Thursday, October 22, 2020

ಹೆಚ್ಚಿನ ದರಕ್ಕೆ ಮದ್ಯ ಮಾರಾಟ ವಿರುದ್ಧ ಏಕಾಂಗಿ ಹೋರಾಟ

ಬೇಡಿಕೆ ಈಡೇರದಿದ್ದಲ್ಲಿ ನ.೨ರಿಂದ ಅಮರಣಾಂತರ ಉಪವಾಸ ಸತ್ಯಾಗ್ರಹ 


ಜನಾತದಳ(ಸಂಯುಕ್ತ) ವತಿಯಿಂದ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ನೇತೃತ್ವದಲ್ಲಿ ಅ.೧೫ರಿಂದ ಭದ್ರಾವತಿ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ನಡೆಸುತ್ತಿರುವ ಹೋರಾಟ ಬುಧವಾರ ೭ ದಿನಗಳನ್ನು ಪೂರೈಸಿದ್ದು, ಏಕಾಂಗಿಯಾಗಿ ಹೋರಾಟ ಮುಂದುವರೆಸಿದ್ದಾರೆ.
ಭದ್ರಾವತಿ: ತಾಲೂಕಿನ ಮದ್ಯದಂಗಡಿಗಳಲ್ಲಿ ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಮಾಡುತ್ತಿದ್ದರೂ ಸಹ ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಹಾಗು ಬಡ ಮಹಿಳೆಯರಿಗೆ ಕಿರುಕುಳ ನೀಡುತ್ತಿರುವ ಮೈಕ್ರೋ ಪೈನಾನ್ಸ್‌ಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜನಾತದಳ(ಸಂಯುಕ್ತ) ವತಿಯಿಂದ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ನೇತೃತ್ವದಲ್ಲಿ ಅ.೧೫ರಿಂದ ತಾಲೂಕು ಕಛೇರಿ ಮಿನಿವಿಧಾನಸೌಧದ ಮುಂಭಾಗ ನಡೆಸುತ್ತಿರುವ ಹೋರಾಟ ಗುರುವಾರ ೮ನೇ ದಿನಕ್ಕೆ ಕಾಲಿಟ್ಟಿದೆ. 
    ಕಳೆದ ೪-೫ ದಿನಗಳಿಂದ ಏಕಾಂಗಿಯಾಗಿ ಹೋರಾಟ ನಡೆಸುತ್ತಿರುವ ಶಶಿಕುಮಾರ್‌ರವರು, ತಾಲೂಕಿನ ಸಿಎಲ್ ೨ ಮದ್ಯದಂಗಡಿ ಮತ್ತು ಎಂಎಸ್‌ಐಎಲ್ ಮದ್ಯದಂಗಡಿಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಎಂಆರ್‌ಪಿ ದರ ಪಡೆಯದೆ ಹೆಚ್ಚಿನ ದರ ಪಡೆಯಲಾಗುತ್ತಿದೆ. ಈ ಸಂಬಂಧ ಹಲವಾರು ಬಾರಿ ಮನವಿ ಸಲ್ಲಿಸಿ ಒತ್ತಾಯಿಸಲಾಗಿದೆ. ಅಲ್ಲದೆ ಉಜ್ಜನಿಪುರ ಆನೆಕೊಪ್ಪದಲ್ಲಿರುವ ಎಂಎಸ್‌ಐಎಲ್ ಮದ್ಯದಂಗಡಿಯಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿದ್ದು, ಈ ಮದ್ಯದಂಗಡಿ ಸ್ಥಳಾಂತರಿಸುವಂತೆ ಒತ್ತಾಯಿಸಲಾಗಿದೆ. ಅಲ್ಲದೆ ನಿವಾಸಿಗಳು ಅರ್ನಿಷ್ಟಾವಧಿ ಧರಣಿ ಸತ್ಯಾಗ್ರಹ ಸಹ ನಡೆಸಿರುತ್ತಾರೆ. ಆದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. 
       ಇದೆ ರೀತಿ ಮೈಕ್ರೋ ಫೈನಾನ್ಸ್‌ಗಳು ಸಾಲ ಪಡೆದಿರುವ ಬಡ ಮಹಿಳೆಯರಿಗೆ ತೊಂದರೆ ಕೊಡುತ್ತಿದ್ದು, ಕೊರೋನಾ ಸಂಕಷ್ಟದ ಸಮಯದಲ್ಲಿ ಒಂದೆಡೆ ಉದ್ಯೋಗವಿಲ್ಲದೆ, ಮತ್ತೊಂದೆಡೆ ಆರ್ಥಿಕ ವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿರುವ ಸಂದರ್ಭದಲ್ಲಿ ಸರ್ಕಾರದ ಆದೇಶವಿದ್ದರೂ ಸಹ ಬಲವಂತವಾಗಿ ಕಂತು ಪಾವತಿಸಿಕೊಳ್ಳಲಾಗುತ್ತಿದೆ. ಈ ಸಂಬಂಧ ಸಹ ಹಳೇನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಕಳೆದ ೭ ದಿನಗಳಿಂದ ಹೋರಾಟ ನಡೆಸಲಾಗುತ್ತಿದ್ದು, ಈ ನಡುವೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿರುವ ಅಬಕಾರಿ ನಿರೀಕ್ಷಕ ಧರ್ಮಪ್ಪರವರು ದೌರ್ಜನ್ಯದಿಂದ ವರ್ತಿಸುವ ಜೊತೆಗೆ ಹೋರಾಟಗಾರರನ್ನು ಅವಮಾನಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಇವರನ್ನು ತಕ್ಷಣ ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು ಒತ್ತಾಯಿಸಿದರು. 
   ಒಂದು ವೇಳೆ ಬೇಡಿಕೆ ಈಡೇರದಿದ್ದಲ್ಲಿ ನ.೨ರಿಂದ ಅಮರಣಾಂತರ ಉಪವಾಸ ಸತ್ಯಗ್ರಹ ಕೈಗೊಳ್ಳುವುದಾಗಿ ಎಚ್ಚರಿಸಿದರು. 

