Sunday, May 10, 2020

ಭದ್ರಾವತಿ : ಉಕ್ಕಿನ ನಗರಕ್ಕೆ ಕೊರೋನಾ ವೈರಸ್‌ ಭೀತಿ


ವಸತಿ ನಿಲಯಗಳಲ್ಲಿ ಕ್ವಾರಂಟೈನ್‌ಗೆ ವಿರೋಧಿಸಿ ಸ್ಥಳೀಯರಿಂದ ಪ್ರತಿಭಟನೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಉಂಬ್ಳೆಬೈಲ್ ರಸ್ತೆಯಲ್ಲಿರುವ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳನ್ನು ಕ್ವಾರಂಟೈನ್ ಆಗಿ ಬಳಕೆ ಮಾಡಿಕೊಳ್ಳುವುದನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು. 
ಭದ್ರಾವತಿ, ಮೇ. ೧೦: ನಗರಸಭೆ ವ್ಯಾಪ್ತಿಯ ಉಂಬ್ಳೆಬೈಲ್ ರಸ್ತೆಯಲ್ಲಿರುವ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳನ್ನು ಹೊರ ರಾಜ್ಯಗಳಿಂದ ಬಂದ ತಾಲೂಕಿನ ನಿವಾಸಿಗಳನ್ನು ನಿಗಾದಲ್ಲಿರಿಸಲು ಕ್ವಾರಂಟೈನ್ ಆಗಿ ಸಿದ್ದಗೊಳಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. 
ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಆತಂಕಕ್ಕೆ ಒಳಗಾಗಿರುವ ನಿವಾಸಿಗಳು ರಾತ್ರೋರಾತಿ ಏಕಾಏಕಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ, ನಗರಸಭೆ ಸದಸ್ಯ ಗುಣಶೇಖರ್, ಮುಖಂಡರಾದ ಉಮೇಶ್ ಸೇರಿದಂತೆ ಇನ್ನಿತರರ ನೇತೃತ್ವದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಯಾವುದೇ ಕಾರಣಕ್ಕೂ ವಿದ್ಯಾರ್ಥಿ ನಿಲಯಗಳನ್ನು ಬಳಸಿಕೊಳ್ಳಬಾರದು. ಜನವಸತಿ ಪ್ರದೇಶವಾಗಿರುವ ಕಾರಣ ಬೇರೆಡೆ ಕ್ವಾರಂಟೈನ್ ತೆರೆಯುವಂತೆ ಆಗ್ರಹಿಸಿದರು. ಜಿಲ್ಲಾಡಳಿತ ಬೇರೆಡೆ ಕ್ವಾರಂಟೈನ್ ತೆರೆಯುವುದಾಗಿ ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆ ಅಂತ್ಯಗೊಂಡಿತು.  

ಆಹಾರ ತಯಾರಿಕೆಗೆ ಸಹಕರಿಸಿದವರಿಗೆ ಸನ್ಮಾನ, ಕೃತಜ್ಞತೆ

ಭದ್ರಾವತಿಯಲ್ಲಿ ಪ್ರತಿದಿನ ಮಧ್ಯಾಹ್ನ ಕಡುಬಡವರಿಗೆ ಆಹಾರ ಪೂರೈಕೆ ಮಾಡುತ್ತಿರುವ ತಾಲೂಕು ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕ್ಕೆ ಸಹಕರಿಸಿದರನ್ನು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಲಾಯಿತು. 
ಭದ್ರಾವತಿ: ಕೊರೋನಾ ವೈರಸ್ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಬಡವರಿಗೆ ಪ್ರತಿ ದಿನ ಮಧ್ಯಾಹ್ನ ಆಹಾರ ತಯಾರಿಸಿ ಪೂರೈಕೆ ಮಾಡುತ್ತಿರುವ ತಾಲೂಕು ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘ ಭಾನುವಾರ ಸಹ ಸೇವಾ ಕಾರ್ಯ ಕೈಗೊಂಡಿತು.
ಲಾಕ್‌ಡೌನ್ ಆರಂಭಗೊಂಡಾಗಿನಿಂದಲೂ ಸಂಘದ ವತಿಯಿಂದ ಪ್ರತಿದಿನ ಮಧ್ಯಾಹ್ನ ಸುಮಾರು ೧೨೦ ಮಂದಿಗೆ ಸಾಕಾಗುವಷ್ಟು ಆಹಾರ ತಯಾರಿಸಿ ವಿತರಿಸಲಾಗುತ್ತಿದ್ದು, ಹಳೇನಗರದ ಹೊಸಸೇತುವೆ ರಸ್ತೆಯ ಶ್ರೀ ಶೃಂಗೇರಿ ಶಂಕರ ಮಠದ ಶ್ರೀ ಶಾರದ ಭಜನಾ ಮಂಡಳಿ  ಒಂದು ದಿನದ ಆಹಾರ ತಯಾರಿಕೆ ಕೈಜೋಡಿಸಿ ಸಂಘದ ಕಾರ್ಯಕ್ಕೆ ಸಹಕರಿಸಿದೆ.
ಸಂಘದ ವತಿಯಿಂದ ಇದುವರೆಗೂ ಅಡುಗೆ ತಯಾರಿಕೆಗೆ ಸಹಕರಿಸಿದ ಅಡುಗೆ ತಯಾರಕರಾದ ಕುಮಾರ್ ಮತ್ತು ಕೃಷ್ಣ ಭಟ್ ಹಾಗೂ ಶ್ರೀ ಶಾರದ ಭಜನಾ ಮಂಡಳಿಯವರನ್ನು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ವಿಲ್ಸನ್ ಬಾಬು, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು, ಅರಳಿಕಟ್ಟೆ ಯುವಕರು ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.