Thursday, July 30, 2020

ಜು.೩೧ರಿಂದ ಪ್ರೌಢಶಾಲಾ ಶಿಕ್ಷಕರಿಗೆ ಜೀವನ ಕೌಶಲ ಆನ್‌ಲೈನ್ ತರಬೇತಿ ಕಾರ್ಯಕ್ರಮ

ಭದ್ರಾವತಿ, ಜು. ೩೦: ಎಲ್ಲೆಡೆ ಕೋವಿಡ್-೧೯ ತೀವ್ರವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಮನೆಯಿಂದಲೇ ಕೆಲಸ ನಿರ್ವಹಿಸಲು ಅವಕಾಶ ಕಲ್ಪಿಸಿರುವ ಹಿನ್ನಲೆಯಲ್ಲಿ ಹಾಗೂ ಸರ್ಕಾರದ ಆದೇಶದಂತೆ ತಾಲೂಕಿನ ಪ್ರೌಢಶಾಲಾ ಶಿಕ್ಷಕರಿಗೆ ಜೀವನ ಕೌಶಲ ಆನ್‌ಲೈನ್ ತರಬೇತಿ ಕಾರ್ಯಕ್ರಮವನ್ನು ಜು.೩೧ ರಿಂದ ಆ.೧೩ರ ವರೆಗೆ ಹಮ್ಮಿಕೊಳ್ಳಲಾಗಿದೆ. 
ಆನ್‌ಲೈನ್ ತರಬೇತಿ ಪ್ರತಿದಿನ ಬೆಳಿಗ್ಗೆ ೧೧ ರಿಂದ ೧೨.೩೦ರವರೆಗೆ ನಡೆಯಲಿದ್ದು, ಜು.೩೧ರಂದು ವಿದ್ಯಾಗಮ ನಿರಂತರ ಕಲಿಕಾ ಕಾರ್ಯಕ್ರಮ ಅನುಷ್ಠಾನ ಏಕೆ? ಹೇಗೆ? ವಿಷಯ ಕುರಿತು ಬಿಆರ್‌ಸಿ ಗಣೇಶ್ ಮಾಹಿತಿ ನೀಡಲಿದ್ದಾರೆ. 
ಆ.೩ರಂದು ಸೇತುಬಂಧ ಮತ್ತು ಎಸ್‌ಎಪಿ ಪರಿಚಯ ಕುರಿತು ಅಂತರಗಂಗೆಯ ಇಮ್ತಿಯಾಜ್ ಅಹ್ಮದ್ ಹಾಗೂ ೪ರಂದು ಹದಿಹರೆಯ/ತಾರುಣ್ಯ ಪರಿಚಯ, ಸವಾಲು, ಹದಿಹರೆಯ ಸಾಧಕರು, ವೈಯಕ್ತಿಕ ನೈರ್ಮಲ್ಯ, ಸಕಾರಾತ್ಮಕ ಮನೋಭಾವನೆ ಕುರಿತು ಸ್ತ್ರೀರೋಗ ತಜ್ಞೆ ಡಾ. ವೀಣಾ ಎಸ್ ಭಟ್ ಮಾಹಿತಿ ನೀಡಲಿದ್ದಾರೆ. 
೫ರಂದು ಜೀವನ ಕೌಶಲಗಳು-ಮಹತ್ವ ಡಬ್ಲ್ಯೂಎಚ್‌ಓ ಅನುಮೋದಿಸಿರುವ ೧೦ ಜೀವನ ಕೌಶಲಗಳು ಏನು?ಏಕೆ?ಹೇಗೆ? ವಿಷಯ ಕುರಿತು ಅರಹತೊಳಲು ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಅಣ್ಣಪ್ಪ ಮಾಹಿತಿ ನೀಡಲಿದ್ದು, ೬ರಂದು ರಚನಾವಾದಿ ತರಗತಿ ಪ್ರಕ್ರಿಯೆ ಚರ್ಚೆ ಶಾಲಾ ಅಭ್ಯಾಸಗಳಲ್ಲಿ ಮೌಲ್ಯಮಾಪನ ಕುರಿತು ಹಳೇನಗರ ಕನಕ ವಿದ್ಯಾಸಂಸ್ಥೆಯ ಸಹ ಶಿಕ್ಷಕ ಪ್ರಶಾಂತ್ ಸಣ್ಣಕ್ಕಿ ಮಾಹಿತಿ ನೀಡಲಿದ್ದಾರೆ.
