Friday, February 24, 2023

ಭದ್ರಾವತಿ ಬಂದ್ ಬೆಂಬಲಿಸಿ ಹೋರಾಟದಲ್ಲಿ ಪಾಲ್ಗೊಂಡ ಶಾರದ ಅಪ್ಪಾಜಿ

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಗುತ್ತಿಗೆ ಕಾರ್ಮಿಕರು ಶುಕ್ರವಾರ ಹಮ್ಮಿಕೊಂಡಿದ್ದ ಭದ್ರಾವತಿ ಬಂದ್ ಹೋರಾಟಕ್ಕೆ ಜೆಡಿಎಸ್ ಪಕ್ಷ ಸಂಪೂರ್ಣ ಬೆಂಬಲ ಸೂಚಿಸುವ ಜೊತೆಗೆ ಪಕ್ಷದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾರದ ಅಪ್ಪಾಜಿ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಿ ಪುನಶ್ಚೇತನಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
    ಭದ್ರಾವತಿ, ಫೆ. ೨೪: ವಿಐಎಸ್‌ಎಲ್ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಗುತ್ತಿಗೆ ಕಾರ್ಮಿಕರು ಶುಕ್ರವಾರ ಹಮ್ಮಿಕೊಂಡಿದ್ದ ಭದ್ರಾವತಿ ಬಂದ್ ಹೋರಾಟಕ್ಕೆ ಜೆಡಿಎಸ್ ಪಕ್ಷ ಸಂಪೂರ್ಣ ಬೆಂಬಲ ಸೂಚಿಸುವ ಜೊತೆಗೆ ಪಕ್ಷದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾರದ ಅಪ್ಪಾಜಿ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಿ ಪುನಶ್ಚೇತನಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
    ಕಾರ್ಖಾನೆ ಮುಂಭಾಗದಿಂದ ತಾಲೂಕು ಕಛೇರಿವರೆಗೂ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಶಾರದ ಅಪ್ಪಾಜಿ ಸಾಗುವ ಮೂಲಕ ಹೋರಾಟಕ್ಕೆ ಮತ್ತಷ್ಟು ಶಕ್ತಿ ತುಂಬಿದರು.
ಪಕ್ಷದ ನಗರ ಘಟಕದ ಅಧ್ಯಕ್ಷ ಆರ್. ಕರುಣಮೂರ್ತಿ, ತಾಲೂಕು ಯುವ ಘಟಕದ ಅಧ್ಯಕ್ಷ ಎಂ.ಜೆ ಅಜಿತ್, ನಗರಸಭೆ ಸದಸ್ಯರಾದ ಬಸವರಾಜ್ ಬಿ ಆನೆಕೊಪ್ಪ, ಕೋಟೇಶ್ವರರಾವ್, ಉದಯಕುಮಾರ್, ರೂಪಾವತಿ ಗುಣಿಶೇಖರ್, ನಾಗರತ್ನ ಅನಿಲ್ ಕುಮಾರ್, ಸವಿತಾ ಉಮೇಶ್, ಮಂಜುಳಮ್ಮ ಸುಬ್ಬಣ್ಣ, ಆರ್. ಮೋಹನ್ ಕುಮಾರ್, ಭಾಗ್ಯಮ್ಮ, ತಾಲೂಕು ಕಾರ್ಯಾಧ್ಯಕ್ಷ ಡಿ.ಟಿ ಶ್ರೀಧರ್, ಪರಿಶಿಷ್ಟ ಜಾತಿ ವಿಭಾಗದ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಉಜ್ಜನಿಪುರ ಮತ್ತು ವಿವೇಕ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.  

