Saturday, March 1, 2025

ಮಾ.೨ರಂದು ಮಧು ಬಂಗಾರಪ್ಪ ಹುಟ್ಟುಹಬ್ಬ ಆಚರಣೆ


    ಭದ್ರಾವತಿ: ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಹುಟ್ಟುಹಬ್ಬದ ಅಂಗವಾಗಿ ಮಾ.೨ರ ಭಾನುವಾರ ಗಾಂಧಿನಗರದ ಶ್ರೀ ಬಲಮುರಿ ಗಣಪತಿ ದೇವಸ್ಥಾನದಲ್ಲಿ ಬೆಳಿಗ್ಗೆ ೧೦ ಗಂಟೆಗೆ ವಿಶೇಷ ಪೂಜೆ ಹಾಗು ೧೧ ಗಂಟೆಗೆ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಾಲು-ಹಣ್ಣು-ಬ್ರೆಡ್ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 
    ಕರ್ನಾಟಕ ರಾಜ್ಯ ಗ್ರಾಮೀಣ ಮೂಲಕ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ದೇವಸ್ಥಾನದಲ್ಲಿ ವಿಶೇಷ ಪೂಜೆ ನಂತರ ಸಿಹಿ ಹಂಚಿಕೆ ನಡೆಯಲಿದೆ. ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸುವಂತೆ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್ ಕೋರಿದ್ದಾರೆ. 

ಮಹಿಳೆಯರು ಸೈಬರ್ ಅಪರಾಧ ಕುರಿತು ಹೆಚ್ಚಿನ ಮಾಹಿತಿ ಹೊಂದಿ : ಡಾ. ಶುಭಾ ಮರವಂತೆ

ಭದ್ರಾವತಿ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ `ಪ್ರೇರಣಾ ಸ್ಪೂರ್ತಿ ಪಸರಿಸೋಣ!' ಉಪಕ್ರಮದಡಿ ಹಮ್ಮಿಕೊಂಡಿದ್ದ `ಮಹಿಳಾ ಸಬಲೀಕರಣ, ನೈರ್ಮಲ್ಯ ಮತ್ತು ಸುರಕ್ಷತೆ' ವಿಶೇಷ ಉಪನ್ಯಾಸ ಕಾರ್ಯಕ್ರಮ ಕುವೆಂಪು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ. ಶುಭಾ ಮರವಂತೆ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.  
    ಭದ್ರಾವತಿ: ಮಹಿಳೆಯರು ಸೈಬರ್ ಅಪರಾಧ ಕುರಿತು ಹೆಚ್ಚಿನ ಮಾಹಿತಿ ಹೊಂದುವ ಮೂಲಕ ಎಚ್ಚರಿಕೆ ವಹಿಸಬೇಕೆಂದು ಕುವೆಂಪು ವಿಶ್ವವಿದ್ಯಾಲಯದ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಡಾ. ಶುಭಾ ಮರವಂತೆ ಹೇಳಿದರು. 
    ಅವರು ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ `ಪ್ರೇರಣಾ ಸ್ಪೂರ್ತಿ ಪಸರಿಸೋಣ!' ಉಪಕ್ರಮದಡಿ ಹಮ್ಮಿಕೊಂಡಿದ್ದ `ಮಹಿಳಾ ಸಬಲೀಕರಣ, ನೈರ್ಮಲ್ಯ ಮತ್ತು ಸುರಕ್ಷತೆ' ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
    ಆಧುನಿಕ ಜಗತ್ತಿನಲ್ಲಿ ಮಹಿಳೆ ಪಾತ್ರ ಹೆಚ್ಚಿನದ್ದಾಗಿದೆ. ಪ್ರಸ್ತುತ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಇದರ ಬಗ್ಗೆ ಹೆಣ್ಣು ಮಕ್ಕಳು ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂದರು. 
    ಕಾಲೇಜಿನ ಪ್ರಾಂಶುಪಾಲರಾದ ಡಾ. ಶೈಲಜಾ ಎಸ್ ಹೊಸಳ್ಳೇರ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ವಿಭಾಗದ ವಿ.ಬಿ ಚಿರಂಜೀವಿ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. 
    ವಿದ್ಯಾರ್ಥಿನಿಯರಾದ ಎಸ್. ಶಿಲ್ಪ ಮತ್ತು ಪ್ರತೀಕ್ಷಾ ಪ್ರಾರ್ಥಿಸಿ, ಲಿಂಗೇಶ್ ಸ್ವಾಗತಿಸಿದರು. ಯತೀಶ್ ಎಲ್ ಗೌಡ ಕಾರ್ಯಕ್ರಮ ನಿರೂಪಿಸಿ, ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥೆ ಮತ್ತು ಪ್ರೇರಣಾ ಸಂಚಾಲಕಿ ಡಾ. ಟಿ.ಜಿ ಉಮಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಾಧ್ಯಾಪಕರಾದ ಮುಜಾಮಿಲ್ ಖಾನ್ ಮತ್ತು ಮೊಹಮ್ಮದ್ ನಜೀಬ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿನಿ ಚತುರ್ಥಿ ವಂದಿಸಿದರು. 

ನಿವೃತ್ತ ಪ್ರಾಧ್ಯಾಪಕ ಪ್ರೊ. ಟಿ.ಎನ್ ಮಲ್ಲೇಶಪ್ಪ ನಿಧನ

ಪ್ರೊ. ಟಿ.ಎನ್ ಮಲ್ಲೇಶಪ್ಪ 
    ಭದ್ರಾವತಿ: ನಗರದ ಜನ್ನಾಪುರ ಕಿತ್ತೂರು ರಾಣಿ ಚೆನ್ನಮ್ಮ ಬಡಾವಣೆ(ಕೆ.ಸಿ ಬ್ಲಾಕ್) ನಿವಾಸಿ,  ನಿವೃತ್ತ ಪ್ರಾಧ್ಯಾಪಕ ಪ್ರೊ. ಟಿ.ಎನ್ ಮಲ್ಲೇಶಪ್ಪ(೭೨) ಶನಿವಾರ ಬೆಳಿಗ್ಗೆ ನಿಧನ ಹೊಂದಿದರು. 
    ಇವರಿಗೆ ಪತ್ನಿ ಉಪನ್ಯಾಸಕಿ ಜಮುನಾ, ಇಬ್ಬರು ಪುತ್ರರಾದ ಡಾ. ಕುಶಾಲ್, ಡಾ. ಕಶ್ಯಪ್ ಇದ್ದಾರೆ. ಅನಾರೋಗ್ಯಕ್ಕೆ ಒಳಗಾಗಿದ್ದ ಇವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.    
    ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ಮಲ್ಲೇಶಪ್ಪನವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಪ್ರಾಧ್ಯಾಪಕರಾಗಿದ್ದರು. ಇವರ ಅಂತ್ಯ ಸಂಸ್ಕಾರ ಮಾ.೨ರ ಭಾನುವಾರ ಬೆಳಿಗ್ಗೆ ನಡೆಯಲಿದೆ. 
    ಇವರ ನಿಧನಕ್ಕೆ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು, ಶಿಷ್ಯ ವೃಂದ ಹಾಗು ನಗರದ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಅಸಹಾಯಕ ಅಂಗವಿಕಲ ಕುಟುಂಬದವರ ಸ್ವಾಭಿಮಾನದ ಬದುಕಿಗೆ ಸಹಾಯ ಹಸ್ತ

