Saturday, September 5, 2020

ಸಮಾಜ ಸರಿದಾರಿಯಲ್ಲಿ ಸಾಗಲು ಗುರುಗಳ ಕೊಡುಗೆ ಅನನ್ಯ : ಬಿ.ಕೆ ಸಂಗಮೇಶ್ವರ್

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಶಿವಮೊಗ್ಗ ಹಾಗು ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿ ವತಿಯಿಂದ ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ಜನ್ಮ ದಿನಾಚರಣೆ, ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.  
ಭದ್ರಾವತಿ, ಸೆ. ೫: ಪ್ರತಿಯೊಬ್ಬರ ಉಜ್ವಲ ಭವಿಷ್ಯ ರೂಪಿಸುವ ಶಕ್ತಿ ಗುರುಗಳಿಗಿದ್ದು, ಸಮಾಜಕ್ಕೆ ಅವರ ಕೊಡುಗೆ ಅನನ್ಯವಾಗಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
       ಅವರು ಶನಿವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಶಿವಮೊಗ್ಗ ಹಾಗು ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿ ವತಿಯಿಂದ ನಗರಸಭೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ಜನ್ಮ ದಿನಾಚರಣೆ, ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
     ಗುರುಗಳು ಇಲ್ಲದಿದ್ದಲ್ಲಿ ಸಮಾಜ ಸರಿದಾರಿಯಲ್ಲಿ ಸಾಗಲು ಸಾಧ್ಯವಿಲ್ಲ. ಅವರು ನಮ್ಮನ್ನು ಸನ್ಮಾರ್ಗದಲ್ಲಿ ಕರೆದೊಯ್ಯುವ ಬಹುದೊಡ್ಡ ಜವಾಬ್ದಾರಿ ಹೊಂದಿದ್ದಾರೆ. ನಾವುಗಳು ಭವಿಷ್ಯದಲ್ಲಿ ಏನಾದರೂ ಉನ್ನತಿ ಸಾಧಿಸಲು ಸಾಧ್ಯ ಎಂದರೆ ಅದು ಗುರುಗಳ ಮಾರ್ಗದರ್ಶನಿಂದ ಮಾತ್ರ ಈ ಹಿನ್ನಲೆಯಲ್ಲಿ ಗುರುಗಳನ್ನು ನೆನೆಪು ಮಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
      ಮಾಜಿ ರಾಷ್ಟ್ರಪತಿ, ಶಿಕ್ಷಣ ತಜ್ಞ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರು ಬಡತನದಲ್ಲಿ ಹುಟ್ಟಿ ಈ ದೇಶಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ನಾವೆಲ್ಲರೂ ಅವರ ಆದರ್ಶಗಳೊಂದಿಗೆ ಮುನ್ನಡೆಬೇಕಾಗಿದೆ. ಪ್ರಸ್ತುತ ಶಿಕ್ಷಕರು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದು, ಅವರ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸುವುದಾಗಿ ಭರವಸೆ ನೀಡಿದರು.
     ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಅಧ್ಯಕ್ಷ ಎನ್. ಕೃಷ್ಣಪ್ಪ ಮಾತನಾಡಿದರು. ತಾಲೂಕು ಪಂಚಾಯಿತಿ ಅಧ್ಯಕ್ಷೆ ಡಿ. ಲಕ್ಷ್ಮೀದೇವಿ, ಕಾರ್ಯನಿರ್ವಹಣಾಧಿಕಾರಿ ಡಾ. ಜಿ. ಮಂಜುನಾಥ್, ತಹಸೀಲ್ದಾರ್ ಎಚ್.ಸಿ ಶಿವಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್ ಬಸವರಾಜ್ ಮತ್ತು ಲಯನ್ಸ್ ಕ್ಲಬ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಸುಮಾರು ೩೬ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು.

