Wednesday, November 6, 2024

ಸಿಇಎನ್ ಪೊಲೀಸರ ಕಾರ್ಯಾಚರಣೆ : ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರ ಸೆರೆ

೪ ಕೆ.ಜೆ ೪೬೧ ಗ್ರಾಂ. ಗಾಂಜಾ ಸೇರಿ ಒಟ್ಟು ೨.೧೩ ಲಕ್ಷ ರು. ಮೌಲ್ಯದ ಸ್ವತ್ತು ವಶ 

ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರನ್ನು ಸಿಇಎನ್ ಪೊಲೀಸರು ಬಂಧಿಸಿ  ೪ ಕೆ.ಜೆ ೪೬೧ ಗ್ರಾಂ. ಗಾಂಜಾ ವಶಪಡಿಸಿಕೊಂಡಿರುವ ಘಟನೆ ಭದ್ರಾವತಿ ತಾಲೂಕಿನ ಬಿಳಿಕಿ ಕ್ರಾಸ್‌ನಲ್ಲಿ ನಡೆದಿದೆ. 
    ಭದ್ರಾವತಿ: ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರನ್ನು ಸಿಇಎನ್ ಪೊಲೀಸರು ಬಂಧಿಸಿ  ೪ ಕೆ.ಜೆ ೪೬೧ ಗ್ರಾಂ. ಗಾಂಜಾ ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಬಿಳಿಕಿ ಕ್ರಾಸ್‌ನಲ್ಲಿ ನಡೆದಿದೆ. 
    ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪೊಲೀಸರು ಗಾಂಜಾ ಮಾರಾಟದಲ್ಲಿ ತೊಡಗಿದ್ದ ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆ ನಿವಾಸಿ ಮೊಹಮ್ಮದ್ ಅಕ್ರಂ(೨೬) ಮತ್ತು ಸತ್ಯಸಾಯಿ ನಗರದ ನಿವಾಸಿ ಅಬ್ದುಲ್ ರಜಾಕ್(೩೫) ಇಬ್ಬರನ್ನು ಬಂಧಿಸಿ ಸುಮಾರು ೧.೪೦ ಲಕ್ಷ ರು. ಮೌಲ್ಯದ ೪ ಕೆ.ಜಿ ೪೬೧ ಗ್ರಾಂ. ತೂಕದ ಒಣ ಗಾಂಜಾ ಮತ್ತು ಸುಮಾರು ೩ ಸಾವಿರ ರು. ಮೌಲ್ಯದ ಮೊಬೈಲ್ ಹಾಗೂ ಸುಮಾರು ೭೦ ಸಾವಿರ ರು. ಮೌಲ್ಯದ ದ್ವಿ ಚಕ್ರ ವಾಹನ ಸೇರಿ ಒಟ್ಟು ೨.೧೩ ಲಕ್ಷ ರು. ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ. 
    ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್, ಹೆಚ್ಚುವರಿ ರಕ್ಷಣಾಧಿಕಾರಿಗಳಾದ ಅನಿಲ್ ಕುಮಾರ್ ಭೂಮರಡ್ಡಿ ಮತ್ತು ಎ.ಜಿ ಕಾರಿಯಪ್ಪ  ಮಾರ್ಗದರ್ಶನದಲ್ಲಿ ಸಿಇಎನ್ ಪೊಲೀಸ್ ಠಾಣೆ ಕೆ. ಕೃಷ್ಣಮೂರ್ತಿ ಮೇಲ್ವಿಚಾರಣೆಯಲ್ಲಿ ಪೊಲೀಸ್ ನಿರೀಕ್ಷಕ ಪಿ.ಐ ಮಂಜುನಾಥ್ ನೇತೃತ್ವ ಸಿಬ್ಬಂದಿಗಳ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.  

