Friday, February 25, 2022

ಕುವೆಂಪು ವಿ.ವಿ ಭ್ರಷ್ಟಾಚಾರ : ಕ್ರಮಕ್ಕೆ ಸಿ.ಎಂ ಸೂಚನೆ


ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ನಡೆದಿರುವ ನಿರ್ಣಯಗಳ ಹಿಂದೆ ನಿಯಮ ಬಾಹಿರ, ಅವ್ಯವಹಾರ ಹಾಗು ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರು ಸಲ್ಲಿಸಿದ್ದ ಮನವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪೂರಕವಾಗಿ ಸ್ಪಂದಿಸಿದ್ದು, ಸೂಕ್ತ ಕ್ರಮಕ್ಕೆ ಆದೇಶಿಸಿರುವುದು.
    ಭದ್ರಾವತಿ, ಫೆ. ೨೫: ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ನಡೆದಿರುವ ನಿರ್ಣಯಗಳ ಹಿಂದೆ ನಿಯಮ ಬಾಹಿರ, ಅವ್ಯವಹಾರ ಹಾಗು ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರು ಸಲ್ಲಿಸಿದ್ದ ಮನವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪೂರಕವಾಗಿ ಸ್ಪಂದಿಸಿದ್ದು, ಸೂಕ್ತ ಕ್ರಮಕ್ಕೆ ಆದೇಶಿಸಿದ್ದಾರೆ.
    ಸಿಂಡಿಕೇಟ್ ಸದಸ್ಯರಾದ ಜಿ. ಧರ್ಮಪ್ರಸಾದ್, ಬಳ್ಳೇಕೆರೆ ಸಂತೋಷ್, ಎಚ್.ಬಿ ರಮೆಶ್‌ಬಾಬು, ಎಚ್. ರಾಮಲಿಂಗಪ್ಪ ಸೇರಿದಂತೆ ಇನ್ನಿತರರು ಫೆ.೯ರಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.
    ಮುಖ್ಯಮಂತ್ರಿಗಳು ಪೂರಕವಾಗಿ ಸ್ಪಂದಿಸಿ ಕ್ರಮ ಕೈಗೊಳ್ಳುವಂತೆ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆಂದು ಮುಖ್ಯಮಂತ್ರಿಗಳ ಅಧೀನ ಕಾರ್ಯದರ್ಶಿ ಸಿ.ವಿ ಹರಿದಾಸನ್ ತಿಳಿಸಿದ್ದಾರೆ.

ಶತಾಯುಷಿ, ಗಟ್ಟಿಗಿತ್ತಿ ಪಾರ್ವತಮ್ಮ ಷಡಾಕ್ಷರಯ್ಯ ನಿಧನ

ಪಾರ್ವತಮ್ಮ ಷಡಾಕ್ಷರಯ್ಯ
    ಭದ್ರಾವತಿ, ಫೆ. ೨೫: ತಾಲೂಕಿನ ಗೋಣಿಬೀಡು ಗ್ರಾಮದ ಶತಾಯುಷಿ, ಗಟ್ಟಿಗಿತ್ತಿ ಎಂದೇ ಹೆಸರಾಗಿದ್ದ ಪಾರ್ವತಮ್ಮ ಷಡಾಕ್ಷರಯ್ಯ(೧೦೧) ಶುಕ್ರವಾರ ನಿಧನ ಹೊಂದಿದರು.
    ಜ್ಯೂನಿಯರ್ ಅಂಬರೀಷ್ ಎಂದೇ ಹೆಸರಾಗಿರುವ ಕಲಾವಿದ ಆರಾಧ್ಯ ಸೇರಿದಂತೆ ೫ ಗಂಡು ಮತ್ತು ೪ ಹೆಣ್ಣು ಮಕ್ಕಳನ್ನು ಹೊಂದಿದ್ದರು. ಪಾರ್ವತಮ್ಮ ೯೯ರ ಹರೆಯದಲ್ಲೂ ಗ್ರಾಮದಲ್ಲಿ ಪಾದರಸದಂತೆ ಓಡಾಡಿಕೊಂಡು ಭತ್ತ ನಾಟಿ ಸೇರಿದಂತೆ ಗದ್ದೆ ಕೆಲಸಗಳಲ್ಲಿ ಸಕ್ರಿಯವಾಗಿದ್ದರು. ಇವರ ಕ್ರಿಯಾಶೀಲತೆಯನ್ನು ಕಂಡು ಗ್ರಾಮಸ್ಥರು ಬೆರಗಾಗಿದ್ದರು. ಇವರ ಅಂತ್ಯಕ್ರಿಯೆ ಶನಿವಾರ ಮಧ್ಯಾಹ್ನ ಗ್ರಾಮದಲ್ಲಿರುವ ಇವರ ತೋಟದಲ್ಲಿ ನಡೆಯಲಿದೆ.
    ಇವರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್, ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ನೋಟರಿ ಆರ್.ಎಸ್ ಶೋಭಾ, ಜಯಕರ್ನಾಟಕ ಸಂಘಟನೆ ಜಿಲ್ಲಾ ಉಪಾಧ್ಯಕ್ಷ ತ್ಯಾಜರಾಜ್ ಸೇರಿದಂತೆ ತಾವರಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಸ್ಥಳೀಯ ಮುಖಂಡರು, ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ.

