Wednesday, November 3, 2021

ನಡವಳಿಕೆಗಳು, ಸೇವಾ ಕಾರ್ಯಗಳು ನಮ್ಮನ್ನು ಗುರುತಿಸುವಂತೆ ಮಾಡುತ್ತವೆ : ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ

ಭದ್ರಾವತಿ ಬಿಳಕಿ ಹಿರೇಮಠದಲ್ಲಿ ಶ್ರೀ ಗುರುಸಿದ್ದ ಶಿವಾಚಾರ್ಯ ಸ್ವಾಮೀಜಿ ಹಾಗು ಶ್ರೀ ರಾಚೋಟಿ ಶಿವಾಚಾರ್ಯ ಸ್ವಾಮೀಜಿಯವರ ೫೪ನೇ ವರ್ಷದ ಪುಣ್ಯ ಸ್ಮರಣೋತ್ಸವ ಮತ್ತು ಕುಪ್ಪೂರು ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗು ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಶ್ರದ್ದಾಂಜಲಿ ಹಾಗು ಜಿಲ್ಲಾ ವೀರಶೈವ ಮಠಾಧೀಶರ ಪರಿಷತ್ ಸಭೆ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ನ. ೩: ಸಮಾಜದಲ್ಲಿ ನಮ್ಮ ನಡವಳಿಕೆಗಳು, ಮಾಡುವ ಸೇವಾ ಕಾರ್ಯಗಳು ನಮಗೆ ಅರಿವಿಲ್ಲದಂತೆ ನಮ್ಮನ್ನು ಸಮಾಜ ಗುರುತಿಸುವಂತೆ ಮಾಡುತ್ತವೆ ಎಂದು ಆನಂದಪುರಂ ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
    ಶ್ರೀಗಳು ತಾಲೂಕಿನ ಬಿಳಕಿ ಹಿರೇಮಠದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಗುರುಸಿದ್ದ ಶಿವಾಚಾರ್ಯ ಸ್ವಾಮೀಜಿ ಹಾಗು ಶ್ರೀ ರಾಚೋಟಿ ಶಿವಾಚಾರ್ಯ ಸ್ವಾಮೀಜಿಯವರ ೫೪ನೇ ವರ್ಷದ ಪುಣ್ಯ ಸ್ಮರಣೋತ್ಸವ ಮತ್ತು ಕುಪ್ಪೂರು ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗು ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಶ್ರದ್ದಾಂಜಲಿ ಹಾಗು ಜಿಲ್ಲಾ ವೀರಶೈವ ಮಠಾಧೀಶರ ಪರಿಷತ್ ಸಭೆಯ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
    ಪುನೀತ್ ರಾಜ್‌ಕುಮಾರ್‌ರವರು ಕೇವಲ ಚಿತ್ರನಟರಾಗಿ ಉಳಿಯದೆ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅಲ್ಲದೆ ವೈಯಕ್ತಿಕವಾಗಿ ಉತ್ತಮ ನಡವಳಿಕೆಗಳನ್ನು ಮೈಗೂಡಿಸಿಕೊಂಡಿದ್ದರು. ಜೊತೆಯಲ್ಲಿ ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಅವರನ್ನು ಇಂದು ಎಲ್ಲರೂ ಸ್ಮರಿಸುತ್ತಾರೆ ಎಂದರು.
ಕುಪ್ಪೂರು ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ನಿಧನ ಸಹ ಧಾರ್ಮಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದ್ದು, ಶ್ರೀಗಳ ಸಮಾಜಮುಖಿ ಕಾರ್ಯಗಳು ಎಲ್ಲರಿಗೂ ಪ್ರೇರಣೆಯಾಗಿವೆ ಎಂದರು.
    ಶಿವಮೊಗ್ಗ ಜಿಲ್ಲಾ ಮಲೆನಾಡು ವೀರಶೈವ ಲಿಂಗಾಯಿತ ಮಠಾಧೀಶರ ಪರಿಷತ್ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕವಾಗಿ ಮಾರ್ಗದರ್ಶನ ನೀಡುವ ಜೊತೆಗೆ ಸಮಾಜ ಸೇವೆ ಮಾಡುವ ಗುರಿ ಹೊಂದಿ ಕಾರ್ಯ ನಿರ್ವಹಿಸುತ್ತಿದೆ. ಈ ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಲೆನಾಡಿನ ಸಮಗ್ರ ಅಭಿವೃದ್ಧಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ ಪರಿಣಾಮ ಮಲೆನಾಡು ಅಭಿವೃಧ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬರುವ ಜೊತೆಗೆ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಪ್ರಸ್ತುತ ಪರಿಷತ್ತಿನಲ್ಲಿ ೨೯ ಶಿವಾಚಾರ್ಯರು ಸದಸ್ಯತ್ವ ಹೊಂದಿದ್ದು, ಮುಂದೆ ಸಹ ಪರಿಷತ್ ಇನ್ನೂ ಹೆಚ್ಚಿನ ರೀತಿಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಲಿದೆ ಎಂದರು.
