Tuesday, August 29, 2023

ಆ.೩೧ರಂದು ಬ್ರಹ್ಮಶ್ರೀ ನಾರಾಯಣಗುರುಗಳ ೧೬೯ನೇ ಜಯಂತ್ಯೋತ್ಸವ

ಆ.೩೧ರಂದು ಬ್ರಹ್ಮಶ್ರೀ ನಾರಾಯಣಗುರುಗಳ ೧೬೯ನೇ ಜಯಂತ್ಯೋತ್ಸವ ಕುರಿತು ಮಂಗಳವಾರ ಭದ್ರಾವತಿಯಲ್ಲಿ ಶ್ರೀ ನಾರಾಯಣಗುರು ವಿಚಾರ ವೇದಿಕೆ ಅಧ್ಯಕ್ಷರು, ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.  
    ಭದ್ರಾವತಿ, ಆ. ೨೯ : ಶ್ರೀ ನಾರಾಯಣಗುರು ವಿಚಾರ ವೇದಿಕೆ(ಈಡಿಗ ಸಮಾಜದ ೨೬ ಪಂಗಡಗಳ ಒಕ್ಕೂಟ) ಮತ್ತು ಆರ್ಯ ಈಡಿಗ ಮಹಿಳಾ ಸಮಾಜ, ಕೇರಳ ಸಮಾಜ ಹಾಗು ಈಡಿಗ ಸಮಾಜ ಮತ್ತು ಬಿಲ್ಲವ ಸಮಾಜದ ವತಿಯಿಂದ ರಾಷ್ಟ್ರೀ ಯ ಹಬ್ಬಗಳ ಆಚರಣಾ ಸಮಿತಿ ಸಹಕಾರದೊಂದಿಗೆ ಆ.೩೧ರಂದು ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಮಧ್ಯಾಹ್ನ ೧೨ ಗಂಟೆಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ನಾರಾಯಣಗುರು ವಿಚಾರ ವೇದಿಕೆ ಅಧ್ಯಕ್ಷ ಎನ್. ನಟರಾಜ್‌ ಹೇಳಿದರು.
    ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬ್ರಹ್ಮಶ್ರೀ ನಾರಾಯಣಗುರು ಅವರ ವಿಚಾರಧಾರೆಗಳು ಇಂದಿನ ಸಮಾಜಕ್ಕೆ ಅವಶ್ಯಕವಾಗಿವೆ. ಅವರ ೧೬೯ನೇ ಜಯಂತ್ಯೋತ್ಸವ ಅರ್ಥಪೂರ್ಣವಾಗಿ ನಡೆಯಬೇಕಾಗಿದ್ದು, ಈ ನಿಟ್ಟಿನಲ್ಲಿ ವೇದಿಕೆ ಹೆಚ್ಚಿನ ಶ್ರಮವಹಿಸುತ್ತಿದೆ ಎಂದರು.
    ಅಂದು ಬೆಳಿಗ್ಗೆ ೧೦.೩೦ಕ್ಕೆ ಬ್ರಹ್ಮಶ್ರೀ ನಾರಾಯಣಗುರು ಭಾವಚಿತ್ರದೊಂದಿಗೆ ಲೋಯರ್‌ ಹುತ್ತಾದಿಂದ ತಾಲೂಕು ಪಂಚಾಯಿತಿವರೆಗೂ ಮೆರವಣಿಗೆ ನಡೆಯಲಿದ್ದು, ನಂತರ ನಡೆಯುವ ವೇದಿಕೆ ಕಾರ್ಯಕ್ರಮವನ್ನು ಶಾಸಕ ಬಿ.ಕೆ ಸಂಗಮೇಶ್ವರ್‌ ಉದ್ಘಾಟಿಸಲಿದ್ದಾರೆ. ತಹಸೀಲ್ದಾರ್‌ ನಾಗರಾಜಪ್ಪ ಅಧ್ಯಕ್ಷತೆ ವಹಿಸಲಿದ್ದು, ಶಿವಮೊಗ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಅಣ್ಣಪ್ಪ ಮಳಿಮಠ್‌ ಉಪನ್ಯಾಸ ನೀಡಲಿದ್ದಾರೆ.
    ವೇದಿಕೆ ಜಿಲ್ಲಾಧ್ಯಕ್ಷ ಪ್ರವೀಣ್‌ ಈರೆಗೊಡು, ಕೇರಳ ಸಮಾಜದ ಅಧ್ಯಕ್ಷ ಗಂಗಾಧರ್‌, ಆರ್ಯ ಈಡಿಗ ಮಹಿಳಾ ಸಂಘದ ತಾಲೂಕು ಅಧ್ಯಕ್ಷೆ ಭಾಗ್ಯಮ್ಮ ಪುಟ್ಟಸ್ವಾಮಿಗೌಡ, ವೇದಿಕೆ ಗೌರವಾಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಕೋಗಲೂರು ತಿಪ್ಪೇಸ್ವಾಮಿ, ಗಂಗಾಧರ್‌ ಸೇರಿದಂತೆ ವೇದಿಕೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶ್ರೀ ಆದಿಶಕ್ತಿ ಚೌಡೇಶ್ವರಿ ದೇವಾಲಯ ಲೋಕಾರ್ಪಣೆ

