Wednesday, June 18, 2025

ಭದ್ರಾ ಜಲಾಶಯದ ಬಲದಂಡೆನಾಲೆ ಸೀಳಿ ನೀರು ಪೂರೈಕೆ ಕಾಮಗಾರಿ ಅವೈಜ್ಞಾನಿಕ

ತಕ್ಷಣ ಕಾಮಗಾರಿ ಕೈಬಿಡಲು ಸರ್ಕಾರಕ್ಕೆ ರೈತ ಮುಖಂಡ ಕೆ.ಟಿ ಗಂಗಾಧರ್ ಆಗ್ರಹ 

ಭದ್ರಾ ಜಲಾಶಯದ ಬಲದಂಡೆನಾಲೆ ಸೀಳಿ ನೀರು ಪೂರೈಕೆ ಮಾಡುತ್ತಿರುವ ಕಾಮಗಾರಿ ವಿರುದ್ಧ ಬುಧವಾರ ಭದ್ರಾವತಿ ಬಿ.ಆರ್ ಪ್ರಾಜೆಕ್ಟ್ ಅಧೀಕ್ಷಕ ಇಂಜಿನಿಯರ್ ಕಛೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ, ಭದ್ರಾ ಅಚ್ಚುಕಟ್ಟು ರೈತರ ಹಿತರಕ್ಷಣಾ ಸಮಿತಿ ವತಿಯಿಂದ ಬುಧವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ಹಾಗು ಧರಣಿ ಸತ್ಯಾಗ್ರಹ ನೇತೃತ್ವವಹಿಸಿ ರೈತ ಮುಖಂಡ ಕೆ.ಟಿ ಗಂಗಾಧರ್ ಮಾತನಾಡಿದರು. 
    ಭದ್ರಾವತಿ : ತಾಯಿಯ ಎದೆ ಹಾಲು ಕುಡಿಯಬೇಕೆ ವಿನಹಃ ಹಾಲು ಕುಡಿಯುವ ನೆಪದಲ್ಲಿ ಎದೆಯನ್ನೇ ಸೀಳಬಾರದು ಎಂಬಂತೆ ಎರಡು ಗುಡ್ಡಗಳ ನಡುವೆ ಜಲಾಶಯ ಸೀಳಿ ಅವೈಜ್ಞಾನಿಕ ಕಾಮಗಾರಿ ನಡೆಸುತ್ತಿರುವುದು ಖಂಡನೀಯ. ತಕ್ಷಣ ಈ ಅವೈಜ್ಞಾನಿಕ ಕಾಮಗಾರಿ ಕೈಬಿಡಬೇಕೆಂದು ರೈತ ಮುಖಂಡ ಕೆ.ಟಿ ಗಂಗಾಧರ್ ಆಗ್ರಹಿಸಿದರು.
    ಭದ್ರಾ ಜಲಾಶಯದ ಬಲದಂಡೆನಾಲೆ ಸೀಳಿ ನೀರು ಪೂರೈಕೆ ಮಾಡುತ್ತಿರುವ ಕಾಮಗಾರಿ ವಿರುದ್ಧ ಬುಧವಾರ  ಬಿ.ಆರ್ ಪ್ರಾಜೆಕ್ಟ್ ಅಧೀಕ್ಷಕ ಇಂಜಿನಿಯರ್ ಕಛೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ, ಭದ್ರಾ ಅಚ್ಚುಕಟ್ಟು ರೈತರ ಹಿತರಕ್ಷಣಾ ಸಮಿತಿ ವತಿಯಿಂದ ಬುಧವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ಹಾಗು ಧರಣಿ ಸತ್ಯಾಗ್ರಹ ನೇತೃತ್ವವಹಿಸಿ ಮಾತನಾಡಿದರು. ವಿದ್ಯಾವಂತ ಸಮಾಜದಲ್ಲಿ ಇಂತಹ ಅವೈಜ್ಞಾನಿಕ ಕಾಮಗಾರಿ ನಡೆಸುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದರು. 
    ಭದ್ರಾ ಜಲಾಶಯ ಮಧ್ಯ ಕರ್ನಾಟಕದ ರೈತರ ಜೀವನಾಡಿಯಾಗಿದ್ದು, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ರೈತರಿಗೆ ವ್ಯವಸಾಯ ಹಾಗೂ ಗದಗ-ಬೆಟಗೇರಿ ಪಟ್ಟಣದವರೆಗೂ ಜನರಿಗೆ ಕುಡಿಯುವ ನೀರಿಗೆ ಆಧಾರವಾಗಿದೆ. ಭದ್ರಾ ಜಲಾಶಯದ ನೀರನ್ನು ನೆಚ್ಚಿಕೊಂಡು ರೈತರು ಭತ್ತ, ಕಬ್ಬು, ಅಡಕೆ, ತೆಂಗು ಮುಂತಾದ ಬೆಳೆಗಳನ್ನು ಬೆಳೆದು ಬದುಕು ಕಟ್ಟಿಕೊಂಡಿರುತ್ತಾರೆ. ಮಧ್ಯ ಕರ್ನಾಟಕದ ಇಂತಹ ಬೃಹತ್ ಜಲಾಶಯದ ಸುರಕ್ಷತೆಯನ್ನು ನಿರ್ಲಕ್ಷಿಸಿ ರಾಜ್ಯ ಸರ್ಕಾರ ೧೬೬೦ ಹಳ್ಳಿಗಳಿಗೆ ಕುಡಿಯಲು ನೀರನ್ನು ಒದಗಿಸುವ ಬೃಹತ್ ಕಾಮಗಾರಿಯನ್ನು ಭದ್ರಾ ಜಲಾಶಯದ ನಿರ್ಬಂಧಿತ ಪ್ರದೇಶದಲ್ಲಿ (ಬಫರ್ ಜೋನ್‌ನಲ್ಲಿ) ಕೈಗೊಂಡಿದೆ. ಈ  ಕಾಮಗಾರಿ ಕೈಗೊಂಡಿರುವ ಪ್ರದೇಶವು ಅತೀ ಸೂಕ್ಷ್ಮ ಪ್ರದೇಶವಾಗಿರುತ್ತದೆ, ಈ ಪ್ರದೇಶದಲ್ಲಿ ಯಾವುದೇ ಕಾಮಗಾರಿಯನ್ನು ಕೈಗೊಳ್ಳಬಾರದೆಂಬ ನಿಯಮಾವಳಿಗಳಿದ್ದರೂ ಬಹುಗ್ರಾಮ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಿ ಕುಡಿಯುವ ನೀರಿನ ಘಟಕಗಳಿಗೆ ನೀರು ಸರಬರಾಜು ಮಾಡಲು ಭದ್ರಾ ಜಲಾಶಯದ ಬಲದಂಡೆ ನಾಲೆಯನ್ನು ಸೀಳಿ  ಮಾಡುತ್ತಿರುವ ಕಾಮಗಾರಿ ಅವೈಜ್ಞಾನಿಕವಾಗಿದೆ ಎಂದರು. 
    ಸರ್ಕಾರವು ಕುಡಿಯುವ ನೀರಿನ ಯೋಜನೆಯನ್ನು ಕೈಗೊಳ್ಳಲು ರೈತರು ಯಾವುದೇ ತಕರಾರು ಮಾಡುತ್ತಿಲ್ಲ. ಆದರೆ ಭದ್ರಾ ಜಲಾಶಯದ ನಿರ್ಬಂಧಿತ ಮತ್ತು ಸೂಕ್ಷ್ಮ ಪ್ರದೇಶದಲ್ಲಿ ಕಾಮಗಾರಿಯಿಂದ ಜಲಾಶಯ ತುಂಬಿದಾಗ ನೀರಿನ ಒತ್ತಡದಿಂದಾಗಿ ಯಾವುದೇ ರೀತಿಯ ಅಪಾಯಗಳು ಸಂಭವಿಸಬಹುದಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಅತಿಹೆಚ್ಚು ಮಳೆಬಿದ್ದು ಗುಡ್ಡಗಳು ಕುಸಿಯುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಇವೆಲ್ಲವನ್ನೂ ಸರ್ಕಾರ ಮನಗಂಡಿದ್ದರೂ ಜಲಾಶಯದ ಸುರಕ್ಷತೆ ಮತ್ತು ಜನರ ಹಿತಾಸಕ್ತಿಯನ್ನು ಕಡೆಗಣಿಸಿ ಈ ಕಾಮಗಾರಿ ಕೈಗೊಂಡಿರುವುದನ್ನು ರೈತಸಂಘ ಹಾಗೂ ಭದ್ರಾ ಅಚ್ಚುಕಟ್ಟುದಾರರ ಹಿತರಕ್ಷಣಾ ಸಮಿತಿ ಖಂಡಿಸುತ್ತವೆ.  ಸರ್ಕಾರ ಕೂಡಲೇ ನಿರ್ಬಂಧಿತ ಪ್ರದೇಶದಲ್ಲಿ ಜಲಾಶಯಕ್ಕೆ ಆಪತ್ತು ತಂದೊಡ್ಡುವ ಕಾಮಗಾರಿಯನ್ನು ಶಾಶ್ವತವಾಗಿ ಕೈಬಿಡಬೇಕೆಂದು ಆಗ್ರಹಿಸಿದರು. 
    ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಜಿಲ್ಲಾ ಕಾರ್ಯಾಧ್ಯಕ್ಷ ಯಶವಂತರಾವ್ ಘೋರ್ಪಡೆ, ಶಿಮುಲ್ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಡಿ. ಆನಂದ್, ಮುಖಂಡರಾದ ಮಂಜಪ್ಪಗೌಡ, ಲವ, ರಾಮಚಂದ್ರರಾವ್ ಸೇರಿದಂತೆ ಇನ್ನಿತರರು  ಮಾತನಾಡಿ ಅವೈಜ್ಞಾನಿಕ ಕಾಮಗಾರಿಯನ್ನು ಖಂಡಿಸಿದರು. 
    ರೈತ ಮುಖಂಡರಾದ ಈರಣ್ಣ, ಹಾಲೇಶಪ್ಪಗೌಡ್ರು, ಡಿ.ವಿ ವೀರೇಶ್, ಓಟೂರುಶಿವಪ್ಪ, ಪುಟ್ಟನಗೌಡ್ರು, ಮಲ್ಲಾಪುರ ರಂಗಪ್ಪ, ಎಂ.ಚಂದ್ರಶೇಖರ್, ತಮ್ಮಯ್ಯ, ಮೋಹನ್ ಕುಮಾರ್, ಕೃಷ್ಣಪ್ಪ, ನರಸಿಂಹಣ್ಣ, ಧರ್ಮೋಜಿರಾವ್, ಮಾಲತೇಶ್ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು. 

