Saturday, November 13, 2021

ಇಲ್ಲೊಂದು ಡಾ.ರಾಜ್ ಅಭಿಮಾನಿಯ ದೇವರ ಮಂಡಿ

ಸದಾ ಕಾಲ ದೇವರಂತೆ ಸ್ಮರಿಸುವ ಮಂಜುನಾಥ್ ಕುಟುಂಬ ವರ್ಗ

ಮಂಜುನಾಥ್ ಅವರ ಬಾಳೆಕಾಯಿ ಮಂಡಿಯಲ್ಲಿರುವ ಡಾ. ರಾಜ್‌ಕುಮಾರ್ ಅವರ ಪೋಟೋಗಳು.

* ಅನಂತಕುಮಾರ್
ಭದ್ರಾವತಿ, ನ. ೧೩: ನಗರದ ಚಾಮೇಗೌಡ ಏರಿಯಾ ವ್ಯಾಪ್ತಿಯಲ್ಲಿ ಕರ್ನಾಟಕ ರತ್ನ, ವರನಟ ಡಾ. ರಾಜ್‌ಕುಮಾರ್ ಅಭಿಮಾನಿಗಳು ಹೆಚ್ಚಾಗಿದ್ದು, ಸುಮಾರು ೫ ದಶಕಗಳಿಗೂ ಹೆಚ್ಚು ಕಾಲದಿಂದಲೂ ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘ ಇಲ್ಲಿ ಅಸ್ತಿತ್ವದಲ್ಲಿದೆ. ಇಂದಿಗೂ ಡಾ. ರಾಜ್‌ಕುಮಾರ್ ಕುಟುಂಬದ ಮೇಲಿನ ಅಭಿಮಾನ ಸ್ವಲ್ಪವೂ ಕಡಿಮೆಯಾಗಿಲ್ಲ. ಅದರಲ್ಲೂ ಇಲ್ಲೊಬ್ಬರು ವಿಶೇಷವಾಗಿ ರಾಜ್‌ಕುಮಾರ್ ಕುಟುಂಬವನ್ನು ಸದಾ ಕಾಲ ಸ್ಮರಿಸುತ್ತಾ ದೇವರಂತೆ ಆರಾಧಿಸಿಕೊಂಡು ಬರುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಬಿ.ಎಚ್ ರಸ್ತೆ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ  ಸುಮಾರು ೪ ದಶಕಗಳಿಗೂ ಹೆಚ್ಚು ಕಾಲದಿಂದಲೂ ಬಾಳೆಕಾಯಿ ಮಂಡಿ ಮುನ್ನಡೆಸಿಕೊಂಡು ಬರುತ್ತಿರುವ ಮಂಜುನಾಥ್ ಹಾಗು ಕುಟುಂಬದವರು ರಾಜ್‌ಕುಮಾರ್ ಅವರನ್ನು ಸದಾ ಸ್ಮರಿಸುವ ಜೊತೆಗೆ ಪ್ರತಿವರ್ಷ ಅವರ ಹುಟ್ಟುಹಬ್ಬ ಹಾಗು ಪುಣ್ಯಸ್ಮರಣೆ ದಿನಗಳನ್ನು ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಜೊತೆಗೆ ವಿಶೇಷವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.


ಮಂಜುನಾಥ್ ಅವರ ಬಾಳೆಕಾಯಿ ಮಂಡಿಯಲ್ಲಿರುವ ಡಾ. ರಾಜ್‌ಕುಮಾರ್ ಅವರ ಪೋಟೋಗಳು.

