ಶಾಸಕ ಬಿ.ಕೆ ಸಂಗಮೇಶ್ವರ್, ಬಿಜೆಪಿ ಮುಖಂಡ ಜಿ. ಧರ್ಮಪ್ರಸಾದ್ ಬೆಂಬಲಿಗರ ವಿರುದ್ಧ ದೂರು
ಕಬಡ್ಡಿ ಪಂದ್ಯಾವಳಿ ಮುಕ್ತಾಯದ ವೇಳೆ ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್ ಪುತ್ರರು ಹಾಗು ಬೆಂಬಲಿಗರು ನಡೆಸಿರುವ ದೌರ್ಜನ್ಯ ಖಂಡಿಸಿ ಹಾಗು ತಕ್ಷಣ ತಪ್ಪಿತಸ್ಥರನ್ನು ಬಂಧಿಸಲು ಆಗ್ರಹಿಸಿ ಬಿಜೆಪಿ ಪಕ್ಷದ ಮುಖಂಡರು ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಭದ್ರಾವತಿ, ಮಾ. ೧: ಹಳೇನಗರದ ಕನಕಮಂಟಪ ಮೈದಾನದಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಹೊನಲು ಬೆಳಕಿನ ಪ್ರೊ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ನಂತರ ಎರಡು ಗುಂಪುಗಳ ನಡುವೆ ಏಕಾಏಕಿ ಮಾರಾಮಾರಿ ನಡೆದಿರುವ ಘಟನೆ ಭಾನುವಾರ ರಾತ್ರಿ ನಡೆದಿದ್ದು, ಈ ಸಂಬಂಧ ಸೋಮವಾರ ದೂರು, ಪ್ರತಿದೂರು ಹಳೇನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಶನಿವಾರ ಮತ್ತು ಭಾನುವಾರ ಎರಡು ದಿನ ಪಂದ್ಯಾವಳಿ ಕೊನೆಯವರೆಗೂ ಯಾವುದೇ ಗೊಂದಲವಿಲ್ಲದೆ ಯಶಸ್ವಿಯಾಗಿ ನಡೆಯಿತು. ಈ ಪಂದ್ಯವಳಿಯಲ್ಲಿ ಒಟ್ಟು ೮ ತಂಡಗಳು ಭಾಗವಹಿಸಿದ್ದವು. ಪೈಕಿ ಸ್ನೇಹ ಜೀವಿ ಉಮೇಶ್ ನೇತೃತ್ವದ ಮಲ್ನಾಡ್ ವಾರಿಯರ್ಸ್ ಹಾಗು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಧರ್ಮಪ್ರಸಾದ್ ನೇತೃತ್ವದ ಸ್ಟೀಲ್ ಟೌನ್ ತಂಡಗಳು ಫೈನಲ್ ಪ್ರವೇಶಿಸಿದ್ದು, ಮಲ್ನಾಡ್ ವಾರಿಯರ್ಸ್ ಮೊದಲ ಬಹುಮಾನ ಹಾಗು ಸ್ಟೀಲ್‌ಟೌನ್ ಎರಡನೇ ಬಹುಮಾನ ಪಡೆದುಕೊಂಡವು. ಬಹುಮಾನ ವಿತರಣೆ ವೇಳೆ ಯುವಕನೋರ್ವ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ ಹಿನ್ನಲೆಯಲ್ಲಿ ಏಕಾಏಕಿ ಶಾಸಕ ಬಿ.ಕೆ ಸಂಗಮೇಶ್ವರ್ ಬೆಂಬಲಿಗರು ಹಾಗು ಜಿ. ಧರ್ಮಪ್ರಸಾದ್ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ಘರ್ಷಣೆ ಉಂಟಾಗಿ ೨ ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ ಎನ್ನಲಾಗಿದೆ.
ಮಾರಾಮಾರಿಯಲ್ಲಿ ಎರಡು ಕಡೆಯವರಿಗೂ ಗಾಯಗಳಾಗಿದ್ದು, ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಶಾಸಕರ ಪುತ್ರರಾದ ಬಿ.ಎಸ್ ಗಣೇಶ್, ಬಿ.ಎಸ್ ಬಸವೇಶ್ವರ್ ಸೇರಿದಂತೆ ೧೦ ಮಂದಿ ವಿರುದ್ಧ ದೂರು ದಾಖಲಾಗಿದ್ದು, ಇದೆ ರೀತಿ ಪ್ರತಿ ದೂರು ಸಹ ದಾಖಲಾಗಿದೆ.
ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ:
ಬಿಜೆಪಿ ಜಿಲ್ಲಾ ಮುಖಂಡರ ನೇತೃತ್ವದಲ್ಲಿ ತಕ್ಷಣ ತಪ್ಪಿತಸ್ಥರಾಗಿರುವ ಶಾಸಕರ ಪುತ್ರರನ್ನು ತಕ್ಷಣ ಬಂಧಿಸಬೇಕು. ಅಲ್ಲದೆ ಹಲ್ಲೆಗೆ ಕುಮ್ಮಕ್ಕು ನೀಡಿರುವ ಶಾಸಕ ಬಿ.ಕೆ ಸಂಗಮೇಶ್ವರ್ ವಿರುದ್ಧ ಸಹ ದೂರು ದಾಖಲಿಸಿಕೊಳ್ಳಬೇಕು. ಜಿಲ್ಲಾ ರಕ್ಷಣಾಧಿಕಾರಿಗಳು ತಕ್ಷಣ ಸ್ಥಳಕ್ಕೆ ಆಗಮಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್, ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಖಂಡರಾದ ಎಂ.ಬಿ ಭಾನುಪ್ರಕಾಶ್, ಸಿ. ಮಂಜುಳ, ಎಸ್. ದತ್ತಾತ್ರಿ, ಚನ್ನಬಸಪ್ಪ, ಕೂಡ್ಲಿಗೆರೆ ಹಾಲೇಶ್, ವಿ. ಕದಿರೇಶ್, ಬಿ.ಕೆ ಶ್ರೀನಾಥ್, ಜಿ. ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ಕೆ. ಮಂಜುನಾಥ್, ಟಿ. ವೆಂಕಟೇಶ್, ಅವಿನಾಶ್, ಎಂ. ಮಂಜುನಾಥ್, ಸುಬ್ರಮಣಿ, ಗಣೇಶ್‌ರಾವ್, ಚನ್ನೇಶ್, ರವಿಚಂದ್ರನ್, ಅನ್ನಪೂರ್ಣ ಸಾವಂತ್, ಶೋಭಾ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
No comments:
Post a Comment