ವಿಕಲಚೇತನರೊಂದಿಗೆ ಹಟ್ಟುಹಬ್ಬ ಆಚರಣೆ

ಭದ್ರಾವತಿ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರ ಹಾಗು ತರಂಗ ಕಿವುಡು ಮತ್ತು ಮೂಕ ಮಕ್ಕಳ ಶಾಲೆಯಲ್ಲಿ ಡಾ. ನವೀನ್ ನಾಗರಾಜ್ ಮತ್ತು ಸಿಂಧು ದಂಪತಿ ಪುತ್ರಿ ನಿರಾಲಿ ಹಾಗು ಸವಿತಾ ವಿಶ್ವನಾಥ್‌ರವರ ಹುಟ್ಟುಹಬ್ಬ ವಿಶೇಷವಾಗಿ ಆಚರಿಸಲಾಯಿತು. 
    ಭದ್ರಾವತಿ: ನಗರದ ನ್ಯೂಟೌನ್ ಸಿದ್ದಾರ್ಥ ಅಂಧರ ಕೇಂದ್ರ ಹಾಗು ತರಂಗ ಕಿವುಡು ಮತ್ತು ಮೂಕ ಮಕ್ಕಳ ಶಾಲೆಯಲ್ಲಿ ಡಾ. ನವೀನ್ ನಾಗರಾಜ್ ಮತ್ತು ಸಿಂಧು ದಂಪತಿ ಪುತ್ರಿ ನಿರಾಲಿ ಹಾಗು ಸವಿತಾ ವಿಶ್ವನಾಥ್‌ರವರ ಹುಟ್ಟುಹಬ್ಬ ವಿಶೇಷವಾಗಿ ಆಚರಿಸಲಾಯಿತು. 
    ಅಂಧ ವಿಕಲಚೇತನರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೂಲಕ ಸಂಭ್ರಮ ಹಂಚಿಕೊಳ್ಳಲಾಯಿತು. ಸಾಮಾಜಿಕ ಸೇವೆ ಪ್ರಮುಖ ಗುರಿಯಾಗಿಸಿಕೊಂಡಿರುವ ಲಯನ್ಸ್ ಕ್ಲಬ್‌ನಲ್ಲಿ ದಂಪತಿ ತೊಡಗಿಸಿಕೊಂಡಿದ್ದು, ಪುತ್ರಿ ನಿರಾಲಿ ಹುಟ್ಟುಹಬ್ಬ ಸಮಾಜಕ್ಕೆ ಮಾದರಿಯಾಗಬೇಕೆಂಬ ಆಶಯ ವ್ಯಕ್ತಪಡಿಸಲಾಯಿತು. 
    ಲಯನ್ಸ್ ಪ್ರಮುಖರಾದ ರಾಮಸ್ವಾಮಿ ನಾಯ್ಡು, ಶಿವಕುಮಾರ್, ರಾಜಕುಮಾರ್, ಹೆಬ್ಬಂಡಿ ನಾಗರಾಜ್, ಆರ್. ಉಮೇಶ್, ಶ್ರೀನಿವಾಸ್, ಮಂಜುನಾಥ್,  ವಿಶ್ವನಾಥ್, ಎಂ.ಎಸ್ ಮಂಜುನಾಥ್,  ಡಾರತಿ, ನಿರ್ಮಲ, ಸವಿತಾ ಹಾಗು ಸಿದ್ದಾರ್ಥ ಅಂಧರ ಕೇಂದ್ರದ ಅಧ್ಯಕ್ಷ ಶಿವಬಸಪ್ಪ  ಹಾಗು  ಬಿ.ಆರ್ ಪ್ರಾಜೆಕ್ಟ್ ಲಯನ್ಸ್  ಕ್ಲಬ್  ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 
 

ನಿವೃತ್ತ ಇಂಜಿನಿಯರ್ ಹನುಮಗೌಡ ನಿಧನ

ಹನುಮಗೌಡ 
    ಭದ್ರಾವತಿ: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ನಿವೃತ್ತ ಇಂಜಿನಿಯರ್ ಹನುಮಗೌಡ(೭೫) ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಬುಧವಾರ ಬೆಳಿಗ್ಗೆ ನಿಧನ ಹೊಂದಿದರು. 
    ಪತ್ನಿ, ಪುತ್ರಿ ಹಾಗು ಪುತ್ರ ಇದ್ದಾರೆ. ಇವರ ಅಂತ್ಯಕ್ರಿಯೆ ಗುರುವಾರ ನಗರದ ಲೋಯರ್ ಹುತ್ತಾ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ. ಹನುಮಗೌಡರವರು ವಿಐಎಸ್‌ಎಲ್ ಕಾರ್ಖಾನೆಯ ಸಿ.ಇ ಪ್ಲಾಂಟ್‌ನಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಇವರ ನಿಧನಕ್ಕೆ ನಿವೃತ್ತ ಕಾರ್ಮಿಕರ ಸಂಘ ಸಂತಾಪ ಸೂಚಿಸಿದೆ. 