೭ರಂದು ಕೆಎಸ್‌ಕ್ಯೂಎಎಸಿ/ಸಿಎಸ್‌ಎಎಸ್ ಸಾಮರ್ಥ್ಯಗಳ ಪರಿಚಯ, ಪ್ರಶ್ನೆ ಸ್ವರೂಪದ ನೆಲೆಗಳು, ಕಲಿಕಾ ಫಲಗಳು, ಏನು?ಯಾವುವು?ಏಕೆ?ಹೇಗೆ? ವಿಷಯ ಕುರಿತು ಚಿಕ್ಕಮಗಳೂರು ಕಡೂರು ತಾಲೂಕಿನ ಜಿಗಣೇಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಎ.ಜಿ ರಾಜಶೇಖರ್ ಮಾಹಿತಿ ನೀಡಲಿದ್ದು, ೧೦ರಂದು ಎನ್‌ಸಿಎಫ್-೨೦೦೫, ಸಿಸಿಇ ಅರ್ಥ ಮತ್ತು ಹೊಸ ಆಯಾಮಗಳ ಚರ್ಚೆ, ಕಲಿಕೆ ಹಾಗೂ ಮೌಲ್ಯಮಾಪನ ಕುರಿತು ಹೊಳೆಹೊನ್ನೂರು ಸರ್ಕಾರಿ ಉರ್ದು ಪ್ರೌಢ ಶಾಲೆ ಮುಖ್ಯ ಶಿಕ್ಷಕಿ ಶಬನಾ ಅಂಜುಂ ಮಾಹಿತಿ ನೀಡಲಿದ್ದಾರೆ. 
೧೧ರಂದು ಸಿಸಿಇ ಮೌಲ್ಯಮಾಪನದ ತಂತ್ರಗಳು, ಸಾಧನಗಳು, ಸಾಂದರ್ಭಿಕ ದಾಖಲೆಗಳ ನಿರ್ವಹಣೆ ಮತ್ತು ನಿಯೋಜಿತ ಕಾರ್ಯಗಳು ವಿಷಯ ಕುರಿತು ಯಡೇಹಳ್ಳಿ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕ ಜಯಕುಮಾರ್ ಮಾಹಿತಿ ನೀಡಲಿದ್ದು, ೧೨ರಂದು ಎಸ್‌ಡಿಪಿ ಮತ್ತು ಫಲಿತಾಂಶ ಕ್ರಿಯಾ ಯೋಜನೆ ಶಾಲಾ ಗ್ರಂಥಾಲಯ ಮತ್ತು ಶಾಲಾ ವಿವಿಧ ಕ್ಲಬ್‌ಗಳ ನಿರ್ವಹಣೆ ಹೇಗೆ? ಏಕೆ? ವಿಷಯ ಕುರಿತು ಹಳೇನಗರ ಸಂಚಿಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಸಹ ಶಿಕ್ಷಕ ದಿವಾಕರ್ ಮತ್ತು ರಸ್ತೆ ಸುರಕ್ಷತೆ, ಸಂಚಾರ ನಿಯಮಗಳು, ರಸ್ತೆ ಬಳಕೆದಾರರ ವರ್ತನೆಗಳು ಮತ್ತು ಪ್ರಥಮ ಚಿಕಿತ್ಸೆ ಕುರಿತು ಕಾಗದನಗರ ಪೇಪರ್‌ಟೌನ್ ಪ್ರೌಢಶಾಲೆ ಸಹ ಶಿಕ್ಷಕ ಮಂಜುನಾಥ್ ಮಾಹಿತಿ ನೀಡಲಿದ್ದಾರೆ. 