ಫೆ.೨೭ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ

ಭದ್ರಾವತಿ, ಫೆ. ೨೫: ಪ್ರತಿ ವರ್ಷದಂತೆ ಈ ಬಾರಿ ಸಹ ಫೆ.೨೭ರಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಅಂದು ಬೆಳಿಗ್ಗೆ ೮ ಗಂಟೆಗೆ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಸ್ಥಳೀಯ ಜನಪ್ರತಿನಿಧಿಗಳು, ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು, ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿರುವರು. ಕಾರ್ಯಕ್ರಮ ಯಶಸ್ವಿಗೊಳಿಸಿಕೊಡುವಂತೆ ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಕೋರಿದ್ದಾರೆ.

ಅನ್ಯಾಯದ ವಿರುದ್ಧ ಧ್ವನಿ ಎತ್ತದಂತೆ ಕುತಂತ್ರ : ಪ್ರತಿಭಟನೆ

ನಟ, ಪ್ರಗತಿಪರ ಚಿಂತಕ ಚೇತನ್ ಬಿಡುಗಡೆಗೆ  ಆಗ್ರಹ


ಪ್ರಗತಿಪರ ಸಂಘಟನೆಗಳ ವತಿಯಿಂದ ಶುಕ್ರವಾರ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ನಟ, ಪ್ರಗತಿಪರ ಚಿಂತಕ ಚೇತನ್ ಬಂಧನ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಫೆ. ೨೫: ಈ ದೇಶದ ಪ್ರಜೆಗಳ ಸಂವಿಧಾನ ಬದ್ಧ ಹಕ್ಕುಗಳನ್ನು ಬಲವಂತವಾಗಿ ಮೊಟಕುಗೊಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದ್ದು, ಯಾರು ಸಹ ಅನ್ಯಾಯದ ವಿರುದ್ಧ ಧ್ವನಿ ಎತ್ತದಂತೆ ಎಚ್ಚರಿಕೆ ನೀಡಲಾಗುತ್ತಿದೆ ಎಂದು ನಿವೃತ್ತ ಉಪನ್ಯಾಸಕ, ಪ್ರಗತಿಪರ ಚಿಂತಕ ಪ್ರೊ. ಎಂ. ಚಂದ್ರಶೇಖರಯ್ಯ ಆರೋಪಿಸಿದರು.
    ಅವರು ಶುಕ್ರವಾರ ಪ್ರಗತಿಪರ ಸಂಘಟನೆಗಳ ವತಿಯಿಂದ ತಾಲೂಕು ಕಛೇರಿ ಮುಂಭಾಗ ನಟ, ಪ್ರಗತಿಪರ ಚಿಂತಕ ಚೇತನ್ ಬಂಧನ ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
    ದೇಶದಲ್ಲಿ ಅನ್ಯಾಯದ ವಿರುದ್ಧ ಯಾರು ಸಹ ಧ್ವನಿ ಎತ್ತುವಂತಿಲ್ಲ. ಒಂದು ವೇಳೆ ವಿರುದ್ಧವಾಗಿ ನಡೆದುಕೊಂಡಲ್ಲಿ ಅವರ ವಿರುದ್ಧ ಬಲವಂತವಾಗಿ ಕ್ರಮ ಕೈಗೊಂಡು ಧ್ವನಿ ಎತ್ತದಂತೆ ಎಚ್ಚರಿಸುವ ಮೂಲಕ ಸಮಾಜದಲ್ಲಿ ಆತಂಕ ಉಂಟು ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ದೇಶದ ಬಹುತೇಕ ಕಾರಾಗೃಹಗಳಲ್ಲಿ ಕಾರಣವಿಲ್ಲದೆ ಬಂಧಿತರಾಗಿರುವವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಸಾಲಿನಲ್ಲಿ ಇದೀಗ ನಟ, ಪ್ರಗತಿಪರ ಚಿಂತಕ ಚೇತನ್ ಸಹ ಸೇರಿಕೊಂಡಿದ್ದಾರೆಂದು ಆರೋಪಿಸಿದರು.
    ಪೊಲೀಸರು ತಕ್ಷಣ ಚೇತನ್‌ರನ್ನು ಬಿಡುಗಡೆಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿ ತಹಸೀಲ್ದಾರ್‌ರವರಿಗೆ ಮನವಿ ಸಲ್ಲಿಸಲಾಯಿತು.  
    ಪ್ರಮುಖವಾದ ಸುರೇಶ್, ಸತ್ಯ ಭದ್ರಾವತಿ, ಚಿನ್ನಯ್ಯ, ಬಾಲಕೃಷ್ಣ, ಜಿ. ರಾಜು, ನಿತ್ಯಾನಂದ, ಜಯರಾಜ್, ಮಹೇಶ್, ಅರುಣ್, ಈಶ್ವರಪ್ಪ, ಜೆಬಿಟಿ ಬಾಬು, ರಾಜೇಂದ್ರ, ಜಗದೀಶ್, ಟಿಪ್ಪು ಸುಲ್ತಾನ್, ವೆಂಕಟೇಶ್, ಜಿಂಕ್ ಲೈನ್ ಮಣಿ, ಕಾಣಿಕ್‌ರಾಜ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಫೆ.೨೬ರಂದು ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನ, ಮೇಕೆದಾಟು ಯೋಜನೆ ಪೂರ್ವ ಭಾವಿ ಸಭೆ

