Sunday, January 8, 2023

ಪ್ರತಿಭಾ ಕಾರಂಜಿ-ಕಲೋತ್ಸವದಲ್ಲಿ ಎರಡು ಶಾಲೆಗಳಿಗೆ ಪ್ರಶಸ್ತಿ


    ಭದ್ರಾವತಿ, ಜ. ೮: ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ತಾಲೂಕಿನ ಎರಡು ಶಾಲೆಗಳ ಮಕ್ಕಳು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
    ಹಳೇನಗರದ ಸಂಚಿಹೊನ್ನಮ್ಮ ಪ್ರೌಢಶಾಲೆಯ ವಿದ್ಯಾರ್ಥಿನಿ ನೇಹಾ ತಮಿಳು ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದುಕೊಂಡಿದ್ದು, ಕವ್ವಾಲಿಯಲ್ಲಿ ಸರ್ಕಾರಿ ಉರ್ದು ಶಾಲೆಯ ನಶ್ರಾ, ಅಮೀನಾ ಖಾನಂ, ಆಫೀಪಾ ಕೌನಯನ್, ಶರ್‌ಪುನ್ನಿಸಾ, ಸೈಯದ್ ಸಾದಿಕ್ ಮತ್ತು ಫಾತೀಮಾ ಬಾಯಿ ಅವರನ್ನೊಳಗೊಂಡ ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿದೆ.
    ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರು ವಿಜೇತರ ಪಟ್ಟಿ ಬಿಡುಗಡೆಗೊಳಿಸಿದ್ದು, ಈ ಎರಡು ಶಾಲೆಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಅಭಿನಂದಿಸಿದ್ದಾರೆ.

ಜನ ಚೈತನ್ಯ ಯಾತ್ರೆಗೆ ಸ್ವಾಗತ : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಬೆಂಬಲಿಸಿ ಮನವಿ

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ(ಕೆಆರ್‌ಎಸ್)ದ ವತಿಯಿಂದ ಜಿಲ್ಲೆಯಾದ್ಯಂತ ಜ.೧೧ರವರೆಗೆ ಹಮ್ಮಿಕೊಳ್ಳಲಾಗಿರುವ ಜನ ಚೈತನ್ಯ ಯಾತ್ರೆ ಭಾನುವಾರ ಭದ್ರಾವತಿ ನಗರಕ್ಕೆ ಆಗಮಿಸಿತು. ಅಂಬೇಡ್ಕರ್ ವೃತ್ತದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
    ಭದ್ರಾವತಿ, ಜ. ೮: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ(ಕೆಆರ್‌ಎಸ್)ದ ವತಿಯಿಂದ ಜಿಲ್ಲೆಯಾದ್ಯಂತ ಜ.೧೧ರವರೆಗೆ ಹಮ್ಮಿಕೊಳ್ಳಲಾಗಿರುವ ಜನ ಚೈತನ್ಯ ಯಾತ್ರೆ ಭಾನುವಾರ ನಗರಕ್ಕೆ ಆಗಮಿಸಿತು.
    ಪಕ್ಷದ ಸ್ಥಳೀಯ ಮುಖಂಡರು ನಗರದ ಬಿ.ಎಚ್ ರಸ್ತೆ ಲೋಯರ್ ಹುತ್ತಾದಲ್ಲಿ ಜನ ಚೈತನ್ಯ ಯಾತ್ರೆಗೆ ಸ್ವಾಗತ ಕೋರಿದರು. ನಂತರ ಯಾತ್ರೆ ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ, ರಂಗಪ್ಪ ವೃತ್ತ ಮತ್ತು ಹೊಸಮನೆ ಶಿವಾಜಿವೃತ್ತದವರೆಗೂ ಸಾಗಿತು.
    ಕರ್ನಾಟಕದಲ್ಲಿ ಸ್ವಚ್ಛ, ಪ್ರಾಮಾಣಿಕ, ಜನಪರ ರಾಜಕಾರಣದ ಸ್ಥಾಪನೆಗಾಗಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ನಮ್ಮ ನೀಲಿ ನಕ್ಷೆ ಎಂಬ ಹಲವು ಭರವಸೆಗಳನ್ನೊಳಗೊಂಡ ಕರಪತ್ರ ವಿತರಿಸುವ ಮೂಲಕ ಪಕ್ಷದ ಕಾರ್ಯಕರ್ತರು ಸಾಗಿದರು.
    ಪ್ರಮುಖ ವೃತ್ತಗಳಲ್ಲಿ ಪಕ್ಷದ ಪ್ರಮುಖರು ಮಾತನಾಡಿ, ಪಕ್ಷದ ತತ್ವ, ಸಿದ್ದಾಂತಗಳಿಗೆ ಬದ್ಧರಾಗಿ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಎಲ್ಲರಿಗೂ ಮುಕ್ತವಾದ ಅವಕಾಶವಿದೆ. ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೈಜೋಡಿಸುವಂತೆ ಮನವಿ ಮಾಡಿದರು.
    ಯಾತ್ರೆಯಲ್ಲಿ ಪಕ್ಷದ ಶಿವಮೊಗ್ಗ ಜಿಲ್ಲಾ ಯುವ ಘಟಕ ಮತ್ತು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಅಧ್ಯಕ್ಷ ಪ್ರಭು, ಬಿ.ಆರ್ ಮಧು, ಅರಳಿಹಳ್ಳಿ ತ್ಯಾಗರಾಜು, ತೀರ್ಥಕುಮಾರ್, ಮಲ್ಲಿಕಾರ್ಜುನ್, ಅಯಾಜ್, ಶರತ್‌ಕುಮಾರ್, ವಿನೋದ್, ವಾಣಿ, ಸುಮಿತ್ರ, ಶಬರೀಶ್, ನಾಗರಾಜ್‌ರಾವ್ ಶಿಂಧೆ, ಭದ್ರಾಕಾಲೋನಿ ಚಿಂಪಯ್ಯ, ವೆಂಕಟೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಉದ್ಯೋಗ ಮೇಳಕ್ಕೆ ಸಂಸದ ಬಿ.ವೈ ರಾಘವೇಂದ್ರ ಚಾಲನೆ : ೨೫ಕ್ಕೂ ಹೆಚ್ಚು ಕಂಪನಿಗಳು ಬಾಗಿ