ಭದ್ರಾವತಿ ನಗರದಲ್ಲಿ ನಿಸ್ವಾರ್ಥತೆಯಿಂದ ಹಲವಾರು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ  ಶ್ರೀ ತಿರುಮಲ ಚಾರಿಟಬಲ್ ಫೌಂಡೇಷನ್ ವತಿಯಿಂದ ಅಸಹಾಯಕ ಅಂಗವಿಕಲ ಕುಟುಂಬದವರಿಗೆ ಸ್ವಾಭಿಮಾನದಿಂದ ಜೀವನ ಸಾಗಿಸಲು ತರಕಾರಿ ಗಾಡಿ ಹಾಗೂ ಅದಕ್ಕೆ ಬೇಕಾದ ಬಂಡವಾಳದ ಜೊತೆಗೆ ಸಹಾಯ ಹಸ್ತ ನೀಡುವ ಮೂಲಕ ಸಂಕಷ್ಟಕ್ಕೆ ಸ್ಪಂದಿಸಲಾಗಿದೆ. 
    ಭದ್ರಾವತಿ: ನಗರದಲ್ಲಿ ನಿಸ್ವಾರ್ಥತೆಯಿಂದ ಹಲವಾರು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ  ಶ್ರೀ ತಿರುಮಲ ಚಾರಿಟಬಲ್ ಫೌಂಡೇಷನ್ ವತಿಯಿಂದ ಅಸಹಾಯಕ ಅಂಗವಿಕಲ ಕುಟುಂಬದವರಿಗೆ ಸ್ವಾಭಿಮಾನದಿಂದ ಜೀವನ ಸಾಗಿಸಲು ತರಕಾರಿ ಗಾಡಿ ಹಾಗೂ ಅದಕ್ಕೆ ಬೇಕಾದ ಬಂಡವಾಳದ ಜೊತೆಗೆ ಸಹಾಯ ಹಸ್ತ ನೀಡುವ ಮೂಲಕ ಸಂಕಷ್ಟಕ್ಕೆ ಸ್ಪಂದಿಸಲಾಗಿದೆ. 
    ಈಗಾಗಲೇ ಹಲವಾರು ಸಾಮಾಜಿಕ ಕಾರ್ಯಗಳ ಮೂಲಕ ಜನಮನ ಗೆದ್ದಿರುವ ಶ್ರೀ ತಿರುಮಲ ಚಾರಿಟಬಲ್ ಫೌಂಡೇಷನ್ ಸಮಾನ ಮನಸ್ಕರ ತಂಡವನ್ನು ಕಟ್ಟಿಕೊಂಡಿದೆ. ಈ ಮೂಲಕ ಸಾರ್ವಜನಿಕರ ಸಹಕಾರ ಹಾಗು ದಾನಿಗಳ ನೆರವಿನೊಂದಿಗೆ ಮುನ್ನಡೆಯುತ್ತಿದೆ. ಅಸಹಾಯಕ ಅಂಗವಿಕಲ ಕುಟುಂಬ ಫೌಂಡೇಷನ್ ನೀಡಿರುವ ಸಹಾಯ ಹಸ್ತಕ್ಕೆ ಕೃತಜ್ಞತೆ ಸಲ್ಲಿಸಿದೆ. 
    ಫೌಂಡೇಷನ್  ಸಂಸ್ಥಾಪಕ ಪ್ರಶಾಂತ್, ಅಬ್ದುಲ್ ಖದೀರ್, ತೀರ್ಥೇಶ್, ವಿಕಲಚೇತನ ಇಲಾಖೆಯ ಜಗದೀಶ್, ಸಮಾಜ ಕಲ್ಯಾಣ ಇಲಾಖೆಯ ಶಿವಕುಮಾರ್, ಡಿಎಸ್‌ಎಸ್ ಅಂಗವಿಕಲರ ವಿಭಾಗದ ಜಿಲ್ಲಾಧ್ಯಕ್ಷ ಕಾಣಿಕ್ ರಾಜ್, ಹಾಗೂ ಹೊಸಮನೆ ಪ್ರದೀಪ್, ರಾಜಶೇಖರ್ ಉಪ್ಪಾರ, ದಾಸರಕಲ್ಲಹಳ್ಳಿ ಡಿಎಸ್‌ಎಸ್ ಮುಖಂಡ ನಾಗರಾಜ್, ಸಚಿನ್ ಭದ್ರಾವತಿ, ದಲಿತ ಹೋರಾಟಗಾರ ಇಂದ್ರೇಶ್, ಮಹಮದ್ ಸಲ್ಮಾನ್, ರಂಗಸ್ವಾಮಿ(ಸ್ವಿಚ್ ಆನ್ ಕಿಂಗ್ ಭದ್ರಾವತಿ ) ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮೀನುಗಾರರಿಗೆ ಸರ್ಕಾರದಿಂದ ಮಂಜೂರಾದ ಸೌಲಭ್ಯಗಳ ವಿತರಣೆ

