ಪತ್ರಕರ್ತರಿಗೆ ಉಚಿತ ಇಮ್ಯೂನ್ ಕಿಟ್ ವಿತರಣೆ
ನಿದಿಗೆಯಲ್ಲಿರುವ ಟಿಎಂಎಇ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ತಯಾರಿಸಿರುವ (ಇಮ್ಯೂನ್ ಕಿಟ್) ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಯನ್ನು ಗುರುವಾರ ಪತ್ರಕರ್ತರಿಗೆ ಉಚಿತವಾಗಿ ನೀಡಲಾಯಿತು.
ಭದ್ರಾವತಿ, ಜು. ೩೦: ನಿದಿಗೆಯಲ್ಲಿರುವ ಟಿಎಂಎಇ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ತಯಾರಿಸಿರುವ (ಇಮ್ಯೂನ್ ಕಿಟ್) ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧ ಪ್ರತಿಯೊಬ್ಬರಿಗೂ ಕೊರೋನಾ ಸೇರಿದಂತೆ ಹಲವಾರು ರೋಗಗಳಿಗೆ ದಿವ್ಯೌಷಧವಾಗಿದೆ ಎಂದು ಆಡಳಿತಾಧಿಕಾರಿ ಹಿರೇಮಠ್ ತಿಳಿಸಿದರು.
ಅವರು ಗುರುವಾರ ಹಳೇನಗರದ ಕಾರ್ಯನಿರತ ಪತ್ರಕರ್ತರ ಸಂಘದ ಕಛೇರಿಯಲ್ಲಿ ಪತ್ರಕರ್ತರಿಗೆ ಉಚಿತವಾಗಿ ಔಷಧಿ ವಿತರಿಸಿ ಮಾತನಾಡಿದರು. ಭಾರತ ಸರ್ಕಾರದ ಆಯುಷ್ ಇಲಾಖೆಯ ಮಾರ್ಗಸೂಚಿಯಂತೆ ಔಷಧಿ ತಯಾರಿಸಲಾಗಿದ್ದು, ಈ ಔಷಧ ಶೇ.೧೦೦ಕ್ಕೆ ೧೦೦ರಷ್ಟು ರೋಗ ನಿರೋಧಕ ಶಕ್ತಿ ಉಂಟುಮಾಡುವ ವಿಶ್ವಾಸವಿದೆ. ಕೊರೋನಾ ವೈರಸ್ ಪರಿಣಾಮದಿಂದಾಗಿ ಪ್ರಸ್ತುತ ಎಲ್ಲರೂ ಸಂಕಷ್ಟ ಎದುರಿಸುವಂತಾಗಿದ್ದು, ಇದರಿಂದ ಮುಕ್ತಿ ಹೊಂದಲು ಅನುಕೂಲವಾಗುವ ನಿಟ್ಟಿನಲ್ಲಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಆಶಯದೊಂದಿಗೆ ಔಷಧ ಸಿದ್ದಪಡಿಸಲಾಗಿದೆ. ಎಲ್ಲರೂ ಇದರ ಸದುಪಯೋಗಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ವ್ಯದ್ಯ ಡಾ. ಸಂತೋಷ್‌ಕುಮಾರ್ ಮಾತನಾಡಿ, ಪ್ರಸ್ತುತ ಪ್ರತಿಯೊಬ್ಬರೂ ಸಹ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕಾದ ಅಗತ್ಯವಿದೆ. ಹಿಂದೆ ಮನುಷ್ಯನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೋಗ ನಿರೋಧಕ ಶಕ್ತಿ ಇತ್ತು. ಪ್ರಸ್ತುತ ಸಾಮಾನ್ಯ ವೈರಸ್ ವಿರುದ್ಧ ಸಹ ಹೋರಾಡುವಷ್ಟು ಸಾಮರ್ಥ್ಯ ಇಲ್ಲವಾಗಿದೆ. ಈ ಹಿನ್ನಲೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ತಯಾರಿಸಲಾಗಿರುವ ಔಷಧ ಬಹಳ ಉಪಯುಕ್ತವಾಗಿದೆ ಎಂದರು.
ಡಾ. ವಿನಯ್ ಮಾತನಾಡಿ, ಸಂಸ್ಥೆವತಿಯಿಂದ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಶಕ್ತಿ ಮೀರಿ ಈ ಔಷಧಿಯನ್ನು ಸಿದ್ದಪಡಿಸಲಾಗಿದೆ. ಸಾಮಾನ್ಯವಾಗಿ ಸ್ಥಳೀಯವಾಗಿ ಲಭ್ಯವಿರುವ ದಿನಬಳಕೆ ವಸ್ತುಗಳನ್ನು ಬಳಸಿ ತಯಾರಿಸಿದ್ದು, ಈ ಔಷಧಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗದಂತೆ ನೋಡಿಕೊಳ್ಳಲಿದೆ. ಆರಂಭಿಕ ಹಂತದಲ್ಲಿ ಈ ಔಷಧಿಯನ್ನು ಸಂಸ್ಥೆ ವತಿಯಿಂದ ಉಚಿತವಾಗಿ ಕೊರೋನಾ ವಾರಿಯರ್ಸ್‌ಗಳಿಗೆ ನೀಡಬೇಕೆಂಬ ಉದ್ದೇಶದೊಂದಿಗೆ ಪತ್ರಕರ್ತರಿಗೆ ನೀಡಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಂಡು ಇತರರಿಗೆ ಇದರ ಮಹತ್ವ ತಿಳಿಸಬೇಕೆಂದು ಮನವಿ ಮಾಡಿದರು.
ಡಾ. ಪ್ರಶಾಂತ್, ಡಾ. ಅರುಣಕುಮಾರಿ ಉಪಸ್ಥಿತರಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತರಾದ ಕಣ್ಣಪ್ಪ, ಗಣೇಶ್‌ರಾವ್ ಸಿಂಧ್ಯಾ, ಶಿವಶಂಕರ್, ರವೀಂದ್ರನಾಥ್(ಬ್ರದರ‍್ಸ್), ಟಿ.ಎಸ್ ಆನಂದಕುಮಾರ್, ಬದರಿನಾರಾಯಣ ಶ್ರೇಷ್ಠಿ, ಬಸವರಾಜ್, ಫಿಲೋಮಿನಾ, ಅನಂತಕುಮಾರ್, ಸುದರ್ಶನ್, ಶೈಲೇಶ್ ಕೋಠಿ, ಕೆ.ಎಸ್ ಸುಧೀಂದ್ರ, ನಾರಾಯಣ್, ಮೋಹನ್‌ಕುಮಾರ್, ಸೈಯದ್ ಖಾನ್, ವ್ಯವಸ್ಥಾಪಕ ಸುಬ್ರಮಣಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
No comments:
Post a Comment