ಭದ್ರಾವತಿ ಬಂದ್ ಬೆಂಬಲಿಸಿ ನಗರಸಭೆ ಉಪಾಧ್ಯಕ್ಷರ ಚುನಾವಣೆ ಬಹಿಷ್ಕಾರ

ಭದ್ರಾವತಿಯಲ್ಲಿ ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಭದ್ರಾವತಿ ಬಂದ್ ಹಿನ್ನಲೆಯಲ್ಲಿ ನಗರಸಭೆ ಸದಸ್ಯರು ಉಪಾಧ್ಯಕ್ಷರ ಚುನಾವಣೆಯನ್ನು ಬಹಿಷ್ಕರಿಸಿ ಹೋರಾಟ ಬೆಂಬಲಿಸಿದರು. 
    ಭದ್ರಾವತಿ, ಫೆ. ೨೪ : ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಭದ್ರಾವತಿ ಬಂದ್ ಹಿನ್ನಲೆಯಲ್ಲಿ ನಗರಸಭೆ ಸದಸ್ಯರು ಉಪಾಧ್ಯಕ್ಷರ ಚುನಾವಣೆಯನ್ನು ಬಹಿಷ್ಕರಿಸಿರುವ ಘಟನೆ ನಡೆದಿದೆ.
    ನಗರಸಭೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಅಧಿಕಾರವನ್ನು ಆಂತರಿಕವಾಗಿ ಹಂಚಿಕೆ ಮಾಡಿಕೊಂಡಿದ್ದು, ಒಪ್ಪಂದದ ಪ್ರಕಾರ ಉಪಾಧ್ಯಕ್ಷ ಸ್ಥಾನವನ್ನು ವಾರ್ಡ್ ನಂ.೨೬ರ ಸದಸ್ಯೆ ಸರ್ವಮಂಗಳ ಭೈರಪ್ಪರಿಗೆ ಬಿಟ್ಟುಕೊಡಬೇಕಾಗಿತ್ತು. ಈ ಹಿನ್ನಲೆಯಲ್ಲಿ ಹಾಲಿ ಉಪಾಧ್ಯಕ್ಷ ಚನ್ನಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅದರಂತೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು.
    ಚುನಾವಣಾಧಿಕಾರಿಯಾಗಿರುವ ಶಿವಮೊಗ್ಗ ಉಪವಿಭಾಗಾಧಿಕಾರಿಗಳು ಬೆಳಿಗ್ಗೆ ಚುನಾವಣೆ ಪ್ರಕ್ರಿಯೆ ಆರಂಭಿಸಿದ್ದರು. ಸರ್ವಮಂಗಳ ಭೈರಪ್ಪರವರು ನಾಮಪತ್ರ ಸಲ್ಲಿಸಿದ್ದರು. ಆದರೆ ಗುತ್ತಿಗೆ ಕಾರ್ಮಿಕರ ಹೋರಾಟದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಮುಖಂಡರು ಚುನಾವಣೆ ಬಹಿಷ್ಕರಿಸುವುದಾಗಿ ಭರವಸೆ ನೀಡಿದ್ದರು. ಇದಕ್ಕೆ ಜೆಡಿಎಸ್ ಪಕ್ಷ ಸಹ ಬೆಂಬಲ ಸೂಚಿಸಿತ್ತು. ಈ ಹಿನ್ನಲೆಯಲ್ಲಿ ಸದಸ್ಯರೆಲ್ಲರೂ ಚುನಾವಣೆ ಬಹಿಷ್ಕರಿಸಿ ಹೊರಬಂದು ಹೋರಾಟವನ್ನು ಬೆಂಬಲಿಸಿದರು. ಕೊನೆಗೆ ಚುನಾವಣಾಧಿಕಾರಿಗಳು ಚುನಾವಣೆ ಮುಂದೂಡುವುದಾಗಿ ಘೋಷಿಸಿದರು.