ಮಂಗೋಟೆ ಮುರಿಗೆಪ್ಪ ಚಾರಿಟಬಲ್ ಟ್ರಸ್ಟ್ ವತಿಯಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ಭದ್ರಾವತಿ ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಉದ್ಯೋಗ ಮೇಳಕ್ಕೆ ಸಂಸದ ಬಿ.ವೈ ರಾಘವೇಂದ್ರ ಚಾಲನೆ ನೀಡಿದರು.
    ಭದ್ರಾವತಿ, ಜ. ೮: ಮಂಗೋಟೆ ಮುರಿಗೆಪ್ಪ ಚಾರಿಟಬಲ್ ಟ್ರಸ್ಟ್ ವತಿಯಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ನಗರದ ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಉದ್ಯೋಗ ಮೇಳಕ್ಕೆ ಸಂಸದ ಬಿ.ವೈ ರಾಘವೇಂದ್ರ ಚಾಲನೆ ನೀಡಿದರು.
    ಬಳ್ಳಾರಿ ಜೆಎಸ್‌ಡಬ್ಲ್ಯೂ ಸ್ಟೀಲ್ ಲಿ., ಕೊಪ್ಪಳ ಕಲ್ಯಾಣಿ ಸ್ಟೀಲ್ಸ್ ಲಿ. ಮತ್ತು  ಕೊಪ್ಪಳ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿ. ಮತ್ತು ಮುಕುಂದ ಸುಮಿ ಸ್ಪೆಷಲ್ ಸ್ಟ್ರೀಲ್ ಲಿ. ಹಾಗು ಎಕ್ಸ್‌ಇಂಡಿಯಾ ಸ್ಟೀಲ್ ಲಿ., ಹಗರಿಬೊಮ್ಮನಹಳ್ಳಿ ಎಸ್‌ಎಲ್‌ಆರ್ ಮೆಟಾಲಿಕ್ಸ್ ಲಿ., ಹೊಸಪೇಟೆ ಸಂಡೂರು ಮ್ಯಾಗ್ನೆಸ್ ಅಂಡ್ ಐರನ್ ಓರ‍್ಸ್ ಲಿ. ಮತ್ತು ಬಿಎಂಎಂ ಇನ್‌ಸ್ಪಾಟ್ ಲಿ., ಮಾಚೇನಹಳ್ಳಿ ಶಾಂತಲ ಸ್ಪೆರೋಕ್ಯಾಸ್ಟ್ ಪ್ರೈ.ಲಿ., ಮಲ್ನಾಡ್ ಅಲಾಯ್ ಕ್ಯಾಸ್ಟಿಂಗ್ ಪ್ರೈ. ಲಿ.,  ವಿಜಯ್ ಟೆಕ್ನೋಕ್ರಾಟ್ಸ್ ಪ್ರೈ.ಲಿ.,  ಪ್ರಗತಿ ಸ್ಟೀಲ್ ಕ್ಯಾಸ್ಟಿಂಗ್ ಪ್ರೈ.ಲಿ., ನೀಟೆಕ್ ಫೆರೋ ಕ್ಯಾಸ್ಟಿಂಗ್ ಪ್ರೈ.ಲಿ., ಭೈರವೇಶ್ವರ ಎಂಟರ್‌ಪ್ರೈಸಸ್ ಮತ್ತು ಮೆ|| ಪ್ರಾರ್ಥನ ಇಂಜಿನಿಯರಿಂಗ್ ಪ್ರೈ. ಲಿ., ಶಾಹಿ ಎಕ್ಸ್‌ಪೋರ್ಟ್ಸ್ ಪ್ರೈ.