ಮನವಿಗೆ ಪೂರಕವಾಗಿ ಸ್ಪಂದಿಸದೆ ದೌರ್ಜನ್ಯ : ಅಬಕಾರಿ ನಿರೀಕ್ಷಕರನ್ನು ಅಮಾನತುಗೊಳಿಸಲು ಆಗ್ರಹ

ಅಬಕಾರಿ ಇಲಾಖೆ ನಿರೀಕ್ಷಕರ ದೌರ್ಜನ್ಯ ಖಂಡಿಸಿ ತಕ್ಷಣ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕೆಂದು ಆಗ್ರಹಿಸಿ ಗುರುವಾರ ಭದ್ರಾವತಿಯಲ್ಲಿ ಹೊಸ ಸೇತುವೆ ರಸ್ತೆಯಲ್ಲಿರುವ ಅಬಕಾರಿ ನಿರೀಕ್ಷಕರ ಕಛೇರಿ ಮುಂಭಾಗ ಕರ್ನಾಟಕ ಜನಸೈನ್ಯ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
 ಭದ್ರಾವತಿ: ನಗರದ ಅಬಕಾರಿ ಇಲಾಖೆ ನಿರೀಕ್ಷಕರ ದೌರ್ಜನ್ಯ ಖಂಡಿಸಿ ತಕ್ಷಣ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕೆಂದು ಆಗ್ರಹಿಸಿ ಗುರುವಾರ ಹೊಸ ಸೇತುವೆ ರಸ್ತೆಯಲ್ಲಿರುವ ಅಬಕಾರಿ ನಿರೀಕ್ಷಕರ ಕಛೇರಿ ಮುಂಭಾಗ ಕರ್ನಾಟಕ ಜನಸೈನ್ಯ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
       ಜನ್ನಾಪುರದಲ್ಲಿರುವ ಮದ್ಯದಂಗಡಿಯೊಂದರಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆ ಬಗೆಹರಿಸುವಂತೆ ಅಬಕಾರಿ ನಿರೀಕ್ಷಕ ಧರ್ಮಪ್ಪರವರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಮನವಿಗೆ ಪೂರಕವಾಗಿ ಸ್ಪಂದಿಸಬೇಕಾದ ನಿರೀಕ್ಷಕರು ಮನವಿ ಸಲ್ಲಿಸಿದವರ ವಿರುದ್ಧ ದೌರ್ಜನ್ಯದಿಂದ ವರ್ತಿಸುತ್ತಿದ್ದಾರೆ. ಕನಿಷ್ಠ ಗೌರವ ನೀಡದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ಹಿನ್ನಲೆಯಲ್ಲಿ ನ್ಯೂಟೌನ್ ಪೊಲೀಸ್ ದೂರು ಸಹ ನೀಡಲಾಗಿದೆ.
   ಅಬಕಾರಿ ಕಾಯ್ದೆಗಳನ್ನು ಉಲ್ಲಂಘಿಸಿ ಸಾರ್ವಜನಿಕರೊಂದಿಗೆ ದೌರ್ಜನ್ಯದಿಂದ ವರ್ತಿಸುತ್ತಿರುವ ಧರ್ಮಪ್ಪರವರನ್ನು ತಕ್ಷಣ ಸೇವೆಯಿಂದ ಅಮಾನತುಗೊಳಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಲಾಯಿತು.
    ಕರ್ನಾಟಕ ಜನಸೈನ್ಯ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್, ನಗರಸಭೆ ಸದಸ್ಯರಾದ ಆರ್. ಕರುಣಾಮೂರ್ತಿ, ಎಂ.ಎ ಅಜಿತ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಿ.ವಿ ಗಿರೀಶ್, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಮುಖಂಡರಾದ ಅನಂತರಾಮು, ರುದ್ರೇಶ್, ಸಂತೋಷ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೊರೋನಾಗೆ ಎಂಪಿಎಂ ಹಣಕಾಸು ಅಧಿಕಾರಿ ಬಲಿ