    ಮಂಡಿ ತುಂಬಾ ರಾಜ್‌ಕುಮಾರ್ ಪೋಟೋಗಳು:
    ಇವರ ಮಂಡಿಯಲ್ಲಿ ದೇವರ ಪೋಟೋಗಳು ಒಂದೋ ಎರಡೋ ಉಳಿದೆಲ್ಲವೂ ರಾಜ್‌ಕುಮಾರ್ ಹಾಗು ಅವರ ಕುಟುಂಬದವರ ಪೋಟೋಗಳೇ. ಒಂದು ಕ್ಷಣ ರಾಜ್‌ಕುಮಾರ್ ಭವ್ಯ ಪರಂಪರೆ ಇಲ್ಲಿ ತೆರೆದುಕೊಳ್ಳುತ್ತದೆ. ವಿಶೇಷ ಎಂದರೆ ರಾಜ್‌ಕುಮಾರ್ ಮೇಲಿನ ಅಭಿಮಾನಕ್ಕೆ ಪುತ್ರ ಟಿ.ಎಂ ಅರ್ಪಿತ್‌ಕುಮಾರ್‌ಗೆ ಅಪ್ಪು ಎಂಬ ಹೆಸರನ್ನು ನಾಮಕರಣಗೊಳಿಸಿದ್ದಾರೆ. ಅಪ್ಪು ಸಹ ರಾಜ್‌ಕುಮಾರ್ ಕುಟುಂಬದ ಅಭಿಮಾನಿಯಾಗಿದ್ದಾರೆ.
    ಡಾ.ರಾಜ್, ಪುನೀತ್ ಪುತ್ಥಳಿ ನಿರ್ಮಾಣ ಮಾಡುವ ಬಯಕೆ:
    ಕಳೆದ ೩ ದಿನಗಳ ಹಿಂದೆ ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪುನೀತ್ ರಾಜ್‌ಕುಮಾರ್ ಅವರ ೧೩ನೇ ದಿನದ ಪುಣ್ಯಸ್ಮರಣೆದಂದು ತನ್ನ ಅನಿಸಿಕೆ ವ್ಯಕ್ತಪಡಿಸಿದ ಅರ್ಪಿತ್‌ಕುಮಾರ್(ಅಪ್ಪು) ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ನಿಧನ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ಇವರ ಸ್ಮರಣೆ ಸದಾ ಕಾಲ ಉಳಿಯುವಂತೆ ಮಾಡಬೇಕಾಗಿದೆ. ಜನಪ್ರತಿನಿಧಿಗಳು, ಸ್ಥಳೀಯರು ಹಾಗು ಅಭಿಮಾನಿಗಳು ಸೇರಿದಂತೆ ಎಲ್ಲರ ಸಹಕಾರದಿಂದ ಮುಂದಿನ ದಿನಗಳಲ್ಲಿ ಡಾ. ರಾಜ್‌ಕುಮಾರ್ ಹಾಗು ಪುನೀತ್ ರಾಜ್‌ಕುಮಾರ್ ಅವರ ಪುತ್ಥಳಿಗಳನ್ನು ನಿರ್ಮಾಣ ಮಾಡಬೇಕೆಂಬ ಬಯಕೆ ಹೊಂದಿದ್ದೇನೆ ಎಂದರು.  
    ಈ ನಡುವೆ ಅರ್ಪಿತ್‌ಕುಮಾರ್ ಅವರ ಬಯಕೆ ಈಡೇರಿಕೆಗೆ ಚಾಮೇಗೌಡ ಏರಿಯಾದಲ್ಲಿರುವ ಡಾ. ರಾಜ್‌ಕುಮಾರ್ ಅಭಿಮಾನಿಗಳೆಲ್ಲರೂ ಒಮ್ಮತ ವ್ಯಕ್ತಪಡಿಸಿರುವುದು ವಿಶೇಷವಾಗಿದೆ.


ಮಂಜುನಾಥ್ ಅವರ ಪುತ್ರ ಅರ್ಪಿತ್‌ಕುಮಾರ್ ಮತ್ತು ಡಾ. ರಾಜ್ ಅಭಿಮಾನಿ ಸ್ನೇಹಿತರು.

ಬಸವೇಶ್ವರ ವೃತ್ತದಲ್ಲಿ ಕನ್ನಡ ರಾಜ್ಯೋತ್ಸವ, ಪುನೀತ್ ರಾಜ್‌ಕುಮಾರ್ ಪುಣ್ಯಸ್ಮರಣೆ

ಭದ್ರಾವತಿ ಹಳೇನಗರದ ಬಸವೇಶ್ವರ ವೃತ್ತದಲ್ಲಿ ಆಟೋ ಚಾಲಕರ ಸಂಘ, ಡಾ. ರಾಜ್‌ಕುಮಾರ್ ಅಭಿಮಾನಿಗಳ ಬಳಗ, ರಸ್ತೆ ಬದಿ ವ್ಯಾಪಾರಿಗಳು, ವರ್ತಕರ ವತಿಯಿಂದ ಶನಿವಾರ ೬೬ನೇ ಕನ್ನಡ ರಾಜ್ಯೋತ್ಸವ ಹಾಗು ಪುನೀತ್‌ರಾಜ್‌ಕುಮಾರ್ ಪುಣ್ಯಸ್ಮರಣೆ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ನ. ೧೩: ಹಳೇನಗರದ ಬಸವೇಶ್ವರ ವೃತ್ತದಲ್ಲಿ ಆಟೋ ಚಾಲಕರ ಸಂಘ, ಡಾ. ರಾಜ್‌ಕುಮಾರ್ ಅಭಿಮಾನಿಗಳ ಬಳಗ, ರಸ್ತೆ ಬದಿ ವ್ಯಾಪಾರಿಗಳು, ವರ್ತಕರ ವತಿಯಿಂದ ಶನಿವಾರ ೬೬ನೇ ಕನ್ನಡ ರಾಜ್ಯೋತ್ಸವ ಹಾಗು ಪುನೀತ್‌ರಾಜ್‌ಕುಮಾರ್ ಪುಣ್ಯಸ್ಮರಣೆ ಹಮ್ಮಿಕೊಳ್ಳಲಾಗಿತ್ತು.
    ಕಾಗದನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಇ.ಓ ಮಂಜುನಾಥ್ ಹಾಗು ನಗರಸಭಾ ಸದಸ್ಯೆ ಅನುಪಮ ಚನ್ನೇಶ್ ಧ್ವಜಾರೋಹಣ ನೆರವೇರಿಸಿದರು. ಸುಮಾರು ೩ ಸಾವಿರಕ್ಕೂ ಹೆಚ್ಚು ಮಂದಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.
ಶ್ರೀ ಬಸವೇಶ್ವರ ಆಟೋ ಚಾಲಕರ ಸಂಘದ ಅಧ್ಯಕ್ಷ ಕುಮಾರ್, ಜಗದೀಶ್, ಶೇಖರ್, ಪ್ರದೀಪ್, ಮೋಹನ್, ಸೆಲ್ವರಾಜ್, ರವೀಶ್, ಪ್ರಕಾಶ್, ಬಿ.ಎಸ್ ಮಂಜುನಾಥ್, ಶ್ರೀನಿವಾಸ್, ರಾಮು ಎನ್. ಮಂಜುನಾಥ್, ರಾಘವೇಂದ್ರ, ಮಂಡಕ್ಕಿ ಮಲ್ಲಿಕಾರ್ಜುನ, ಬಸವೇಶ್ವರ ವೃತ್ತದ ವ್ಯಾಪಾರಸ್ಥರು, ವರ್ತಕರು, ಶಾಲಾ ಮಕ್ಕಳು, ಸ್ಥಳೀಯರು ಪಾಲ್ಗೊಂಡಿದ್ದರು.


