Thursday, July 3, 2025

ಭಾವಲೋಕದ ರಾಯಬಾರಿ ಕವಿ ಜಯಂತ್ ಕಾಯ್ಕಿಣಿಗೆ ಸನ್ಮಾನ


ಕನ್ನಡ ಭಾಷೆಯ ಧೀಮಂತಿಕೆಯ ಪ್ರತೀಕ, ಭಾವಲೋಕದ ರಾಯಬಾರಿ ಕವಿ ಜಯಂತ್ ಕಾಯ್ಕಿಣಿ ಅವರನ್ನು ಭದ್ರಾವತಿ ತಾಲೂಕಿನ ಶಂಕರಘಟ್ಟ ಕನ್ನಡಾಭಿಮಾನಿಗಳು ಹಾಗು ಜಯಕರ್ನಾಟಕ ಸಂಘಟನೆ ಮುಖಂಡರು ಸನ್ಮಾನಿಸಿ ಗೌರವಿಸಿದರು. 
    ಭದ್ರಾವತಿ : ಕನ್ನಡ ಭಾಷೆಯ ಧೀಮಂತಿಕೆಯ ಪ್ರತೀಕ, ಭಾವಲೋಕದ ರಾಯಬಾರಿ ಕವಿ ಜಯಂತ್ ಕಾಯ್ಕಿಣಿ ಅವರನ್ನು ತಾಲೂಕಿನ ಶಂಕರಘಟ್ಟ ಕನ್ನಡಾಭಿಮಾನಿಗಳು ಹಾಗು ಜಯಕರ್ನಾಟಕ ಸಂಘಟನೆ ಮುಖಂಡರು ಸನ್ಮಾನಿಸಿ ಗೌರವಿಸಿದರು. 
    ಜಯಂತ್ ಕಾಯ್ಕಿಣಿಯವರು ತಮ್ಮ ಶುದ್ಧ ಕವಿತೆಗಳ ಮೂಲಕ ಕನ್ನಡ ಜನತೆಯ ಹೃದಯ ಗೆದ್ದವರು. ೧೯ನೇ ವಯಸ್ಸಿನಲ್ಲಿಯೇ ಇವರು ಬರೆದ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಇವರು ನಾಟಕ ಮತ್ತು ಗೀತಾ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ. ಇವರ ಸಾಹಿತ್ಯದಲ್ಲಿ ಸೂಕ್ಷ್ಮ ಭಾವಲೋಕ ಬದುಕಿನ ವಾಸ್ತವಿಕ ದೃಷ್ಟಿಕೋನ ಹೇರಳವಾಗಿದೆ. ಇವರ ಕಾವ್ಯ ಯಾವುದೇ ಪ್ರಚಲಿತ ವಿಚಾರಧಾರೆಗಳ ಆಚೆ ನೈಜ ಬದುಕಿನ ಹಂದರವನ್ನು ಸೃಷ್ಟಿಸುತ್ತದೆ. ದಿನನಿತ್ಯದ ಹಾಡು ಭಾಷೆಯಲ್ಲಿಯೇ ಹಾಸ್ಯ ಮತ್ತು ಮೃದುರ ಶೈಲಿಯಲ್ಲಿರುವ ಇವರ ಕಾವ್ಯಗಳು ಹೃದಯಕ್ಕೆ ಹತ್ತಿರವಾಗುತ್ತದೆ ಎಂದು ಬಣ್ಣಿಸಿ ನಾಡಿಗೆ ಇವರ ಕೊಡುಗೆ ಇನ್ನೂ ಹೆಚ್ಚಿನದ್ದಾಗಿರಲಿ ಎಂದು ಆಶಿಸುವ ಮೂಲಕ ಸನ್ಮಾನಿಸಿ ಗೌರವಿಸಲಾಯಿತು. 
    ಕನ್ನಡಾಭಿಮಾನಿ ನಾಗೇಶ್,  ಗ್ರಾಮ ಪಂಚಾಯತಿ ಮಾಜಿ ಸದಸ್ಯರು ಡಿ.ಟಿ ಶಶಿಕುಮಾರ್,  ಶಂಕರಘಟ್ಟ ಜಯ ಕರ್ನಾಟಕ ಸಂಘಟನೆ ಕಾರ್ಯಾಧ್ಯಕ್ಷ ಶ್ರೀಕಾಂತ್ ಉಪಸ್ಥಿತರಿದ್ದರು. 

ಜು.೪ರಂದು ವಿದ್ಯುತ್ ವ್ಯತ್ಯಯ

    ಭದ್ರಾವತಿ : ಮೆಸ್ಕಾಂ ನಗರ ಉಪವಿಭಾಗ ಘಟಕ-೫ರ ಶಾಖಾ ವ್ಯಾಪ್ತಿಯ ಶಿವರಾಮನಗರ ಮತ್ತು ವಿಶ್ವೇಶ್ವರಯ್ಯ ನಗರ ಭಾಗದಲ್ಲಿನ ಪರಿವರ್ತಕಗಳ ಶಿಥಿಲಗೊಂಡ ವಾಹಕಗಳ ಬದಲಾವಣೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜು.೪ರ ಶುಕ್ರವಾರ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
    ಶಿವರಾಮನಗರ, ವಿಶ್ವೇಶ್ವರಯ್ಯ ನಗರ, ಜೇಡಿಕಟ್ಟೆ, ಹೊಸೂರು, ಸಿರಿಯೂರು, ವೀರಾಪುರ, ಕಲ್ಲಹಳ್ಳಿ, ಸಂಕ್ಲಿಪುರ, ಹಾಗಲಮನೆ, ಹುಲಿರಾಮನಕೊಪ್ಪ, ಸಿರಿಯೂರು ತಾಂಡ ಮತ್ತು ಸಿರಿಯೂರು ಕ್ಯಾಂಪ್ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ. 

ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಸ್ಕೌಟ್ಸ್-ಗೈಡ್ಸ್ ಸಹಕಾರಿ

ಭದ್ರಾವತಿ ತಾಲೂಕಿನ ಬಾರಂದೂರು ಗ್ರಾಮದ ಸಂತ ಡೋಮಿನಿಕ್ ಶಾಲೆ ಮತ್ತು ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ  ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ನಾಯಕರ ಪದಗ್ರಹಣ ಸಮಾರಂಭ ಆಯೋಜಿಸಲಾಗಿತ್ತು. 
    ಭದ್ರಾವತಿ: ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಲ್ಲಿ ಮಕ್ಕಳು ಪಾಲ್ಗೊಳ್ಳುವುದರಿಂದ ನಾಯಕತ್ವ ಗುಣ ಬೆಳೆಯುವ ಜೊತೆಯಲ್ಲಿ ಆತ್ಮವಿಶ್ವಾಸ ವೃದ್ಧಿಸುತ್ತದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಹೇಳಿದರು.
    ಅವರು ತಾಲೂಕಿನ ಬಾರಂದೂರು ಗ್ರಾಮದ ಸಂತ ಡೋಮಿನಿಕ್ ಶಾಲೆ ಮತ್ತು ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ನಾಯಕರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಕ್ಕಳು ಸ್ಕೌಟ್ಸ್ ಮತ್ತು ಗೈಡ್ಸ್ ಮಹತ್ವ ಅರಿತುಕೊಂಡು ಇವುಗಳ ಕಾರ್ಯ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ಇದರಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಉತ್ತಮ ಅವಕಾಶಗಳು ದೊರೆಯುತ್ತವೆ. ಉನ್ನತ ಸಾಧನೆ ಮಾಡಲು ಪ್ರೇರಣೆ ನೀಡುತ್ತದೆ ಎಂದರು. 
    ರೋವರ್ ಜಿಲ್ಲಾ ಆಯುಕ್ತ ಕೆ. ರವಿ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿ ಬೆಳೆದುಬಂದ ಕುರಿತು ವಿವರಿಸಿದರು. ಜಿಲ್ಲಾ ಕಾರ್ಯದರ್ಶಿ ಕೆ.ವಿ ಚಂದ್ರಶೇಖರಯ್ಯ ಸ್ಕೌಟ್ ಮತ್ತು ಗೈಡ್ಸ್ ವಿವಿಧ ವಿಭಾಗಗಳ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಕೇಂದ್ರ ಸ್ಥಾನಿಕ ಆಯುಕ್ತ ಜಿ. ವಿಜಯಕುಮಾರ್ ಮಾತನಾಡಿ, ಮಕ್ಕಳಲ್ಲಿ ಶಿಸ್ತು ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಶಾಲೆಯು ಉತ್ತಮ ಕೆಲಸ ಮಾಡುತ್ತಿದೆ ಎಂದರು. 
    ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಎಲ್ಲಾ ವಿಭಾಗಗಳನ್ನು ವಿದ್ಯುಕ್ತವಾಗಿ ಪ್ರಾರಂಭಿಸಲಾಯಿತು. ಶಾಲೆಯ ಪ್ರಾಂಶುಪಾಲರಾದ ಸಿಸ್ಟರ್ ಜಿನ್ಫಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ೧೦೦೦ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
 

ಎ. ಕೃಷ್ಣೇಗೌಡ ನಿಧನ

                ಎ. ಕೃಷ್ಣೇಗೌಡ 
    ಭದ್ರಾವತಿ : ನಗರದ ಮೈಸೂರು ಕಾಗದ ಕಾರ್ಖಾನೆ ನಿವೃತ್ತ ಕಾರ್ಮಿಕ, ದೊಡ್ಡಗೊಪ್ಪೇನಹಳ್ಳಿ ನಿವಾಸಿ ಎ. ಕೃಷ್ಣೇಗೌಡ(೫೪) ಗುರುವಾರ ಬೆಳಗಿನ ಜಾವ ನಿಧನ ಹೊಂದಿದರು. 
    ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಇವರ ಅಂತ್ಯಕ್ರಿಯೆ ಮಧ್ಯಾಹ್ನ ಬೈಪಾಸ್ ರಸ್ತೆ, ಬುಳ್ಳಾಪುರ, ಬಾಳೆಮಾರನಹಳ್ಳಿ ರಸ್ತೆಯ ಶ್ರೀ ಸತ್ಯ ಹರಿಶ್ಚಂದ್ರ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. 
    ಕಾರ್ಖಾನೆಯಲ್ಲಿ ಸ್ವಯಂ ನಿವೃತ್ತಿ ಯೋಜನೆ ಜಾರಿಗೆ ತಂದಾಗ ಕೃಷ್ಣೇಗೌಡರವರು ಸ್ವಯಂ ನಿವೃತ್ತಿ ಪಡೆದುಕೊಂಡಿದ್ದರು. ಇವರ ನಿಧನಕ್ಕೆ  ಎಂಪಿಎಂ ನಿವೃತ್ತ ಕಾರ್ಮಿಕರು ಸಂತಾಪ ಸೂಚಿಸಿದ್ದಾರೆ.