Thursday, December 16, 2021

ಡಿ.೧೭ರಂದು ಸಂಕೀರ್ತನೆ ಶೋಭಾ ಯಾತ್ರೆ

    ಭದ್ರಾವತಿ, ಡಿ. ೧೬: ಹಿಂದೂ ಧರ್ಮ ಸಂಸ್ಕೃತಿ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಬಜರಂಗದಳ ಕಾರ್ಯಕರ್ತರು ಈ ಬಾರಿ  ಕೈಗೊಂಡಿರುವ ದತ್ತ ಮಾಲೆ ಅಭಿಯಾನ ಭಾನುವಾರ ಮುಕ್ತಾಯಗೊಳ್ಳಲಿದ್ದು, ಈ ಹಿನ್ನಲೆಯಲ್ಲಿ ಡಿ.೧೭ರ ಶುಕ್ರವಾರ ಸಂಕೀರ್ತನೆ ಶೋಭಾ ಯಾತ್ರೆ ಹಮ್ಮಿಕೊಳ್ಳಲಾಗಿದೆ.
    ಡಿ.೮ರಿಂದ ಆರಂಭಗೊಂಡಿರುವ ಅಭಿಯಾನದಲ್ಲಿ ಈ ಬಾರಿ ಸುಮಾರು ೧೫೦ ಕಾರ್ಯಕರ್ತರು ಮಾಲಾಧಾರಣೆ ಮಾಡಿದ್ದು, ಪ್ರತಿವರ್ಷ ಅಭಿಯಾನವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.
    ಸಂಕೀರ್ತನೆ ಶೋಭಾ ಯಾತ್ರೆ ಸಂಜೆ ೪ ಗಂಟೆಗೆ ಹೊಸಮನೆ ಶಿವಾಜಿ ವೃತ್ತದಿಂದ ಆರಂಭಗೊಳ್ಳಲಿದ್ದು, ನೂತನ ವಿಧಾನಪರಿಷತ್ ಸದಸ್ಯ ಡಿ.ಎಸ್ ಅರುಣ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಇ ಕಾಂತೇಶ್ ಸೇರಿದಂತೆ ಇನ್ನಿತರರು ಚಾಲನೆ ನೀಡಲಿದ್ದಾರೆ. ಶೋಭಾ ಯಾತ್ರೆ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದವರೆಗೆ ನಡೆಯಲಿದೆ. ಮಾಲಾಧಾರಿಗಳು ಭಾನುವಾರ ಬೆಳಿಗ್ಗೆ ದತ್ತಪೀಠಕ್ಕೆ ತೆರಳಲಿದ್ದಾರೆ.
    ವಿಶ್ವ ಹಿಂದೂ ಪರಿಷತ್ ಜಿಲಾಧ್ಯಕ್ಷ ವಾಸುದೇವನ್, ದಕ್ಷಿಣ ಪ್ರಾಂತ್ಯ ಉಪಾಧ್ಯಕ್ಷ ಹಾ. ರಾಮಪ್ಪ ಸೇರಿದಂತೆ ಇನ್ನಿತರ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಶೋಭಾ ಯಾತ್ರೆ ಯಶಸ್ವಿಗೊಳಿಸುವಂತೆ ಬಜರಂಗದಳ ಜಿಲ್ಲಾ ಸಹ ಸಂಚಾಲಕ ರಾಘವನ್ ವಡಿವೇಲು ಕೋರಿದ್ದಾರೆ.

ಅತ್ತಿಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಜೃಂಭಣೆಯಿಂದ ಜರುಗಿದ ಹನುಮ ಜಯಂತಿ