ಜನರ ಸಂಕಷ್ಟಗಳಿಗೆ ಮಿಡಯುವ ಹೃದಯವಂತಿಕೆಯ ಜನಪ್ರತಿನಿಧಿ

ಎಂ.ಜೆ ಅಪ್ಪಾಜಿ ಸಂತಾಪ ಸೂಚಕ ಸಭೆಯಲ್ಲಿ ಕೆ.ಟಿ ಗಂಗಾಧರ್

ಭದ್ರಾವತಿ ಹಳೇನಗರದ ಪತ್ರಿಕಾಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ೩ ದಿನಗಳ ಹಿಂದೆ ನಿಧನ ಹೊಂದಿದ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಭದ್ರಾವತಿ, ಸೆ. ೫: ಜನರ ಸಂಕಷ್ಟಗಳಿಗೆ ಮಿಡಿಯುವ ಹೃದಯವಂತಿಕೆಯ ಗುಣ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಹೊಂದಿದ್ದರು. ಈ ಹಿನ್ನಲೆಯಲ್ಲಿ ಅವರು ಜನಾನುರಾಗಿಯಾಗಿ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಕೊಂಡಿದ್ದಾರೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ವರಿಷ್ಠ ಕೆ.ಟಿ ಗಂಗಾಧರ್ ಬಣ್ಣಿಸಿದರು.
    ಅವರು ಹಳೇನಗರದ ಪತ್ರಿಕಾಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಪ್ಪಾಜಿಯವರಿಗೆ ಶ್ರದ್ದಾಂಜಲಿ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
    ಜನಪ್ರತಿನಿಧಿಯಾಗಿ ಚುನಾಯಿತಗೊಂಡ ಅಪ್ಪಾಜಿಯವರು ಯಾವುದೇ ಪಕ್ಷಕ್ಕೆ ಅಂಟಿಕೊಳ್ಳದೆ, ಯಾರ ಹಿಡಿತಕ್ಕೂ ಒಳಗಾಗದೆ ಜನ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಅವರಲ್ಲಿನ ರೈತಪರ, ಕಾರ್ಮಿಕರಪರ, ಬಡವರಪರ ಕಾಳಜಿ, ಬದ್ಧತೆಗಳು, ವಿಧಾನಸಭೆಯಲ್ಲಿ ಅವರ ಚರ್ಚೆಗಳು ಎಲ್ಲವೂ ಮೆಚ್ಚುಗೆ ತರುತ್ತವೆ. ಅವರಲ್ಲಿ ಸಾಮಾಜವಾದಿ ಗುಣಗಳು ಕಂಡು ಬರುತ್ತಿದ್ದವು. ಈ ಹಿನ್ನಲೆಯಲ್ಲಿ ಅವರ ಅಗಲಿಕೆ ಸಮಾಜಕ್ಕೆ ತುಂಬಾ ನಷ್ಟವನ್ನುಂಟು ಮಾಡಿದೆ ಎಂದರು.
     ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಸರ್ಕಾರ ಸೋಂಕು ಹೆಚ್ಚಿನ ರೀತಿಯಲ್ಲಿ ಹರಡದಂತೆ ಎಚ್ಚರವಹಿಸಬೇಕು. ಈ ಸೋಂಕಿನಿಂದ ಬಡವರನ್ನು ರಕ್ಷಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.
       ಹಿರಿಯ ರೈತ ಮುಖಂಡ ಯಶವಂತರಾವ್ ಘೋರ್ಪಡೆ ಮಾತನಾಡಿದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ವಿ ವೀರೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
    ಸಂಘದ ತಾಲೂಕು ಶಾಖೆ ಅಧ್ಯಕ್ಷ ಎಚ್.ಪಿ ಹಿರಿಯಣ್ಣಯ್ಯ, ಪ್ರಧಾನ ಕಾರ್ಯದರ್ಶಿ ರಾಮಚಂದ್ರರಾವ್ ಘೋರ್ಪಡೆ, ರೈತ ಮುಖಂಡ  ಮಂಜಪ್ಪ ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಅಪ್ಪಾಜಿ ಕುಟುಂಬಕ್ಕೆ ಬಿ.ವೈ ರಾಘವೇಂದ್ರ ಸಾಂತ್ವಾನ

