Monday, March 1, 2021

ಜನೌಷಧಿ ದಿನಾಚರಣೆ ಅಂಗವಾಗಿ ಫೆ.೭ರ ವರೆಗೆ ಜನಸೇವಾ ಕಾರ್ಯಕ್ರಮ

ಭದ್ರಾವತಿ, ಮಾ. ೧: ಮೂರನೇ ವರ್ಷದ ಜನೌಷಧಿ ದಿನಾಚರಣೆ ಅಂಗವಾಗಿ ನಗರದ ಸ್ಕಂದ ಟ್ರಸ್ಟ್ ವತಿಯಿಂದ ಜನಸೇವಾ ಕಾರ್ಯಕ್ರಮಗಳನ್ನು ಮಾ.೭ರ ವರೆಗೆ ಹಮ್ಮಿಕೊಳ್ಳಲಾಗಿದೆ.
     ಸೋಮವಾರ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸಲಾಯಿತು.
     ಮಾ.೩ರಂದು ಸಂಜೆ ೬ ಗಂಟೆಗೆ ನಗರದ ಬೈಪಾಸ್ ರಸ್ತೆಯಲ್ಲಿರುವ ಎಂಪಿಎಂ ಬಡಾವಣೆಯ ಸಂಜೀವಿನಿ ಹಿರಿಯ ನಾಗರೀಕರ ಆರೈಕೆ ಕೇಂದ್ರದಲ್ಲಿ ಆರೋಗ್ಯ ಶಿಬಿರ ಹಾಗು ಉಚಿತ ಔಷಧಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾ.೪ರಂದು ಅಂಬೇಡ್ಕರ್ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಪ್ರಬಂಧ ಸ್ಪರ್ಧೆ ಹಾಗು ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ. ಮಾ.೬ರಂದು ನ್ಯೂಟೌನ್ ಲಯನ್ಸ್‌ಕ್ಲಬ್ ಸಭಾಂಗಣದಲ್ಲಿ ಹಿರಿಯ ವೈದ್ಯ ಡಾ. ಎಂ. ರವೀಂದ್ರನಾಥ ಕೋಠಿರವರಿಂದ ಉಚಿತ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ ನಡೆಯಲಿದೆ.
  ಮಾ.೭ರಂದು ಪ್ರತಿ ವರ್ಷದಂತೆ ಈ ಬಾರಿ ಸಹ ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ನೇರವಾಗಿ ಜನೌಷಧಿ ಮಾಲೀಕರು ಹಾಗು ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ವಿಡಿಯೋ ಕಾನ್ಫರೆನ್ಸ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಸ್ವಿಗೊಳಿಸುವಂತೆ ಕೋರಲಾಗಿದೆ.

ಯಾವುದೇ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಮೊದಲು ಕುಟುಂಬಕ್ಕೆ ಮೊದಲ ಆದ್ಯತೆ ನೀಡಿ : ಪ್ರಸಾದ್ ಅತ್ತಾವರ್

ಭದ್ರಾವತಿಗೆ ಆಗಮಸಿದ್ದ ರಾಮ್ ಸೇನ ಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಪ್ರಸಾದ್ ಅತ್ತಾವರ್ ಪತ್ರಿಕೆಯೊಂದಿಗೆ ಮಾತನಾಡಿದರು.

   ಭದ್ರಾವತಿ, ಫೆ. ೨೮: ಯುವ ಸಮುದಾಯ ಯಾವುದೇ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಮೊದಲು ಕುಟುಂಬಕ್ಕೆ ಮೊದಲ ಆದ್ಯತೆ ನೀಡಬೇಕೆಂಬುದು ರಾಮ್ ಸೇನಾ ಕರ್ನಾಟಕ ಸಂಘಟನೆಯ ಆಶಯವಾಗಿದೆ ಎಂದು ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಪ್ರಸಾದ್ ಅತ್ತಾವರ್ ತಿಳಿಸಿದರು.
