Sunday, July 4, 2021

ಪೈಂಟರ್‍ಸ್ ಸಂಘಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧ : ಸಂಗಮೇಶ್ವರ್

ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರದ ಶ್ರೀ ಶಿವ ಸಾಯಿ ಕೃಪಾ ಧಾಮದಲ್ಲಿ  ತಾಲೂಕು ಪೈಂಟರ್‍ಸ್ ಸಂಘದ ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಹಾಗು ದಿನಸಿ ಸಾಮಗ್ರಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
   ಭದ್ರಾವತಿ, ಜು. ೪: ನಗರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಪೈಂಟರ್‍ಸ್ ಸಂಘಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಶಾಸಕ ಬಿ.ಕೆ ಸಂಗಮೇಶ್ವರ್ ಭರವಸೆ ನೀಡಿದರು.
    ಅವರು ನ್ಯೂಟೌನ್ ಶ್ರೀ ಸತ್ಯಸಾಯಿ ಸೇವಾ ಕ್ಷೇತ್ರದ ಶ್ರೀ ಶಿವ ಸಾಯಿ ಕೃಪಾ ಧಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ದಿನಸಿ ಸಾಮಗ್ರಿ ವಿತರಣೆ ಹಾಗು ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
   ಪೈಂಟರ್‍ಸ್ ಸಂಘಕ್ಕೆ ಸರ್ಕಾರದಿಂದ ಲಭಿಸುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಜೊತೆಗೆ ವೈಯಕ್ತಿಕವಾಗಿ ಸಹ ನೆರವು ನೀಡಲು ಬದ್ಧ ಎಂದರು.
   ಸಂಘದ ಗೌರವಾಧ್ಯಕ್ಷ ಶಿವಣ್ಣ, ಗೌರವ ಸಲಹೆಗಾರ ಸಂಪತ್, ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಪಚ್ಚಿಯಪ್ಪ, ಖಜಾಂಚಿ ಕುಮಾರ್, ಕಾರ್ಯದರ್ಶಿ ಮಂಜುನಾಥ್, ಸಹ ಕಾರ್ಯದರ್ಶಿ ರಾಘವೇಂದ್ರ ಹಾಗು ಪದಾಧಿಕಾರಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
   ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ತಾಲೂಕು ಗೌರವಾಧ್ಯಕ್ಷ ಸುರೇಶ್‌ಕುಮಾರ್, ಸಂಘಟನಾ ಕಾರ್ಯದರ್ಶಿ ಅಭಿಲಾಷ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬಜರಂಗದಳ ಕಾರ್ಯಕರ್ತರ ಸೇವೆಗೆ ಸವಿತಾ ಸಮಾಜ ಶ್ಲಾಘನೆ

ಕೋವಿಡ್-೧೯ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಉಚಿತವಾಗಿ ನೆರವೇರಿಸುವ ಮೂಲಕ ಮಾನವೀಯತೆ ಮೆರೆಯುತ್ತಿರುವ ಭದ್ರಾವತಿ ನಗರದ ಬಜರಂಗದಳ ಕಾರ್ಯಕರ್ತರನ್ನು ತಾಲೂಕು ಸವಿತಾ ಸಮಾಜದ ವತಿಯಿಂದ ವಿಶೇಷವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
   ಭದ್ರಾವತಿ, ಜು. ೪:  ಕೋವಿಡ್-೧೯ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಉಚಿತವಾಗಿ ನೆರವೇರಿಸುವ ಮೂಲಕ ಮಾನವೀಯತೆ ಮೆರೆಯುತ್ತಿರುವ ನಗರದ ಬಜರಂಗದಳ ಕಾರ್ಯಕರ್ತರನ್ನು ತಾಲೂಕು ಸವಿತಾ ಸಮಾಜದ ವತಿಯಿಂದ ವಿಶೇಷವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
   ಸಮಾಜದ ಅಧ್ಯಕ್ಷ ವಿಶ್ವನಾಥ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಮುಖರು, ಬಜರಂಗದಳ ಕಾರ್ಯಕರ್ತರ ಸೇವೆಗೆ ಯಾರಿಂದಲೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಲ್ಲದೆ ಸೇವಾ ಕಾರ್ಯ ಭವಿಷ್ಯದ ಯುವ ಪೀಳಿಗೆಗೆ ಮಾದರಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
   ನಗರಸಭೆ ೬ನೇ ವಾರ್ಡ್‌ಗೆ ನೂತನವಾಗಿ ಆಯ್ಕೆಯಾಗಿರುವ ಸದಸ್ಯ ಆರ್. ಶ್ರೇಯಸ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಎಂ. ಪರಮೇಶ್ ಹಾಗು ಸವಿತಾ ಸಮಾಜದ ಪದಾಧಿಕಾರಿಗಳು ಹಾಗು ಯುವ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಜು.೫ರಂದು ಬೆಲೆ ಏರಿಕೆ ಖಂಡಿಸಿ ಜೆಡಿಎಸ್ ಪ್ರತಿಭಟನೆ

ಆರ್. ಕರುಣಾಮೂರ್ತಿ
     ಭದ್ರಾವತಿ, ಜು. ೪: ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಬೆಲೆ ಏರಿಕೆ ನೀತಿ ಖಂಡಿಸಿ ಜು.೫ರಂದು ಬೆಳಿಗ್ಗೆ ೧೧ ಗಂಟೆಗೆ ತಾಲೂಕು ಕಛೇರಿ ಮಿನಿ ವಿಧಾನಸೌಧದ ಮುಂಭಾಗ ಜಾತ್ಯಾತೀತ ಜನತಾದಳ ವತಿಯಿಂದ ಶಾರದ ಅಪ್ಪಾಜಿ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
    ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಹಾಗು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರು ಬದುಕು ಸಾಗಿಸುವುದು ಕಷ್ಟಕರವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಲೆ ಏರಿಕೆಗೆ ಕಡಿವಾಣ ಹಾಕುವ ಮೂಲಕ ಜನ ಸಾಮಾನ್ಯರು ನೆಮ್ಮದಿಯಾಗಿ ಬದುಕು ಸಾಗಿಸಲು ಅವಕಾಶ ಕಲ್ಪಿಸಿಕೊಡುವಂತೆ ಆಗ್ರಹಿಸಿ ಪ್ರಧಾನ ಮಂತ್ರಿಗಳಿಗೆ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು.
    ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು, ವಿವಿಧ ಸಂಘ-ಸಂಸ್ಥೆಗಳು, ಜನ ಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರತಿಭಟನೆ ಯಶಸ್ವಿಗೊಳಿಸುವಂತೆ ಪಕ್ಷದ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ ಕೋರಿದ್ದಾರೆ.