Sunday, February 23, 2025

ಅಖಿಲ ಭಾರತ ತುಳುವ ವೆಲ್ಲಲ(ಮೊದಲಿಯಾರ್) ಸಂಘಮ್ ೩೬ನೇ ರಾಷ್ಟ್ರೀಯ ಸಮಾವೇಶ

ಸಮುದಾಯದವರ ಏಳಿಗೆಗೆ ಬದ್ಧ, ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ದ : ಬಿ.ವೈ ರಾಘವೇಂದ್ರ 

ಭದ್ರಾವತಿ ಗಾಂಧಿ ನಗರದ ಆಗಮುಡಿ ಮೊದಲಿಯರ್ ಸಮುದಾಯ ಭವನದಲ್ಲಿ ಭಾನುವಾರ ಜರುಗಿದ ಅಖಿಲ ಭಾರತ ತುಳುವ ವೆಲ್ಲಲ(ಮೊದಲಿಯಾರ್) ಸಂಘಮ್ ೩೬ನೇ ರಾಷ್ಟ್ರೀಯ ಸಮಾವೇಶ ಉದ್ಘಾಟಿಸಿದ ಸಂಸದ ಬಿ.ವೈ ರಾಘವೇಂದ್ರರನ್ನು ಸನ್ಮಾನಿಸಿ ಗೌರವಿಸಲಾಯಿತು.  
    ಭದ್ರಾವತಿ: ಗಾಂಧಿ ನಗರದ ಆಗಮುಡಿ ಮೊದಲಿಯರ್ ಸಮುದಾಯ ಭವನದಲ್ಲಿ ಭಾನುವಾರ ಜರುಗಿದ ಅಖಿಲ ಭಾರತ ತುಳುವ ವೆಲ್ಲಲ(ಮೊದಲಿಯಾರ್) ಸಂಘಮ್ ೩೬ನೇ ರಾಷ್ಟ್ರೀಯ ಸಮಾವೇಶ ಸಂಸದ ಬಿ.ವೈ ರಾಘವೇಂದ್ರ ಉದ್ಘಾಟಿಸಿದರು. 
     ಸಮಾವೇಶದಲ್ಲಿ ಮೊದಲಿಯಾರ್ ಸಮುದಾಯದವರು ಇನ್ನೂ ಹೆಚ್ಚು ಕ್ರಿಯಾಶೀಲರಾಗುವ ಮೂಲಕ ಸಂಘಟನೆಗೆ ಒತ್ತು ನೀಡಬೇಕು. ಸಮುದಾಯದವರ ಹಿತರಕ್ಷಣೆಗೆ ಬದ್ಧರಾಗಿ ಪರಿಣಾಮಕಾರಿ ಕಾರ್ಯ ಚಟುವಟಿಕೆಗಳನ್ನು ರೂಪಿಸಿಕೊಳ್ಳುವಂತೆ ಕರೆ ನೀಡಲಾಯಿತು. 
    ಸಮಾವೇಶದಲ್ಲಿ ಬಿ.ವೈ ರಾಘವೇಂದ್ರರವರು ತಾಲೂಕು ಸಂಘದ ನೂತನ ಕಛೇರಿ ಉದ್ಘಾಟಿಸುವ ಜೊತೆಗೆ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ನಂತರ ಮಾತನಾಡಿ, ಮೊದಲಿಯಾರ್ ಸಮುದಾಯದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಈ ಸಮುದಾಯದವರ ಏಳಿಗೆಗೆ ಬದ್ಧನಾಗಿದ್ದು, ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ದವಿದ್ದೇನೆ ಎಂದರು.  
    ಸಮಾವೇಶಕ್ಕೂ ಮೊದಲು ಅಖಿಲ ಭಾರತ ತುಳುವ ವೆಲ್ಲಲ(ಮೊದಲಿಯಾರ್) ಸಂಘಮ್ ಅಧ್ಯಕ್ಷ, ಹಿರಿಯ ಪತ್ರಕರ್ತ ಕಣ್ಣಪ್ಪ ದ್ವಜಾರೋಹಣ ನೆರವೇರಿಸಿದರು. ಸಮಾವೇಶದಲ್ಲಿ ಪಾಂಡಿಚೆರಿ, ತಮಿಳುನಾಡು, ಹೈದರಬಾದ್ ಮತ್ತು ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದ ಸಂಘದ ಪ್ರತಿನಿಧಿಗಳು ಭಾಗವಹಿಸಿದ್ದರು.  ತಾಲೂಕು ಸಂಘದ ಅಧ್ಯಕ್ಷ ಕೆ. ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾವೇಶದಲ್ಲಿ ಬಿ.ವೈ ರಾಘವೇಂದ್ರರನ್ನು ಸನ್ಮಾನಿಸಿ ಗೌರವಿಸಲಾಯಿತು. 
    ಐಎಂಪಿಎ ಸಂಸ್ಥಾಪಕ ಚೆವಲಿಯಾರ್ ಡಾ. ಆರ್. ಅರುಣಾಚಲ, ಎಐಎಟಿವಿಎಸ್ ಕಾರ್ಯದರ್ಶಿ ಗೋಪಾಲಮಣಿ, ಎನ್. ಮಂಜುನಾಥ್, ಪ್ರಮುಖರಾದ ಉದ್ಯಮಿ ಬಿ.ಕೆ ಜಗನ್ನಾಥ್, ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ, ತಾಲೂಕು ಸಂಘದ ಉಪಾಧ್ಯಕ್ಷ ಎ. ಸುಬ್ರಮಣಿ,  ಕಾರ್ಯದರ್ಶಿ ವಿ. ಶಿವಕುಮಾರ್(ಪೆಟ್ರೋಲ್ ಬಂಕ್), ಖಜಾಂಚಿ ಜಿ. ಸುರೇಶ್ ಕುಮಾರ್, ಸಹ ಕಾರ್ಯದರ್ಶಿ ಎನ್. ರವಿಚಂದ್ರನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
 

