Tuesday, November 5, 2024

ಕಲ್ಲಹಳ್ಳಿ ಗ್ರಾಮದಲ್ಲಿ ಬಳಸೊಕೆರೆ ಒತ್ತುವರಿ ಕಾರ್ಯಾಚರಣೆ

ಭದ್ರಾವತಿ ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿರುವ ಸರ್ವೆ ನಂ.೩೯ರ ಬಳಸೊಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಮಂಗಳವಾರ ನಡೆಯಿತು.
    ಭದ್ರಾವತಿ: ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿರುವ ಸರ್ವೆ ನಂ.೩೯ರ ಬಳಸೊಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಮಂಗಳವಾರ ನಡೆಯಿತು.
    ಸರ್ಕಾರದ ಆದೇಶದಂತೆ ಸುಮಾರು ೧೦ ಎಕರೆ ವಿಸ್ತೀರ್ಣ ಹೊಂದಿರುವ ಬಳಸೊಕೆರೆ ತೆರವು ಕಾರ್ಯಾಚರಣೆ ಗ್ರಾಮ ಪಂಚಾಯಿತಿ ಆಡಳಿತ ಪೊಲೀಸರ ನೆರವಿನೊಂದಿಗೆ ಕೈಗೊಂಡಿತು. ತಾಲೂಕಿನ ಬಹುತೇಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇನ್ನೂ ಬಹಳಷ್ಟು ಕೆರೆಗಳು ಒತ್ತುವರಿಗೊಂಡಿದ್ದು, ತೆರವು ಕಾರ್ಯಾಚರಣೆ ಕೈಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಆಯಾ ಗ್ರಾಮ ಪಂಚಾಯಿತಿಗಳು ಹೆಚ್ಚಿನ ಆಸಕ್ತಿವಹಿಸಬೇಕಾಗಿದೆ. 
    ಕಾರ್ಯಾಚರಣೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ. ಆನಂದ, ಉಪಾಧ್ಯಕ್ಷ ಕೆ.ವಿ ಧನಂಜಯ(ಧಾನು), ಸದಸ್ಯ ಉಮೇಶ್, ಕಾರ್ಯದರ್ಶಿ ಸವಿತ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 

ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಕರ್ನಾಟಕ ರಾಜ್ಯೋತ್ಸವ

ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಈ ಬಾರಿ ಸಹ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. 
    ಭದ್ರಾವತಿ: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಈ ಬಾರಿ ಸಹ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. 
    ಕಾರ್ಖಾನೆ ಆವರಣದಲ್ಲಿರುವ ಆಡಳಿತ ಕಛೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಲಾಯಿತು. ನಂತರ ಎಚ್. ಪ್ರೇಮಬಾಯಿ, ಎನ್. ಗಿರಿಜ, ಯು. ರಮ್ಯ, ಕುಸುಮ, ಮಂಜುನಾಥ್, ಎನ್. ಆಶಾ, ಕೆ. ಲಕ್ಷ್ಮಣ್, ಜಿ. ರವಿಕುಮಾರ್, ಕೆ.ಡಿ ರಕ್ಷಿತ, ಎಸ್.ಎನ್ ಮಂಜುಶ್ರೀ, ಉನ್ನಿಕೃಷ್ಣನ್, ಎ.ಜೆ ಫ್ರಾನ್ಸಿಸ್, ತ್ರಿವೇಣಿ, ಎಂ.ಪಿ ನಾಗೇಂದ್ರಪ್ಪ,  ಡಿ. ಯೋಗೇಶ್ವರಿ, ಜಗದೀಶ್, ಬಿ.ಎಲ್ ಚಂದ್ವಾನಿ, ಎಲ್. ಪ್ರವೀಣ್ ಕುಮಾರ್ ಸೇರಿದಂತೆ ಕಾರ್ಖಾನೆ ಅಧಿಕಾರಿಗಳು, ನೌಕರರು ಕನ್ನಡ ನಾಡು, ನುಡಿಗೆ ಸಂಬಂಧಿಸಿದ ಹಾಡುಗಳನ್ನು ಹಾಡುವ ಮೂಲಕ ಸಂಭ್ರಮಿಸಿದರು.
    ಕಾರ್ಯಪಾಲಕ ನಿರ್ದೇಶಕ ಬಿ.ಎಲ್. ಚಂದ್ವಾನಿ, ಮುಖ್ಯ ಮಹಾಪ್ರಬಂಧಕ (ವರ್ಕ್ಸ್), ಕೆ.ಎಸ್. ಸುರೇಶ್, ಮಹಾಪ್ರಬಂಧಕರು (ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್, ವಿಐಎಸ್‌ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್, ವಿಐಎಸ್‌ಎಲ್ ಅಧಿಕಾರಿಗಳ ಸಂಘದ ಅಧ್ಯಕ್ಷ್ಷ ಪಾರ್ಥಸಾರಥಿ ಮಿಶ್ರಾ,  ಮಹಾಪ್ರಬಂಧಕ(ಪರಿಸರ ನಿರ್ವಹಣಾ ವಿಭಾಗ) ಎಂ. ಸುಬ್ಬರಾವ್,  ಮಹಾಪ್ರಬಂಧಕರು (ಹಣಕಾಸು) ಶೋಭ ಶಿವಶಂಕರನ್, ಮಹಾಪ್ರಬಂಧಕರು(ಮಾರುಕಟ್ಟೆ) ಹರಿಕೃಷ್ಣ ಗುಡೆ, ಕಾರ್ಮಿಕ ಸಂಘ ಮತ್ತು ಅಧಿಕಾರಿಗಳ ಸಂಘದ ಪದಾದಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರುಗಳು, ಹಿರಿಯ ಅಧಿಕಾರಿಗಳು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಪಾಲ್ಗೊಂಡಿದ್ದರು. ಉಪ ಪ್ರಬಂಧಕರು (ಹೆಚ್.ಆರ್) ಕೆ.ಎಸ್. ಶೋಭ ನಿರೂಪಿಸಿದರು. ನಾಡಿನ ಪರಂಪರೆ ಹಾಗು ಸಾಧಕರ ಸಾಧನೆಗಳನ್ನು ಸಂಕ್ಷಿಪ್ತವಾಗಿ ವಿವರಿಸಲಾಯಿತು. 