ವಿಶ್ವನಾಥ ಮಲಗನ್
ಭದ್ರಾವತಿ: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯ  ಮುಖ್ಯ ಹಣಕಾಸು ಅಧಿಕಾರಿ ವಿಶ್ವನಾಥ ಮಲಗನ್(೫೯) ಗುರುವಾರ ನಿಧನ ಹೊಂದಿದರು.
     ಪತ್ನಿ, ಓರ್ವ ಪುತ್ರ ಹೊಂದಿದ್ದರು. ಹಳೇನಗರದ ವೀರಶೈವ ರುದ್ರಭೂಮಿಯಲ್ಲಿ ಇವರ ಅಂತ್ಯಕ್ರಿಯೆ ನೆರವೇರಿತು. ಕೊರೋನಾ ಸೋಂಕಿನ ಹಿನ್ನಲೆಯಲ್ಲಿ ಕಳೆದ ೨ ವಾರದ ಹಿಂದೆ ಅನಾರೋಗ್ಯಕ್ಕೆ ಒಳಗಾಗಿ ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
     ಸರ್ಕಾರ ಜಾರಿಗೊಳಿಸಿದ ೨೦೧೭ ಸ್ವಯಂ ನಿವೃತ್ತಿ ಯೋಜನೆಯಡಿ ಸ್ವಯಂ ನಿವೃತ್ತಿ ಹೊಂದಿದ್ದರು. ನಂತರ ನಿಯೋಜನೆ ಮೇಲೆ ಹುದ್ದೆಯಲ್ಲಿ ಮುಂದುವರೆದಿದ್ದರು. ಕಾರ್ಮಿಕರಿಗೆ ಸ್ವಯಂ ನಿವೃತ್ತಿ ಹಣ ಕೊಡಿಸುವ ಕಾರ್ಯದಲ್ಲಿ ಹೆಚ್ಚಿನ ಶ್ರಮ ವಹಿಸಿದ್ದರು. ಅಲ್ಲದೆ ಹಣಕಾಸಿನ ಇಲಾಖೆಗೆ ಸಂಬಂಧಿಸಿದ ಬಹುತೇಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದ್ದರು.
   ಮೃತರ ನಿಧನಕ್ಕೆ ಎಂಪಿಎಂ ಕಾರ್ಖಾನೆಯ ವಿವಿಧ ಕಾರ್ಮಿಕ ಸಂಘಟನೆಗಳು, ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.