Monday, January 10, 2022

ಕೋವಿಡ್-೧೯ ಬೂಸ್ಟರ್ ಡೋಸ್ ಲಸಿಕಾ ಅಭಿಯಾನಕ್ಕೆ ಚಾಲನೆ

ಭದ್ರಾವತಿ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೋವಿಡ್-೧೯ ಬೂಸ್ಟರ್ ಡೋಸ್ ಲಸಿಕೆ ಅಭಿಯಾನ ಕಾರ್ಯಕ್ರಮದಲ್ಲಿ  ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್ ಲಸಿಕೆ ಪಡೆದುಕೊಂಡರು.
    ಭದ್ರಾವತಿ, ಜ. ೧೦: ಪ್ರಥಮ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ ಸಹ ಅಸ್ವಸ್ಥತೆ ಹೊಂದಿರುವ ೬೦ ವರ್ಷ ಮೇಲ್ಪಟ್ಟವರಿಗೆ ಕೋವಿಡ್-೧೯ ಬೂಸ್ಟರ್ (ಮುನ್ನಚ್ಚರಿಕೆ) ಡೋಸ್ ಲಸಿಕೆ ನೀಡಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್ ಹೇಳಿದರು.
    ಅವರು ಸೋಮವಾರ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೋವಿಡ್-೧೯ ಬೂಸ್ಟರ್ ಡೋಸ್ ಲಸಿಕೆ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ೨ನೇ ಡೋಸ್ ಲಸಿಕೆ ಪಡೆದ ೯ ತಿಂಗಳು ಅಥವಾ ೩೯ ವಾರಗಳನ್ನು ಪೂರೈಸಿರುವವರು ಮಾತ್ರ ಬೂಸ್ಟರ್ ಡೋಸ್ ಲಸಿಕೆ ಪಡೆಯಲು ಅರ್ಹರು. ಈ ಹಿಂದೆ ಎರಡು ಡೋಸ್‌ಗಳಲ್ಲಿ ಪಡೆದಿರುವ ಲಸಿಕೆಯನ್ನೇ ಮುನ್ನಚ್ಚರಿಕೆ ಲಸಿಕೆಯಾಗಿ ಉಚಿತವಾಗಿ ನೀಡಲಾಗುವುದು ಎಂದರು.
    ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಿವಪ್ರಕಾಶ್ ಮಾತನಾಡಿ, ಕೋವಿಡ್-೧೯ ಲಸಿಕೆ ಪಡೆಯುವುದರಿಂದ ಕೋವಿಡ್ ಸೋಂಕು ಬರದಂತೆ ತಡೆಗಟ್ಟಬಹುದಲ್ಲದೆ ಅದರ ತೀವ್ರತೆಯನ್ನು ಕಡಿಮೆ ಮಾಡಬಹುದಾಗಿದೆ ಎಂದರು.  
    ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ನಗರ ಸಭೆ ಅಧ್ಯಕ್ಷೆ ಗೀತ ರಾಜ್‌ಕುಮಾರ್ ಮಾತನಾಡಿ, ಸರ್ಕಾರ ಕಲ್ಪಿಸಿರುವ ಈ ಸೌಲಭ್ಯವನ್ನು ಅರ್ಹ ಫಲಾನುಭವಿಗಳು ಪಡೆದುಕೊಂಡು ತಮ್ಮ ಆರೋಗ್ಯ ರಕ್ಷಿಸಿಕೊಳ್ಳಬೇಕೆಂದರು.
    ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಂಕರಪ್ಪ ಸೇರಿದಂತೆ  ಇನ್ನಿತರರು ಉಪಸ್ಥಿತರಿದ್ದರು.
    ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಟಿ ರಾಜೇಗೌಡ ನಿರೂಪಿಸಿದರು. ವಂದಿಸಿದರು. ಹಿರಿಯ ಆರೋಗ್ಯ ಸಹಾಯಕರಾದ ಆನಂದಮೂರ್ತಿ, ಬಿ.ವಿ ರೇವತಿ, ವಸಂತ, ಆಶಾ ಮೆಂಟರ್ ಸೇರಿದಂತೆ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಆರೋಗ್ಯ ಸಿಬ್ಬಂದಿಗಳು ಭಾಗವಹಿಸಿದ್ದರು.

