ಶನಿವಾರ, ನವೆಂಬರ್ 13, 2021

ಇಲ್ಲೊಂದು ಡಾ.ರಾಜ್ ಅಭಿಮಾನಿಯ ದೇವರ ಮಂಡಿ

ಸದಾ ಕಾಲ ದೇವರಂತೆ ಸ್ಮರಿಸುವ ಮಂಜುನಾಥ್ ಕುಟುಂಬ ವರ್ಗ

ಮಂಜುನಾಥ್ ಅವರ ಬಾಳೆಕಾಯಿ ಮಂಡಿಯಲ್ಲಿರುವ ಡಾ. ರಾಜ್‌ಕುಮಾರ್ ಅವರ ಪೋಟೋಗಳು.

* ಅನಂತಕುಮಾರ್
ಭದ್ರಾವತಿ, ನ. ೧೩: ನಗರದ ಚಾಮೇಗೌಡ ಏರಿಯಾ ವ್ಯಾಪ್ತಿಯಲ್ಲಿ ಕರ್ನಾಟಕ ರತ್ನ, ವರನಟ ಡಾ. ರಾಜ್‌ಕುಮಾರ್ ಅಭಿಮಾನಿಗಳು ಹೆಚ್ಚಾಗಿದ್ದು, ಸುಮಾರು ೫ ದಶಕಗಳಿಗೂ ಹೆಚ್ಚು ಕಾಲದಿಂದಲೂ ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘ ಇಲ್ಲಿ ಅಸ್ತಿತ್ವದಲ್ಲಿದೆ. ಇಂದಿಗೂ ಡಾ. ರಾಜ್‌ಕುಮಾರ್ ಕುಟುಂಬದ ಮೇಲಿನ ಅಭಿಮಾನ ಸ್ವಲ್ಪವೂ ಕಡಿಮೆಯಾಗಿಲ್ಲ. ಅದರಲ್ಲೂ ಇಲ್ಲೊಬ್ಬರು ವಿಶೇಷವಾಗಿ ರಾಜ್‌ಕುಮಾರ್ ಕುಟುಂಬವನ್ನು ಸದಾ ಕಾಲ ಸ್ಮರಿಸುತ್ತಾ ದೇವರಂತೆ ಆರಾಧಿಸಿಕೊಂಡು ಬರುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಬಿ.ಎಚ್ ರಸ್ತೆ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ  ಸುಮಾರು ೪ ದಶಕಗಳಿಗೂ ಹೆಚ್ಚು ಕಾಲದಿಂದಲೂ ಬಾಳೆಕಾಯಿ ಮಂಡಿ ಮುನ್ನಡೆಸಿಕೊಂಡು ಬರುತ್ತಿರುವ ಮಂಜುನಾಥ್ ಹಾಗು ಕುಟುಂಬದವರು ರಾಜ್‌ಕುಮಾರ್ ಅವರನ್ನು ಸದಾ ಸ್ಮರಿಸುವ ಜೊತೆಗೆ ಪ್ರತಿವರ್ಷ ಅವರ ಹುಟ್ಟುಹಬ್ಬ ಹಾಗು ಪುಣ್ಯಸ್ಮರಣೆ ದಿನಗಳನ್ನು ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಜೊತೆಗೆ ವಿಶೇಷವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.


ಮಂಜುನಾಥ್ ಅವರ ಬಾಳೆಕಾಯಿ ಮಂಡಿಯಲ್ಲಿರುವ ಡಾ. ರಾಜ್‌ಕುಮಾರ್ ಅವರ ಪೋಟೋಗಳು.