ಭದ್ರಾವತಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿವಾಸಕ್ಕೆ ಶನಿವಾರ ಸಂಸದ ಬಿ.ವೈ ರಾಘವೇಂದ್ರ ಭೇಟಿ ನೀಡಿ ಅಪ್ಪಾಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಭದ್ರಾವತಿ, ಸೆ. ೫: ಕಳೆದ ೩ ದಿನಗಳ ಹಿಂದೆ ನಿಧನ ಹೊಂದಿದ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿವಾಸಕ್ಕೆ ಸಂಸದ ಬಿ.ವೈ ರಾಘವೇಂದ್ರ ಶನಿವಾರ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಸಾಂತ್ವಾನ ಹೇಳಿದರು.
     ಅಪ್ಪಾಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಸಂಸದರು ಗೌರವ ಸೂಚಿಸಿದರು. ಶಾರದ ಅಪ್ಪಾಜಿ, ಪುತ್ರ ಎಂ.ಎ ಅಜಿತ್ ಹಾಗು ಕುಟುಂಬ ವರ್ಗದವರಿಗೆ ಸಾಂತ್ವಾನ ತಿಳಿಸಿದರು.
    ಸೂಡ ಅಧ್ಯಕ್ಷ ಜ್ಯೋತಿ ಪ್ರಕಾಶ್, ಮುಖಂಡರಾದ ಎಸ್. ದತ್ತಾತ್ರಿ, ವಿ. ಕದಿರೇಶ್, ಜಿ. ಆನಂದಕುಮಾರ್, ಮಂಗೋಟೆ ರುದ್ರೇಶ್, ಜಿ. ಧರ್ಮಪ್ರಸಾದ್, ಎಂ. ಪ್ರಭಾಕರ್, ಹನುಮಂತನಾಯ್ಕ, ಸಂತೋಷ್ ಬಳ್ಳೇಕೆರೆ, ಕಾಮತ್, ಮೋಹನ್, ಸುನಿಲ್‌ಗಾಯಕ್‌ವಾಡ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಅಪ್ಪಾಜಿ ಹೆಸರಿಡಿ : ಮನವಿ

ಭದ್ರಾವತಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಹೆಸರಿಡಲು ಒತ್ತಾಯಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಶನಿವಾರ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಸೆ. ೫: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಗರದ ಮುಖ್ಯ ಬಸ್ ನಿಲ್ದಾಣಕ್ಕೆ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಹೆಸರನ್ನು ನಾಮಕರಣ ಮಾಡುವಂತೆ ಒತ್ತಾಯಿಸಿ ಶನಿವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
       ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ೩೦ ವರ್ಷಗಳ ರಾಜಕೀಯ ಜೀವನದಲ್ಲಿ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡುವ ಮೂಲಕ ದೀನ ದಲಿತರ, ಬಡವರ ಆಶಾಕಿರಣವಾಗಿದ್ದ ಮಾಜಿ ಶಾಸಕ ಎಂ.ಜೆ ಅಪ್ಪಾಜಿಯವರ ನೆನಪು ಜನಮಾನಸದಲ್ಲಿ ಉಳಿದಿದ್ದು, ಅವರ ಸೇವೆಯನ್ನು ಸ್ಮರಿಸುವ ಮೂಲಕ ಅವರಿಗೆ ಗೌರವ ಸೂಚಿಸುವ ಹಿನ್ನಲೆಯಲ್ಲಿ ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣಕ್ಕೆ ಅವರ ಹೆಸರನ್ನು ನಾಮಕರಣ ಮಾಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
       ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಕಾರ್ಯಧ್ಯಕ್ಷ ಐ.ಎಲ್ ಅರುಣ್‌ಕುಮಾರ್, ಉಪಾಧ್ಯಕ್ಷರಾದ ಎಂ.ವಿ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಅಕ್ರಂಖಾನ್ , ಸಂಚಾಲಕರಾದ ಗಾಯಕ್‌ವಾಡ್, ಸುಬ್ಬೇಗೌಡ, ಸೀನಪ್ಪ, ಜೆಡಿಯು ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ, ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಶೆಟ್ಟಿ ಬಣ) ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.