ಪ್ರೊ. ಚಂದ್ರಶೇಖರ ಪಾಟೀಲ ನಿಧನಕ್ಕೆ ಸಂತಾಪ

ಕನ್ನಡ ಹೋರಾಟಗಾರ, ಹಿರಿಯ ಸಾಹಿತಿ, ಪ್ರೊ. ಚಂದ್ರಶೇಖರ ಪಾಟೀಲ ನಿಧನಕ್ಕೆ ಭದ್ರಾವತಿ ಜಯಶ್ರೀ ವೃತ್ತದ ಹಿರಿಯ ನಾಗರೀಕರ ತಂಗುದಾಣದಲ್ಲಿ ಸೋಮವಾರ ಸಂಜೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
    ಭದ್ರಾವತಿ, ಜ. ೧೦ : ಕನ್ನಡ ಹೋರಾಟಗಾರ, ಹಿರಿಯ ಸಾಹಿತಿ, ಪ್ರೊ. ಚಂದ್ರಶೇಖರ ಪಾಟೀಲ ನಿಧನಕ್ಕೆ ನಗರದ  ಜಯಶ್ರೀ ವೃತ್ತದ ಹಿರಿಯ ನಾಗರೀಕರ ತಂಗುದಾಣದಲ್ಲಿ ಸೋಮವಾರ ಸಂಜೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
    ಪ್ರೊ. ಚಂದ್ರಶೇಖರ ಪಾಟೀಲ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸೂಚಿಸಿ ಮೌನಾಚರಣೆ ನಡೆಸಿ ಕನ್ನಡ ನಾಡು-ನುಡಿಗಾಗಿ ಅವರು ನಡೆಸಿದ ಹೋರಾಟ, ಭಾಷೆಯ ಮೇಲಿನ ಅಭಿಮಾನ, ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳನ್ನು ಸ್ಮರಿಸಲಾಯಿತು.
    ಕನ್ನಡ ಸಾಹಿತ್ಯ ಪರಿಷತ್ ಪ್ರಮುಖರಾದ ಎಂ.ಈ ಜಗದೀಶ್, ಸತೀಶ್, ಜಾನಪದ ಪರಿಷತ್ ಪ್ರಮುಖರಾದ ಕೆ.ಟಿ ಪ್ರಸನ್ನ, ಕನ್ನಡ ಸಾಹಿತ್ಯ ಸಾಂಸ್ಕೃತಿ ವೇದಿಕೆ ಪ್ರಮುಖರಾದ ಕೋಗಲೂರು ತಿಪ್ಪೇಸ್ವಾಮಿ, ಸುಮತಿ ಕಾರಂತ್, ಸಾಹಿತ್ಯಾಭಿಮಾನಿಗಳಾದ ಭಾಗ್ಯಮ್ಮ, ಇಂದಿರಾ, ಕೇರಳ ಸಮಾಜಂ ಪ್ರಧಾನ ಕಾರ್ಯದರ್ಶಿ ಸುರೇಶ್, ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹನುಮಂತಪ್ಪ ಸೇರಿದಂತೆ ಹಿರಿಯ ನಾಗರೀಕರು ಪಾಲ್ಗೊಂಡಿದ್ದರು.

