Tuesday, November 16, 2021

ಅಸಂಘಟಿತ ಕಾರ್ಮಿಕರು ಬೇಡಿಕೆ ಈಡೇರಿಕೆಗೆ ಹೋರಾಟ ನಡೆಸುವುದು ಅನಿವಾರ್ಯ : ಬಿ.ಎಸ್ ಅಭಿಲಾಷ್

ಭದ್ರಾವತಿ ಬಿ.ಎಚ್ ರಸ್ತೆ ರೈಲ್ವೆ ನಿಲ್ದಾಣದ ಬಳಿ ಸರ್.ಎಂ ವಿಶ್ವೇಶ್ವರಾಯ ಪ್ರತಿಮೆ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಅಸಂಘಟಿತ ಕಾರ್ಮಿಕರ ೫ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ನೇತೃತ್ವವಹಿಸಿ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಬಿ.ಎಸ್ ಅಭಿಲಾಷ್ ಮಾತನಾಡಿದರು.
    ಭದ್ರಾವತಿ, ನ. ೧೬: ಅಸಂಘಟಿತ ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಬಿ.ಎಸ್ ಅಭಿಲಾಷ್ ಹೇಳಿದರು.
    ಅವರು ಮಂಗಳವಾರ ನಗರದ ಬಿ.ಎಚ್ ರಸ್ತೆ ರೈಲ್ವೆ ನಿಲ್ದಾಣದ ಬಳಿ ಸರ್.ಎಂ ವಿಶ್ವೇಶ್ವರಾಯ ಪ್ರತಿಮೆ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಅಸಂಘಟಿತ ಕಾರ್ಮಿಕರ ೫ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿದರು.
    ಮನಮೋಹನ್ ಸಿಂಗ್ ಅವರು ದೇಶದ ಪ್ರಧಾನಿಯಾಗಿದ್ದಾಗ ಯುಪಿಎ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು ಅಸಂಘಟಿತ ಕಾರ್ಮಿಕರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅವರ ಹಿತರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ನಂತರ ಬಂದ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಕೇಂದ್ರ ಸರ್ಕಾರ ಅಸಂಘಟಿತ ಕಾರ್ಮಿಕರನ್ನು ಕಡೆಗಣಿಸಿದೆ. ಈ ಹಿನ್ನಲೆಯಲ್ಲಿ ಅಸಂಘಟಿತ ಕಾರ್ಮಿಕರ ರಕ್ಷಣೆಗಾಗಿ ಕಾಂಗ್ರೆಸ್ ನಿರಂತರವಾಗಿ ಹೋರಾಟ ನಡೆಸುತ್ತಿದೆ ಎಂದರು.
    ಅಸಂಘಟಿತ ಕಾರ್ಮಿಕರ ವಿಭಾಗದ ನಗರ ಬ್ಲಾಕ್ ಅಧ್ಯಕ್ಷ ಕೆ. ಐಸಾಕ್ ಲಿಂಕನ್ ಮಾತನಾಡಿ, ಅಸಂಘಟಿತ ಕಾರ್ಮಿಕರು ಸೌಲಭ್ಯಗಳನ್ನು ಗುರುತಿನ ಚೀಟಿಗಳನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಅಸಂಘಟಿತ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಿಕೊಡುವ ನಿಟ್ಟಿನಲ್ಲಿ ನಿರಂತವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ ಎಂದರು.
    ಕರ್ನಾಟಕ ಸ್ಟೇಟ್ ಕನ್ಸ್‌ಸ್ಟ್ರಕ್ಷನ್ ವರ್ಕರ್ಸ್ ಯೂನಿಯನ್ ತಾಲೂಕು ಅಧ್ಯಕ್ಷ ಚಂದ್ರಶೇಖರ್, ನಗರಸಭಾ ಸದಸ್ಯರಾದ ಜಾರ್ಜ್, ಸೈಯ್ಯದ್ ರಿಯಾಜ್ ಹಾಗು ಅಸಂಘಟಿತ ಕಾರ್ಮಿಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಲಂಡನ್‌ನಲ್ಲಿ ಜನಿಸಿದ ಮಗುವಿಗೆ ಲಿಂಗಾಯಿತ ಧರ್ಮದಂತೆ ನಾಮಕರಣ