ಭದ್ರಾವತಿ ಹಳೇನಗರದ ಬಸವೇಶ್ವರ ವೃತ್ತದಲ್ಲಿ ಆಟೋ ಚಾಲಕರ ಸಂಘ, ಡಾ. ರಾಜ್‌ಕುಮಾರ್ ಅಭಿಮಾನಿಗಳ ಬಳಗ, ರಸ್ತೆ ಬದಿ ವ್ಯಾಪಾರಿಗಳು, ವರ್ತಕರ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ೬೬ನೇ ಕನ್ನಡ ರಾಜ್ಯೋತ್ಸವ ಹಾಗು ಪುನೀತ್‌ರಾಜ್‌ಕುಮಾರ್ ಪುಣ್ಯಸ್ಮರಣೆಯಲ್ಲಿ ಸಾವಿರಾರು ಮಂದಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.

ನ.15ರಂದು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಚಟುವಟಿಕೆಗಳು


    
ಭದ್ರಾವತಿ, ನ. ೧೩: ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ 2021-22ನೇ ಸಾಲಿನ ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳಿಗೆ ರಾಷ್ಟೀಯ ಮತದಾರರ ದಿನಾಚರಣೆ(ಎನ್‌ವಿಡಿ) ಪ್ರಯುಕ್ತ ತಾಲೂಕು ಮಟ್ಟದ ಸ್ಪರ್ಧಾತ್ಮಕ ಚಟುವಟಿಕೆಗಳನ್ನು ನ. 15ರಂದು ಬೆಳಿಗ್ಗೆ 10.30ಕ್ಕೆ ನಗರದ ಹೊಸ ಸೇತುವೆ ರಸ್ತೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಯ್ಯ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದೆ.
    ಭವಿಷ್ಯದ ಯುವ ಮತದಾರರಲ್ಲಿ ಚುನಾವಣೆ ಮತ್ತು ಮತದಾನ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಚಟುವಟಿಕೆಗಳನ್ನು ಆಯೋಜಿಸಲಾಗಿದ್ದು, ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪ್ರಬಂಧ ಸ್ಪರ್ಧೆ ಮತ್ತು ಭಿತ್ತಿ ಚಿತ್ರ ಹಾಗು ರಸಪ್ರಶ್ನೆ ಸ್ಪರ್ಧೆಗಳು ನಡೆಯಲಿವೆ. ಆಯಾ ಶಾಲೆಗಳಲ್ಲಿ ಪ್ರಬಂಧ ಹಾಗು ಭಿತ್ತಿಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಓರ್ವ ವಿದ್ಯಾರ್ಥಿ ಮತ್ತು ರಸಪ್ರಶ್ನೆ ಸ್ಪರ್ಧೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್‌ ಸೋಮಶೇಖರಯ್ಯ ತಿಳಿಸಿದ್ದಾರೆ.  ಹೆಚ್ಚಿನ ಮಾಹಿತಿಗೆ ಸಾಕ್ಷರತಾ ಸಂಘಗಳ ತಾಲೂಕು ನೋಡಲ್ ಅಧಿಕಾರಿ ನವೀದ್ ಪರ್ವೀಜ್ ಅಹಮದ್ ಮೊ: ೯೮೮೬೨೧೪೧೬೦ ಸಂಖ್ಯೆಗೆ ಕರೆ ಮಾಡಬಹುದಾಗಿದೆ.