ಅಸಂಘಟಿತ ಕಾರ್ಮಿಕರ ಸಂಘದ ತಾಲೂಕು ಶಾಖೆವತಿಯಿಂದ ಭದ್ರಾವತಿಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಇ-ಶ್ರಮ್ ಕಾರ್ಡ್ ನೋಂದಾಣಿ ಕಾರ್ಯಕ್ರಮ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
ಭದ್ರಾವತಿ, ಫೆ. ೧: ಅಸಂಘಟಿತ ಕಾರ್ಮಿಕರಿಗೆ ಸೂಕ್ತ ಮಾಹಿತಿ, ಸಲಹೆ ನೀಡುವ ಮೂಲಕ ಅವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
ಅವರು ಮಂಗಳವಾರ ಅಸಂಘಟಿತ ಕಾರ್ಮಿಕರ ಸಂಘದ ತಾಲೂಕು ಶಾಖೆವತಿಯಿಂದ ಹಮ್ಮಿಕೊಳ್ಳಲಾಗಿದ್ದ ಇ-ಶ್ರಮ್ ಕಾರ್ಡ್ ನೋಂದಾಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರದ ಯೋಜನೆಗಳ ಬಗ್ಗೆ ಅಸಂಘಟಿತ ಕಾರ್ಮಿಕರಿಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಅವರು ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಸಂಘಟನೆಯ ನೇತೃತ್ವವಹಿಸಿರುವ ಮುಖಂಡರು, ಪದಾಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ಅಸಂಘಟಿತ ಕಾರ್ಮಿಕರಿಗೆ ಸರ್ಕಾರದ ಸೌಲರ್ಭ್ಯಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸಬೇಕೆಂದು ಮನವಿ ಮಾಡಿದರು.
ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ(ಕಾಡಾ) ಅಧ್ಯಕ್ಷೆ ಪವಿತ್ರ ರಾಮಯ್ಯ ಮಾತನಾಡಿ, ಈ ದೇಶದಲ್ಲಿ ರೈತ ಮತ್ತು ಕಾರ್ಮಿಕ ಇಬ್ಬರು ಒಂದೇ ನಾಣ್ಯದ ಮುಖಗಳಿದ್ದಂತೆ. ಇವರ ಸಮಸ್ಯೆಗಳಿಗೆ ಎಲ್ಲರೂ ಪೂರಕವಾಗಿ ಸ್ಪಂದಿಸಬೇಕು. ಯಾವುದೇ ಅಧಿಕಾರವಿರಲಿ ಪ್ರಾಮಾಣಿಕತೆ ಬಹಳ ಮುಖ್ಯ. ನಾವು ಸರಿ ಇದ್ದರೇ ಎಲ್ಲರೂ ಸರಿ ಇರುತ್ತಾರೆ. ಇದನ್ನು ಸಂಘಟನೆಯನ್ನು ಮುನ್ನಡೆಸಿಕೊಂಡು ಹೋಗುವವರು ಅರ್ಥ ಮಾಡಿಕೊಳ್ಳಬೇಕು. ಆಗ ಮಾತ್ರ ಸಂಘಟನೆ ಮತ್ತಷ್ಟು ಸದೃಢವಾಗಿ ಬೆಳೆಯಲು ಸಾಧ್ಯ ಎಂದರು.
ಸಂಘದ ರಾಜ್ಯಾಧ್ಯಕ್ಷ ಕುಬೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘಟನೆ ಪ್ರಸ್ತುತ ರಾಜ್ಯದ ೧೫ ಜಿಲ್ಲೆಗಳಲ್ಲಿ ವಿಸ್ತರಿಸಿಕೊಂಡಿದೆ. ಸಮಾಜದಲ್ಲಿ ಅತ್ಯಂತ ಶೋಷಣೆಗೆ ಒಳಗಾಗಿರುವ ಅಸಂಘಟಿತ ಕಾರ್ಮಿಕರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ಗುರುತಿಸಿಕೊಳ್ಳುವಂತೆ ಮಾಡಲಾಗುತ್ತಿದೆ. ಈ ಕಾರ್ಮಿಕರಿಗೂ ಸಮಾಜದಲ್ಲಿ ಗೌರವ ತಂದು ಕೊಡುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ. ಸರ್ಕಾರದ ಸೌಲಭ್ಯಗಳ ಬಗ್ಗೆ ಸೂಕ್ತ ಮಾಹಿತಿ, ಸಲಹೆಗಳನ್ನು ನೀಡಲಾಗುತ್ತಿದೆ. ಕಾರ್ಮಿಕ ಹೋರಾಟಗಾರರು, ರಾಜಕೀಯ ಧುರೀಣರಾಗಿರುವ ಆಯನೂರು ಮಂಜುನಾಥ್‌ರವರ ಮಾರ್ಗದರ್ಶನದಲ್ಲಿ ಸಂಘಟನೆ ಮುನ್ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಘಟಿತರಾಗುವ ಮೂಲಕ ಅಂಘಟಿತ ಕಾರ್ಮಿಕರ ಧ್ವನಿಯಾಗಲಿದೆ ಎಂದರು.
ಸಂಘದ ಅಧ್ಯಕ್ಷ ಬಾರಂದೂರು ಎಚ್. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಸದಸ್ಯರಾದ ಆರ್. ಶ್ರೇಯಸ್(ಚಿಟ್ಟೆ), ಬಿ.ಎಂ ಮಂಜುನಾಥ್, ಸಂಘದ ಜಿಲ್ಲಾ ಪ್ರಮುಖರಾದ ಸುರೇಖ ಪಾಲಾಕ್ಷಪ್ಪ, ರತ್ನ ರಾಜು ಮತ್ತು ನಿರ್ಮಲ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಲೋಲಾಕ್ಷಿ ಪ್ರಾರ್ಥಿಸಿ, ಧನಲಕ್ಷ್ಮಿ ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ರೂಪನಾಗರಾಜ್ ನಿರೂಪಿಸಿದರು. ಪದಾಧಿಕಾರಿಗಳಿಗೆ ಹಾಗು ಅಸಂಘಟಿತ ಕಾರ್ಮಿಕರಿಗೆ ಸಂಘದ ಗುರುತಿನ ಚೀಟಿ ಹಾಗು ಸಾಂಕೇತಿಕವಾಗಿ ಇ-ಶ್ರಮ್ ಕಾರ್ಡ್ ವಿತರಿಸಲಾಯಿತು.
ಸಂಘದ ಉಪಾಧ್ಯಕ್ಷರಾದ ಪ್ರಸನ್ನ, ಮಂಜುನಾಥ್, ಕಲಾವತಿ ರುದ್ರೇಶ್, ಪೂರ್ಣಿಮಾದೇವಿ, ಶಿವು, ಕಾರ್ಯದರ್ಶಿಗಳಾದ ಎಂ.ಎಸ್ ರವಿ, ಪ್ರದೀಪ್, ಧನಲಕ್ಷ್ಮೀ, ರೂಪ ಮಲ್ಲಿಕಾರ್ಜುನ್ ಮತ್ತು ಸಂಘಟನಾ ಕಾರ್ಯದರ್ಶಿ ಸುನೀತ ಮೋಹನ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.