ಕುಟುಂಬದ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ


ಮೂಲತಃ ಭದ್ರಾವತಿಯವರಾದ ಪ್ರಸ್ತುತ ಲಂಡನ್‌ನಲ್ಲಿ ವಾಸವಿರುವ ಪುನೀತ್ ಮತ್ತು ರಾಧಿಕಾ ದಂಪತಿ ತಮ್ಮ ಮಗುವಿಗೆ ತವರು ನೆಲದಲ್ಲಿ ಲಿಂಗಾಯಿತ ಧರ್ಮದಂತೆ ನಾಮಕರಣ ಕಾರ್ಯವನ್ನು ಶಿವಮೊಗ್ಗ ಬಸವಕೇಂದ್ರದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿಯವರ ನೇತೃತ್ವದಲ್ಲಿ ನೆರವೇರಿಸುವ ಮೂಲಕ ಎಲ್ಲರ ಗಮನ ಸೆಳೆದರು.
    ಭದ್ರಾವತಿ, ನ. ೧೬: ಮಗು ವಿದೇಶದಲ್ಲಿ ಜನಿಸಿದರೂ ಸಹ ಲಿಂಗಾಯಿತ ಧರ್ಮದಂತೆ ನಾಮಕರಣ ಶಾಸ್ತ್ರ ನೆರವೇರಿಸುವ ಮೂಲಕ ಹುಟ್ಟಿದ ನೆಲದ ಧರ್ಮಕ್ಕೆ ಚಿರ ಋಣಿಯಾಗಿರುವ ಕುಟುಂಬವೊಂದರ ಕಾರ್ಯ ಇದೀಗ ಎಲ್ಲರ ಗಮನ ಸೆಳೆದಿದೆ.
    ಹೊಸಮನೆ ನಿವಾಸಿ ಪ್ರೇಮಪ್ರಸಾದ್ ಹಾಗೂ ಶಿವಲೀಲಾ ದಂಪತಿ ಪುತ್ರ ಪುನೀತ್ ಮತ್ತು ಸೊಸೆ ರಾಧಿಕಾ ಕಳೆದ ಕೆಲವು ವರ್ಷಗಳಿಂದ ಲಂಡನ್‌ನಲ್ಲಿ ವಾಸವಾಗಿದ್ದು, ೬ ತಿಂಗಳ ಹಿಂದೆ ಹೆಣ್ಣು ಮಗು ಜನಿಸಿದೆ. ಈ ಮಗುವಿಗೆ ಲಿಂಗಾಯಿತ ಧರ್ಮದಂತೆ ನಾಮಕರಣ ಮಾಡಬೇಕೆಂಬ ಬಯಕೆಯೊಂದಿದ್ದ ಈ ದಂಪತಿ ತವರು ದೇಶ ಭಾರತಕ್ಕೆ ಆಗಮಿಸಿ ತಮ್ಮ ಬಯಕೆಯನ್ನು ಈಡೇರಿಸಿಕೊಂಡಿದ್ದಾರೆ.
    ಹಳೇನಗರದ ಶ್ರೀ ಅಕ್ಕಮಹಾದೇವಿ ಸಮುದಾಯಭವನದಲ್ಲಿ ಆಯೋಜಿಸಲಾಗಿದ್ದ ಶುಭ ಸಮಾರಂಭದಲ್ಲಿ ಶಿವಮೊಗ್ಗ ಬಸವಕೇಂದ್ರದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿಯವರು ಲಿಂಗಾಯಿತ ಧರ್ಮದಂತೆ ಲಿಂಗಧಾರಣಾ ಮತ್ತು ನಾಮಕರಣ ನೆರವೇರಿಸಿಕೊಟ್ಟರು. ಲಂಡನ್ ಪ್ರಜೆಯಾಗಿರುವ ಹೆಣ್ಣು ಮಗುವಿಗೆ ನಿಧಿ ಎಂಬ ಹೆಸರನ್ನು ನಾಮಕರಣಗೊಳಿಸಲಾಗಿದ್ದು, ಕುಟುಂಬ ಸಂಬಂಧಿಕರು, ಹಿತೈಷಿಗಳು, ಸ್ನೇಹಿತರು ಸಮಾರಂಭದಲ್ಲಿ ಪಾಲ್ಗೊಂಡು ಮಗುವಿಗೆ ಶುಭ ಹಾರೈಸಿದರು.

ತುಳುಕೂಟದ ನೂತನ ಅಧ್ಯಕ್ಷರಾಗಿ ಸುಧಾಕರ ಶೆಟ್ಟಿ ಆಯ್ಕೆ

ಸುಧಾಕರ ಶೆಟ್ಟಿ
    ಭದ್ರಾವತಿ, ನ. ೧೬: ತಾಲೂಕು ತುಳುಕೂಟದ ಸರ್ವ ಸದಸ್ಯರ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಸುಧಾಕರ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
    ಜನ್ನಾಪುರ ಬಂಟರ ಭವನದಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷರಾಗಿ ಪ್ರಕಾಶ್ ಪಿಂಟೋ, ಪ್ರಧಾನ ಕಾರ್ಯದರ್ಶಿಯಾಗಿ ಡಾ. ಹರೀಶ ದೇಲಂತಬೆಟ್ಟು, ಖಜಾಂಚಿಯಾಗಿ ಡಾ. ವೈ. ಆನಂದ್, ಕಾರ್ಯದರ್ಶಿಗಳಾಗಿ ನಾರಾಯಣ ಪೂಜಾರಿ ಮತ್ತು ಬಿ. ಸುಬ್ಬಣ್ಣ ಆಯ್ಕೆಯಾಗಿದ್ದಾರೆ.
    ಆರಂಭದಲ್ಲಿ ನಿಧನ ಹೊಂದಿದ ಸಂಘದ ಸದಸ್ಯರಿಗೆ ಸಂತಾಪ ಸೂಚಿಸಿ ಮೌನಾಚರಣೆ ನಡೆಸಲಾಯಿತು. ವಾರ್ಷಿಕ ವರದಿ ಹಾಗು ಲೆಕ್ಕಪತ್ರ ಮಂಡನೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಿದವು. ಬಂಟರ ಸಂಘದ ಅಧ್ಯಕ್ಷ ಬಿ. ದಿವಾಕರ ಶೆಟ್ಟಿ, ರೋಟರಿ ಕ್ಲಬ್‌ ಅಧ್ಯಕ್ಷ ಆದರ್ಶ್‌ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಪ್ರಕಾಶ್‌ ಪಿಂಟೋ ಅಧ್ಯಕ್ಷತೆ ವಹಿಸಿದ್ದರು.  ಕಳೆದ ಕೆಲವು ತಿಂಗಳು ಹಿಂದೆ ತುಳುಕೂಟದ ಅಧ್ಯಕ್ಷರಾಗಿದ್ದ ಹಿರಿಯ ವೈದ್ಯ ಡಾ. ಯು. ಕರುಣಾಕರ ಶೆಟ್ಟಿಯವರು ನಿಧನ ಹೊಂದಿದ ಹಿನ್ನಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ಸುಧಾಕರ ಶೆಟ್ಟಿಯವರು ಆಯ್ಕೆಯಾಗಿದ್ದಾರೆ.