ಭೈರಾಪುರ ಕಿರು ಅರಣ್ಯದಲ್ಲಿ ಅಕ್ರಮ ಮಣ್ಣು ಗಣಿಗಾರಿಕೆ : ದಾಳಿ

ಆರೋಪಿ ವಿರುದ್ಧ ಕಾನೂನು ಕ್ರಮ : ಎಂ.ವಿ ಆಶೀಶ್ ರೆಡ್ಡಿ

ಆಶೀಶ್ ರೆಡ್ಡಿ
    ಭದ್ರಾವತಿ: ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಎನ್.ಆರ್ ಪುರ ತಾಲೂಕಿನ ಭೈರಾಪುರ ಸರ್ವೆ ನಂ.೪೪, ಭೈರಾಪುರ ಕಿರು ಅರಣ್ಯದ ೩ ಎಕರೆ ೭ ಗುಂಟೆ ಒತ್ತುವರಿ ಪ್ರದೇಶದಲ್ಲಿ ಅಕ್ರಮವಾಗಿ ಗಣಿಗಾರಿಕೆಯಿಂದ ಇಟ್ಟಿಗೆ ತಯಾರಿಸಿ ಮಾರಾಟ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ವಿ ಆಶೀಶ್ ರೆಡ್ಡಿ ತಿಳಿಸಿದರು. 
    ಈ ಕುರಿತು ಮಂಗಳವಾರ ಮಾಹಿತಿ ನೀಡಿದ ಅವರು, ಭದ್ರಾವತಿ ಅರಣ್ಯ ವಿಭಾಗ, ಎನ್.ಆರ್‌ಮರ ತಾಲೂಕು ಭೈರಾಪುರ ಸರ್ವೆ ನಂ.೪೪ ಭೈರಾಪುರ ಕಿರು ಅರಣ್ಯದಲ್ಲಿ ಚಿತ್ರಪ್ಪ ಯರಬಾಳು ಎಂಬುವರು ೩ ಎಕರೆ ೭ ಗುಂಟೆ ಒತ್ತುವರಿ ಮಾಡಿ ಅಕ್ರಮವಾಗಿ ಮಣ್ಣು ಗಣಿಗಾರಿಕೆಯಿಂದ ಇಟ್ಟಿಗೆ ತಯಾರಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ದೂರಿನ ಮೇರೆಗೆ ಸ್ಥಳ ತನಿಖೆ ಮಾಡಲಾಗಿ ದೂರು ಸತ್ಯವಾಗಿರುವುದು ಕಂಡು ಬಂದಿರುತ್ತದೆ ಈ ಒತ್ತುವರಿ ಪ್ರದೇಶ ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಅಲ್ಲದೆ ಪರಿಸರ ಸೂಕ್ಷ್ಮ ವಲಯದ ಒಳಗೆ ಬರುತ್ತದೆ. ಈ ಹಿನ್ನಲೆಯಲ್ಲಿ ಅ.೨೮ ರಂದು ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಲಾಗಿರುತ್ತದೆ ಎಂದರು. 
    ಈ ಒತ್ತುವರಿ ಪ್ರದೇಶದಿಂದ ೨ ಟ್ರ್ಯಾಕ್ಟರ್ ಲೋಡ್ ಇಟ್ಟಿಗೆ ವಲಯ ಕಛೇರಿ ಆವರಣಕ್ಕೆ ಸಾಗಿಸಿ ಉಳಿದ ಸುಮಾರು ೧೦ ಟ್ರ್ಯಾಕ್ಟರ್ ಲೋಡ್ ಇಟ್ಟಿಗೆ  ಸ್ಥಳದಲ್ಲಿಯೇ ಮಹಜರ್ ನಡೆಸಿ ಸರ್ಕಾರದ ಪರವಾಗಿ ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ. ಈ ಇಟ್ಟಿಗೆ ನಿಯಾಮಾನುಸಾ ವಿಲೇಗೊಳಿಸಲು ನ್ಯಾಯಲಯದ ಅನುಮತಿ ಪಡೆದುಕೊಳ್ಳಲಾಗಿರುತ್ತದೆ ಎಂದರು. 