ಯುವ ಕಾಂಗ್ರೆಸ್ ರಾಜ್ಯ ವಕ್ತಾರ ವರುಣ್‌ಗೌಡರಿಗೆ ಜೀವಬೆದರಿಕೆ ; ದೂರು ದಾಖಲು

ವರುಣ್‌ಗೌಡ
    ಭದ್ರಾವತಿ, ಫೆ. ೨೪ : ಯುವ ಕಾಂಗ್ರೆಸ್ ರಾಜ್ಯ ವಕ್ತಾರ, ಕಾಗದನಗರ ನಿವಾಸಿ ವರುಣ್‌ಗೌಡರಿಗೆ ವ್ಯಕ್ತಿಯೋರ್ವ ಮೊಬೈಲ್‌ಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
    ಈ ಸಂಬಂಧ ವರುಣ್‌ಗೌಡ ಪೇಪರ್‌ಟೌನ್ ಪೊಲೀಸ್ ಠಾಣೆಗೆ ಶುಕ್ರವಾರ ಸಂಜೆ ದೂರು ನೀಡಿದ್ದಾರೆ. ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಬಿ.ವಿ ಶ್ರೀನಿವಾಸ್ ಹಾಗು ಶಾಸಕ ಬಿ.ಕೆ ಸಂಗಮೇಶ್ವರ್‌ರವರು ನನ್ನನ್ನು ರಾಜ್ಯ ವಕ್ತಾರಾಗಿ ನನ್ನನ್ನು ಆಯ್ಕೆ ಮಾಡಿರುತ್ತಾರೆ. ಕಳೆದ ಸುಮಾರು ಒಂದು ತಿಂಗಳಿನಿಂದ ಅಧಿಕಾರ ಪಡೆದು ಪಕ್ಷ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ಫೆ.೨೩ರ ಗುರುವಾರ ರಾತ್ರಿ ಸುಮಾರು ೧೦.೩೦ರ ಸಮಯದಲ್ಲಿ ಗಗನ್ ಎಂಬ ವ್ಯಕ್ತಿ ಜೆಡಿಎಸ್ ಪಕ್ಷ ಎಂದು ಹೇಳಿಕೊಂಡು ಕರೆ ಮಾಡಿದ್ದು, ಜೀವ ಬೆದರಿಕೆ ಹಾಕಿರುತ್ತಾರೆಂದು ದೂರಿದ್ದಾರೆ.
    ಈ ಹಿನ್ನಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ ನಾನು ಹೊರಗಡೆ ತಿರುಗಾಡುವಾಗ ದ್ವಿಚಕ್ರ ವಾಹನದಲ್ಲಿ ಅಡ್ಡಗಟ್ಟಿ ಹಿಂಬಾಲಿಸಿ ನಿಂದಿಸುತ್ತಾರೆ. ನನಗೆ ರಕ್ಷಣೆ ಅವಶ್ಯಕತೆ ಇದ್ದು, ಈ ಹಿನ್ನಲೆಯಲ್ಲಿ ರಕ್ಷಣೆ ನೀಡುವಂತೆ ಕೋರಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕೈಗೊಂಡಿದ್ದಾರೆ.

ಓ.ಸಿ-ಮಟ್ಕಾ ಜೂಜಾಟ ಅಡ್ಡೆ ಮೇಲೆ ದಾಳಿ : ಓರ್ವನ ವಿರುದ್ಧ ಪ್ರಕರಣ ದಾಖಲು



    ಭದ್ರಾವತಿ, ಫೆ. ೨೪ : ಓ.ಸಿ-ಮಟ್ಕಾ ಜೂಜಾಟ ಅಡ್ಡೆಯೊಂದರ ಮೇಲೆ ದಾಳಿ ನಡೆಸಿ ಓರ್ವನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಘಟನೆ ನಡೆದಿದೆ.
    ಪೇಪರ್‌ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯ ೨ನೇ ಡಿವಿಜನ್ ಅಂಗನವಾಡಿ ಎದುರಿನ ರಸ್ತೆಯಲ್ಲಿ ಬೊಮ್ಮನಕಟ್ಟೆ ನಿವಾಸಿ ಸಾಧಿಕ್ ಎಂಬಾತ ಗುರುವಾರ ಸಂಜೆ ಜನರನ್ನು ಗುಂಪು ಸೇರಿಸಿಕೊಂಡು ಓ.ಸಿ-ಮಟ್ಕಾ ಜೂಜಾಟದಲ್ಲಿ ತೊಡಗಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ನ್ಯಾಯಾಲಯದ ಅನುಮತಿ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  