ಗ್ಯಾರಂಟಿ ಪ್ರಾಧಿಕಾರ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್ ಹುಟ್ಟುಹಬ್ಬ ಆಚರಣೆ

ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಭದ್ರಾವತಿ ತಾಲೂಕು ಸಮಿತಿ ಹಾಗು ಬಗರ್‌ಹುಕುಂ ತಾಲೂಕು ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್‌ರವರ ೪೬ನೇ ಹುಟ್ಟುಹಬ್ಬದ ಹಿನ್ನಲೆಯಲ್ಲಿ ತಾಲೂಕು ಪಂಚಾಯಿತಿ ಆವರಣದಲ್ಲಿರುವ ಕಛೇರಿಯಲ್ಲಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 
    ಭದ್ರಾವತಿ : ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ತಾಲೂಕು ಸಮಿತಿ ಹಾಗು ಬಗರ್‌ಹುಕುಂ ತಾಲೂಕು ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್‌ರವರ ೪೬ನೇ ಹುಟ್ಟುಹಬ್ಬದ ಹಿನ್ನಲೆಯಲ್ಲಿ ತಾಲೂಕು ಪಂಚಾಯಿತಿ ಆವರಣದಲ್ಲಿರುವ ಕಛೇರಿಯಲ್ಲಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 
    ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಚ್. ರವಿಕುಮಾರ್, ಮುಖಂಡರಾದ ಕುಮಾರ್(ಮೇಸ್ಟ್ರು), ನಾಗೇಶ್, ರೂಪ ನಾಗರಾಜ್ ಸೇರಿದಂತೆ ನಗರದ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ರಾಜಕೀಯ ಪಕ್ಷಗಳ ಪ್ರಮುಖರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಗಣ್ಯರು ಎಸ್. ಮಣಿಶೇಖರ್‌ರವರ ಕಛೇರಿಗೆ ತೆರಳಿ ಸನ್ಮಾನಿಸಿ ಅಭಿನಂದಿಸುವ ಮೂಲಕ ಹುಟ್ಟುಹಬ್ಬದ ಸಂಭ್ರಮ ಹಂಚಿಕೊಂಡರು. 