    ಭದ್ರಾವತಿ, ಫೆ. ೨೫ : ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಮೇಕೆದಾಟು ಯೋಜನೆಯ ಪೂರ್ವಭಾವಿ ಸಭೆ ಫೆ.೨೬ರಂದು  ಬೆಳಿಗ್ಗೆ ೧೧ ಗಂಟೆಗೆ ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ ಬಿ.ಕೆ ಶಿವಕುಮಾರ್‌ರವರ ಮಾಧವನಗರದ ಮನೆ ಹಿಂಭಾಗದ ಆವರಣದಲ್ಲಿ ನಡೆಯಲಿದೆ.
    ಶಾಸಕ ಬಿ.ಕೆ ಸಂಗಮೇಶ್ವರ್,  ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್ ಸುಂದರೇಶ್, ಕೆಪಿಸಿಸಿ ಉಸ್ತುವಾರಿ ರೇಖಾ ಶ್ರೀ ನಿವಾಸ್, ಜಿಲ್ಲಾ ಉಸ್ತುವಾರಿ ಹಾಗು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ, ಕೆಪಿಸಿಸಿ ಡಿಜಿಟಲ್ ಕಮಿಟಿ ಅಧ್ಯಕ್ಷ ರಘುನಂದಾ ರಾಮಣ್ಣ, ಮಾಜಿ ಸಂಸದ ಬಿ.ಎನ್ ಚಂದ್ರಪ್ಪ, ಪ್ರಮುಖರಾದ ಆಗ ಸುಲ್ತಾನ್, ಕೆ. ಶಿವಮೂರ್ತಿ, ಪ್ರಫುಲ್ಲಾ ಮಧುಕರ್, ಬಾಲಕೃಷ್ಣ, ಟಿ ಲೋಕೇಶ್‌ನಾಯ್ಕ್, ತಸ್ರೀಫ್ ಸೇರಿದಂತೆ ಪಕ್ಷದ ಮುಖಂಡರು, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿರುವರು.  
    ಗ್ರಾಮ ಪಂಚಾಯತ್ ಚುನಾಯಿತ ಸದಸ್ಯರು, ಡಿಜಿಟಲ್ ನೋಂದಣಿ ವಿಭಾಗದ ಸಿಬ್ಬಂದಿಗಳು ಹಾಗು ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.