ಭದ್ರಾವತಿ ಬಂದ್ ಸಂಪೂರ್ಣ ಯಶಸ್ವಿ : ಬೃಹತ್ ಪ್ರತಿಭಟನಾ ಮೆರವಣಿಗೆ

ಪ್ರಮುಖ ವೃತ್ತಗಳಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ

ಭದ್ರಾವತಿಯಲ್ಲಿ ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಭದ್ರಾವತಿ ಬಂದ್ ಹಿನ್ನಲೆಯಲ್ಲಿ ಗುತ್ತಿಗೆ ಕಾರ್ಮಿಕರು ಅಂಡರ್‌ಬ್ರಿಡ್ಜ್ ಬಳಿ ಟೈರ್‌ಗೆ ಬೆಂಕಿ ಹಚ್ಚಿ ಕೇಂದ್ರ ಸರ್ಕಾರದ ವಿರುದ್ಧ ಹಾಗು ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು.
    ಭದ್ರಾವತಿ, ಫೆ.೨೪: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ  ಮುಚ್ಚುವ ಆದೇಶದ ವಿರುದ್ಧ ಶುಕ್ರವಾರ ಹಮ್ಮಿಕೊಂಡಿದ್ದ ಭದ್ರಾವತಿ ಬಂದ್ ಸಂಪೂರ್ಣ ಯಶಸ್ವಿಯಾಗಿದ್ದು, ವಿವಿಧ ರಾಜಕೀಯ ಪಕ್ಷಗಳಿಂದ,  ಸಂಘ-ಸಂಸ್ಥೆಗಳಿಂದ, ನಾಗರೀಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಯಿತು.
    ಸ್ವಯಂ ಪ್ರೇರಿತರಾಗಿ ಬೆಳಿಗ್ಗೆಯಿಂದಲೇ ಹೋಟೆಲ್‌ಗಳು, ಪೆಟ್ರೋಲ್ ಬಂಕ್‌ಗಳು, ಚಿತ್ರಮಂದಿರಗಳು ಸೇರಿದಂತೆ ಅಂಗಡಿ-ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು. ಸರ್ಕಾರಿ ಹಾಗು ಖಾಸಗಿ ಬಸ್‌ಗಳು, ಆಟೋ ಸಂಚಾರ ಸ್ಥಗಿತಗೊಂಡಿತ್ತು. ಶಾಲಾ-ಕಾಲೇಜುಗಳು ರಜೆ ಘೋಷಿಸಿದ್ದವು.  ಉಳಿದಂತೆ ಕೆಲವು ಸರ್ಕಾರಿ ಕಛೇರಿಗಳು ಸಹ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ ರಜೆ ಘೋಷಿಸಿದ್ದವು. ನಗರದ ವಕೀಲರು ಸಹ ನ್ಯಾಯಾಲಯಗಳಲ್ಲಿ ಕಲಾಪಗಳಿಂದ ದೂರ ಉಳಿದು ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಬೆಂಬಲ ವ್ಯಕ್ತಪಡಿಸಿದರು.


