Thursday, March 27, 2025

ಉಜ್ಜನಿಪುರ ನಗರ ಆರೋಗ್ಯ ಕೇಂದ್ರದ ಬಳಿ ಸ್ವಚ್ಛತಾ ಕಾರ್ಯ : ತ್ಯಾಜ್ಯ ಎಸೆಯದಂತೆ ಜಾಗೃತಿ

ಭದ್ರಾವತಿ ನಗರಸಭೆ ಪೌರಕಾರ್ಮಿಕರು ಸೂಪರ್‌ವೈಸರ್ ಎನ್. ಗೋವಿಂದ ನೇತೃತ್ವದಲ್ಲಿ ಗುರುವಾರ ಉಜ್ಜನಿಪುರ ನಗರ ಆರೋಗ್ಯ ಕೇಂದ್ರದ ಬಳಿ ಸ್ವಚ್ಛತಾ ಕಾರ್ಯ ಕೈಗೊಂಡು ತ್ಯಾಜ್ಯ ಎಸೆಯದಂತೆ ಜಾಗೃತಿ ಮೂಡಿಸುವ ಜೊತೆಗೆ ಒಂದು ವೇಳೆ ತ್ಯಾಜ್ಯ ಎಸೆಯುವುದು ಮುಂದುವರೆಸಿದ್ದಲ್ಲಿ ೫೦೦ ರು. ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿ ಫಲಕ ಅಳವಡಿಸಿದರು. 
ಭದ್ರಾವತಿ: ನಗರಸಭೆ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ತ್ಯಾಜ್ಯ ಪ್ರಮಾಣ ಹೆಚ್ಚಳವಾಗುತ್ತಿದ್ದು, ಮನೆ ಮನೆ ಕಸ ಸಂಗ್ರಹಣೆ ನಡುವೆಯೂ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಕಂಡು ಬರುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಈ ನಡುವೆ ನಗರಸಭೆ ಆಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯದಂತೆ ಎಚ್ಚರಿಕೆ ಫಲಕಗಳನ್ನು ಅಳವಡಿಸಿ ಜಾಗೃತಿ ಮೂಡಿಸಲಾಗುತ್ತಿದೆ. 
ಉಜ್ಜನಿಪುರ ನಗರ ಆರೋಗ್ಯ ಕೇಂದ್ರದ ಬಳಿ ತ್ಯಾಜ್ಯ ಎಸೆಯದಂತೆ ಸ್ಥಳೀಯ ನಿವಾಸಿಗಳಿಗೆ ಹಲವಾರು ಬಾರಿ ತಿಳುವಳಿಕೆ ನೀಡಲಾಗಿದೆ. ಪ್ರತಿದಿನ ನೂರಾರು ಮಂದಿ ರೋಗಿಗಳು  ಆಸ್ಪತ್ರೆಗೆ ಬಂದು ಹೋಗುತ್ತಿದ್ದಾರೆ. ಆಸ್ಪತ್ರೆ ಬಳಿ ಜನಸಂದಣಿ ಹೆಚ್ಚಾಗಿದ್ದು, ಇಂತಹ ಸ್ಥಳದಲ್ಲಿ ಪ್ರತಿದಿನ ತ್ಯಾಜ್ಯ ಕಂಡು ಬರುತ್ತಿದೆ. 
ತ್ಯಾಜ್ಯ ಎಸೆಯದಂತೆ ಹಲವಾರು ಬಾರಿ  ಸೂಚನೆ ನೀಡಲಾಗಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನಲೆಯಲ್ಲಿ ನಗರಸಭೆ ಪೌರಕಾರ್ಮಿಕರು ಸೂಪರ್‌ವೈಸರ್ ಎನ್. ಗೋವಿಂದ ನೇತೃತ್ವದಲ್ಲಿ ಗುರುವಾರ ನಗರ ಆರೋಗ್ಯ ಕೇಂದ್ರದ ಬಳಿ ಸ್ವಚ್ಛತಾ ಕಾರ್ಯ ಕೈಗೊಂಡು ತ್ಯಾಜ್ಯ ಎಸೆಯದಂತೆ ಜಾಗೃತಿ ಮೂಡಿಸುವ ಜೊತೆಗೆ ಒಂದು ವೇಳೆ ತ್ಯಾಜ್ಯ ಎಸೆಯುವುದು ಮುಂದುವರೆಸಿದ್ದಲ್ಲಿ ೫೦೦ ರು. ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿ ಫಲಕ ಅಳವಡಿಸಿದರು. 
ಪೌರಕಾರ್ಮಿಕರಾದ ನಾಗಣ್ಣ, ಸುಶೀಲಮ್ಮ, ಸುಬ್ರಮಣಿ, ಮೋಹನ್, ಕುಮಾರಿಯಮ್ಮ, ಎಂ. ಮಂಜುನಾಥ್, ವಿಶ್ವನಾಥ್, ಹೇಮಂತ, ಮಂಜಾ, ಶಂಕರ, ಅಯ್ಯಪ್ಪ, ಜಯರಾಜ್ ಮತ್ತು ಕೃಷ್ಣ(ಡ್ರೈವರ್) ಸೇರಿದಂತೆ ಇನ್ನಿತರರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. 
 