ಭದ್ರಾವತಿ ಗಾಂಧಿ ನಗರದ ಆಗಮುಡಿ ಮೊದಲಿಯರ್ ಸಮುದಾಯ ಭವನದಲ್ಲಿ ಭಾನುವಾರ ಜರುಗಿದ ಅಖಿಲ ಭಾರತ ತುಳುವ ವೆಲ್ಲಲ(ಮೊದಲಿಯಾರ್) ಸಂಘಮ್ ೩೬ನೇ ರಾಷ್ಟ್ರೀಯ ಸಮಾವೇಶದಲ್ಲಿ ಸಂಸದ ಬಿ.ವೈ ರಾಘವೇಂದ್ರ ಸೇರಿದಂತೆ ಗಣ್ಯರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. 

ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರ ಅಪಹರಣ


    ಭದ್ರಾವತಿ : ಪತಿ ಜೊತೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಗರದ ಬೈಪಾಸ್ ರಸ್ತೆ ಬಳಿ ನಡೆದಿದೆ. 
    ಕಳೆದ ೨ ದಿನಗಳ ಹಿಂದೆ ಸಿರಿಯೂರು ಗ್ರಾಮದ ನಿವಾಸಿ ಹನುಮಂತೇಗೌಡರವರು ತಮ್ಮ ಪತ್ನಿ ಭಾಗ್ಯಮ್ಮರ ಜೊತೆ ರಾತ್ರಿ ೮ ಗಂಟೆ ಸಮಯದಲ್ಲಿ ನ್ಯೂಕಾಲೋನಿಯಲ್ಲಿರುವ ಸಂಬಂಧಿಕರ ಮಗಳ ಮನೆಯ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಪುನಃ ಹಿಂದಿರುಗಿ ತಮ್ಮ ಗ್ರಾಮಕ್ಕೆ ತೆರಳುವಾಗ ರಾತ್ರಿ ೯.೪೫ರ ಸಮಯದಲ್ಲಿ ಜಿಂಕ್‌ಲೈನ್, ಶ್ರೀ ಮಾದೇಶ್ವರ ದೇವಸ್ಥಾನ ರಸ್ತೆ ಮೂಲಕ ಬೈಪಾಸ್ ಬಳಿ ಬಂದಾಗ ವಾಹನ ದಟ್ಟಣೆ ಅಧಿಕವಾದ ಹಿನ್ನಲೆಯಲ್ಲಿ ಹನುಮಂತೇಗೌಡರು ತಮ್ಮ ದ್ವಿಚಕ್ರ ವಾಹನ ಚಾಲನೆ ನಿಧಾನಗೊಳಿಸಿದ್ದಾರೆ. ಇದೆ ಸಂದರ್ಭದಲ್ಲಿ ಹಿಂಬದಿಯಿಂದ ದ್ವಿಚಕ್ರ ವಾಹನದಲ್ಲಿ ವಾಹನದಲ್ಲಿ ಬರುತ್ತಿದ್ದ ಇಬ್ಬರು ಅಪರಿಚಿತರು ಭಾಗ್ಯಮ್ಮರ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. 
    ಸುಮಾರು ೩೫ ಗ್ರಾಂ ತೂಕದ ೨ ಎಳೆಯ, ೨ ತಾಳಿ ಇರುವ ಸುಮಾರು ೧.೭೫ ಲಕ್ಷ ರು. ಮೌಲ್ಯದ ಮಾಂಗಲ್ಯ ಸರ ಅಪಹರಿಸಲಾಗಿದ್ದು, ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವ ಅಪರಿಚಿತರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. 