ರೋಟರಿ ಕ್ಲಬ್ ವತಿಯಿಂದ ರೈತ ಮಿತ್ರ : ಭತ್ತದ ನಾಟಿ ಮೂಲಕ ರೈತರ ಸಂಕಷ್ಟಗಳಿಗೆ ಸ್ಪಂದನೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಸಿದ್ದಾಪುರ ಗ್ರಾಮದಲ್ಲಿ ರೋಟರಿ ಕ್ಲಬ್‌ನ ಪದಾಧಿಕಾರಿಗಳು ರೈತರೊಂದಿಗೆ ಭತ್ತದ ನಾಟಿಯಲ್ಲಿ ತೊಡಗುವ ಮೂಲಕ ರೈತರ ಸಂಕಷ್ಟಗಳಿಗೆ ಸ್ಪಂದಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. 
ಭದ್ರಾವತಿ, ಜು. ೩೦: ಹಲವಾರು ಸೇವಾ ಕಾರ್ಯಗಳೊಂದಿಗೆ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿರುವ ರೋಟರಿ ಕ್ಲಬ್ ರೈತರ ನೆರವಿಗೂ ಮುಂದಾಗುತ್ತಿದ್ದು, ಈ ಹಿನ್ನಲೆಯಲ್ಲಿ ಹಲವಾರು ವರ್ಷಗಳಿಂದ ರೈತ ಮಿತ್ರ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರುತ್ತಿದೆ. 
ಈ ಬಾರಿ ನಗರಸಭೆ ವ್ಯಾಪ್ತಿಯ ಸಿದ್ದಾಪುರ ಗ್ರಾಮದಲ್ಲಿ ಕ್ಲಬ್‌ನ ಪದಾಧಿಕಾರಿಗಳು ರೈತರೊಂದಿಗೆ ಭತ್ತದ ನಾಟಿಯಲ್ಲಿ ತೊಡಗುವ ಮೂಲಕ ರೈತರ ಸಂಕಷ್ಟಗಳಿಗೆ ಸ್ಪಂದಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. 
ಕ್ಲಬ್ ಅಧ್ಯಕ್ಷ ಬಿ.ಎಂ. ಶಾಂತಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಗಿರೀಶ್, ವಲಯ ಪ್ರತಿನಿಧಿ ಡಾ. ಕೆ. ನಾಗರಾಜ್, ಸುಂದರ್ ಬಾಬು ಹಾಗೂ ಸ್ಥಳೀಯ ಪುರುಷ ಹಾಗೂ ಮಹಿಳಾ ರೈತರು ಉಪಸ್ಥಿತರಿದ್ದರು. 



ಕೊರೋನಾ ಸೋಂಕು : ನಗರಸಭೆ ವ್ಯಾಪ್ತಿಯಲ್ಲಿ ಒಂದೇ ದಿನ ೧೦ ಪ್ರಕರಣ

ಭದ್ರಾವತಿ, ಜು. ೩೦:  ಉಕ್ಕಿನ ನಗರದಲ್ಲಿ ಕೆಲವು ದಿನಗಳಿಂದ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಗುರುವಾರ ಒಂದೇ ದಿನ ನಗರಸಭೆ ವ್ಯಾಪ್ತಿಯಲ್ಲಿ ೧೦ ಪ್ರಕರಣಗಳು ದಾಖಲಾಗಿವೆ. 
