Wednesday, May 27, 2020

ಅಕ್ಷರ ದಾಸೋಹ ಮಹಿಳೆಯರ ನೆರವಿಗೆ ಮುಂದಾಗಿ : ಸರ್ಕಾರಕ್ಕೆ ಮನವಿ

ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ತಾಲೂಕು ಶಾಖೆ ವತಿಯಿಂದ ನೆರವಿಗೆ ಮುಂದಾಗುವಂತೆ ಒತ್ತಾಯಿಸಿ ಭದ್ರಾವತಿಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಜೆ ತಮ್ಮಣ್ಣಗೌಡ ಮೂಲಕ ಮುಖ್ಯಮಂತ್ರಿಗಳಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಮೇ. ೨೭: ಕೊರೋನಾ ವೈರಸ್ ಪರಿಣಾಮ ಅಕ್ಷರ ದಾಸೋಹ ಯೋಜನೆಯಡಿ ದುಡಿಯುತ್ತಿರುವ ದುರ್ಬಲ ವರ್ಗದ ಮಹಿಳೆಯರು  ಸಂಕಷ್ಟಕ್ಕೆ ಒಳಗಾಗಿದ್ದು, ಸರ್ಕಾರ ಇವರ ನೆರವಿಗೆ ಮುಂದಾಗಬೇಕೆಂದು ಆಗ್ರಹಿಸಿ ಬುಧವಾರ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ತಾಲೂಕು ಶಾಖೆ ವತಿಯಿಂದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಜೆ ತಮ್ಮಣ್ಣಗೌಡ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಅಕ್ಷರ ದಾಸೋಹ ಯೋಜನೆಯಡಿ ದುರ್ಬಲ ವರ್ಗಕ್ಕೆ ಸೇರಿದ ಸುಮಾರು ೧.೧೮ ಲಕ್ಷ ಮಹಿಳೆಯರು ಹಲವಾರು ವರ್ಷಗಳಿಂದ ದುಡಿಯುತ್ತಿದ್ದು, ಈ ಪೈಕಿ ವಿಧವೆಯರು, ವಿಚ್ಛೇದಿತರು, ಕಡು ಬಡ ಕುಟುಂಬದ ಮಹಿಳೆಯರು ಹೆಚ್ಚಾಗಿದ್ದಾರೆ.  ಬೇಸಿಗೆ ದಿನಗಳಲ್ಲಿ, ಬರಗಾಲದ ಸಂದರ್ಭಗಳಲ್ಲೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೊರೋನಾ ವೈರಸ್ ಪರಿಣಾಮ ಪ್ರಸ್ತುತ ಎದುರಾಗಿರುವ ಸಂದಿಗ್ದ ಪರಿಸ್ಥಿತಿಯಲ್ಲೂ ಅಕ್ಷರ ದಾಸೋಹ ಯೋಜನೆಯ ಆಹಾರ ಧಾನ್ಯಗಳನ್ನು ಮಕ್ಕಳ ಮನೆಗಳಿಗೆ ತಲುಪಿಸುತ್ತಿದ್ದಾರೆ. ಆದರೆ ಈ ಮಹಿಳೆಯರಿಗೆ ಸರ್ಕಾರದ ಯಾವುದೇ ಸೌಲಭ್ಯಗಳು ಲಭಿಸದೆ ವಂಚಿತರಾಗಿದ್ದಾರೆಂದು ಅಳಲು ವ್ಯಕ್ತಪಡಿಸಲಾಗಿದೆ. 
ಸರ್ಕಾರ ತಕ್ಷಣ ಏಪ್ರಿಲ್ ತಿಂಗಳಿನಿಂದ ಪುನಃ ಶಾಲೆಗಳು ಪ್ರಾರಂಭವಾಗುವವರೆಗೂ ಈ ಮಹಿಳೆಯರ ಜೀವನ ನಿರ್ವಹಣೆಗೆ ಸಂಪೂರ್ಣ ವೇತನ ನೀಡುವುದು. ಎಲ್‌ಐಸಿ ಆಧಾರಿತ ಪೆನ್ಷನ್ ನೀಡುವುದು, ಖಾಯಂ ಗೊಳಿಸುವುದು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರವೇಶ ಶುಲ್ಕ ಮತ್ತು ಇತರೆ ಶುಲ್ಕಗಳಿಂದ ಸಂಪೂರ್ಣ ವಿನಾಯಿತಿ ನೀಡುವುದು ಹಾಗೂ ಉಚಿತ ಆರೋಗ್ಯ ಸೌಲಭ್ಯ ಕಲ್ಪಿಸಿಕೊಡುವಂತೆ ಒತ್ತಾಯಿಸಲಾಗಿದೆ.
ಅಧ್ಯಕ್ಷೆ ಹನುಮಮ್ಮ, ಕಾರ್ಯದರ್ಶಿ ಬಿ. ಸರಸ್ವತಿ, ಪದಾಧಿಕಾರಿಗಳಾದ ಪಿ. ಶೆಲ್ವಿ, ಶಶಿಕಲಾ, ಜಯಲಕ್ಷ್ಮಿ, ಅನುಸೂಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.