ಮೀನುಗಾರಿಕೆ ಇಲಾಖೆಯಿಂದ ಮಂಜೂರಾದ ವೃತ್ತಿ ಚಟುವಟಿಕೆಗಳಿಗೆ ಪೂರಕವಾದ ಸೌಲಭ್ಯಗಳನ್ನು ಸುಮಾರು ೨೦ಕ್ಕೂ ಹೆಚ್ಚು ಫಲಾಭವಿಗಳಿಗೆ ಭದ್ರಾವತಿಯಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಶನಿವಾರ ವಿತರಿಸಿದರು.
ಭದ್ರಾವತಿ : ಮೀನುಗಾರಿಕೆ ಇಲಾಖೆಯಿಂದ ಮಂಜೂರಾದ ವೃತ್ತಿ ಚಟುವಟಿಕೆಗಳಿಗೆ ಪೂರಕವಾದ ಸೌಲಭ್ಯಗಳನ್ನು ಸುಮಾರು ೨೦ಕ್ಕೂ ಹೆಚ್ಚು ಫಲಾಭವಿಗಳಿಗೆ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಶನಿವಾರ ವಿತರಿಸಿದರು. 
ಮೀನುಗಾರರು ವೃತ್ತಿ ಚಟುವಟಿಕೆಗಳ ಸಂದರ್ಭದಲ್ಲಿ ಉಂಟಾಗಬಹುದಾದ ಅವಘಡಗಳಿಂದ ರಕ್ಷಿಸಿಕೊಳ್ಳಲು ಸುರಕ್ಷತಾ ಸಾಧನಗಳ ಕಿಟ್, ಬಲೆ ಕಿಟ್ ಹಾಗು ಸುಮಾರು ೧೦ಕ್ಕೂ ಹೆಚ್ಚು ಫಲಾನುಭವಿಗಳಿಗೆ ಫೈಬರ್ ತೆಪ್ಪಗಳನ್ನು ವಿತರಿಸಲಾಯಿತು. 
ರಾಜ್ಯ ಸರ್ಕಾರ ಕಳೆದ ಬಾರಿ ಬಜೆಟ್‌ನಲ್ಲಿ ಘೋಷಿಸಿದ್ದ ಹೈಟೆಕ್ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ತಕ್ಷಣ ೧೦ ಕೋ. ರು. ಬಿಡುಗಡೆಗೊಳಿಸುವ ಮೂಲಕ ಕಾಮಗಾರಿ ಆರಂಭಿಸುವಂತೆ ಹಾಗು ಇದರ ಜೊತೆಗೆ ಮೀನುಗಾರರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಿಕೊಡಲು ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ನಿಗಮದಿಂದ ಸುಮಾರು ೨೨ ಕೋ.ರು. ಅನುದಾನ ಬಿಡುಗಡೆಗೊಳಿಸುವಂತೆ ಒತ್ತಾಯಿಸಬೇಕೆಂದು ಸಂಗಮೇಶ್ವರ್‌ರವರಿಗೆ ಮೀನುಗಾರರ ಸಂಘದ ವತಿಯಿಂದ ಮನವಿ ಮಾಡಲಾಯಿತು. 
ಭದ್ರಾ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ, ಕರ್ನಾಟಕ ರಾಜ್ಯ ಮೀನುಗಾರಿಕೆ ಮಹಾಮಂಡಳಿ ನಿರ್ದೇಶಕ ಮುರುಗನ್, ಮೀನುಗಾರಿಕೆ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಶಿವಕುಮಾರ್, ಸಹಾಯಕ ನಿರ್ದೇಶಕ ಮೋಹನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ಮಾವಿನಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್, ಮುಖಂಡರ್ ರಾಜ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.