ಯಾವುದೇ ಕಾರಣಕ್ಕೂ ಬೀದಿಬದಿ ವ್ಯಾಪಾರಿಗಳಿಗೆ ತೊಂದರೆ ಕೊಡದಿರಿ : ಬಿ.ಕೆ ಮೋಹನ್

ಭದ್ರಾವತಿ ಹಳೇನಗರದ ಶ್ರೀ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ನಗರಸಭೆ ವತಿಯಿಂದ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರು ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಡೇ ನಲ್ಮ್ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳ ಮತ್ತು ಪಟ್ಟಣ ವ್ಯಾಪಾರಿಗಳ ಸಮಿತಿ ಸದಸ್ಯರುಗಳಿಗೆ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರದಲ್ಲಿ ಹಿರಿಯ ನಗರಸಭೆ ಸದಸ್ಯ ಬಿ.ಕೆ ಮೋಹನ್ ಮಾತನಾಡಿದರು.
    ಭದ್ರಾವತಿ, ಜ. ೧೦: ಬೀದಿ ಬದಿ ವ್ಯಾಪಾರಿಗಳಿಗೆ ಯಾವುದೇ ಕಾರಣಕ್ಕೂ ತೊಂದರೆ ಕೊಡದ ರೀತಿಯಲ್ಲಿ ಅವರ ಸಮಸ್ಯೆಗಳನ್ನು ಬಗೆಹರಿಸುವ ಜೊತೆಗೆ ಅವರಿಗೆ ಸರ್ಕಾರದ ಸೌಲರ್ಭ್ಯಗಳನ್ನು ಕಲ್ಪಿಸಿಕೊಡಲು ಮುಂದಾಗಬೇಕೆಂದು ಹಿರಿಯ ನಗರಸಭಾ ಸದಸ್ಯ ಬಿ.ಕೆ ಮೋಹನ್ ಹೇಳಿದರು.
    ಅವರು ಸೋಮವಾರ ಹಳೇನಗರದ ಶ್ರೀ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ನಗರಸಭೆ ವತಿಯಿಂದ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರು ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಡೇ ನಲ್ಮ್ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳ ಮತ್ತು ಪಟ್ಟಣ ವ್ಯಾಪಾರಿಗಳ ಸಮಿತಿ ಸದಸ್ಯರುಗಳಿಗೆ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
    ಬೀದಿಬದಿ ವ್ಯಾಪಾರಿಗಳು ಬದುಕು ಸಾಗಿಸುವುದೇ ಕಷ್ಟಕರವಾಗಿದೆ.  ಈ ನಡುವೆ ಹಲವಾರು ಸಮಸ್ಯೆಗಳು ಮತ್ತಷ್ಟು ಸಂಕಷ್ಟಕ್ಕೆ ತಳ್ಳುತ್ತಿವೆ. ಪ್ರಸ್ತುತ ಅವರಿಗೆ ಇನ್ನೂ ಹೆಚ್ಚಿನ ಅರಿವು ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ಅವರೊಂದಿಗೆ ನೇರವಾಗಿ ಚರ್ಚಿಸುವ ಮೂಲಕ ಅವರ ಸಮಸ್ಯೆಗಳಿಗೆ ಕಾರಣಗಳಿನ್ನು  ಕಂಡು ಕೊಳ್ಳುವ ಜೊತೆಗೆ ಯಾವುದೇ ಅಡೆತಡೆ ಇಲ್ಲದೆ ನೆಮ್ಮದಿಯಿಂದ ವ್ಯಾಪಾರ-ವಹಿವಾಟು ನಡೆಸಿಕೊಂಡು ಹೋಗುವ ವಾತಾವರಣ ನಿರ್ಮಿಸಿಕೊಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ನಡೆದುಕೊಳ್ಳಬೇಕೆಂದರು.
    ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಚನ್ನಪ್ಪ, ಪೌರಯುಕ್ತ ಕೆ. ಪರಮೇಶ್ ಸೇರಿದಂತೆ ಇನ್ನಿತರರು ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡಲಾಯಿತು.
    ಸದಸ್ಯರಾದ ವಿಜಯಮ್ಮ, ಸರ್ವಮಂಗಳ, ಬಸವರಾಜ ಬಿ. ಆನೇಕೊಪ್ಪ, ಉದಯಕುಮಾರ್, ಅನುಪಮ, ಅನಿತಾ, ಶಶಿಕಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಮುದಾಯ ಸಂಘಟನಾ ಅಧಿಕಾರಿ ಸುವಾಸಿನಿ ಕಾರ್ಯಕ್ರಮ ನಿರೂಪಿಸಿದರು.