ಲಿ., ಬೆಂಗಳೂರಿನ ನಿಕೇತನ್ ಕನ್ಸಲ್‌ಟೆಂಟ್ಸ್, ಶಿವಮೊಗ್ಗದ ಟೆಕ್ನೋ ರಿಂಗ್ಸ್, ಪರ್‌ಫೆಕ್ಟ್ ಅಲಾಯ್ ಕಾಂಪೋನೆಂಟ್ಸ್ ಪ್ರೈ.ಲಿ., ನಂಜಪ್ಪ ಹಾಸ್ಪಿಟಲ್, ಸರ್ಜಿ ಹಾಸ್ಪಿಟಲ್, ಓಪನ್ ಅಮೈನ್ಸ್ ವರ್ಲ್ಡ್ ಸ್ಕೂಲ್ ಮತ್ತು ಸನ್‌ರೈಸ್ ಫ್ಯಾಸಿಲಿಟಿ ಸರ್ವಿಸ್ ಸೇರಿದಂತೆ ಸುಮಾರು ೨೫ಕ್ಕೂ ಹೆಚ್ಚು ಪ್ರತಿಷ್ಠಿತ ಖಾಸಗಿ ಕಂಪನಿಗಳು ಮೇಳದಲ್ಲಿ ಭಾಗವಹಿಸಿದ್ದರು.
    ಬಹುತೇಕ ಕಂಪನಿಗಳು ಸ್ಥಳದಲ್ಲಿಯೇ ಸಂದರ್ಶನ ನಡೆಸಿ ಆಯ್ಕೆಯನ್ನು ಅಂತಿಮಗೊಳಿಸಿದವು. ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಪ್ಲೊಮ, ನರ್ಸಿಂಗ್, ಲ್ಯಾಬ್ ಟೆಕ್ನಿಷಿಯನ್, ಬಿ.ಎ, ಬಿ.ಕಾಂ., ಬಿ.ಎಸ್ಸಿ., ಎಂ.ಎಸ್ಸಿ., ಬಿಬಿಎ/ಬಿಬಿಎಂ., ಬಿ.ಇ., ಸೇರಿದಂತೆ ಪದವಿ ಹಾಗೂ ಸ್ನಾತಕೋತ್ತರ ಪದವೀಧರ ನಿರುದ್ಯೋಗಿಗಳು ಮೇಳದಲ್ಲಿ ಪಾಲ್ಗೊಂಡು ಸದುಪಯೋಗಪಡೆದುಕೊಂಡರು. ಯುವ ಮುಖಂಡ ಮಂಗೋಟೆ ರುದ್ರೇಶ್ ಉದ್ಯೋಗ ಮೇಳದ ನೇತೃತ್ವ ವಹಿಸಿದ್ದರು.
    ಸಮಾರಂಭದಲ್ಲಿ ವಿಧಾನಪರಿಷತ್ ಸದಸ್ಯ ಎಸ್. ರುದ್ರೇಗೌಡ, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್. ಗೋಪಿನಾಥ್, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಿ. ಸಿದ್ದಬಸಪ್ಪ, ಶಿವಮೊಗ್ಗ ಎಪಿಎಂಸಿ ಮಾಜಿ ಅಧ್ಯಕ್ಷ ಎಸ್.ಎಸ್ ಜ್ಯೋತಿ ಪ್ರಕಾಶ್ ಸೇರಿದಂತೆ ಟ್ರಸ್ಟ್ ಪದಾಧಿಕಾರಿಗಳು ಉಪಸ್ಥಿತರಿದ್ದರು.  


ಮಂಗೋಟೆ ಮುರಿಗೆಪ್ಪ ಚಾರಿಟಬಲ್ ಟ್ರಸ್ಟ್ ವತಿಯಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ಭದ್ರಾವತಿ ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಆಯೋಜಿಸಲಾಗಿತ್ತು.