Wednesday, November 6, 2024

ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಸಹಕಾರ ಸಂಘಗಳು ಕೊಡುಗೆ ನೀಡಲಿ : ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ

ಭದ್ರಾವತಿ ಅಪ್ಪರ್ ಹುತ್ತಾ ಶ್ರೀ ಭರವೇಶ್ವರ ಪತ್ತಿನ ಸಹಕಾರ ಸಂಘದ ೨೫ನೇ ರಜತ ಮಹೋತ್ಸವ ವರ್ಷದ ಸಂಭ್ರಮಾಚರಣೆ ಸಮಾರಂಭ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಉದ್ಘಾಟಿಸಿದರು. 
    ಭದ್ರಾವತಿ : ಸಹಕಾರ ಸಂಘಗಳು ಲಾಭದಾಯಕವಾಗಿ ಮುನ್ನಡೆಯುವ ಮೂಲಕ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ತಮ್ಮದೇ ಆದ ಕೊಡುಗೆಗಳನ್ನು ನೀಡುವಂತಾಗಬೇಕು ಎಂದು ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. 
    ಶ್ರೀಗಳು ನಗರದ ಅಪ್ಪರ್ ಹುತ್ತಾ ಶ್ರೀ ಭರವೇಶ್ವರ ಪತ್ತಿನ ಸಹಕಾರ ಸಂಘದ ೨೫ನೇ ರಜತ ಮಹೋತ್ಸವ ವರ್ಷದ ಸಂಭ್ರಮಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 
    ಈ ಹಿಂದೆ ಸಮಾಜದಲ್ಲಿ ವಿವಿಧ ಕ್ಷೇತ್ರಗಳ ಸಾಧನೆಯನ್ನು ಗುರುತಿಸಲಾಗುತ್ತಿತ್ತು. ಆದರೆ ಪ್ರಸ್ತುತ ಆರ್ಥಿಕ ಮಾನದಂಡವನ್ನು ಗುರುತಿಸಿ ಒಂದು ದೇಶದ ಸಾಧನೆಯನ್ನು ಪರಿಗಣಿಸಲಾಗುತ್ತಿದೆ. ಈ ದಾರಿಯಲ್ಲಿ ವಿಶ್ವದ ಆರ್ಥಿಕ ಸ್ಥಿತಿಯಲ್ಲಿ ನಮ್ಮ ದೇಶ ೫ನೇ ಸ್ಥಾನದಲ್ಲಿದೆ ಎಂಬುದು ತುಂಬಾ ಸಂತೋಷದ ವಿಚಾರವಾಗಿದೆ. ಮತ್ತೊಂದು ಕಡೆ ತಲಾ ಆದಾಯವನ್ನು ಗಮನಿಸಿದಾಗ ೧೩೩ನೇ ಸ್ಥಾನದಲ್ಲಿರುವುದು ವಿಪರ್ಯಾಸದ ಸಂಗತಿಯಾಗಿದೆ. ಪ್ರತಿಯೊಬ್ಬರು ಶ್ರಮವಹಿಸಿ ದೇಶದ ಆರ್ಥಿಕ ಬೆಳವಣಿಗೆಗೆ ಶ್ರಮಿಸಿದಾಗ ಕೆಲವೇ ವರ್ಷಗಳಲ್ಲಿ ಅಗ್ರ ಸ್ಥಾನಕ್ಕೆ ತಲುಪುವುದರಲ್ಲಿ ಯಾವುದೇ ಅನುಮಾನವಿಲ್ಲ. ಪುನಃ ೧೭ನೇ ಶತಮಾನದ ವೈಭವ ಮರುಕಳುಹಿಸಲಿದೆ ಎಂದರು. 
    ಸಹಕಾರ ಸಂಘಗಳನ್ನು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು  ಅದರ ಏಳಿಗೆಗೆ ಶ್ರಮಿಸಬೇಕು. ಪ್ರತಿಯೊಬ್ಬರು ನ್ಯಾಯದ ದಾರಿಯಲ್ಲಿ ಲಾಭ ಗಳಿಸುವ ಚಿಂತನೆಯೊಂದಿಗೆ ಸಾಗಬೇಕು. ೨೫ ವರ್ಷಗಳನ್ನು ಪೂರೈಸಿರುವ ಸಂಘ ಶತಮಾನದ ಸಂಭ್ರಮ ಸಹ ಆಚರಿಸುವಂತಾಗಬೇಕೆಂದು ಶುಭ ಹಾರೈಸಿದರು. 
ವಿಐಎಸ್‌ಎಲ್ ಕಾರ್ಖಾನೆ ಉಳಿವಿಗೆ ಪ್ರಯತ್ನ ಮುಂದುವರಿಕೆ...
ಮೈಸೂರು ಮಹಾರಾಜರ ಕೊಡುಗೆಯಾಗಿರುವ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿಸಿ ಕೊಡುವ ನಿಟ್ಟಿನಲ್ಲಿ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಎಚ್.ಡಿ ಕುಮಾರಸ್ವಾಮಿ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಶ್ರೀ ಮಠದ ವತಿಯಿಂದ ಈಗಾಗಲೇ ಪ್ರಧಾನಿಮಂತ್ರಿಯವರನ್ನು ಸಹ ಭೇಟಿ ಮಾಡಿ ಚರ್ಚಿಸಲಾಗಿದೆ. ನಮ್ಮ ನಿರಂತರ ಪ್ರಯತ್ನದ ನಡುವೆ ಎಲ್ಲರ ಸಹಕಾರ ಅಗತ್ಯವಿದೆ. 
 - ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ 
    ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅಲ್ಲದೆ ವಿವಿಧ ಕ್ಷೇತ್ರಗಳ ೪ ಜನ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ಬಿ.ಎಸ್ ಮಲ್ಲೇಶ್ ಅಧ್ಯಕ್ಷತೆ ವಹಿಸಿದ್ದರು. 
    ಶಿವಮೊಗ್ಗ ಶಾಖಾ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ, ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ವಿ. ರಾಜು,  ಸಹಕಾರ ಸಂಘಗಳ ಜಿಲ್ಲಾ ಉಪ ನಿಬಂಧಕ ನಾಗಭೂಷಣ ಕಲ್ಮನೆ, ರಾಜ್ಯ ಒಕ್ಕಲಿಗರ ಸಂಘದ ಜಿಲ್ಲಾ ಪ್ರತಿನಿಧಿ ಟಿ. ಧರ್ಮೇಶ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ, ಸಂಘದ ಪ್ರವರ್ತಕರಾದ ತಾಲೂಕು ಒಕ್ಕಲಿಗರ ಸಂಘದ ಹಾಲಿ ಮತ್ತು ಮಾಜಿ ಪೋಷಕರು, ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಮತ್ತು ನಿರ್ದೇಶಕರು  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಎಲ್. ದೇವರಾಜ್ ಸ್ವಾಗತಿಸಿದರು. 

No comments:

Post a Comment