ಸೋಮವಾರ, ಜುಲೈ 21, 2025

ಸಮಾಜಕ್ಕೆ ಡಾ. ಎಚ್.ಎಸ್.ವಿ ಕೊಡುಗೆ ಅನನ್ಯ : ಡಾ. ಕೃಷ್ಣ ಎಸ್. ಭಟ್

ಭದ್ರಾವತಿ ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಹಿಂಭಾಗದ ಶ್ರೀ ಗಾಯಿತ್ರಿ ಧರ್ಮ ಶಾಲಾ ಸಭಾಂಗಣದಲ್ಲಿ ದಿವಂಗತ ಡಾ. ಎಚ್.ಎಸ್ ವೆಂಕಟೇಶ್ ಮೂರ್ತಿರವರ ಸ್ಮರಣಾರ್ಥ ಏರ್ಪಡಿಸಲಾಗಿದ್ದ  ಭಾವ-ಗಾನ-ಗೌರವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಭೂಮಿಕಾ ವೇದಿಕೆ ಆಧ್ಯಕ್ಷ, ವೈದ್ಯ ಡಾ. ಕೃಷ್ಣ ಎಸ್. ಭಟ್ ಮಾತನಾಡಿದರು.
    ಭದ್ರಾವತಿ: ಪ್ರಮುಖ ವ್ಯಕ್ತಿಗಳ ಸಂಸ್ಮರಣೆ ಮಾಡುವುದು ಎಂದರೆ ಆ ಪ್ರಸಿದ್ಧ ವ್ಯಕ್ತಿಗಳ ವ್ಯಕ್ತಿತ್ವ, ಜೀವನ ಶೈಲಿ, ಅವರು ಸಮಾಜಕ್ಕೆ ಹಾಗು ತಾವು ಇರುವ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವ ಕಾರ್ಯವಾಗಿದೆ ಎಂದು ಭೂಮಿಕಾ ವೇದಿಕೆ ಆಧ್ಯಕ್ಷ, ವೈದ್ಯ ಡಾ. ಕೃಷ್ಣ ಎಸ್. ಭಟ್ ಹೇಳಿದರು.
    ಅವರು ಹಳೇನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಹಿಂಭಾಗದ ಶ್ರೀ ಗಾಯಿತ್ರಿ ಧರ್ಮ ಶಾಲಾ ಸಭಾಂಗಣದಲ್ಲಿ ದಿವಂಗತ ಡಾ. ಎಚ್.ಎಸ್ ವೆಂಕಟೇಶ್ ಮೂರ್ತಿರವರ ಸ್ಮರಣಾರ್ಥ ಏರ್ಪಡಿಸಲಾಗಿದ್ದ  ಭಾವ-ಗಾನ-ಗೌರವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
    ವೆಂಕಟೇಶ್‌ಮೂರ್ತಿಯವರ ಕವಿತೆ, ಕವನಗಳಲ್ಲಿ ಆಯಾಯ ಕಾಲಘಟ್ಟದಲ್ಲಿ ಆಯಾಯ ವಯೋಮಾನದವರು ಅನುಭವಿಸಿದ ಸಂಗತಿಗಳ ಹಾಡನ್ನು ರಚಿಸಿರುವುದು ಅವರ ವ್ಯಕ್ತಿತ್ವದ ವಿಶೇಷವಾಗಿದೆ. ಅವರು ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರು ರಚಿಸಿದ ಕವನ, ಕವಿತೆಗಳ ಮೂಲಕ ಸದಾ ಕನ್ನಡಿಗರ ಮನದಲ್ಲಿ ಉಳಿದುಕೊಂಡಿದ್ದಾರೆ ಎಂದರು.
    ಭೂಮಿಕಾ ವೇದಿಕೆ ಸದಸ್ಯರು ವೆಂಕಟೇಶ್ ಮೂರ್ತಿಯವರು ರಚಿಸಿರುವ ಆಯ್ದ ಗೀತೆಗಳನ್ನು ಸುಶ್ರಾವ್ಯವಾಗಿ ಪ್ರಸ್ತುತ ಪಡಿಸಿದರು.
    ಎಸ್.ಜಯಾ ಹೆಗಡೆ ವೇದಿಕೆ ನೂತನ ಸದಸ್ಯರಾಗಿ ಸೇರ್ಪಡೆಗೊಂಡರು. ವೇದಿಕೆ ಪ್ರಧಾನ ಕಾರ್ಯದರ್ಶಿ ಅಪರಂಜಿ ಶಿವರಾಜ್, ಕೋಶಾಧ್ಯಕ್ಷ ಮುನಿರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ಶಾಮಲ ಮತ್ತು ವೀಣಾ ಪ್ರಾರ್ಥಿಸಿ, ಅಪರಂಜಿ ಶಿವರಾಜ್ ಸ್ವಾಗತಿಸಿದರು. ಆನಂದ್ ಕಾರ್ಯಕ್ರಮ ನಿರೂಪಿಸಿದರು. ಉಷಾ ಶಶಿಧರ ಎಚ್.ಎಸ್ ವೆಂಕಟೇಶ್ ಮೂರ್ತಿಯವರ ಜೀವನ ಪರಿಚಯ ಮಾಡಿದರು. ನಿವೃತ್ತ ಪ್ರಾಂಶುಪಾಲ ಬಿ.ಕಾಂತಪ್ಪ ನುಡಿ ನಮನ ಸಲ್ಲಿಸಿ, ರಮೇಶ್ ವಂದಿಸಿದರು. 