ಅಂಗನವಾಡಿ ಸಹಾಯಕಿಯಕಿ, ಕಾರ್ಯಕರ್ತೆಯರ ಹುದ್ದೆ ನೇಮಕಾತಿಯಲ್ಲಿ ಅಕ್ರಮ

ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ಜಿ.ಪಂ. ಮಾಜಿ ಸದಸ್ಯ ಎಸ್. ಮಣಿಶೇಖರ್ ನೇತೃತ್ವದಲ್ಲಿ ಪ್ರತಿಭಟನೆ


ಭದ್ರಾವತಿ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರು ಅಂಗನವಾಡಿ ಸಹಾಯಕಿ ಮತ್ತು ಕಾರ್ಯಕರ್ತೆಯರ ಹುದ್ದೆ ನೇಮಕಾತಿಯಲ್ಲಿ ಅಕ್ರಮ ನಡೆಸಿದ್ದಾರೆಂದು ಆರೋಪಿಸಿ ಸೋಮವಾರ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್ ನೇತೃತ್ವದಲ್ಲಿ ತರೀಕೆರೆ ರಸ್ತೆಯ ಧರ್ಮಶಾಸ್ತ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಮೀಪದಲ್ಲಿರುವ ಯೋಜನಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಜ. ೧೦: ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರು ಅಂಗನವಾಡಿ ಸಹಾಯಕಿ ಮತ್ತು ಕಾರ್ಯಕರ್ತೆಯರ ಹುದ್ದೆ ನೇಮಕಾತಿಯಲ್ಲಿ ಅಕ್ರಮ ನಡೆಸಿದ್ದಾರೆಂದು ಆರೋಪಿಸಿ ಸೋಮವಾರ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಮಣಿಶೇಖರ್ ನೇತೃತ್ವದಲ್ಲಿ ತರೀಕೆರೆ ರಸ್ತೆಯ ಧರ್ಮಶಾಸ್ತ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಮೀಪದಲ್ಲಿರುವ ಯೋಜನಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
    ನಗರದಲ್ಲಿ ಸಿ. ಸುರೇಶ್‌ರವರು ಸುಮಾರು ೩ ವರ್ಷಗಳವರೆಗೆ ಯೋಜನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಈ ಸಂದರ್ಭದಲ್ಲಿ ಹಲವಾರು ಅಕ್ರಮಗಳನ್ನು ನಡೆಸಿದ್ದಾರೆ. ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿ ಸರ್ವಾಧಿಕಾರಿಯಂತೆ ತಮಗೆ ಇಷ್ಟ ಬಂದವರನ್ನು ನೇಮಕಾತಿ ಮಾಡಿಕೊಳ್ಳುವ ಮೂಲಕ ಅರ್ಹ ಅಭ್ಯರ್ಥಿಗಳಿಗೆ ದ್ರೋಹ ಬಗೆದಿದ್ದಾರೆ. ಪ್ರಸ್ತುತ ನಮಗೆ ತಿಳಿದು ಬಂದಿರುವ ಮಾಹಿತಿಯಂತೆ ತಾಲೂಕಿನ ಕುರುಬರವಿಠಲಾಪುರ ಅಂಗನವಾಡಿ ಕಾರ್ಯಕರ್ತೆ ಹುದ್ದೆ ಹಾಗು ಸಿದ್ಲಿಪುರ(ಎರಡು), ಬೋವಿಕಾಲೋನಿ(ನಾಲ್ಕು), ಕೊಮಾರನಹಳ್ಳಿ ಮತ್ತು ಕಬಳಿಕಟ್ಟೆ ಅಂಗನವಾಡಿ ಸಹಾಯಕಿ ಹುದ್ದೆಗಳಲ್ಲಿ ಅಕ್ರಮವೆಸಗಿದ್ದಾರೆಂದು ಪ್ರತಿಭಟನಾಕಾರರು ಆರೋಪಿಸಿದರು.
    ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು ಈ ಅಕ್ರಮ ಕುರಿತು ಪ್ರಶ್ನಿಸಲು ಮುಂದಾದ್ದಲ್ಲಿ ಉಡಾಫೆ ಉತ್ತರ ನೀಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ತಕ್ಷಣ ಈ ಅಧಿಕಾರಿಯನ್ನು ಕರ್ತವ್ಯದಿಂದ ಅಮಾನತುಗೊಳಿಸಿ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು.
    ಪ್ರತಿಭಟನೆಯಲ್ಲಿ ಬಿಡಿಯೂಟ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಆರ್. ಹನುಮಮ್ಮ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಕರ್ನಾಟಕ ಜನಸೈನ್ಯ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್, ಆರ್. ನಾಗೇಶ್, ಮುಕುಂದ, ಶೋಭ ರವಿಕುಮಾರ್, ಅನಿಲ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.