ವಿಐಎಸ್‌ಎಲ್ ನಗರಾಡಳಿತ ಅಧಿಕಾರಿ ಮೋಹನ್‌ರಾಜ್ ಶೆಟ್ಟಿ ವರ್ಗಾವಣೆ

ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದಿಂದ ಸನ್ಮಾನ 

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಗರಾಡಳಿತ ಇಲಾಖೆಯಲ್ಲಿ ನಗರಾಡಳಿತ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮೋಹನ್‌ರಾಜ್ ಶೆಟ್ಟಿ ಕೇಂದ್ರ ಸರ್ಕಾರದ ಅಸ್ಸಾಂ ಬ್ರಹ್ಮಪುತ್ರ ವಾಲಿ ಫರ್ಟಿಲೈಜರ್ ಕಾರ್ಪೋರೇಷನ್ ಲಿಮಿಟೆಡ್(ಬಿವಿಎಫ್‌ಸಿಎಲ್) ಕಂಪನಿ ನಿರ್ದೇಶಕರಾಗಿ ವರ್ಗಾವಣೆಗೊಂಡಿದ್ದಾರೆ. ಈ ಹಿನ್ನಲೆಯಲ್ಲಿ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದಿಂದ ಸನ್ಮಾನಿಸಿ ಗೌರವಿಸಲಾಯಿತು. 
    ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಗರಾಡಳಿತ ಇಲಾಖೆಯಲ್ಲಿ ನಗರಾಡಳಿತ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮೋಹನ್‌ರಾಜ್ ಶೆಟ್ಟಿ ಕೇಂದ್ರ ಸರ್ಕಾರದ ಅಸ್ಸಾಂ ಬ್ರಹ್ಮಪುತ್ರ ವಾಲಿ ಫರ್ಟಿಲೈಜರ್ ಕಾರ್ಪೋರೇಷನ್ ಲಿಮಿಟೆಡ್(ಬಿವಿಎಫ್‌ಸಿಎಲ್) ಕಂಪನಿ ನಿರ್ದೇಶಕರಾಗಿ ವರ್ಗಾವಣೆಗೊಂಡಿದ್ದಾರೆ. 
    ಮೋಹನ್‌ರಾಜ್ ಶೆಟ್ಟಿಯವರು ಮಾ.೩೧ರಂದು ನಗರಾಡಳಿತ ಅಧಿಕಾರಿ ಹುದ್ದೆಯಿಂದ ಬಿಡುಗಡೆಗೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದಲ್ಲಿ ಗುರುವಾರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಹೆಚ್ಚಿನ ಸಹಕಾರ ನೀಡಿದ ನಿವೃತ್ತ ಕಾರ್ಮಿಕರಿಗೆ ಮೋಹನ್‌ರಾಜ್ ಶೆಟ್ಟಿ ಕೃತಜ್ಞತೆ ಸಲ್ಲಿಸಿದರು. 
    ಕಲ್ಯಾಣ ಕೇಂದ್ರದ ಅಧ್ಯಕ್ಷ ಬಿ.ಜೆ ರಾಮಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ನರಸಿಂಹಚಾರ್, ಶಂಕರ್, ಕೆಂಪಯ್ಯ, ಪ್ರಸಾದ್, ಅಡವೀಶಯ್ಯ, ನಾಗರಾಜ್, ಬಸವರಾಜ್, ಜಯರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಹನುಮಂತರಾವ್ ಸ್ವಾಗತಿಸಿ, ಕಾರ್ಯದರ್ಶಿ ಮಹೇಶ್ ವಂದಿಸಿದರು. 