  ವೇಲೂರ್‌ಶೆಡ್‌ನಲ್ಲಿ ೧೯ ಮತ್ತು ೨೩ ವರ್ಷದ ಇಬ್ಬರು ಯುವಕರಿಗೆ, ಅರಣ್ಯ ಕಛೇರಿ ಬಳಿ ೩೦ ವರ್ಷದ ಯುವಕ ಮತ್ತು ೬೫ ವರ್ಷದ ವ್ಯಕ್ತಿಗೆ, ಚಾಮೇಗೌಡ ಏರಿಯಾದಲ್ಲಿ ೨೭ ವರ್ಷದ ಮಗಳು ಹಾಗೂ ೬೨ ವರ್ಷದ ತಂದೆಗೆ, ಜೈಭೀಮಾ ನಗರದಲ್ಲಿ ೨೬ ವರ್ಷದ ವ್ಯಕ್ತಿಗೆ, ಭೋವಿಕಾಲೋನಿಯಲ್ಲಿ ೫೫ ವರ್ಷದ ಗುತ್ತಿಗೆದಾರನಿಗೆ ಮತ್ತು ೪೦ ವರ್ಷದ ಮಹಿಳೆಗೆ ಹಾಗೂ ನೃಪತುಂಗ ನಗರದಲ್ಲಿ ೬೦ ವರ್ಷದ ಮಹಿಳೆಗೆ ಸೋಂಕು ತಗುಲಿದೆ. 
ನಗರಸಭೆ ಪೌರಾಯುಕ್ತ ಮನೋಹರ್, ಪರಿಸರ ಅಭಿಯಂತರ ರುದ್ರೇಗೌಡ,  ಹಿರಿಯ ಆರೋಗ್ಯ ನಿರೀಕ್ಷರಾದ ಲತಾಮಣಿ, ಆರ್.ಬಿ ಸತೀಶ್, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಹಿರಿಯ ಆರೋಗ್ಯ ಸಹಾಯಕ ನೀಲೇಶ್‌ರಾಜ್ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳನ್ನೊಳಗೊಂಡ ತಂಡ ಸೋಂಕು ಪತ್ತೆಯಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,  ಸ್ಯಾನಿಟೈಜರ್ ಕೈಗೊಂಡು ೧೦೦ ಹಾಗೂ ೨೦೦ ಮೀಟರ್ ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್ ವಲಯವನ್ನಾಗಿಸಿದೆ. 
 

ಪ್ರತಿಯೊಬ್ಬರೂ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಅಗತ್ಯವಿದೆ : ಹಿರೇಮಠ್

ಪತ್ರಕರ್ತರಿಗೆ ಉಚಿತ ಇಮ್ಯೂನ್ ಕಿಟ್ ವಿತರಣೆ 

ನಿದಿಗೆಯಲ್ಲಿರುವ ಟಿಎಂಎಇ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ತಯಾರಿಸಿರುವ (ಇಮ್ಯೂನ್ ಕಿಟ್) ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಯನ್ನು ಗುರುವಾರ ಪತ್ರಕರ್ತರಿಗೆ ಉಚಿತವಾಗಿ ನೀಡಲಾಯಿತು. 
ಭದ್ರಾವತಿ, ಜು. ೩೦:  ನಿದಿಗೆಯಲ್ಲಿರುವ ಟಿಎಂಎಇ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ತಯಾರಿಸಿರುವ (ಇಮ್ಯೂನ್ ಕಿಟ್) ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧ ಪ್ರತಿಯೊಬ್ಬರಿಗೂ ಕೊರೋನಾ ಸೇರಿದಂತೆ ಹಲವಾರು ರೋಗಗಳಿಗೆ ದಿವ್ಯೌಷಧವಾಗಿದೆ ಎಂದು ಆಡಳಿತಾಧಿಕಾರಿ ಹಿರೇಮಠ್ ತಿಳಿಸಿದರು. 