ಕೂಡ್ಲಿಗೆರೆ ಗ್ರಾಮ ಪಂಚಾಯಿತಿಯಲ್ಲಿ ರಕ್ತದಾನ ಶಿಬಿರ

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. 
    ಭದ್ರಾವತಿ: ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ, ತಾಲೂಕು ಪಂಚಾಯಿತಿ, ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಹಾಗು ಕೂಡ್ಲಿಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ವಿವಿಧ ಸಂಘ-ಸಂಸ್ಥೆಗಳಿಂದ ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ, ಮೆಗ್ಗಾನ್ ಬೋಧನಾ ಮತ್ತು ಆಸ್ಪತ್ರೆ, ರಕ್ತನಿಧಿ ಕೇಂದ್ರ ಸಹಯೋಗದೊಂದಿಗೆ ತಾಲೂಕಿನ ಕೂಡ್ಲಿಗೆರೆ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. 
    ಶಿಬಿರದಲ್ಲಿ ಸರ್ಕಾರಿ ಅಧಿಕಾರಿಗಳು, ಮಹಿಳಾ ಸಂಘ-ಸಂಸ್ಥೆಗಳ ಸದಸ್ಯೆಯರು, ಗ್ರಾಮಸ್ಥರು ಸೇರಿದಂತೆ ಸುಮಾರು ೫೪ ಮಂದಿ ರಕ್ತದಾನ ಮಾಡಿದರು. ರಕ್ತದಾನಿಗಳಾದ ಹಸಿರು ಯೋಧ, ಹೆಡ್‌ಕಾನ್‌ಸ್ಟೇಬಲ್ ಹಾಲೇಶಪ್ಪ, ಯುವ ಮುಖಂಡರಾದ ಎಸ್. ಮಹಾದೇವ ಕೂಡ್ಲಿಗೆರೆ,  ಪ್ರವೀಣ್‌ನಾಯ್ಕ, ಮೂರ್ತಿ ಮತ್ತು ವೆಂಕಟೇಶ್ ಸೇರಿದಂತೆ ೫ ಮಂದಿಯನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಅಲ್ಲದೆ ಶಿಬಿರದಲ್ಲಿ ಕೂಡ್ಲಿಗೆರೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಬಗರ್‌ಹುಕುಂ ತಾಲೂಕು ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್‌ರವರ ಹುಟ್ಟುಹಬ್ಬ ಆಚರಿಸಿ ಸಿಹಿ ಹಂಚಲಾಯಿತು. 
    ಜಮೀನ್ದಾರ್ ಕೂಡ್ಲಿಗೆರೆ ಹಾಲೇಶ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ಸಿಬ್ಬಂದಿ ವರ್ಗದವರು ಹಾಗು ಗ್ರಾಮದ ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
 

ಭದ್ರಾವತಿ ತಾಲೂಕಿನ ಕೂಡ್ಲಿಗೆರೆ ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ೫ ಮಂದಿ ರಕ್ತದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.  