ವಿಐಎಸ್‌ಎಲ್ ಜಾಗೃತಾ ತಿಳುವಳಿಕೆ ಸಪ್ತಾಹ : ಸಮಾರೋಪ ಸಮಾರಂಭ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಕೇಂದ್ರ ಜಾಗೃತಾ ಆಯೋಗ ಮತ್ತು ಸೈಲ್ ಕಾರ್ಪೋರೇಟ್ ವಿಜಿಲೆನ್ಸ್ ನಿರ್ದೇಶನದಂತೆ ಈ ಬಾರಿ ಜಾಗೃತಾ ತಿಳುವಳಿಕೆ ಸಪ್ತಾಹ "ರಾಷ್ಟ್ರದ ಏಳಿಗೆಗಾಗಿ ಪ್ರಾಮಾಣಿಕತೆಯ ಸಂಸ್ಕೃತಿ" ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಯಿತು.
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಕೇಂದ್ರ ಜಾಗೃತಾ ಆಯೋಗ ಮತ್ತು ಸೈಲ್ ಕಾರ್ಪೋರೇಟ್ ವಿಜಿಲೆನ್ಸ್ ನಿರ್ದೇಶನದಂತೆ ಈ ಬಾರಿ ಜಾಗೃತಾ ತಿಳುವಳಿಕೆ ಸಪ್ತಾಹ "ರಾಷ್ಟ್ರದ ಏಳಿಗೆಗಾಗಿ ಪ್ರಾಮಾಣಿಕತೆಯ ಸಂಸ್ಕೃತಿ" ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸಲಾಯಿತು.
    ಜಾಗೃತಾ ತಿಳುವಳಿಕೆ ಸಪ್ತಾಹ ಸಮಾರೋಪ ಸಮಾರಂಭ ಶಾರದಾ ಮಂದಿರದಲ್ಲಿ ಆಯೋಜಿಸಲಾಗಿತ್ತು. ಸೈಂಟ್ ಚಾರ್ಲ್ಸ್ ಶಾಲೆ ೩ನೇ ತರಗತಿ ವಿದ್ಯಾರ್ಥಿನಿ ಪಾವನಿ ಎಂ. ನಾಯಕ್ ಭರತನಾಟ್ಯ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡಿತು.  ವೃತ್ತಿ ಬದುಕು ಮತ್ತು ವೈಯುಕ್ತಿಕ ಬದುಕಿನಲ್ಲಿ ಪ್ರಾಮಾಣಿಕತೆ, ನೀತಿ ಮತ್ತು ಮೌಲ್ಯಗಳ ಮಹತ್ವ ಸಾರುವ "ಸತ್ಯ-ನಿಷ್ಠೆ" ನಾಟಕ ನಗರದ ಅಪ್ಪರ್ ಹುತ್ತಾ ಅನನ್ಯ ಶಾಲೆಯ ಮಕ್ಕಳು ಅದ್ಭುತವಾಗಿ ಪ್ರದರ್ಶಿಸಿದರು.
    ಮುಖ್ಯ ಮಹಾಪ್ರಬಂಧಕ(ಸ್ಥಾವರ) ಕೆ.ಎಸ್ ಸುರೇಶ್, ನಮ್ಮ ಬಾಲ್ಯದಿಂದಲೇ ರೂಢಿಸಿಕೊಳ್ಳಬೇಕಿರುವ ಹಾಗು ಜೀವನದಲ್ಲಿ ಅತಿಮುಖ್ಯವಾದ ಪ್ರಾಮಾಣಿಕತೆ, ನೀತಿ, ಪಾರದರ್ಶಕತೆ ಮತ್ತು ಮೌಲ್ಯಗಳ ಮಹತ್ವ ಬಗ್ಗೆ ಒತ್ತಿಹೇಳಿದರು.
