ಭದ್ರಾವತಿಯಲ್ಲಿ ಸೂಕ್ಷ್ಮ ಕಲಾಕೃತಿ ಮಾದರಿಗಳ ತಯಾರಿಕೆ ಕಲಾವಿದ ಎಸ್. ವರುಣ್ ಆಚಾರ್ ಕೈಚಳಕದಲ್ಲಿ ತಯಾರಾಗಿರುವ ಆಕರ್ಷಕವಾದ ಅಯೋಧ್ಯೆ ಭವ್ಯ ರಾಮಮಂದಿರ ಕಲಾಕೃತಿ ಮಾದರಿ.
ಭದ್ರಾವತಿ: ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಲೋಕಾರ್ಪಣೆ ಹಾಗು ಪ್ರಭು ಶ್ರೀರಾಮ ಚಂದ್ರನ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ದೇಶಾದ್ಯಂತ ವಿಭಿನ್ನ ಧಾರ್ಮಿಕ ಆಚರಣೆಗಳು ಜರುಗುತ್ತಿದ್ದು, ಈ ನಡುವೆ ಕಲಾ ಸಾಧಕರು ಪ್ರಭು ಶ್ರೀರಾಮ ಚಂದ್ರನಿಗಾಗಿ ತಮ್ಮಲ್ಲಿನ ಪ್ರತಿಭೆಗಳನ್ನು ಅನಾವರಣಗೊಳಿಸಿ ಸಮರ್ಪಿಸುತ್ತಿದ್ದಾರೆ. ಈ ಸಾಲಿನಲ್ಲಿ ಹಳೇನಗರದ ಎನ್‌ಎಸ್‌ಟಿ ರಸ್ತೆ ನಿವಾಸಿ ಎಸ್. ವರುಣ್ ಆಚಾರ್ ಸಹ ಒಬ್ಬರಾಗಿದ್ದಾರೆ.
ವರುಣ್ ಮೂಲತಃ ಸೂಕ್ಷ್ಮ ಕಲಾಕೃತಿ (ಮೈಕ್ರೋ ಆರ್ಟ್ಸ್) ಮಾದರಿ ತಯಾರಿಕೆ ಕಲಾವಿದರಾಗಿದ್ದು, ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಸಾಧಕರಾಗಿದ್ದಾರೆ. ಇದೀಗ ಪೆನ್ಸಿಲ್ ತುದಿಯಲ್ಲಿ ಆಯೋಧ್ಯೆ ಭವ್ಯ ರಾಮಮಂದಿರ ಮಾದರಿ ತಯಾರಿಕೆಯಲ್ಲಿ ಇವರ ಪ್ರತಿಭೆ ಅನಾವರಣಗೊಂಡಿದೆ. ೧.೯ ಸೆ.ಮೀ. ಅಳತೆಯ ಆಕರ್ಷಕವಾದ ಭವ್ಯ ರಾಮಮಂದಿರ ಮಾದರಿ ತಯಾರಿಸಲಾಗಿದ್ದು, ಮಂದಿರ, ಗೋಪುರಗಳು ಹಾಗು ಕೇಸರಿ ಧ್ವಜಕಂಬ ಒಳಗೊಂಡಿದೆ. ಇದನ್ನು ತಯಾರಿಸಲು ಸುಮಾರು ೪ ಗಂಟೆ ಸಮಯ ವ್ಯಯ ಮಾಡಿದ್ದಾರೆ.
ಪದವಿಧರರಾಗಿರುವ ವರುಣ್, ಸಿದ್ದರಾಜು-ಗಾಯಿತ್ರಿ ದಂಪತಿ ಪುತ್ರರಾಗಿದ್ದಾರೆ. ಖಾಸಗಿ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಬಿಡುವಿನ ಅವಧಿಯಲ್ಲಿ ಸೂಕ್ಷ್ಮ ಕಲಾಕೃತಿ ಮಾದರಿಗಳನ್ನು ತಯಾರಿಸುತ್ತಿದ್ದಾರೆ. ಸೀಮೆಸುಣ್ಣ, ಅಕ್ಕಿಕಾಳು, ಬೆಂಕಿಕಡ್ಡಿ, ಕಡಲೆ ಬೀಜ ಸೇರಿದಂತೆ ಇತ್ಯಾದಿ ವಸ್ತುಗಳಲ್ಲಿ ಸುಮಾರು ೩೦೦ಕ್ಕೂ ಹೆಚ್ಚು ಕಲಾಕೃತಿ ಮಾದರಿಗಳು ಇವರ ಕೈಚಳಕದಲ್ಲಿ ಅನಾವರಣಗೊಂಡಿವೆ.