ಅವರು ಗುರುವಾರ ಹಳೇನಗರದ ಕಾರ್ಯನಿರತ ಪತ್ರಕರ್ತರ ಸಂಘದ ಕಛೇರಿಯಲ್ಲಿ ಪತ್ರಕರ್ತರಿಗೆ ಉಚಿತವಾಗಿ ಔಷಧಿ ವಿತರಿಸಿ ಮಾತನಾಡಿದರು.  ಭಾರತ ಸರ್ಕಾರದ ಆಯುಷ್ ಇಲಾಖೆಯ ಮಾರ್ಗಸೂಚಿಯಂತೆ ಔಷಧಿ ತಯಾರಿಸಲಾಗಿದ್ದು, ಈ ಔಷಧ ಶೇ.೧೦೦ಕ್ಕೆ ೧೦೦ರಷ್ಟು ರೋಗ ನಿರೋಧಕ ಶಕ್ತಿ ಉಂಟುಮಾಡುವ ವಿಶ್ವಾಸವಿದೆ. ಕೊರೋನಾ ವೈರಸ್ ಪರಿಣಾಮದಿಂದಾಗಿ ಪ್ರಸ್ತುತ ಎಲ್ಲರೂ ಸಂಕಷ್ಟ ಎದುರಿಸುವಂತಾಗಿದ್ದು, ಇದರಿಂದ ಮುಕ್ತಿ ಹೊಂದಲು ಅನುಕೂಲವಾಗುವ ನಿಟ್ಟಿನಲ್ಲಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಆಶಯದೊಂದಿಗೆ ಔಷಧ ಸಿದ್ದಪಡಿಸಲಾಗಿದೆ. ಎಲ್ಲರೂ ಇದರ ಸದುಪಯೋಗಪಡೆದುಕೊಳ್ಳಬೇಕೆಂದು ಮನವಿ ಮಾಡಿದರು. 
ವ್ಯದ್ಯ ಡಾ. ಸಂತೋಷ್‌ಕುಮಾರ್ ಮಾತನಾಡಿ, ಪ್ರಸ್ತುತ ಪ್ರತಿಯೊಬ್ಬರೂ ಸಹ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕಾದ ಅಗತ್ಯವಿದೆ. ಹಿಂದೆ ಮನುಷ್ಯನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೋಗ ನಿರೋಧಕ ಶಕ್ತಿ ಇತ್ತು. ಪ್ರಸ್ತುತ ಸಾಮಾನ್ಯ ವೈರಸ್ ವಿರುದ್ಧ ಸಹ ಹೋರಾಡುವಷ್ಟು ಸಾಮರ್ಥ್ಯ  ಇಲ್ಲವಾಗಿದೆ. ಈ ಹಿನ್ನಲೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ತಯಾರಿಸಲಾಗಿರುವ ಔಷಧ ಬಹಳ ಉಪಯುಕ್ತವಾಗಿದೆ ಎಂದರು. 
ಡಾ. ವಿನಯ್ ಮಾತನಾಡಿ, ಸಂಸ್ಥೆವತಿಯಿಂದ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಶಕ್ತಿ ಮೀರಿ ಈ ಔಷಧಿಯನ್ನು ಸಿದ್ದಪಡಿಸಲಾಗಿದೆ. ಸಾಮಾನ್ಯವಾಗಿ ಸ್ಥಳೀಯವಾಗಿ ಲಭ್ಯವಿರುವ ದಿನಬಳಕೆ ವಸ್ತುಗಳನ್ನು ಬಳಸಿ ತಯಾರಿಸಿದ್ದು, ಈ ಔಷಧಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗದಂತೆ ನೋಡಿಕೊಳ್ಳಲಿದೆ. ಆರಂಭಿಕ ಹಂತದಲ್ಲಿ ಈ ಔಷಧಿಯನ್ನು ಸಂಸ್ಥೆ ವತಿಯಿಂದ ಉಚಿತವಾಗಿ ಕೊರೋನಾ ವಾರಿಯರ್ಸ್‌ಗಳಿಗೆ ನೀಡಬೇಕೆಂಬ ಉದ್ದೇಶದೊಂದಿಗೆ ಪತ್ರಕರ್ತರಿಗೆ ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಂಡು ಇತರರಿಗೆ ಇದರ ಮಹತ್ವ ತಿಳಿಸಬೇಕೆಂದು ಮನವಿ ಮಾಡಿದರು. 