ಗೂಗಲ್ ಮ್ಯಾಪ್ ಸರ್ವೆ ಮೂಲಕ ಒತ್ತುವರಿ ಗುರುತಿಸಿರುವುದು. 
    ಸುಮಾರು ೧ ರಿಂದ ೨ ವರ್ಷ ಒತ್ತುವರಿ ಪ್ರದೇಶದಲ್ಲಿ ಅಕ್ರಮವಾಗಿ ಗಣಿಗಾರಿಕೆಯಿಂದ ಮಣ್ಣನ್ನು ತೆಗೆದು ಇಟ್ಟಿಗೆಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವುದು ಕಂಡುಬಂದಿರುತ್ತದೆ. ಅಲ್ಲದೆ ಯಾವುದೆ ಪರವಾನಿಗೆ ಇಲ್ಲದೆ ಸರ್ಕಾರಕ್ಕೆ ಯಾವುದೇ ರಾಜಸ್ವ ಪಾವತಿಸದೆ ಗಣಿಗಾರಿಗೆ ಚಟುವಟಿಕೆ ನಡೆಸಿರುವುದು ಸಹ ವಿಚಾರಣೆ ತಿಳಿದು ಬಂದಿರುತ್ತದೆ.  ಇದರಿಂದ ಪರಿಸರಕ್ಕೆ ಹಾನಿಯಾಗಿರುವುದಲ್ಲದೇ ಸರ್ಕಾರಕ್ಕೆ ಲಕ್ಷಾಂತರ ರು. ನಷ್ಟವಾಗಿರುತ್ತದೆ ಎಂದು ದೂರಿದರು. 
    ಈ ಪ್ರಕರಣದ ಕುರಿತು ವಿಚಾರಣೆಗಾಗಿ ನ.೪ ರಂದು ವಲಯ ಕಛೇರಿಗೆ ಹಾಜರಾಗಲು ನೋಟಿಸ್ ನೀಡಲಾಗಿರುತ್ತದೆ. ಈ ಪ್ರಕರಣದಲ್ಲಿ ಆರೋಪಿ ಚಿತ್ರಪ್ಪ ಯರಬಾಳು ದೂರುತ್ತಿರುವ ಹಾಗೆ ಅವರ ತಂದೆಯ ಮೇಲೆ ಇಲಾಖಾ ಸಿಬ್ಬಂದಿಗಳು ಹಲ್ಲೆ ಅಥವಾ ಜಾತಿ ನಿಂದನೆ ಮಾಡಿರುವುದಿಲ್ಲ. ವಾಸ್ತವಾಗಿ ಅ.೨೮ ರಂದು ಸ್ಥಳ ತನಿಖೆ ಸಂದರ್ಭದಲ್ಲಿ ಆರೋಪಿತರ ಕಡೆಯವರು ಇಲಾಖಾ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ. ಇದರ ವೀಡಿಯೋ ಚಿತ್ರಿಕರಣ ಲಭ್ಯವಿರುತ್ತದೆ ಎಂದರು. 
    ಭೈರಾಪುರ ಸ.ನಂ.೪೪, ಭೈರಾಪುರ ಕಿರು ಅರಣ್ಯದಲ್ಲಿ ಬೂವಣ್ಣ ಎಂಬುವರ ಮತ್ತೊಂದು ಪ್ರಕರಣದಲ್ಲಿ ಅರಣ್ಯ ಒತ್ತುವರಿಯನ್ನು ಭೂಕಬಳಿಕೆ ವಿಶೇಷ ನ್ಯಾಯಲಯದ ತೀರ್ಪಿನಂತೆ ತೆರವುಗೊಳಿಸಿ ಇಲಾಖಾ ಸುಪರ್ದಿಗೆ ತೆಗೆದುಕೊಳ್ಳಲಾಗಿರುತ್ತದೆ. ಅಲ್ಲದೆ ಆರೋಪಿ ಅರಣ್ಯ ಒತ್ತುವರಿಯ ವಿರುದ್ಧ ೬೪ ಏ ನಡಾವಳಿಯ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಮತ್ತು ನ್ಯಾಯಲಯದಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು. 