    ಮಹಾಪ್ರಬಂಧಕ(ವಿಜಿಲೆನ್ಸ್ ಮತ್ತು ಎ.ಸಿ.ವಿ.ಓ) ರಘುನಾಥ ಬಿ. ಅಷ್ಟಪುತ್ರೆ, ಜಾಗೃತಾ ತಿಳುವಳಿಕೆ ಸಪ್ತಾಹ ಅಂಗವಾಗಿ ೧೮೨ ಉದ್ಯೋಗಿಗಳಿಗೆ ಹಮ್ಮಿಕೊಳ್ಳಲಾಗಿದ್ದ ತರಬೇತಿ, ಮಾರುಕಟ್ಟೆ ಇಲಾಖೆ ಆಯೋಜಿಸಿದ್ದ ಗ್ರಾಹಕರ ಸಭೆ, ನೈತಿಕ ಉದ್ಯಾನವನ ಸ್ವಚ್ಛತೆ ಮುಂತಾದ ಚಟುವಟಿಕೆಗಳ ವಿವರವಾದ ವರದಿ ಮಂಡಿಸಿದರು. 
    ಎಥಿಕ್ಸ್ ಕ್ಲಬ್ ಚಟುವಟಿಕೆಗಳಲ್ಲಿ ಸಹಕಾರ ನೀಡಿದ ಅನನ್ಯ ಎಜ್ಯುಕೇಷನ್ ಟ್ರಸ್ಟ್ ಕಾರ್ಯದರ್ಶಿ ಬಿ.ಎಸ್ ಅನಿಲ್ ಕುಮಾರ್, ಆಡಳಿತಾಧಿಕಾರಿ ವೇಣುಗೋಪಾಲ್, ಮುಖ್ಯೋಪಾಧ್ಯಾಯ ಕೆ. ಕಲ್ಲೇಶ್ ಕುಮಾರ್ ಮತ್ತು ಸಿಬ್ಬಂದಿಗಳನ್ನು  ಗೌರವಿಸಲಾಯಿತು. ಜಾಗೃತಾ ತಿಳುವಳಿಕೆ ಸಪ್ತಾಹ ಅಂಗವಾಗಿ ಶಾಲಾ ಮಕ್ಕಳಿಗೆ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. 
    ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ, ಕಾರ್ಮಿಕರ ಸಂಘದ ಉಪಾಧ್ಯಕ್ಷ ಕೆ.ಬಿ ಮಲ್ಲಿಕಾರ್ಜುನ,  ವಿಐಎಸ್‌ಎಲ್ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ವಿಕಾಸ್ ಬಸೇರ್ ಸೇರಿದಂತೆ ಅಧಿಕಾರಿಗಳು, ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಉಪಸ್ಥಿತರಿದ್ದರು. 
    ಕಿರಿಯ ಪ್ರಬಂಧಕ(ಮಿಲ್ಸ್ ಮತ್ತು ಆರ್.ಟಿ.ಎಸ್) ಸಿ. ಲಕ್ಷ್ಮೀಕಾಂತ ಪ್ರಾರ್ಥಿಸಿದರು. ವಿಜಿಲೆನ್ಸ್ ಇಲಾಖೆಯ ಕೇದಾರನಾಥ್ ಸ್ವಾಗತಿಸಿ, ಸಹಾಯಕ ಮಹಾಪ್ರಬಂಧಕ ಎಲ್. ಕುತಲನಾಥನ್,  ಕಾರ್ಯಕ್ರಮ ನಿರೂಪಿಸಿ, ಚೇತನ್ ತಡ್ಕಲ್ ವಂದಿಸಿದರು.  

ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಸಹಕಾರ ಸಂಘಗಳು ಕೊಡುಗೆ ನೀಡಲಿ : ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ

ಭದ್ರಾವತಿ ಅಪ್ಪರ್ ಹುತ್ತಾ ಶ್ರೀ ಭರವೇಶ್ವರ ಪತ್ತಿನ ಸಹಕಾರ ಸಂಘದ ೨೫ನೇ ರಜತ ಮಹೋತ್ಸವ ವರ್ಷದ ಸಂಭ್ರಮಾಚರಣೆ ಸಮಾರಂಭ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. 
    ಭದ್ರಾವತಿ : ಸಹಕಾರ ಸಂಘಗಳು ಲಾಭದಾಯಕವಾಗಿ ಮುನ್ನಡೆಯುವ ಮೂಲಕ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ತಮ್ಮದೇ ಆದ ಕೊಡುಗೆಗಳನ್ನು ನೀಡುವಂತಾಗಬೇಕು ಎಂದು ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. 
    ಶ್ರೀಗಳು ನಗರದ ಅಪ್ಪರ್ ಹುತ್ತಾ ಶ್ರೀ ಭರವೇಶ್ವರ ಪತ್ತಿನ ಸಹಕಾರ ಸಂಘದ ೨೫ನೇ ರಜತ ಮಹೋತ್ಸವ ವರ್ಷದ ಸಂಭ್ರಮಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 
    ಈ ಹಿಂದೆ ಸಮಾಜದಲ್ಲಿ ವಿವಿಧ ಕ್ಷೇತ್ರಗಳ ಸಾಧನೆಯನ್ನು ಗುರುತಿಸಲಾಗುತ್ತಿತ್ತು. ಆದರೆ ಪ್ರಸ್ತುತ ಆರ್ಥಿಕ ಮಾನದಂಡವನ್ನು ಗುರುತಿಸಿ ಒಂದು ದೇಶದ ಸಾಧನೆಯನ್ನು ಪರಿಗಣಿಸಲಾಗುತ್ತಿದೆ. ಈ ದಾರಿಯಲ್ಲಿ ವಿಶ್ವದ ಆರ್ಥಿಕ ಸ್ಥಿತಿಯಲ್ಲಿ ನಮ್ಮ ದೇಶ ೫ನೇ ಸ್ಥಾನದಲ್ಲಿದೆ ಎಂಬುದು ತುಂಬಾ ಸಂತೋಷದ ವಿಚಾರವಾಗಿದೆ. ಮತ್ತೊಂದು ಕಡೆ ತಲಾ ಆದಾಯವನ್ನು ಗಮನಿಸಿದಾಗ ೧೩೩ನೇ ಸ್ಥಾನದಲ್ಲಿರುವುದು ವಿಪರ್ಯಾಸದ ಸಂಗತಿಯಾಗಿದೆ. ಪ್ರತಿಯೊಬ್ಬರು ಶ್ರಮವಹಿಸಿ ದೇಶದ ಆರ್ಥಿಕ ಬೆಳವಣಿಗೆಗೆ ಶ್ರಮಿಸಿದಾಗ ಕೆಲವೇ ವರ್ಷಗಳಲ್ಲಿ ಅಗ್ರ ಸ್ಥಾನಕ್ಕೆ ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ. ಪುನಃ ೧೭ನೇ ಶತಮಾನದ ವೈಭವ ಮರುಕಳುಹಿಸಲಿದೆ ಎಂದರು. 
    ಸಹಕಾರ ಸಂಘಗಳನ್ನು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು  ಅದರ ಏಳಿಗೆಗೆ ಶ್ರಮಿಸಬೇಕು. ಪ್ರತಿಯೊಬ್ಬರು ನ್ಯಾಯದ ದಾರಿಯಲ್ಲಿ ಲಾಭ ಗಳಿಸುವ ಚಿಂತನೆಯೊಂದಿಗೆ ಸಾಗಬೇಕು. ೨೫ ವರ್ಷಗಳನ್ನು ಪೂರೈಸಿರುವ ಸಂಘ ಶತಮಾನದ ಸಂಭ್ರಮ ಸಹ ಆಚರಿಸುವಂತಾಗಬೇಕೆಂದು ಶುಭ ಹಾರೈಸಿದರು. 
ವಿಐಎಸ್‌ಎಲ್ ಕಾರ್ಖಾನೆ ಉಳಿವಿಗೆ ಪ್ರಯತ್ನ ಮುಂದುವರಿಕೆ...
ಮೈಸೂರು ಮಹಾರಾಜರ ಕೊಡುಗೆಯಾಗಿರುವ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿಸಿ ಕೊಡುವ ನಿಟ್ಟಿನಲ್ಲಿ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಎಚ್.ಡಿ ಕುಮಾರಸ್ವಾಮಿ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಶ್ರೀ ಮಠದ ವತಿಯಿಂದ ಈಗಾಗಲೇ ಪ್ರಧಾನಿಮಂತ್ರಿಯವರನ್ನು ಸಹ ಭೇಟಿ ಮಾಡಿ ಚರ್ಚಿಸಲಾಗಿದೆ. ನಮ್ಮ ನಿರಂತರ ಪ್ರಯತ್ನದ ನಡುವೆ ಎಲ್ಲರ ಸಹಕಾರ ಅಗತ್ಯವಿದೆ. 
 - ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ 
    ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅಲ್ಲದೆ ವಿವಿಧ ಕ್ಷೇತ್ರಗಳ ೪ ಜನ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಬಿ.ಎಸ್ ಮಲ್ಲೇಶ್ ಅಧ್ಯಕ್ಷತೆ ವಹಿಸಿದ್ದರು. 
    ಶಿವಮೊಗ್ಗ ಶಾಖಾ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ, ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ವಿ. ರಾಜು,  ಸಹಕಾರ ಸಂಘಗಳ ಜಿಲ್ಲಾ ಉಪ ನಿಬಂಧಕ ನಾಗಭೂಷಣ ಕಲ್ಮನೆ, ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ಪ್ರತಿನಿಧಿ ಟಿ. ಧರ್ಮೇಶ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ, ಸಂಘದ ಪ್ರವರ್ತಕರಾದ ತಾಲೂಕು ಒಕ್ಕಲಿಗರ ಸಂಘದ ಹಾಲಿ ಮತ್ತು ಮಾಜಿ ಪೋಷಕರು, ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಮತ್ತು ನಿರ್ದೇಶಕರು  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಎಲ್. ದೇವರಾಜ್ ಸ್ವಾಗತಿಸಿದರು.