ಡಾ. ಪ್ರಶಾಂತ್, ಡಾ. ಅರುಣಕುಮಾರಿ ಉಪಸ್ಥಿತರಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತರಾದ ಕಣ್ಣಪ್ಪ, ಗಣೇಶ್‌ರಾವ್ ಸಿಂಧ್ಯಾ, ಶಿವಶಂಕರ್, ರವೀಂದ್ರನಾಥ್(ಬ್ರದರ‍್ಸ್), ಟಿ.ಎಸ್ ಆನಂದಕುಮಾರ್, ಬದರಿನಾರಾಯಣ ಶ್ರೇಷ್ಠಿ, ಬಸವರಾಜ್, ಫಿಲೋಮಿನಾ, ಅನಂತಕುಮಾರ್, ಸುದರ್ಶನ್, ಶೈಲೇಶ್ ಕೋಠಿ, ಕೆ.ಎಸ್ ಸುಧೀಂದ್ರ, ನಾರಾಯಣ್, ಮೋಹನ್‌ಕುಮಾರ್, ಸೈಯದ್ ಖಾನ್, ವ್ಯವಸ್ಥಾಪಕ ಸುಬ್ರಮಣಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

ಜಾತಿನಿಂದನೆ, ಜೀವ ಬೆದರಿಕೆ ದೂರು ದಾಖಲಿಸಿಕೊಳ್ಳದ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹ

ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಶಿರಸ್ತೇದಾರ್ ಮೂಲಕ ಮನವಿ 

ಪೊಲೀಸರು ಜಾತಿ ನಿಂದನೆ ಮತ್ತು ಕೊಲೆ ಬೆದರಿಕೆ ದೂರು ದಾಖಲಿಸಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗುರುವಾರ ಭದ್ರಾವತಿಯಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಶಿರಸ್ತೇದಾರ್ ಮಲ್ಲಿಕಾರ್ಜುನಯ್ಯ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಸಚಿವರಿಗೆ ಮನವಿ ಸಲ್ಲಿಸಲಾಯಿತು. 
ಭದ್ರಾವತಿ, ಜು. ೩೦: ಪೊಲೀಸರು ಜಾತಿ ನಿಂದನೆ ಮತ್ತು ಕೊಲೆ ಬೆದರಿಕೆ ದೂರು ದಾಖಲಿಸಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗುರುವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಶಿರಸ್ತೇದಾರ್ ಮಲ್ಲಿಕಾರ್ಜುನಯ್ಯ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಸಚಿವರಿಗೆ ಮನವಿ ಸಲ್ಲಿಸಲಾಯಿತು. 
ತಾಲೂಕಿನ ಹೆಬ್ಬಂಡಿ ಲಕ್ಷ್ಮೀಪುರ ಗ್ರಾಮದ ಸರ್ವೆ ನಂ. ೩೭/೧ ರಲ್ಲಿ ೦-೩೧ ಗುಂಟೆ ಜಮೀನು ಮತ್ತು ಸರ್ವೆ ನಂ. ೩೭/೬ರಲ್ಲಿ ೦-೨೯ ಗುಂಟೆ ಜಮೀನು ಹೊಂದಿರುವ ಸೀನಪ್ಪರವರು ತಮ್ಮ ಹೆಸರಿನಲ್ಲಿ ಆರ್‌ಟಿಸಿ ಮ್ಯೂಟೇಷನ್ ಹಾಗೂ ಮೂಲ ದಾಖಲೆಗಳನ್ನು ಹೊಂದಿದ್ದಾರೆ. ಅಲ್ಲದೆ ಉಪವಿಭಾಗಾಧಿಕಾರಿಗಳು ಸ್ಥಳ ಪರಿಶೀಲನೆಯೊಂದಿಗೆ ತನಿಖೆ ನಡೆಸಿ ಜಮೀನು ಸೀನಪ್ಪನವರಿಗೆ ಸೇರಿದೆ ಎಂದು ಖಚಿತಪಡಿಸಿದ್ದಾರೆ. ಆದರೂ ಸಹ ಲಕ್ಷ್ಮೀಪುರದ ನಿವಾಸಿಗಳಾದ ಕೆಂಪಮ್ಮ, ಮಗ ನಾಗರಾಜ ಹಾಗೂ ಮೊಮ್ಮಕ್ಕಳಾದ ಗೌತಮಿ, ರಾಘವೇಂದ್ರ, ಬೇಬಿಯಮ್ಮ, ಲಕ್ಷ್ಮಮ್ಮ, ದೇವೇಂದ್ರ ಸೇರಿದಂತೆ ಇನ್ನಿತರರು  ಪರಿಶಿಷ್ಟ ಜಾತಿ ಬೋವಿ ಜನಾಂಗಕ್ಕೆ ಸೇರಿರುವ ಸೀನಪ್ಪರವರಿಗೆ ಜಾತಿ ನಿಂದನೆ ಮಾಡುವ ಜೊತೆಗೆ ಕೊಲೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಲಾಯಿತು. 