   ಅವರು ಪತ್ರಿಕೆಯೊಂದಿಗೆ ಮಾತನಾಡಿ, ಸಮಾಜದಲ್ಲಿ ಉತ್ತಮ ಕುಟುಂಬ ನಿರ್ಮಾಣ ಮಾಡುವುದೇ ಸಂಘಟನೆ ಧ್ಯೇಯವಾಗಿದೆ. ಇಂತಹ ಧ್ಯೇಯ ಹೊಂದಿರುವ ಸಂಘಟನೆಯಲ್ಲಿ ಅಪ್ಪ, ಅಮ್ಮ, ಅಕ್ಕ, ತಂಗಿ, ಅಣ್ಣ, ತಮ್ಮ, ಹೆಂಡತಿ, ಮಕ್ಕಳು ಹೀಗೆ ಎಲ್ಲರನ್ನು ಒಳಗೊಂಡಿರುವ ಕುಟುಂಬದ ಜವಾಬ್ದಾರಿ ಯುವ ಸಮುದಾಯ ಹೊರಬೇಕು. ಈ ಹಿನ್ನಲೆಯಲ್ಲಿ ಯುವ ಸಮುದಾಯ ಮೊದಲು ಉದ್ಯೋಗ ಹೊಂದುವ ಜೊತೆಗೆ ಆರ್ಥಿಕವಾಗಿ ಬಲಗೊಳ್ಳಬೇಕು. ಕುಟುಂಬಕ್ಕಾಗಿ ಸಮಯ ಮೀಸಲಿಡಬೇಕು. ಮೊದಲ ಆದ್ಯತೆ ಕುಟುಂಬಕ್ಕೆ ನೀಡಬೇಕು. ಉಳಿದ ಸಮಯವನ್ನು ಸಂಘಟನೆಗಾಗಿ ಮೀಸಲಿಡಬೇಕು. ಯಾವುದೇ ಕಾರಣಕ್ಕೂ ಕುಟುಂಬ ತೊರೆದು ಸಂಘಟನೆಯಲ್ಲಿ ತೊಡಗಿಸಿಕೊಳ್ಳಬಾರದು. ಇಂತಹ ಕಾರ್ಯಕರ್ತರ ಅಗತ್ಯ ನಮ್ಮ ಸಂಘಟನೆಗೆ ಬೇಕಿಲ್ಲ ಎಂದರು.
      ಧರ್ಮ ರಕ್ಷಣೆ, ರಾಷ್ಟ್ರ ನಿರ್ಮಾಣಕ್ಕಾಗಿ ಕಾನೂನು ಕೈಗೆತ್ತಿಕೊಳ್ಳಲು ಸಿದ್ದ:
  ದೇವರಿಗೆ ಸರಿಸಮಾನವಾದ ಸತ್ಯ, ಧರ್ಮ, ನ್ಯಾಯದ ದಾರಿಯಲ್ಲಿ ಸಾಗುವುದೇ ಧರ್ಮ ಎಂಬ ಪರಿಕಲ್ಪನೆಯನ್ನು ಸಂಘಟನೆ ಹೊಂದಿದೆ. ಪ್ರತಿಯೊಬ್ಬರಲ್ಲೂ ಉತ್ತಮ ಸಂಸ್ಕಾರ, ಆಧ್ಯಾತ್ಮಿಕ ಚಿಂತನೆಗಳು ಬೆಳೆಯಬೇಕು. ಈ ಕಾರ್ಯ ಪ್ರತಿ ಮನೆಗಳಿಂದ ಆರಂಭಗೊಳ್ಳಬೇಕು. ಇದು ಸಂಘಟನೆಯ ಉದ್ದೇಶಗಳಲ್ಲಿ ಒಂದಾಗಿದ್ದು, ಸಂಘಟನೆಯ ಪ್ರತಿಯೊಬ್ಬ ಕಾರ್ಯಕರ್ತ ಇದನ್ನು ಅಳವಡಿಸಿಕೊಂಡು ತಮ್ಮ ಸುತ್ತಲಿನ ಪರಿಸರದಲ್ಲೂ ಈ ಕುರಿತು ಜಾಗೃತಿ ಮೂಡಿಸಬೇಕು. ಆ ಮೂಲಕ ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು. ನಮ್ಮ ಧರ್ಮ ಹಾಗೂ ರಾಷ್ಟ್ರ ಉಳಿಯಬೇಕಾದರೆ ನಮ್ಮ ಆಶಯಗಳಿಗೆ ಆಳುವ ಸರ್ಕಾರ ಪೂರಕವಾಗಿ ಸ್ಪಂದಿಸಬೇಕು. ಇಲ್ಲವಾದಲ್ಲಿ ಕಾನೂನು ಕೈಗೆತ್ತಿಗೊಳ್ಳುವುದು ಅನಿವಾರ್ಯವಾಗುತ್ತದೆ. ಈ ಹಿಂದೆ ಕೆಲವು ಬಾರಿ ಸಂಘಟನೆ ಕಾನೂನು ಕೈಗೆತ್ತಿಕೊಂಡಿದೆ. ಮುಂದೆ ಸಹ ಕೈಗೆತ್ತಿಗೊಳ್ಳಲಿದೆ. ಯಾವುದೇ ಧರ್ಮದ ವಿರುದ್ಧ ನಮ್ಮ ಹೋರಾಟವಿಲ್ಲ. ಬದಲಿಗೆ ಧರ್ಮ ವಿರೋಧಿಗಳ, ದೇಶದ್ರೋಹಿಗಳ ವಿರುದ್ಧ ನಮ್ಮ ಹೋರಾಟವಾಗಿದೆ ಎಂದರು.