ಎಂಪಿಎಂ ನಿವೃತ್ತ ಕಾರ್ಮಿಕ ಎಂ. ಪುಟ್ಟಸ್ವಾಮಿ ನಿಧನ

ಎಂ. ಪುಟ್ಟಸ್ವಾಮಿ 
    ಭದ್ರಾವತಿ: ನಗರದ ಹುಡ್ಕೋ ಕಾಲೋನಿ ಉಂಬ್ಳೆಬೈಲು ರಸ್ತೆ ನಿವಾಸಿ, ಮೈಸೂರು ಕಾಗದ ಕಾರ್ಖಾನೆ ಓಲ್ಡ್ ಸ್ಟಾಕ್ ರೂಮ್ ನಿವೃತ್ತ ಕಾರ್ಮಿಕ ಎಂ. ಪುಟ್ಟಸ್ವಾಮಿ (೭೨) ಬುಧವಾರ ರಾತ್ರಿ ನಿಧನ ಹೊಂದಿದ್ದಾರೆ. 
    ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಇದ್ದಾರೆ. ಮೃತರ ಅಂತ್ಯಕ್ರಿಯೆ ಬೈಪಾಸ್ ರಸ್ತೆ ಸಮೀಪದ ತಿಮ್ಲಾಪುರ ರಸ್ತೆಯ ಶಂಕರಪ್ಪನಕಟ್ಟೆ ಶ್ರೀ ಸತ್ಯಹರಿಶ್ಚಂದ್ರ ಹಿಂದು ರುದ್ರಭೂಮಿಯಲ್ಲಿ ಗುರುವಾರ ಸಂಜೆ ನೆರವೇರಿತು. ಇವರ ನಿಧನಕ್ಕೆ ಮೈಸೂರು ಕಾಗದ ಕಾರ್ಖಾನೆ ನಿವೃತ್ತ ಕಾರ್ಮಿಕರು, ಸ್ಥಳೀಯ ಮುಖಂಡರು, ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಮೆಸ್ಕಾಂ ಗ್ರಾಹಕರ ಸಲಾಹ ಸಮಿತಿ ಸಭೆ, ಕಚೇರಿ ಉದ್ಘಾಟನೆ


