ಶುಕ್ರವಾರ, ಫೆಬ್ರವರಿ 24, 2023

ಭದ್ರಾವತಿ ಬಂದ್ ಬೆಂಬಲಿಸಿ ನಗರಸಭೆ ಉಪಾಧ್ಯಕ್ಷರ ಚುನಾವಣೆ ಬಹಿಷ್ಕಾರ

ಭದ್ರಾವತಿಯಲ್ಲಿ ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಭದ್ರಾವತಿ ಬಂದ್ ಹಿನ್ನಲೆಯಲ್ಲಿ ನಗರಸಭೆ ಸದಸ್ಯರು ಉಪಾಧ್ಯಕ್ಷರ ಚುನಾವಣೆಯನ್ನು ಬಹಿಷ್ಕರಿಸಿ ಹೋರಾಟ ಬೆಂಬಲಿಸಿದರು. 
    ಭದ್ರಾವತಿ, ಫೆ. ೨೪ : ವಿಐಎಸ್‌ಎಲ್ ಕಾರ್ಖಾನೆ ಉಳಿವಿಗಾಗಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಭದ್ರಾವತಿ ಬಂದ್ ಹಿನ್ನಲೆಯಲ್ಲಿ ನಗರಸಭೆ ಸದಸ್ಯರು ಉಪಾಧ್ಯಕ್ಷರ ಚುನಾವಣೆಯನ್ನು ಬಹಿಷ್ಕರಿಸಿರುವ ಘಟನೆ ನಡೆದಿದೆ.
    ನಗರಸಭೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಅಧಿಕಾರವನ್ನು ಆಂತರಿಕವಾಗಿ ಹಂಚಿಕೆ ಮಾಡಿಕೊಂಡಿದ್ದು, ಒಪ್ಪಂದದ ಪ್ರಕಾರ ಉಪಾಧ್ಯಕ್ಷ ಸ್ಥಾನವನ್ನು ವಾರ್ಡ್ ನಂ.೨೬ರ ಸದಸ್ಯೆ ಸರ್ವಮಂಗಳ ಭೈರಪ್ಪರಿಗೆ ಬಿಟ್ಟುಕೊಡಬೇಕಾಗಿತ್ತು. ಈ ಹಿನ್ನಲೆಯಲ್ಲಿ ಹಾಲಿ ಉಪಾಧ್ಯಕ್ಷ ಚನ್ನಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅದರಂತೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು.
    ಚುನಾವಣಾಧಿಕಾರಿಯಾಗಿರುವ ಶಿವಮೊಗ್ಗ ಉಪವಿಭಾಗಾಧಿಕಾರಿಗಳು ಬೆಳಿಗ್ಗೆ ಚುನಾವಣೆ ಪ್ರಕ್ರಿಯೆ ಆರಂಭಿಸಿದ್ದರು. ಸರ್ವಮಂಗಳ ಭೈರಪ್ಪರವರು ನಾಮಪತ್ರ ಸಲ್ಲಿಸಿದ್ದರು. ಆದರೆ ಗುತ್ತಿಗೆ ಕಾರ್ಮಿಕರ ಹೋರಾಟದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ಮುಖಂಡರು ಚುನಾವಣೆ ಬಹಿಷ್ಕರಿಸುವುದಾಗಿ ಭರವಸೆ ನೀಡಿದ್ದರು. ಇದಕ್ಕೆ ಜೆಡಿಎಸ್ ಪಕ್ಷ ಸಹ ಬೆಂಬಲ ಸೂಚಿಸಿತ್ತು. ಈ ಹಿನ್ನಲೆಯಲ್ಲಿ ಸದಸ್ಯರೆಲ್ಲರೂ ಚುನಾವಣೆ ಬಹಿಷ್ಕರಿಸಿ ಹೊರಬಂದು ಹೋರಾಟವನ್ನು ಬೆಂಬಲಿಸಿದರು. ಕೊನೆಗೆ ಚುನಾವಣಾಧಿಕಾರಿಗಳು ಚುನಾವಣೆ ಮುಂದೂಡುವುದಾಗಿ ಘೋಷಿಸಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