ಜು.೨೩ರಂದು ಪ್ರತಿಭಾ ಪುರಸ್ಕಾರ

    ಭದ್ರಾವತಿ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಶಾಖೆ ವತಿಯಿಂದ ಜು.೨೩ರಂದು ಬೆಳಿಗ್ಗೆ ೧೦.೩೦ಕ್ಕೆ ಸಿದ್ಧಾರೂಢ ನಗರದ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ. 
    ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಜಗದ್ಗುರು ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ದಿವ್ಯ ಸಾನಿಧ್ಯ ವಹಿಸಲಿದ್ದು, ಎಡೆಯೂರು ಕ್ಷೇತ್ರದ ಶ್ರೀ ರೇಣುಕ ಶಿವಾಚಾರ್ಯ ಸ್ವಾಮೀಜಿ, ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿರುವರು. 
    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಹಾಸಭಾ ತಾಲೂಕು ಶಾಖೆ ಅಧ್ಯಕ್ಷ ಕೆ.ಎಸ್ ವಿಜಯಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷರಾದ ಅಣಬೇರು ರಾಜಣ್ಣ, ಎಸ್.ಎಸ್ ಗಣೇಶ್ ಮತ್ತು ಸಂಸದ ಬಿ.ವೈ ರಾಘವೇಂದ್ರ ಅವರಿಗೆ ಗೌರವ ಸಮರ್ಪಣೆ ನಡೆಯಲಿದೆ. 
    ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಮಹಾದೇವ ಬಿದರಿ ಪ್ರತಿಭಾ ಪುರಸ್ಕಾರ ವಿತರಿಸಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ನಗರಸಭೆ ಅಧ್ಯಕ್ಷೆ ಗೀತಾ ರಾಜ್ ಕುಮಾರ್ ಮತ್ತು ಮಾಜಿ ಸದಸ್ಯ ಎಸ್. ರುದ್ರೇಗೌಡ ಅವರಿಗೆ ಸನ್ಮಾನ ನಡೆಯಲಿದೆ.  
    ಎಚ್.ಎಂ ರೇಣುಕ ಪ್ರಸನ್ನ, ನಟರಾಜ ಸಾಗರನಹಳ್ಳಿ, ಎಂ.ಜಿ ಶಶಿಕಲಾಮೂರ್ತಿ, ಡಿ.ಬಿ ಗಿರೀಶ್ ಕುಮಾರ್, ಎನ್.ವಿ ಈರೇಶ್, ರುದ್ರಮುನಿ ಎನ್. ಸಜ್ಜನ್, ಬಳ್ಳೇಕೆರೆ ಸಂತೋಷ್, ಬಿ.ಎಂ ಮಲ್ಲಿಕಾರ್ಜುನಸ್ವಾಮಿ, ಪ್ರವೀಣ್, ಗುರುಕುಮಾರ್ ಪಾಟೀಲ್, ಸುಧೀರ್, ಉಮೇಶ್ ಮತ್ತು ಶಿವಕುಮಾರ್ ಹಾಗು ಹಿರಿಯ ಗಣ್ಯರಾದ ಎಚ್.ವಿ ಶಿವರುದ್ರಪ್ಪ, ವಿಶ್ವನಾಥ ಕೋಠಿ, ಡಾ. ವಿಜಯದೇವಿ, ಜಿ.ಕೆ ನವಿಲಪ್ಪ, ಕೆ.ಬಿ ಪರಮೇಶ್ವರಪ್ಪ ಮತ್ತು ಎಚ್.ಎಸ್ ಮಲ್ಲೇಶಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. 

ದ್ವಿಚಕ್ರ ವಾಹನ ಅಪಘಾತ : ಅರ್ಚಕ ಸಾವು

ಭದ್ರಾವತಿ: ದೇವಸ್ಥಾನದಿಂದ ಪೂಜೆ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ಬರುತ್ತಿದ್ದ ನಗರಸಭೆ ವ್ಯಾಪ್ತಿಯ ಹನುಮಂತಪ್ಪ ಕಾಲೋನಿಯ ಅರ್ಚಕರೊಬ್ಬರು ಅಪಘಾತದಲ್ಲಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.   
ಬಿ.ಕೆ ಲಕ್ಷ್ಮೀಕಾಂತ(೫೦) ಮೃತಪಟ್ಟ ಅರ್ಚಕರಾಗಿದ್ದು, ಇವರು ಪ್ರತಿ ದಿನ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದ ಶ್ರೀ ಕೃಷ್ಣ ದೇವಸ್ಥಾನ ಹಾಗು ಹುಣಸೇಕಟ್ಟೆ ಜಂಕ್ಷನ್, ರಂಗನಾಥಪುರ ಬಿ.ಬಿ ಮೈನ್ಸ್ ಹತ್ತಿರದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಅರ್ಚಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಇವರು ಜು.೧೯ರಂದು ಮಧ್ಯಾಹ್ನ ೨.೩೦ರ ಸಮಯದಲ್ಲಿ ಪೂಜೆ ಮುಗಿಸಿಕೊಂಡು ತಮ್ಮ ದ್ವಿಚಕ್ರ ವಾಹನದಲ್ಲಿ ಮನೆಗೆ ಬರುತ್ತಿದ್ದಾಗ ರಾಮಿನಕೊಪ್ಪ ಕ್ರಾಸ್ ಮತ್ತು ರಂಗನಾಥಪುರ ಮಧ್ಯೆ ಶಿವಮೊಗ್ಗ ಮಾರ್ಗದಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು, ಲಕ್ಷ್ಮೀಕಾಂತ್‌ರವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಸಂಬಂಧ ಲಕ್ಷ್ಮೀಕಾಂತ್‌ರವರ ಸಹೋದರ ರಂಗನಾಥ್‌ರವರು ಕಾರು ಚಾಲಕನ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.