      ಅಯೋಧ್ಯೆ ಶ್ರಿರಾಮಜ್ಮನಭೂಮಿಯಲ್ಲಿ ಹೊಸ ಬೆಳಕು:
    ಆಯೋಧ್ಯೆ ಶ್ರೀರಾಮ ಜನ್ಮ ಭೂಮಿಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ದೇಶಾದ್ಯಂತ ಕೋಟ್ಯಾಂತರ ಜನರು ತಮ್ಮದೇ ಆದ ರೀತಿಯಲ್ಲಿ ಸೇವೆಯನ್ನು ಸಮರ್ಪಿಸುತ್ತಿದ್ದಾರೆ. ಇದೆ ರೀತಿ ಸಂಘಟನೆ ಸಹ ತನ್ನದೇ ಆದ ಅಳಿಲು ಸೇವೆಯನ್ನು ಸಲ್ಲಿಸುತ್ತಿದೆ. ಶ್ರೀರಾಮ ಪುನರ್ ಪ್ರತಿಷ್ಠಾಪನೆಗೊಂಡು ಸಿಂಹಾಸನವೇರುವ ಗತವೈಭವವನ್ನು ದೇಶದ ಜನರು ಎದುರು ನೋಡಿದ್ದಾರೆ. ಅಂದು ಈ ದೇಶದಲ್ಲಿ ಹೊಸ ಬೆಳಕು ಮೂಡುವ ವಿಶ್ವಾಸವಿದೆ. ಜೊತೆಗೆ ರಾಮನ ಸೈನಿಕರಂತೆ ಈ ಸಂಘಟನೆ ಕಾರ್ಯಕರ್ತರು ಸಹ ದೇಶಾದ್ಯಂತ ವಿಸ್ತಾರಗೊಳ್ಳುವ ದಿನಗಳು ಬರಲಿವೆ ಎಂದರು.
       ಕನ್ನಡ ಭಾಷೆಗೆ ಗೌರವ:
     ಕನ್ನಡ ಅತ್ಯದ್ಭುತ ಭಾಷೆಯಾಗಿದ್ದು, ಈ ಭಾಷೆ ತನ್ನದೇ ಆದ ವಿಶಿಷ್ಟತೆಹೊಂದಿದೆ. ಕನ್ನಡ ಭಾಷೆ ಹಾಗು ತಾಯಿ ಭುವನೇಶ್ವರಿಗೆ ಸಂಘಟನೆ ಎಂದೆಂಗೂ ಗೌರವ ಸಲ್ಲಿಸುತ್ತದೆ. ಕನ್ನಡ ಪರ ಹೋರಾಟಗಳಲ್ಲೂ ಕಾರ್ಯಕರ್ತರು ತೊಡಗಿಸಿಕೊಂಡಿದ್ದಾರೆ. ಇದರ ಜೊತೆಗೆ ದೇಶದ ಚಿಂತನೆಯಲ್ಲಿ ನಮ್ಮ ಹೋರಾಟಗಳು ನಡೆಯುತ್ತಿವೆ ಎಂದರು.