    ಬಿಳಕಿ ಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಪರಿಷತ್‌ನಲ್ಲಿ ಕ್ರಿಯಾಶೀಲರಾಗಿರುವುದರ ಜೊತೆಗೆ ಮಠದ ಅಭಿವೃಧ್ಧಿಗೆ ಕಾರಣಕರ್ತರಾಗಿದ್ದಾರೆ. ಮಠಮಾನ್ಯಗಳು ಸಮಾಜದಲ್ಲಿ ಉತ್ತಮ ಕಾರ್ಯಗಳು ನಡೆಯಲು ವೇದಿಕೆಯಾಗಿವೆ ಎಂದರು.
    ನಗರಸಭೆ ನೂತನ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಸದಸ್ಯರಾದ ಬಿ.ಕೆ  ಮೋಹನ್, ಅನುಪಮ ಚನ್ನೇಶ್ ಮತ್ತು ಬಿ.ಎಂ ಮಂಜುನಾಥ್ ಹಾಗು ತಾಲೂಕು ವಕೀಲರ ಸಂಘದ ನೂತನ ಅಧ್ಯಕ್ಷ ಕೆ.ಎನ್ ಶ್ರೀಹರ್ಷ, ಉಪಾಧ್ಯಕ್ಷ ಡಿ.ಎಂ.ವಿಶ್ವನಾಥ್, ಕಾರ್ಯದರ್ಶಿ ಉದಯ ಕುಮಾರ್, ಸಹ ಕಾರ್ಯದರ್ಶಿ ಮಂಜಪ್ಪ ಹಾಗು ಕಥಾ ಬಿಂದು ಸೌರಭ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತ ಸಿದ್ದಲಿಂಗಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಎಡೆಯೂರು ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ಹುಣಸಘಟ್ಟ ಹಾಲಸ್ವಾಮಿಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಶಿವಮೊಗ್ಗ ಬಸವಕೇಂದ್ರದ ಡಾ. ಬಸವ ಮರುಳಸಿದ್ದ ಸ್ವಾಮೀಜಿ, ತಾವರೆಕೆರೆ ಶಿಲಾಮಠದ ಡಾ. ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಮಠಾಧೀಶರು, ಬಿಳಕಿ ಮಠದ ಗೌರವಾಧ್ಯಕ್ಷ ಟಿ.ವಿ ಈಶ್ವರಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಕೊರೋನಾ ಲಸಿಕೆ ೨ನೇ ಡೋಸ್ ಕಡ್ಡಾಯವಾಗಿ ಪಡೆಯಿರಿ : ಎಂ.ಎಲ್ ವೈಶಾಲಿ


ಭದ್ರಾವತಿ ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ೭೫ನೇ ಸ್ವಾತಂತ್ರ್ಯೋತ್ಸವದ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸ್ವಚ್ಛ ಭಾರತ ಮಿಷನ್(ಗ್ರಾಮೀಣ), ಯುನಿಸೆಫ್ ಹಾಗೂ ಆರೋಗ್ಯ ನಿರ್ವಹಣಾ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿವಿಧ ಕಾರ್ಯಕ್ರಮದ ಅಂಗವಾಗಿ ಗ್ರಾಮದಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.  
    ಭದ್ರಾವತಿ, ನ. ೩: ಗ್ರಾಮಗಳಲ್ಲಿ ಕೊರೋನಾ ಸೋಂಕು ಸಂಪೂರ್ಣವಾಗಿ ನಿರ್ಮೂಲನೆಯಾಗಬೇಕಾದರೆ ಪ್ರತಿಯೊಬ್ಬರು ಕೋವಿಡ್-೧೯ ಲಸಿಕೆಯ ೨ನೇ ಡೋಸ್ ಕಡ್ಡಾಯವಾಗಿ ಪಡೆಯುವ ಜೊತೆಗೆ ಹೆಚ್ಚಿನ ಜಾಗೃತಿ ವಹಿಸಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್ ವೈಶಾಲಿ ಕರೆ ನೀಡಿದರು.
    ಅವರು  ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ೭೫ನೇ ಸ್ವಾತಂತ್ರ್ಯೋತ್ಸವದ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸ್ವಚ್ಛ ಭಾರತ ಮಿಷನ್(ಗ್ರಾಮೀಣ), ಯುನಿಸೆಫ್ ಹಾಗೂ ಆರೋಗ್ಯ ನಿರ್ವಹಣಾ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮಾತನಾಡಿದರು.
    ಗ್ರಾಮಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಮೊದಲ ಡೋಸ್ ನೀಡುವಲ್ಲಿ ಗುರಿ ಸಾಧಿಸಲಾಗಿದೆ. ಆದರೆ ೨ನೇ ಡೋಸ್ ನೀಡುವಲ್ಲಿ ಹಲವಾರು ಕಾರಣಗಳಿಂದ ಹಿನ್ನಡೆಯಾಗುತ್ತಿದ್ದು, ಪ್ರತಿಯೊಬ್ಬರು ಕಡ್ಡಾಯವಾಗಿ ೨ನೇ ಡೋಸ್ ಪಡೆದುಕೊಳ್ಳಲು ಆಸಕ್ತಿ ಹೊಂದಬೇಕು. ಜೊತೆಗೆ ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಸೇರಿದಂತೆ ಮುನ್ನಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕೆಂದರು.
ಸ್ವಾತಂತ್ರ್ಯೋತ್ಸವದ ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಗ್ರಾಮ ಪಂಚಾಯಿತಿಗಳಿಗೆ ೨೫ ಲಕ್ಷ ರು. ಬಹುಮಾನ ನೀಡುವ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಬೀದಿ ದೀಪ ನಿರ್ವಹಣೆ, ಕುಡಿಯುವ ನೀರು ಪೂರೈಕೆ, ತ್ಯಾಜ್ಯ ವಿಲೇವಾರಿ, ಸೌರ ಶಕ್ತಿ ಬಳಕೆ, ಡಿಜಿಟಲ್ ಗ್ರಂಥಾಲಯ ಸೌಲಭ್ಯ ಮಾರ್ಚ್ ಅಂತ್ಯದೊಳಗೆ ಸಮರ್ಪಕವಾಗಿ ಕೈಗೊಂಡಲ್ಲಿ ಬಹುಮಾನ ಮೊತ್ತ ಒಲಿದು ಬರಲಿದೆ. ಈ ಹಿನ್ನಲೆಯಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಈ ಬಗ್ಗೆ ಗಮನ ಹರಿಸಬೇಕೆಂದರು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಬಿ.ಕೆ ಸಂಗಮೇಶ್ವರ್, ಗ್ರಾಮಸ್ಥರು ಸ್ವಚ್ಛತೆ ಹಾಗು ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಸರ್ಕಾರದ ಸೌಲರ್ಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಗ್ರಮ ಪಂಚಾಯಿತಿ ಆಡಳಿತ ಸರ್ಕಾರದ ವಿವಿಧ ಅನುದಾನಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಗ್ರಾಮದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕೆಂದು ಕರೆ ನೀಡಿದರು.
    ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್ ಮಾತನಾಡಿದರು. ದೊಣಬಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಖಲೀಸ್ ಸಾಬ್ ಅಧ್ಯಕ್ಷತೆ ವಹಿಸಿದ್ದರು.  
    ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಉಪಾಧ್ಯಕ್ಷೆ ಹಾಲಮ್ಮ, ಕಾರ್ಯದರ್ಶಿ ಗೌರಮ್ಮ, ಅಭಿವೃದ್ಧಿ ಅಧಿಕಾರಿ ಎನ್. ರಾಜಪ್ಪ, ಯುನಿಸೆಫ್ ಮುಖ್ಯಸ್ಥೆ ಸೌಮಿನಿ, ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್‌ಬಾಬು, ತಾಲೂಕು ಅಧ್ಯಕ್ಷ ಚಂದ್ರಶೇಖರ್, ತಾಂತ್ರಿಕ ಸಲಹೆಗಾರ ಮನೋಹರ್, ತಾಲೂಕು ಕಾರ್ಯಾಧ್ಯಕ್ಷ ಅಭಿಲಾಷ್ ಹಾಗು ಗ್ರಾಮ ಪಂಚಾಯಿತಿ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಇದಕ್ಕೂ ಮೊದಲು ಜಾಮೀಯಾ ಮಸೀದಿ ಸರ್ಕಲ್‌ನಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದ ವರೆಗೂ ಜಾಗೃತಿ ಜಾಥಾ ನಡೆಸಲಾಯಿತು.



ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ೭೫ನೇ ಸ್ವಾತಂತ್ರ್ಯೋತ್ಸವದ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸ್ವಚ್ಛ ಭಾರತ ಮಿಷನ್(ಗ್ರಾಮೀಣ), ಯುನಿಸೆಫ್ ಹಾಗೂ ಆರೋಗ್ಯ ನಿರ್ವಹಣಾ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿವಿಧ ಕಾರ್ಯಕ್ರಮಗಳನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.