. ಇದನ್ನು ನೆನಪಿನಲ್ಲಿಟ್ಟುಕೊಂಡು ಸಮುದಾಯದ ಎಲ್ಲರೂ ಈ ಭೂಮಿ ಸದ್ಬಳಕೆಯಾಗುವ ನಿಟ್ಟಿನಲ್ಲಿ ಸಮುದಾಯದ ಅಭಿವೃದ್ಧಿಗೆ ಎಲ್ಲಾ ರೀತಿಯಿಂದಲೂ ಕೈಜೋಡಿಸಬೇಕೆಂದರು.
ಬಂಜಾರ ಸಂಘದ ಅಧ್ಯಕ್ಷ ಪ್ರೇಮ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಉಪತಹಸೀಲ್ದಾರ್ ಮಂಜಾನಾಯ್ಕ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕಾಂತರಾಜ್, ಬಂಜಾರ ರೈತರ ಸಂಘದ ರಾಜ್ಯಾಧ್ಯಕ್ಷ ಕೃಷ್ಣಾನಾಯ್ಕ, ಈ ಭಾಗದ ನಗರಸಭಾ ಸದಸ್ಯ ಉದಯ್‌ಕುಮಾರ್, ಕಾಂಗ್ರೆಸ್ ಪಕ್ಷದ ಮುಖಂಡ ಎಚ್. ರವಿಕುಮಾರ್, ಪ್ರವೀಣ್‌ನಾಯ್ಕ, ರವಿನಾಯ್ಕ ಸೇರಿದಂತೆ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮೋತಿನಾಯ್ಕ ಕಾರ್ಯಕ್ರಮ ನಿರೂಪಿಸಿದರು.
No comments:
Post a Comment