     ಬೆಳಗಾವಿಯಲ್ಲಿ ರಾಜಕೀಯ ಪ್ರೇರಿತ ಗೊಂದಲ:
   ಬೆಳಗಾವಿಯಲ್ಲಿ ಮರಾಠಿಗರು, ಕನ್ನಡಿಗರ ನಡುವೆ ಯಾವುದೇ ಗೊಂದಲಗಳಿಲ್ಲ. ಎಲ್ಲರೂ ಒಗ್ಗಟ್ಟಾಗಿ ಬದುಕುತ್ತಿದ್ದಾರೆ. ಇಲ್ಲಿ ರಾಜಕೀಯ ಪ್ರೇರಿತ ಗೊಂದಲಗಳು ರೂಪುಗೊಳ್ಳುತ್ತಿವೆ. ಈ ನಿಟ್ಟಿಲ್ಲಿ ರೂಪುಗೊಂಡ ಹೋರಾಟಗಳಿಗೆ ಸಂಘಟನೆ ಬೆಂಬಲಿಸುವುದಿಲ್ಲ. ಮುಂದಿನ ದಿನಗಳಲ್ಲಿ ಬೆಳಗಾವಿ ವಿವಾದ ಬಗೆಹರಿಯುವ ವಿಶ್ವಾಸವಿದೆ ಎಂದರು.
         ಯಾವುದೇ ಸರ್ಕಾರದಿಂದ ರೈತರಿಗೆ ಮೋಸವಾಗಿಲ್ಲ :
  ರೈತರ ಹೆಸರಿನಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟ ರಾಜಕೀಯ ಪ್ರೇರಿತ ಹೋರಾಟವಾಗಿದೆ. ನಿಜವಾದ ರೈತ ತನ್ನ ಕಾಯಕವನ್ನು ಮರೆತು ಎಂದಿಗೂ ಬೇಡಿಕೆಗಾಗಿ ಹೋರಾಟ ನಡೆಸಿಲ್ಲ. ಮುಂದೆಯೂ ಸಹ ನಡೆಸುವುದಿಲ್ಲ ಎಂಬ ವಿಶ್ವಾಸವಿದೆ. ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಯಾವುದೇ ಸರ್ಕಾರವಿರಲಿ ರೈತರಿಗೂ ಎಂದಿಗೂ ಅನ್ಯಾಯವಾಗಿಲ್ಲ. ಪ್ರಸ್ತುತ ಹೋರಾಟ ನಡೆಸುತ್ತಿರುವವರು ರೈತರಲ್ಲದವರು ಹಾಗು ಭೂಮಿಯನ್ನು ಲೀಸ್‌ಗೆ ಕೊಟ್ಟವರಾಗಿದ್ದು ಈ ಹಿನ್ನಲೆಯಲ್ಲಿ ನಮ್ಮ ಸಂಘಟನೆ ಹೋರಾಟ ಬೆಂಬಲಿಸುತ್ತಿಲ್ಲ ಎಂದರು.
     ಸಂಘಟನೆ ಮೂಲಕ ಜಾತಿ ವಿಷಬೀಜ ನಿರ್ಮೂಲನೆ :
   ಜಾತಿ ವ್ಯವಸ್ಥೆ ತೊಲಗಬೇಕು. ಜಾತಿ ಎಂಬ ವಿಷಬೀಜ ನಿರ್ಮೂಲನೆ ಮಾಡಬೇಕೆಂಬ ಧ್ಯೇಯೋದ್ದೇಶ ಸಹ ಸಂಘಟನೆ ಗುರಿಯಾಗಿಸಿಕೊಂಡಿದೆ. ಸಮಾಜದ ಎಲ್ಲರನ್ನು ಒಗ್ಗೂಡಿಸಿಕೊಂಡು ಸಂಘಟನೆಯನ್ನು ವಿಸ್ತಾರಗೊಳಿಸಲಾಗುತ್ತಿದೆ. ಸಂಘಟನೆಯ ಮುಖಂಡರು, ಕಾರ್ಯಕರ್ತರೆಲ್ಲರ ಮನಸ್ಥಿತಿ ಒಂದೇ ರೀತಿಯಾಗಿದೆ. ಸಂಘಟನೆಗಾಗಿ ದುಡಿಯುತ್ತಿರುವ ಎಲ್ಲರೂ ಸಮಾಜದಲ್ಲಿ ಒಂದಲ್ಲ ಒಂದು ನೋವು ಅನುಭವಿಸಿ ಬಂದವರಾಗಿದ್ದಾರೆ. ಎಲ್ಲೂ ಸಹ ಸ್ವಾತಃ ಎಂಬುದು ಇಲ್ಲ. ಎಲ್ಲೋ ಅಲ್ಪಸ್ವಲ್ಪ ದೋಷಗಳಿರಬಹುದು ಅವೆಲ್ಲನ್ನೂ ಸರಿಪಡಿಸಿಕೊಂಡು ಸಂಘಟನೆಯನ್ನು ಇನ್ನಷ್ಟು ಸದೃಢವಾಗಿ ಕಟ್ಟುವ ವಿಶ್ವಾಸ ಹೊಂದಿದ್ದೇನೆ ಎಂದರು.