ಉಪವಲಯ ಅರಣ್ಯಾಧಿಕಾರಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಿ : ಜಿ.ಪಂ ಸಿಇಓ ಪತ್ರ



ಶಿವಮೊಗ್ಗ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಬರೆದಿರುವ ಪತ್ರ. 
    ಭದ್ರಾವತಿ : ಶಿವಮೊಗ್ಗ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ದೋಷಾರೋಪಣ ಪಟ್ಟಿ ಆಧಾರದ ಮೇಲೆ  ಉಪವಲಯ ಅರಣ್ಯಾಧಿಕಾರಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಪತ್ರ ಬರೆದು ಕೋರಿದ್ದಾರೆ. 
    ಉಪವಲಯ ಅರಣ್ಯಾಧಿಕಾರಿ ಸಂತೋಷ್ ರಾಠೋಡ್‌ರವರಿಗೆ ವಲಯ ಅರಣ್ಯಾಧಿಕಾರಿ ಪ್ರಭಾರ ನೀಡಿದ್ದ ಸಂದರ್ಭದಲ್ಲಿ ಜಿ.ಪಂ ವ್ಯಾಪ್ತಿಯ ವಿವಿಧ ನರ್ಸರಿ/ನೆಡುತೋಪು ಕಾಮಗಾರಿಗಳಲ್ಲಿ ಅಕ್ರಮ ಎಸಗಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ತಾಲೂಕಿನ ಉಕ್ಕುಂದ ಗ್ರಾಮದ ನಿವಾಸಿ, ಸಾಮಾಜಿಕ ಹೋರಾಟಗಾರ ಶಿವಕುಮಾರ್‌ರವರು ೨೦೨೧ರಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಅರಣ್ಯ ಪಡೆ ಮುಖ್ಯಸ್ಥರು)ಯವರಿಗೆ ದೂರು ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ತನಿಖೆ ಕೈಗೊಂಡು ಸೂಕ್ತ ಕ್ರಮ ಕೈಗೊಳ್ಳುವಂತೆ ಶಿವಮೊಗ್ಗ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಸೂಚಿಸಿದ್ದರು. 
    ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ದೋಷಾರೋಪಣ ಪಟ್ಟಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸಲ್ಲಿಸಿದ್ದರು.  ಉಪವಲಯ ಅರಣ್ಯಾಧಿಕಾರಿಗೆ ನೇಮಕಾತಿ ಪ್ರಾಧಿಕಾರ/ಶಿಸ್ತು ಪ್ರಾಧಿಕಾರ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಶಿವಮೊಗ್ಗ ವೃತ್ತರವರು ಆಗಿರುವುದರಿಂದ ತಮ್ಮ ಹಂತದಲ್ಲಿಯೇ ಆರೋಪವಿರುವ ಅಧಿಕಾರಿಯ ವಿರುದ್ಧ ಕರ್ನಾಟಕ ನಾಗರೀಕ ಸೇವೆ(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ ೧೯೫೭ ರ ನಿಯಮ ದಂತೆ ಶಿಸ್ತುಕ್ರಮವನ್ನು ಜರುಗಿಸಲು ಕೋರಿದ್ದಾರೆ. 
    ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಪತ್ರದ ಆಧಾರದ ಮೇಲೆ ಶಿವಮೊಗ್ಗ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರು ತಕ್ಷಣ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಹೋರಾಟಗಾರ ಶಿವಕುಮಾರ್ ಆಗ್ರಹಿಸಿದ್ದಾರೆ. 
 

ಭದ್ರಾವತಿ ಉಕ್ಕುಂದ ಗ್ರಾಮದ ನಿವಾಸಿ, ಸಾಮಾಜಿಕ ಹೋರಾಟಗಾರ ಶಿವಕುಮಾರ್.