ಭದ್ರಾವತಿ ತಾಲೂಕಿನ ಅತ್ತಿಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀತಾರಾಮಪುರ(ಮುಳ್ಕೆರೆ) ಗ್ರಾಮದ  ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಹನುಮ ಜಯಂತಿ ಉತ್ಸವ ಮತ್ತು ನೂತನ ಉತ್ಸವ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.
    ಭದ್ರಾವತಿ, ಡಿ. ೧೬: ತಾಲೂಕಿನ ಅತ್ತಿಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀತಾರಾಮಪುರ(ಮುಳ್ಕೆರೆ) ಗ್ರಾಮದ  ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಹನುಮ ಜಯಂತಿ ಉತ್ಸವ ಮತ್ತು ನೂತನ ಉತ್ಸವ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಗುರುವಾರ  ವಿಜೃಂಭಣೆಯಿಂದ ನೆರವೇರಿತು.
    ಪಂಚಾಮೃತ ಅಭಿಷೇಕ, ಬ್ರಹ್ಮ ಕೂರ್ಚಾ ಹೋಮ, ನವಗ್ರಹ ಹೋಮ, ಮಾರುತಿ ಮೂಲ ಮಂತ್ರ ಹೋಮ, ರಕ್ಷಾ ಸುದರ್ಶನ ಹೋಮ ಮತ್ತು ದುರ್ಗಾ ಹೋಮ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
    ಇದಕ್ಕೂ ಮೊದಲು ಶ್ರೀ ಸ್ವಾಮಿಯ ಪಲ್ಲಕ್ಕಿ ಉತ್ಸವ ಮೆರವಣಿಗೆ ನಡೆಸಲಾಯಿತು. ಮಧ್ಯಾಹ್ನ ಸಮಾಜ ಸೇವಕ ಪೊಲೀಸ್ ಉಮೇಶ್ ನೇತೃತ್ವದ ಸ್ನೇಹ ಜೀವಿ ಬಳಗದಿಂದ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಗ್ರಾಮದ ಮುಖಂಡರು, ಗ್ರಾಮಸ್ಥರು ಸೇರಿದಂತೆ ನೂರಾರು ಭಕ್ತಾಧಿಗಳು ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.
        ಕಣಿವೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ :
    ಅರಣ್ಯ ಇಲಾಖೆ ವ್ಯಾಪ್ತಿಯ ಅತ್ತಿಗುಂದ ಗ್ರಾಮದ ಕಾಡಂಚಿನಲ್ಲಿರುವ ಕಣಿವೆ ಶ್ರೀ ಆಂಜನೇಯ  ಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ನಡೆಯಿತು.
    ಪ್ರತಿ ವರ್ಷ ಹನುಮ ಜಯಂತಿಯಂದು ಹೋಮ-ಹವನ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದ್ದು, ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ನೂರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು.



ಅರಣ್ಯ ಇಲಾಖೆ ವ್ಯಾಪ್ತಿಯ ಭದ್ರಾವತಿ ಅತ್ತಿಗುಂದ ಗ್ರಾಮದ ಕಾಡಂಚಿನಲ್ಲಿರುವ ಕಣಿವೆ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತಿ ನಡೆಯಿತು