ವಿಐಎಸ್‌ಎಲ್ ಕಾರ್ಖಾನೆಯಲ್ಲಿ ವಿಶ್ವ ಪರಿಸರ ದಿನಾಚರಣೆ : ಸಾರ್ವಜನಿಕರಿಗೆ ಉಚಿತ ಸಸಿ ವಿತರಣೆ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಉಚಿತ ಸಸಿಗಳನ್ನು ವಿತರಿಸಲಾಗುತ್ತಿದೆ.    
    ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಉಚಿತ ಸಸಿಗಳನ್ನು ವಿತರಿಸಲಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಸುಮಾರು 4000 ಸಸಿಗಳನ್ನು ವಿತರಿಸಲಾಗಿದೆ. 
     ಕಾರ್ಖಾನೆ ವತಿಯಿಂದ ಸಾಮಾಜಿಕ ಕಾರ್ಯ ಯೋಜನೆಯಡಿ ಪರಿಸರ ಸಂರಕ್ಷಣೆಗಾಗಿ ಸಸಿಗಳನ್ನು ನೆಡಲು ಪ್ರೋತ್ಸಾಹಿಸುವ ಉದ್ದೇಶ ಹೊಂದಲಾಗಿದ್ದು, ಕಾರ್ಖಾನೆ ಭದ್ರತಾ ಸಿಬ್ಬಂದಿಗಳು ತಮ್ಮ ಬಿಡುವಿನ ಅವಧಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ಕರಿಬೇವು, ಹಲಸು, ಪಪ್ಪಾಯಿ, ನುಗ್ಗೆ ಸೇರಿದಂತೆ ಹಲವು ರೀತಿಯ ಸಸಿಗಳನ್ನು ಬೆಳೆಸುವ ಮೂಲಕ ಸಾರ್ವಜನಿಕರಿಗೆ ಪರಿಸರ ಕುರಿತು ಜಾಗೃತಿ ಮೂಡಿಸಿ ಸಸಿಗಳನ್ನು ನೆಡುವ ಮೂಲಕ ಪೋಷಿಸಿ ಬೆಳೆಸುವಂತೆ ಪ್ರೋತ್ಸಾಹಿಸಲಾಗುತ್ತಿದೆ. 
     2024ರ ಸಾಲಿನಲ್ಲಿ ಒಟ್ಟು ಸುಮಾರು 2000 ಸಸಿಗಳನ್ನು ಕಾರ್ಖಾನೆ ಅಧಿಕಾರಿಗಳು, ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಮತ್ತು ಸಾರ್ವಜನಿಕರಿಗೆ ಹಾಗು ಸರ್ಕಾರಿ ಕಛೇರಿಗಳು, ಶಾಲಾ-ಕಾಲೇಜುಗಳಿಗೆ ಉಚಿತವಾಗಿ ವಿತರಿಸಲಾಗಿದೆ. 
     ಈ ಬಾರಿ ಪ್ರಸಕ್ತ ಸಾಲಿನಲ್ಲಿ ಕೇವಲ 6 ತಿಂಗಳ ಅವಧಿಯಲ್ಲಿ ಸುಮಾರು 4000 ಸಾವಿರ ಸಸಿಗಳನ್ನು ಉಚಿತವಾಗಿ ವಿತರಿಸಲಾಗಿದೆ. ಈ ಪೈಕಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸುಮಾರು 750ಕ್ಕೂ ಅಧಿಕ ಸಸಿಗಳನ್ನು ಉಚಿತವಾಗಿ ವಿತರಿಸಲಾಗಿದೆ. 
     ಬುಧವಾರ ಬೆಳಿಗ್ಗೆ ಕಾರ್ಖಾನೆ ಮುಖ್ಯದ್ವಾರದಲ್ಲಿ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ, ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್. ಪ್ರವೀಣ್ ಕುಮಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಸಾರ್ವಜನಿಕರಿಗೆ ಉಚಿತ ಸಸಿಗಳನ್ನು ವಿತರಿಸುವ ಮೂಲಕ ಪೋಷಿಸಿ ಬೆಳೆಸುವಂತೆ ಮನವಿ ಮಾಡಿದರು. 
 ಪ್ರಸಕ್ತ ಸಾಲಿನಲ್ಲಿ ಗುರಿ ಮೀರಿ ಸಸಿಗಳನ್ನು ವಿತರಣೆ ಮಾಡಲಾಗಿದ್ದು, ಆದರೂ ಸಹ ಸಸಿ ವಿತರಣೆ ಮುಂದುವರೆಯಲಿದೆ. ಸಭೆ, ಸಮಾರಂಭ, ರಾಷ್ಟ್ರೀಯ   ಹಬ್ಬಗಳ ಆಚರಣೆ ಸೇರಿದಂತೆ ಇನ್ನಿತರ ವಿಶೇಷ ದಿನಗಳಂದು ಸಸಿಗಳನ್ನು ವಿತರಿಸುವ ಗುರಿ ಹೊಂದಲಾಗಿದೆ.