ವಿದ್ಯಾರ್ಥಿಗಳಿಗೆ ಸಹನೆ, ಉತ್ತಮ ನಡವಳಿಕೆ ಮುಖ್ಯ : ಪ್ರೊ. ಆರ್. ಹಿರೇಮಣಿ ನಾಯ್ಕ್

ಭದ್ರಾವತಿ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ವಿಭಾಗದಿಂದ ಏರ್ಪಡಿಸಲಾಗಿದ್ದ `ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ವೇದಿಕೆ' ಉದ್ಘಾಟನೆ ಕಾರ್ಯಕ್ರಮ ಕುವೆಂಪು ವಿಶ್ವವಿದ್ಯಾಲಯದ ಎಂ.ಬಿ.ಎ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗು ವಾಣಿಜ್ಯ ನಿಕಾಯದ ಡೀನ್ ಪ್ರೊ. ಆರ್. ಹಿರೇಮಣಿ ನಾಯ್ಕ್ ನೆರವೇರಿಸಿದರು. 
    ಭದ್ರಾವತಿ : ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಸಹನೆ, ಶಿಕ್ಷಕರೊಂದಿಗೆ ಉತ್ತಮ ನಡವಳಿಕೆ ಹೊಂದಿರಬೇಕೆಂದು ಕುವೆಂಪು ವಿಶ್ವವಿದ್ಯಾಲಯದ ಎಂ.ಬಿ.ಎ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗು ವಾಣಿಜ್ಯ ನಿಕಾಯದ ಡೀನ್ ಪ್ರೊ. ಆರ್. ಹಿರೇಮಣಿ ನಾಯ್ಕ್ ಹೇಳಿದರು. 
    ಅವರು ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ವಿಭಾಗದಿಂದ ಏರ್ಪಡಿಸಲಾಗಿದ್ದ `ವಾಣಿಜ್ಯ ಮತ್ತು ನಿರ್ವಹಣಾಶಾಸ್ತ್ರ ವೇದಿಕೆ' ಉದ್ಘಾಟನೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. 
    ವಿದ್ಯಾರ್ಥಿಗಳಿಗೆ ಶಿಸ್ತು ಬಹಳ ಮುಖ್ಯ. ಪ್ರಸ್ತುತ ಕಾರ್ಪೋರೇಟ್ ಕಂಪನಿಗಳ ನಿರೀಕ್ಷೆಗೆ ತಕ್ಕಂತೆ ವಿದ್ಯಾರ್ಥಿಗಳು ರೂಪುಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಲಹೆ, ಸಹಕಾರ ಪಡೆದುಕೊಳ್ಳಬೇಕು. ಕೃತಕ ಬುದ್ದಿಮತ್ತೆ (ಎ.ಐ) ವ್ಯಾಪಕವಾಗಿ ಆವರಿಸಿಕೊಳ್ಳುತ್ತಿದ್ದು, ಆಧುನಿಕತೆಯಲ್ಲಿ ಇದರ ಪ್ರಭಾವ ಹೆಚ್ಚಿನದ್ದಾಗಿದೆ ಎಂದರು. 
    ಕಾಲೇಜಿನ ಪ್ರಾಂಶುಪಾಲರಾದ ಡಾ. ಶೈಲಜಾ ಎಸ್. ಹೊಸಳ್ಳೇರ್ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಯೋಜಕ ಎಂ. ಮಹಮದ್ ನಜೀಬ್, ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಆರ್. ಮಂಜಪ್ಪ, ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥೆ ಟಿ.ಜಿ ಉಮಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಎಸ್. ಶಿಲ್ಪ ಮತ್ತು ಪ್ರತೀಕ್ಷಾ ಪ್ರಾರ್ಥಿಸಿ, ಆರ್. ವೆಂಕಟೇಶ್ ಸ್ವಾಗತಿಸಿದರು. ವೇದಿಕೆ ಸಂಯೋಜಕ ವಿ.ಬಿ ಚಿರಂಜೀವಿ ಪ್ರಾಸ್ತಾವಿಕ ನುಡಿಗಳನ್ನಾಡಿ, ಎಚ್.ಎನ್ ಸುಷ್ಮ ಅತಿಥಿ ಪರಿಚಯ ನೆರವೇರಿಸಿದರು. ಕೆ. ಶಂಕರ್ ಯಾದವ್ ವಂದಿಸಿದರು. ಡಾ. ಬಿ.ಜಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.