   ರಾಮ್ ಸೇನಾ ಕರ್ನಾಟಕ ಸಂಘಟನೆ ರಾಜ್ಯ ಕಾರ್ಯದರ್ಶಿ ಮಂಜುನಾಥ ಗುಲ್ಜಾರ್, ಸಂತೋಷ್‌ಶೆಟ್ಟಿ, ಜಿಲ್ಲಾಧ್ಯಕ್ಷ ಉಮೇಶ್‌ಗೌಡ ಉಪಸ್ಥಿತರಿದ್ದರು.

ಕಬಡ್ಡಿ ಪಂದ್ಯಾವಳಿ ಬಹುಮಾನ ವಿತರಣೆ ನಂತರ ಎರಡು ಗುಂಪುಗಳ ನಡುವೆ ಘರ್ಷಣೆ, ಮಾರಾಮಾರಿ

ಶಾಸಕ ಬಿ.ಕೆ ಸಂಗಮೇಶ್ವರ್, ಬಿಜೆಪಿ ಮುಖಂಡ ಜಿ. ಧರ್ಮಪ್ರಸಾದ್ ಬೆಂಬಲಿಗರ ವಿರುದ್ಧ ದೂರು 


ಕಬಡ್ಡಿ ಪಂದ್ಯಾವಳಿ ಮುಕ್ತಾಯದ ವೇಳೆ ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್ ಪುತ್ರರು ಹಾಗು ಬೆಂಬಲಿಗರು ನಡೆಸಿರುವ ದೌರ್ಜನ್ಯ ಖಂಡಿಸಿ ಹಾಗು ತಕ್ಷಣ ತಪ್ಪಿತಸ್ಥರನ್ನು ಬಂಧಿಸಲು ಆಗ್ರಹಿಸಿ ಬಿಜೆಪಿ ಪಕ್ಷದ ಮುಖಂಡರು ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
   ಭದ್ರಾವತಿ, ಮಾ. ೧: ಹಳೇನಗರದ ಕನಕಮಂಟಪ ಮೈದಾನದಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಹೊನಲು ಬೆಳಕಿನ ಪ್ರೊ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ನಂತರ ಎರಡು ಗುಂಪುಗಳ ನಡುವೆ ಏಕಾಏಕಿ ಮಾರಾಮಾರಿ ನಡೆದಿರುವ ಘಟನೆ ಭಾನುವಾರ ರಾತ್ರಿ ನಡೆದಿದ್ದು, ಈ ಸಂಬಂಧ ಸೋಮವಾರ ದೂರು, ಪ್ರತಿದೂರು ಹಳೇನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
   ಶನಿವಾರ ಮತ್ತು ಭಾನುವಾರ ಎರಡು ದಿನ ಪಂದ್ಯಾವಳಿ ಕೊನೆಯವರೆಗೂ ಯಾವುದೇ ಗೊಂದಲವಿಲ್ಲದೆ ಯಶಸ್ವಿಯಾಗಿ ನಡೆಯಿತು. ಈ ಪಂದ್ಯವಳಿಯಲ್ಲಿ ಒಟ್ಟು ೮ ತಂಡಗಳು ಭಾಗವಹಿಸಿದ್ದವು. ಪೈಕಿ ಸ್ನೇಹ ಜೀವಿ ಉಮೇಶ್ ನೇತೃತ್ವದ ಮಲ್ನಾಡ್ ವಾರಿಯರ್ಸ್ ಹಾಗು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಧರ್ಮಪ್ರಸಾದ್ ನೇತೃತ್ವದ ಸ್ಟೀಲ್ ಟೌನ್ ತಂಡಗಳು ಫೈನಲ್ ಪ್ರವೇಶಿಸಿದ್ದು, ಮಲ್ನಾಡ್ ವಾರಿಯರ್ಸ್ ಮೊದಲ ಬಹುಮಾನ ಹಾಗು ಸ್ಟೀಲ್‌ಟೌನ್ ಎರಡನೇ ಬಹುಮಾನ ಪಡೆದುಕೊಂಡವು. ಬಹುಮಾನ ವಿತರಣೆ ವೇಳೆ ಯುವಕನೋರ್ವ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ ಹಿನ್ನಲೆಯಲ್ಲಿ ಏಕಾಏಕಿ ಶಾಸಕ ಬಿ.