ಭದ್ರಾವತಿಯಲ್ಲಿ ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಭದ್ರಾವತಿ ಬಂದ್ ಹಿನ್ನಲೆಯಲ್ಲಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ಬಿಕೋ ಎನ್ನುತ್ತಿರುವುದು.
    ನಗರದ ಪ್ರಮುಖ ವೃತ್ತಗಳಲ್ಲಿ ಗುತ್ತಿಗೆ ಕಾರ್ಮಿಕರು ಟೈರ್‌ಗಳಿಗೆ ಬೆಂಕಿ ಹಚ್ಚಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಕ್ಷೇತ್ರದಾದ್ಯಂತ ಬೈಕ್ ರ‍್ಯಾಲಿ ನಡೆಸಿ ಬಂದ್‌ಗೆ ಸಹಕರಿಸುವಂತೆ ಮನವಿ ಮಾಡಿದರು. ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಗುತ್ತಿಗೆ ಕಾರ್ಮಿಕರ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾಯಂ ಹಾಗು ನಿವೃತ್ತ ಕಾರ್ಮಿಕ ಸಂಘಟನೆಗಳ ಪ್ರಮುಖರು, ತಾಲೂಕು ವರ್ತಕರ ಸಂಘ, ರೈತ ಸಂಘ, ಕನ್ನಡ ಸಾಹಿತ್ಯ ಪರಿಷತ್, ಕೇರಳ ಸಮಾಜ, ಕ್ರೈಸ್ತ ಸಮಾಜ, ಮಾಜಿ ಸೈನಿಕರ ಸಂಘ, ಮಾದಿಗ ಸಮಾಜ, ಜಯಕರ್ನಾಟಕ ಸಂಘಟನೆ, ಒಕ್ಕಲಿಗರ ಸಂಘ, ಭದ್ರಾವತಿ ಪ್ರಜಾ ವಿಮೋಚನೆ ಸಂಘ, ಮಾನವ ಹಕ್ಕುಗಳ ಹೋರಾಟ ಸಮಿತಿ, ಕರುನಾಡು ಪ್ರಜಾ ಸಂರಕ್ಷಣಾ ವೇದಿಕೆ, ಅಂಜುಮಾನ್ ಇಸ್ಲಾವುಲ್ ಮುಸ್ಲಿಮೀನ್, ಸರ್ಕಾರಿ ಪಡಿತರ ವಿತರಕರ ಸಂಘ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ವಾಲ್ಮೀಕಿ ಸಮಾಜ, ಅಂಬೇಡ್ಕರ್ ಯುವ ಪಡೆ, ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಕಾಂಗ್ರೆಸ್, ಜೆಡಿಎಸ್, ಎಎಪಿ, ಕೆಆರ್‌ಎಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು, ಬೆಂಬಲ ಸೂಚಿಸಿದ್ದವು.


ಭದ್ರಾವತಿಯಲ್ಲಿ ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಭದ್ರಾವತಿ ಬಂದ್ ಹಿನ್ನಲೆಯಲ್ಲಿ ಅಂಬೇಡ್ಕರ್ ವೃತ್ತದಲ್ಲಿ ಪ್ರಮುಖರು ಮಾತನಾಡಿದರು.
    ಬಂದ್ ಹಿನ್ನಲೆಯಲ್ಲಿ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ವಾಣಿಜ್ಯ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಹಾಲು, ಔಷಧಿ ಸೇರಿದಂತೆ ಅಗತ್ಯ ವಸ್ತುಗಳ ಮಾರಾಟ ಎಂದಿನಂತೆ ನಡೆಯಿತು.
    ವಿಐಎಸ್‌ಎಲ್ ಕಾರ್ಖಾನೆ ಮುಂಭಾಗದಿಂದ ತಾಲೂಕು ಕಛೇರಿವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್, ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ, ರೈತ ಮುಖಂಡ ಕೆ.ಟಿ ಗಂಗಾಧರ್ ಸೇರಿದಂತೆ ಸಂಘ-ಸಂಸ್ಥೆಗಳ ಪ್ರಮುಖರು ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಮಧ್ಯಾಹ್ನ ವರ್ತಕರ ಸಂಘದ ವತಿಯಿಂದ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮನವಿ ಸಲ್ಲಿಸಲಾಯಿತು.  



ಭದ್ರಾವತಿಯಲ್ಲಿ ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಭದ್ರಾವತಿ ಬಂದ್ ಹಿನ್ನಲೆಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಶಾಸಕ ಬಿ.ಕೆ ಸಂಗಮೇಶ್ವರ್, ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.