    ಮಂಡಿ ತುಂಬಾ ರಾಜ್‌ಕುಮಾರ್ ಪೋಟೋಗಳು:
    ಇವರ ಮಂಡಿಯಲ್ಲಿ ದೇವರ ಪೋಟೋಗಳು ಒಂದೋ ಎರಡೋ ಉಳಿದೆಲ್ಲವೂ ರಾಜ್‌ಕುಮಾರ್ ಹಾಗು ಅವರ ಕುಟುಂಬದವರ ಪೋಟೋಗಳೇ. ಒಂದು ಕ್ಷಣ ರಾಜ್‌ಕುಮಾರ್ ಭವ್ಯ ಪರಂಪರೆ ಇಲ್ಲಿ ತೆರೆದುಕೊಳ್ಳುತ್ತದೆ. ವಿಶೇಷ ಎಂದರೆ ರಾಜ್‌ಕುಮಾರ್ ಮೇಲಿನ ಅಭಿಮಾನಕ್ಕೆ ಪುತ್ರ ಟಿ.ಎಂ ಅರ್ಪಿತ್‌ಕುಮಾರ್‌ಗೆ ಅಪ್ಪು ಎಂಬ ಹೆಸರನ್ನು ನಾಮಕರಣಗೊಳಿಸಿದ್ದಾರೆ. ಅಪ್ಪು ಸಹ ರಾಜ್‌ಕುಮಾರ್ ಕುಟುಂಬದ ಅಭಿಮಾನಿಯಾಗಿದ್ದಾರೆ.
    ಡಾ.ರಾಜ್, ಪುನೀತ್ ಪುತ್ಥಳಿ ನಿರ್ಮಾಣ ಮಾಡುವ ಬಯಕೆ:
    ಕಳೆದ ೩ ದಿನಗಳ ಹಿಂದೆ ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪುನೀತ್ ರಾಜ್‌ಕುಮಾರ್ ಅವರ ೧೩ನೇ ದಿನದ ಪುಣ್ಯಸ್ಮರಣೆದಂದು ತನ್ನ ಅನಿಸಿಕೆ ವ್ಯಕ್ತಪಡಿಸಿದ ಅರ್ಪಿತ್‌ಕುಮಾರ್(ಅಪ್ಪು) ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ನಿಧನ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ಇವರ ಸ್ಮರಣೆ ಸದಾ ಕಾಲ ಉಳಿಯುವಂತೆ ಮಾಡಬೇಕಾಗಿದೆ. ಜನಪ್ರತಿನಿಧಿಗಳು, ಸ್ಥಳೀಯರು ಹಾಗು ಅಭಿಮಾನಿಗಳು ಸೇರಿದಂತೆ ಎಲ್ಲರ ಸಹಕಾರದಿಂದ ಮುಂದಿನ ದಿನಗಳಲ್ಲಿ ಡಾ. ರಾಜ್‌ಕುಮಾರ್ ಹಾಗು ಪುನೀತ್ ರಾಜ್‌ಕುಮಾರ್ ಅವರ ಪುತ್ಥಳಿಗಳನ್ನು ನಿರ್ಮಾಣ ಮಾಡಬೇಕೆಂಬ ಬಯಕೆ ಹೊಂದಿದ್ದೇನೆ ಎಂದರು.  
    ಈ ನಡುವೆ ಅರ್ಪಿತ್‌ಕುಮಾರ್ ಅವರ ಬಯಕೆ ಈಡೇರಿಕೆಗೆ ಚಾಮೇಗೌಡ ಏರಿಯಾದಲ್ಲಿರುವ ಡಾ. ರಾಜ್‌ಕುಮಾರ್ ಅಭಿಮಾನಿಗಳೆಲ್ಲರೂ ಒಮ್ಮತ ವ್ಯಕ್ತಪಡಿಸಿರುವುದು ವಿಶೇಷವಾಗಿದೆ.


ಮಂಜುನಾಥ್ ಅವರ ಪುತ್ರ ಅರ್ಪಿತ್‌ಕುಮಾರ್ ಮತ್ತು ಡಾ. ರಾಜ್ ಅಭಿಮಾನಿ ಸ್ನೇಹಿತರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