ಕೆ ಸಂಗಮೇಶ್ವರ್ ಬೆಂಬಲಿಗರು ಹಾಗು ಜಿ. ಧರ್ಮಪ್ರಸಾದ್ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ಘರ್ಷಣೆ ಉಂಟಾಗಿ ೨ ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ ಎನ್ನಲಾಗಿದೆ.
    ಮಾರಾಮಾರಿಯಲ್ಲಿ ಎರಡು ಕಡೆಯವರಿಗೂ ಗಾಯಗಳಾಗಿದ್ದು, ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಶಾಸಕರ ಪುತ್ರರಾದ ಬಿ.ಎಸ್ ಗಣೇಶ್, ಬಿ.ಎಸ್ ಬಸವೇಶ್ವರ್ ಸೇರಿದಂತೆ ೧೦ ಮಂದಿ ವಿರುದ್ಧ ದೂರು ದಾಖಲಾಗಿದ್ದು, ಇದೆ ರೀತಿ ಪ್ರತಿ ದೂರು ಸಹ ದಾಖಲಾಗಿದೆ.
      ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ:
   ಬಿಜೆಪಿ ಜಿಲ್ಲಾ ಮುಖಂಡರ ನೇತೃತ್ವದಲ್ಲಿ ತಕ್ಷಣ ತಪ್ಪಿತಸ್ಥರಾಗಿರುವ ಶಾಸಕರ ಪುತ್ರರನ್ನು ತಕ್ಷಣ ಬಂಧಿಸಬೇಕು. ಅಲ್ಲದೆ ಹಲ್ಲೆಗೆ ಕುಮ್ಮಕ್ಕು ನೀಡಿರುವ ಶಾಸಕ ಬಿ.ಕೆ ಸಂಗಮೇಶ್ವರ್ ವಿರುದ್ಧ ಸಹ ದೂರು ದಾಖಲಿಸಿಕೊಳ್ಳಬೇಕು. ಜಿಲ್ಲಾ ರಕ್ಷಣಾಧಿಕಾರಿಗಳು ತಕ್ಷಣ ಸ್ಥಳಕ್ಕೆ ಆಗಮಿಸಬೇಕೆಂದು ಆಗ್ರಹಿಸಿದರು.
    ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್, ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಖಂಡರಾದ ಎಂ.ಬಿ ಭಾನುಪ್ರಕಾಶ್, ಸಿ. ಮಂಜುಳ, ಎಸ್. ದತ್ತಾತ್ರಿ, ಚನ್ನಬಸಪ್ಪ, ಕೂಡ್ಲಿಗೆರೆ ಹಾಲೇಶ್, ವಿ. ಕದಿರೇಶ್, ಬಿ.ಕೆ ಶ್ರೀನಾಥ್, ಜಿ. ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ಕೆ. ಮಂಜುನಾಥ್, ಟಿ. ವೆಂಕಟೇಶ್, ಅವಿನಾಶ್, ಎಂ. ಮಂಜುನಾಥ್, ಸುಬ್ರಮಣಿ, ಗಣೇಶ್‌ರಾವ್, ಚನ್ನೇಶ್, ರವಿಚಂದ್ರನ್, ಅನ್ನಪೂರ್ಣ ಸಾವಂತ್, ಶೋಭಾ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.