ಭದ್ರಾವತಿ ಮೆಸ್ಕಾಂ ನಗರ ಉಪ ವಿಭಾಗ ಹಾಗೂ ಗ್ರಾಮೀಣ ಉಪ ವಿಭಾಗ ವ್ಯಾಪ್ತಿಗೆ ರಚಿಸಲಾದ ಗ್ರಾಹಕರ ಸಲಾಹ ಸಮಿತಿ ಸಭೆ ಹಾಗೂ ಕಚೇರಿ ಉದ್ಘಾಟನಾ ಸಮಾರಂಭ ನಗರದ ರೈಲ್ವೆ ಅಂಡರ್ ಬ್ರಿಡ್ಜ್ ಬಳಿ ಉಂಬ್ಳೆಬೈಲು ರಸ್ತೆಯಲ್ಲಿರುವ ಮೆಸ್ಕಾಂ ಕಛೇರಿಯಲ್ಲಿ ಗುರುವಾರ ನಡೆಯಿತು. ಕರ್ನಾಟಕ ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ನೂತನ ಕಚೇರಿ ಉದ್ಘಾಟಿಸಿದರು.
    ಭದ್ರಾವತಿ: ಮೆಸ್ಕಾಂ ನಗರ ಉಪ ವಿಭಾಗ ಹಾಗೂ ಗ್ರಾಮೀಣ ಉಪ ವಿಭಾಗ ವ್ಯಾಪ್ತಿಗೆ ರಚಿಸಲಾದ ಗ್ರಾಹಕರ ಸಲಾಹ ಸಮಿತಿ ಸಭೆ ಹಾಗೂ ಕಚೇರಿ ಉದ್ಘಾಟನಾ ಸಮಾರಂಭ ನಗರದ ರೈಲ್ವೆ ಅಂಡರ್ ಬ್ರಿಡ್ಜ್ ಬಳಿ ಉಂಬ್ಳೆಬೈಲು ರಸ್ತೆಯಲ್ಲಿರುವ ಮೆಸ್ಕಾಂ ಕಛೇರಿಯಲ್ಲಿ ಗುರುವಾರ ನಡೆಯಿತು.
    ಕರ್ನಾಟಕ ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ನೂತನ ಕಚೇರಿ ಉದ್ಘಾಟಿಸಿದರು. ಸಲಹಾ ಸಮಿತಿ ತಾಲೂಕು ಅಧ್ಯಕ್ಷ ಬಸವಂತಪ್ಪ ಅಧ್ಯಕ್ಷತೆ ವಹಿಸಿದ್ದರು. 
    ನಗರದ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಾಶ್ ಬಳ್ಳಾಪುರ ಮಾತನಾಡಿ, ಸಲಹಾ ಸಮಿತಿ ರಚನೆಯಿಂದ ಗ್ರಾಹಕರ ಕುಂದುಕೊರತೆಗಳನ್ನು ತಕ್ಷಣ ಬಗೆಹರಿಸಬಹುದಾಗಿದೆ. ಅಲ್ಲದೆ ಗ್ರಾಹಕರಿಗೆ ಸಮಿತಿ ಹೆಚ್ಚಿನ ಸಹಕಾರಿಯಾಗಲಿದೆ ಎಂದರು.
    ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್, ಮೆಸ್ಕಾಂ ಗ್ರಾಮಾಂತರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೊಹಮ್ಮದ್ ಮುನಾಫ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಎಸ್. ಕುಮಾರ್, ಎಚ್.ಎಲ್ ಷಡಾಕ್ಷರಿ,  ಉದ್ಯಮಿ ಬಿ.ಕೆ ಜಗನ್ನಾಥ್, ನಗರಸಭೆ ಸದಸ್ಯರಾದ ಚನ್ನಪ್ಪ, ಬಿ.ಟಿ ನಾಗರಾಜ್, ಮಾವಿನಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್, ಮುಖಂಡರಾದ ಪ್ರಕಾಶ್‌ರಾವ್, ಸಿ. ಜಯಪ್ಪ, sಸುರೇಶ್ ವರ್ಮಾ, ವಿಜಯಲಕ್ಷ್ಮೀ, ಮಂಜುನಾಥ್ ಸೇರಿದಂತೆ ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
    ನಗರ ಉಪ ವಿಭಾಗ ಹಾಗೂ ಗ್ರಾಮೀಣ ಉಪ ವಿಭಾಗ ವ್ಯಾಪ್ತಿಗೆ ರಚಿಸಲಾದ ಮೆಸ್ಕಾಂ ಗ್ರಾಹಕರ ಸಲಾಹ ಸಮಿತಿಯಲ್ಲಿ ತಲಾ ೧೨ ಸದಸ್ಯರಂತೆ ಒಟ್ಟು ೪೬ ಸದಸ್ಯರಿದ್ದು, ಈ ಪೈಕಿ ೫ ಸದಸ್ಯರು ಮುಖ್ಯ ಸಮಿತಿಯಲ್ಲಿದ್ದಾರೆ. 
 

ಭದ್ರಾವತಿ ಮೆಸ್ಕಾಂ ನಗರ ಉಪ ವಿಭಾಗ ಹಾಗೂ ಗ್ರಾಮೀಣ ಉಪ ವಿಭಾಗ ವ್ಯಾಪ್ತಿಗೆ ರಚಿಸಲಾದ ಗ್ರಾಹಕರ ಸಲಾಹ ಸಮಿತಿ ಸಭೆ ಹಾಗೂ ಕಚೇರಿ ಉದ್ಘಾಟನಾ ಸಮಾರಂಭ ನಗರದ ರೈಲ್ವೆ ಅಂಡರ್ ಬ್ರಿಡ್ಜ್ ಬಳಿ ಉಂಬ್ಳೆಬೈಲು ರಸ್ತೆಯಲ್ಲಿರುವ ಮೆಸ್ಕಾಂ ಕಛೇರಿಯಲ್ಲಿ ಗುರುವಾರ ನಡೆಯಿತು. ಕರ್ನಾಟಕ ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಅವರನ್ನು ಮೆಸ್ಕಾಂ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.