ಅದ್ದೂರಿಯಾಗಿ ಜರುಗಿದ ಹುತ್ತಾಕಾಲೋನಿ ಶ್ರೀ ವೀರಾಂಜನೇಯಸ್ವಾಮಿ ರಥೋತ್ಸವ

ಪ್ರತಿ ವರ್ಷದಂತೆ ಈ ಬಾರಿ ಸಹ ಭದ್ರಾವತಿ ನಗರಸಭೆ ವ್ಯಾಪ್ತಿಯ ಹುತ್ತಾ ಕಾಲೋನಿ ಶ್ರೀ ವೀರಾಂಜನೇಯಸ್ವಾಮಿ ರಥೋತ್ಸವ ಗುರುವಾರ ವಿಜೃಂಭಣೆಯಿಂದ ನಡೆಯಿತು.
    ಭದ್ರಾವತಿ, ಡಿ. ೧೬:  ಪ್ರತಿ ವರ್ಷದಂತೆ ಈ ಬಾರಿ ಸಹ ನಗರಸಭೆ ವ್ಯಾಪ್ತಿಯ ಹುತ್ತಾ ಕಾಲೋನಿ ಶ್ರೀ ವೀರಾಂಜನೇಯಸ್ವಾಮಿ ರಥೋತ್ಸವ ಗುರುವಾರ ವಿಜೃಂಭಣೆಯಿಂದ ನಡೆಯಿತು.
    ರಥೋತ್ಸವ ಅಂಗವಾಗಿ ಗಣಪತಿ ಪೂಜೆ, ಪುಣ್ಯಾಹ ಪ್ರಧಾನ ಹೋಮ, ರಥಶುದ್ಧಿ, ಅಷ್ಟಾವಧಾನ ಸೇವಾ, ಮಹಾಪೂಜೆ ಮತ್ತು ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
    ಮಧ್ಯಾಹ್ನ ೧೨.೩೦ಕ್ಕೆ ದೇವಸ್ಥಾನ ಮುಂಭಾಗ ಆರಂಭಗೊಂಡ ರಥೋತ್ಸವ ವಿಶ್ವೇಶ್ವರಾಯ ಆಟೋ ನಿಲ್ದಾಣದವರೆಗೂ ಸಾಗಿತು. ಆರಂಭದಲ್ಲಿ ಭಕ್ತಾಧಿಗಳು ಪಟಾಕಿ ಸಿಡಿಸಿ ಶ್ರೀ ಆಂಜನೇಯಸ್ವಾಮಿಗೆ ಜಯಘೋಷ ಹಾಕಿದರು. ಶ್ರೀ ಸತ್ಯಸಾಯಿ ಸೇವಾಕರ್ತರಿಂದ ಭಜನೆ ನಡೆಯಿತು. ನಾದಸ್ವರ ಮತ್ತು ಡೊಳ್ಳು ಕುಣಿತ ಮತ್ತಷ್ಟು ಮೆರಗು ನೀಡಿದವು. ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ನಡೆದವು.
    ರಥೋತ್ಸವದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಅಧ್ಯಕ್ಷೆ ಗೀತಾರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಕೆ. ಪರಮೇಶ್, ಈ ಭಾಗದ ವಾರ್ಡ್ ಸದಸ್ಯ ಆರ್. ಮೋಹನ್‌ಕುಮಾರ್ ಸೇರಿದಂತೆ ಎಲ್ಲಾ ನಗರಸಭಾ ಸದಸ್ಯರು, ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಪ್ರಮುಖರು, ಮಹಿಳಾ ಸಂಘಟನೆಗಳ ಪ್ರಮುಖರು ಸೇರಿದಂತೆ ಜನ್ನಾಪುರ, ಹುತ್ತಾಕಾಲೋನಿ, ಜಿಂಕ್‌ಲೈನ್, ವೇಲೂರು ಶೆಡ್, ಬಂಢಾರಹಳ್ಳಿ, ವಿದ್ಯಾಮಂದಿರ, ನ್ಯೂಟೌನ್, ಕಾಗದನಗರ ಸೇರಿದಂತೆ ವಿವಿಧೆಡೆಗಳಿಂದ ಭಕ್ತಾಧಿಗಳು ಆಗಮಿಸಿದ್ದರು.
    ಕಾಂಗ್ರೆಸ್ ಮುಖಂಡ, ದಾನಿ ಎಚ್.ಸಿ ದಾಸೇಗೌಡ ಅವರಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಅಲ್ಲದೆ ಭಕ್ತರಿಂದ ಅಲ್ಲಲ್ಲಿ  ಮಜ್ಜಿಗೆ, ಪಾನಕ ವಿತರಣೆ ಸೇವೆ ನಡೆಯಿತು.


ಪ್ರತಿ ವರ್ಷದಂತೆ ಈ ಬಾರಿ ಸಹ ಭದ್ರಾವತಿ ನಗರಸಭೆ ವ್ಯಾಪ್ತಿಯ ಹುತ್ತಾ ಕಾಲೋನಿ ಶ್ರೀ ವೀರಾಂಜನೇಯಸ್ವಾಮಿ ರಥೋತ್ಸವ ಗುರುವಾರ ವಿಜೃಂಭಣೆಯಿಂದ ನಡೆಯಿತು. ರಥೋತ್ಸವದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಅಧ್ಯಕ್ಷೆ ಗೀತಾರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಪೌರಾಯುಕ್ತ ಕೆ. ಪರಮೇಶ್, ಈ ಭಾಗದ ವಾರ್ಡ್ ಸದಸ್ಯ ಆರ್. ಮೋಹನ್‌ಕುಮಾರ್ ಸೇರಿದಂತೆ ನಗರದ ವಿವಿಧೆಡೆಗಳಿಂದ ಭಕ್ತಾಧಿಗಳು ಪಾಲ್ಗೊಂಡಿದ್ದರು.