ಭದ್ರಾವತಿ ಆನೆಕೊಪ್ಪ, ಎಂಪಿಎಂ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಆದಿಶಕ್ತಿ ಚೌಡೇಶ್ವರಿ ದೇವಾಲಯದ ಆಲಯ ಪ್ರವೇಶ ಮತ್ತು ಸ್ಥಿರಬಿಂಬ ಪ್ರತಿಷ್ಠಾಪನೆ ಮಂಗಳವಾರ ವಿಜೃಂಭಣೆಯಿಂದ ನಡೆಯಿತು. ಈ ಸಂಬಂಧ ನೂತನ ವಿಗ್ರಹಕ್ಕೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು.
    ಭದ್ರಾವತಿ, ಆ. 29: ನಗರದ ಆನೆಕೊಪ್ಪ, ಎಂಪಿಎಂ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಆದಿಶಕ್ತಿ ಚೌಡೇಶ್ವರಿ ದೇವಾಲಯದ ಆಲಯ ಪ್ರವೇಶ ಮತ್ತು ಸ್ಥಿರಬಿಂಬ ಪ್ರತಿಷ್ಠಾಪನೆ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.
    ಬೆಳಿಗ್ಗೆ ನಾಗಪೂಜೆ, ಆಲಯ ಪ್ರವೇಶ, ಗೋ ಪೂಜೆ, ಮಹಾಪ್ರತಿಷ್ಠೆ, ನಂತರ ಚಂಡಿಕಾ ಹೋಮ, ಮಹಾಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗು ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು. ಶ್ರೀ ಕ್ಷೇತ್ರ ನಾಗರಕಟ್ಟೆ ಪ್ರಧಾನ ಅರ್ಚಕ ರಮೇಶ್ ಭಟ್ಟರು ತರಳಿಮಠ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು.
    ಆನೆಕೊಪ್ಪ, ಉಜ್ಜನಿಪುರ, ಕಾಗದನಗರ, ತಿಮ್ಲಾಪುರ, ಬುಳ್ಳಾಪುರ, ಜೆಪಿಎಸ್ ಕಾಲೋನಿ, ಸುರಗಿತೋಪು, ಹುಡ್ಕೋ ಕಾಲೋನಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳ ಭಕ್ತಾಧಿಗಳು ಪಾಲ್ಗೊಂಡು ಅಮ್ಮನವರ ಕೃಪೆಗೆ ಪಾತ್ರರಾದರು.

ಭದ್ರಾವತಿ ವಿವಿಧೆಡೆ ಜಿಲ್ಲಾ ಯೋಜನಾ ನಿರ್ದೇಶಕರ ಭೇಟಿ : ಪರಿಶೀಲನೆ

ಶಿವಮೊಗ್ಗ ಜಿಲ್ಲಾ ನಿರ್ದೇಶಕರಾಗಿ ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಹಿರಿಯ ಅಧಿಕಾರಿ ಮನೋಹರ್ ಅವರು ಮಂಗಳವಾರ ಭದ್ರಾವತಿ ನಗರದ ವಿವಿಧೆಡೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
    ಭದ್ರಾವತಿ, ಡಿ. ೨೯ : ಶಿವಮೊಗ್ಗ ಜಿಲ್ಲಾ ನಿರ್ದೇಶಕರಾಗಿ ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಹಿರಿಯ ಅಧಿಕಾರಿ ಮನೋಹರ್ ಅವರು ಮಂಗಳವಾರ ನಗರದ ವಿವಿಧೆಡೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.
    ನಗರದ ತಾಲೂಕು ಕಛೇರಿ ರಸ್ತೆಯಲ್ಲಿರುವ ವೀರಶೈವ ಸಭಾ ಭವನ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಿಂಭಾಗದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಭವನ ಹಾಗು ಕನಕಮಂಟಪ ಮೈದಾನದ ಪಕ್ಕದಲ್ಲಿ ನಿರ್ಮಾಣಗೊಳ್ಳುತ್ತಿರುವ ಪೌರಕಾರ್ಮಿಕರ ವಸತಿ ಸಮುಚ್ಚಯ ಹಾಗು ಪುಟ್ ಪಾತ್ ಪರಿಶೀಲನೆ ನಡೆಸಿದರು.

    ನಗರಸಭೆ ಕಂದಾಯಾಧಿಕಾರಿ ರಾಜ್ ಕುಮಾರ್, ಕಿರಿಯ ಇಂಜಿನಿಯರ್ ಗಳಾದ ಕೆ. ಪ್ರಸಾದ್, ಸಂತೋಷ್ ಪಾಟೀಲ್, ಪ್ರಥಮ ದರ್ಜೆ ಕಂದಾಯ ನಿರೀಕ್ಷಕ ಡಿ. ನರಸಿಂಹಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.