ಈ ಸಂಬಂಧ ಸೀನಪ್ಪರವರು ನ್ಯೂಟೌನ್ ಪೊಲೀಸ್  ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೆ ಜಿಲ್ಲಾ ರಕ್ಷಣಾಧಿಕಾರಿಗಳಿಗೆ, ಪೊಲೀಸ್ ಉಪಾಧೀಕ್ಷಕರಿಗೆ ಮನವಿ ಸಹ ಸಲ್ಲಿಸಿರುತ್ತಾರೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸರು ಜಾತಿ ನಿಂದನೆ ಪ್ರಕರಣ ದಾಖಲಿಸಿಕೊಂಡಿಲ್ಲ. ಅಲ್ಲದೆ ಜೀವ ಬೆದರಿಕೆ ಹೊಂದಿರುವ ಸೀನಪ್ಪರವರಿಗೆ ಸೂಕ್ತ ರಕ್ಷಣೆ ಸಹ ನೀಡಿಲ್ಲ ಎಂದು ದೂರಲಾಯಿತು. 

      ತಕ್ಷಣ ಪೊಲೀಸರು ಜಾತಿನಿಂದನೆ ಪ್ರಕರಣ ದಾಖಲಿಸಿಕೊಳ್ಳಬೇಕು. ಸೀನಪ್ಪರವರ ಜಮೀನಿನಲ್ಲಿರುವ ಮನೆಯಲ್ಲಿ ಅಕ್ರಮವಾಗಿ ವಾಸವಾಗಿರುವ ಕೆಂಪಮ್ಮ ಮತ್ತು ಕುಟುಂಬದವರನ್ನು ತಕ್ಷಣ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಲಾಯಿತು. 
ಸಮಿತಿ ಅಧ್ಯಕ್ಷ ಬಿ.ಎನ್ ರಾಜು ನೇತೃತ್ವ ವಹಿಸಿದ್ದರು. ಕಾರ್ಯಾಧ್ಯಕ್ಷ ಅರುಣ್‌ಕುಮಾರ್, ಉಪಾಧ್ಯಕ್ಷರಾದ ಎಂ.ವಿ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಅಕ್ರಂ ಖಾನ್, ಸಂಚಾಲಕರಾದ ಗಾಯಕ್‌ವಾಡ್, ಸುಬ್ಬೇಗೌಡ, ಆನಂದಮೂರ್ತಿ, ಸಂಯುಕ್ತ ಜನಾತದಳ ಯುವ ಮುಖಂಡ ಶಶಿಕುಮಾರ್ ಎಸ್. ಗೌಡ, ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಶೆಟ್ಟಿ ಬಣ) ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್, ಸೀನಪ್ಪ, ಲಕ್ಷ್ಮಮ್ಮ, ಮಂಜಪ್ಪ, ನಾಗರಾಜಪ್ಪ, ನಾಗರತ್ನಮ್ಮ, ಪುಷ್ಪ, ಎಸ್. ಸುರೇಶ್, ಸತೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.