ಪ್ರೊ. ಬಿ. ಕೃಷ್ಣಪ್ಪ ಪ್ರಶಸ್ತಿ ಪುರಸ್ಕೃತ ಸಣ್ಣದೇವಯ್ಯ ನಿಧನ

ಸಣ್ಣದೇವಯ್ಯ
    ಭದ್ರಾವತಿ, ಡಿ. ೧೬: ಎಂಪಿಎಂ ನಿವೃತ್ತ ಉದ್ಯೋಗಿ, ಪ್ರೊ. ಬಿ. ಕೃಷ್ಣಪ್ಪ ಪ್ರಶಸ್ತಿ ಪುರಸ್ಕೃತ ಸಣ್ಣದೇವಯ್ಯ(೭೫) ಗುರುವಾರ ನಿಧನ ಹೊಂದಿದರು.
    ನಗರಸಭೆ ವಾರ್ಡ್ ನಂ.೧೪ರ ಹೊಸಮನೆ ನೃಪತುಂಗ ನಗರದಲ್ಲಿ ವಾಸವಾಗಿದ್ದ ಸಣ್ಣದೇವಯ್ಯನವರು ದಲಿತ ನೌಕರರ ಒಕ್ಕೂಟದ ತಾಲೂಕು ಶಾಖೆ ಅಧ್ಯಕ್ಷೆ, ಪುತ್ರಿ ಎಸ್. ಉಮಾ ಸೇರಿದಂತೆ ಎರಡು ಹೆಣ್ಣು ಹಾಗು ಎರಡು ಗಂಡು ಮಕ್ಕಳನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಶುಕ್ರವಾರ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರ ಭೂಮಿ ನೆರವೇರಲಿದೆ.
    ಸಣ್ಣದೇವಯ್ಯ ದಲಿತ ಚಳುವಳಿಗಳಲ್ಲಿ ಪಾಲ್ಗೊಳ್ಳುವ ಮೂಲಕ ಶೋಷಿತರು, ಬಡ ವರ್ಗದವರ ಹೋರಾಟದ ಧ್ವನಿಯಾಗಿದ್ದರು. ಜಾತಿರಹಿತ ಸಮಾಜ ನಿರ್ಮಾಣ ಮಾಡುವ ಮೂಲಕ ಎಲ್ಲರೂ ಸಮಾನವಾಗಿ ಬದುಕಬೇಕೆಂಬ ಪರಿಕಲ್ಪನೆ ಹೊಂದಿದ್ದರು.  
    ಇವರ ನಿಧನಕ್ಕೆ ದಲಿತ ಸಂಘರ್ಷ ಸಮಿತಿ, ದಲಿತ ನೌಕರರ ಒಕ್ಕೂಟ, ಛಲವಾದಿ ಮಹಾಸಭಾ ಸೇರಿದಂತೆ ಇನ್ನಿತರ ಸಂಘಟನೆಗಳು ಸಂತಾಪ ಸೂಚಿಸಿವೆ.

ಶತಾಯುಷಿ ಬ್ಯಾಡಗಿ ರಾಮಚಂದ್ರರಾವ್ ನಿಧನ

ಬ್ಯಾಡಗಿ ರಾಮಚಂದ್ರರಾವ್
    ಭದ್ರಾವತಿ, ಡಿ. ೧೬: ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ ಸಮೀಪದ ನಿವಾಸಿ, ಶತಾಯುಷಿ ಬ್ಯಾಡಗಿ ರಾಮಚಂದ್ರರಾವ್(೧೦೨) ಗುರುವಾರ ನಿಧನ ಹೊಂದಿದರು.
    ರಾಮಚಂದ್ರರಾವ್ ೩ ಗಂಡು ಹಾಗು ೩ ಹೆಣ್ಣು ಮಕ್ಕಳನ್ನು ಹೊಂದಿದ್ದರು. ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿಯಲ್ಲಿ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು. ಅಲ್ಲದೆ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯಲ್ಲಿ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
    ಇವರ ಅಂತ್ಯಕ್ರಿಯೆ ಮಧ್ಯಾಹ್ನ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಇವರ ನಿಧನಕ್ಕೆ ನಗರದ ಅನೇಕ ಗಣ್ಯರು, ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.