Sunday, September 29, 2024

ಕೇರಳ ಸಮಾಜದವರು ನೆಲದ ಸಂಸ್ಕೃತಿ ಪಸರಿಸುವ ಮೂಲಕ ಸೌಹಾರ್ದತೆ ಕಾಯ್ದುಕೊಂಡಿದ್ದಾರೆ

೧೨ನೇ ವರ್ಷದ ಓಣಂ ಆಚರಣೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಪ್ರಶಂಸೆ


ಭದ್ರಾವತಿ ಬಿ.ಎಚ್ ರಸ್ತೆ, ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ೧೨ನೇ ವರ್ಷದ ಓಣಂ ಆಚರಣೆ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು. 
    ಭದ್ರಾವತಿ : ಕೇರಳ ಸಮಾಜದವರು ಓಣಂ ಆಚರಣೆಯ ಮೂಲಕ ತಮ್ಮ ನೆಲದ ಸಂಸ್ಕೃತಿಯನ್ನು ವಿಶ್ವದ ಎಲ್ಲೆಡೆ ಪಸರಿಸುವ ಮೂಲಕ ಜಾತಿ, ಧರ್ಮ, ಭಾಷೆ ಮೀರಿ ಸೌಹಾರ್ದತೆ ಕಾಯ್ದುಕೊಂಡು ಬಂದಿರುವುದು ಅವರ ವಿಶೇಷತೆಯಾಗಿದೆ ಎಂದು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಪ್ರಶಂಸೆ ವ್ಯಕ್ತಪಡಿಸಿದರು. 
    ಅವರು ಭಾನುವಾರ ನಗರದ ಬಿ.ಎಚ್ ರಸ್ತೆ, ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ೧೨ನೇ ವರ್ಷದ ಓಣಂ ಆಚರಣೆ ಉದ್ಘಾಟಿಸಿ ಮಾತನಾಡಿದರು. 
    ಕೇರಳ ಸಮಾಜದವರಲ್ಲಿ ಒಂದು ವಿಶೇಷವಾದ ಶಕ್ತಿ ಇದೆ. ತಮ್ಮಲ್ಲಿನ ಪ್ರತಿಭೆ ಮೂಲಕ ಪ್ರಪಂಚದ ಎಲ್ಲೆಡೆ ಎಲ್ಲರೊಂದಿಗೂ ಗುರುತಿಸಿಕೊಂಡಿದ್ದಾರೆ. ತಾವು ನೆಲೆಸಿರುವ ನೆಲದ ಭಾಷೆ, ಸಂಸ್ಕೃತಿ ಜೊತೆಗೆ ತಮ್ಮ ಮೂಲ ನೆಲೆಯ ಸಂಸ್ಕೃತಿಯನ್ನೂ ಸಹ ಪಸರಿಸುತ್ತಿದ್ದಾರೆ. ಕೇರಳ ಸಮಾಜದವರ ಏಳಿಗೆಗೆ ಸದಾ ಬದ್ಧನಾಗಿದ್ದೇನೆ ಎಂದರು. 
    ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ಕೇರಳ ಸಮಾಜದವರು ಓಣಂ ಆಚರಣೆ ಮೂಲಕ ಎಲ್ಲರನ್ನೂ ಒಗ್ಗೂಡಿಸಿ ಮಾದರಿಯಾಗಿದ್ದಾರೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಹಾಗು ಜಗಜ್ಯೋತಿ ಬಸವೇಶ್ವರರ ಆಶಯ ಕೂಡ ಇದೆ ಆಗಿದೆ. ಕೇರಳ ಸಮಾಜದ ಸಂಘಟನೆಗೆ ಅಗತ್ಯವಿರುವ ನಿವೇಶನ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. 

ಭದ್ರಾವತಿ ಬಿ.ಎಚ್ ರಸ್ತೆ, ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ೧೨ನೇ ವರ್ಷದ ಓಣಂ ಆಚರಣೆಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. 
    ಕೇರಳ ಸಮಾಜಂ ಅಧ್ಯಕ್ಷ ಗಂಗಾಧರ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಕೇರಳ ಸಮಾಜಂ ಅಧ್ಯಕ್ಷ ಸುಗುಣ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಬಾಲಚಂದ್ರನ್, ಯುವ ಘಟಕದ ಅಧ್ಯಕ್ಷ ಎಸ್. ಪ್ರಸನ್ನ ಕುಮಾರ್, ಉದ್ಯಮಿಗಳಾದ ಕೆ. ಇಬ್ರಾಹಿಂ, ಬಿ.ಕೆ ಜಗನ್ನಾಥ, ಬಿ.ಕೆ ಶಿವಕುಮಾರ್, ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ನಗರಸಭೆ ಸದಸ್ಯ ಹನುಮಂತಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
    ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಓಣಂ ಆಚರಣೆ ಹಿನ್ನಲೆಯಲ್ಲಿ ಆಯೋಜಿಸಲಾಗಿದ್ದ ರಂಗೋಲೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.  ಪ್ರಶಾಂತ್ ಅಪ್ಪು ಕಾರ್ಯಕ್ರಮ ನಿರೂಪಿಸಿದರು. 

ಶಾಸಕರ ಸ್ವಂತ ಹಣದಲ್ಲಿ ತಾಲೂಕಿನ ಪೊಲೀಸ್ ಠಾಣೆಗಳಿಗೆ ಉಚಿತ ಕಂಪ್ಯೂಟರ್ ವಿತರಣೆ

ಪೊಲೀಸ್ ಇಲಾಖೆ ಕರ್ತವ್ಯ ನಿರ್ವಹಣೆಗೆ ಸಹಕಾರಿಯಾಗುವಂತೆ ಭದ್ರಾವತಿ ತಾಲೂಕಿನ ಎಲ್ಲಾ ಪೊಲೀಸ್ ಠಾಣೆಗಳಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಸ್ವಂತ ಹಣದಲ್ಲಿ ಉಚಿತವಾಗಿ ಕಂಪ್ಯೂಟರ್‌ಗಳನ್ನು ವಿತರಿಸಿದ್ದಾರೆ. 
    ಭದ್ರಾವತಿ : ಪೊಲೀಸ್ ಇಲಾಖೆ ಕರ್ತವ್ಯ ನಿರ್ವಹಣೆಗೆ ಸಹಕಾರಿಯಾಗುವಂತೆ ತಾಲೂಕಿನ ಎಲ್ಲಾ ಪೊಲೀಸ್ ಠಾಣೆಗಳಿಗೆ ಶಾಸಕ ಬಿ.ಕೆ ಸಂಗಮೇಶ್ವರ್ ಸ್ವಂತ ಹಣದಲ್ಲಿ ಉಚಿತವಾಗಿ ಕಂಪ್ಯೂಟರ್‌ಗಳನ್ನು ವಿತರಿಸಿದ್ದಾರೆ. 
    ತಾಲೂಕಿನ ಪೊಲೀಸ್ ಉಪವಿಭಾಗ ವ್ಯಾಪ್ತಿಯಲ್ಲಿ ನ್ಯೂಟೌನ್, ಹಳೇನಗರ, ಹೊಸಮನೆ ಶಿವಾಜಿ ಸರ್ಕಲ್, ಪೇಪರ್ ಟೌನ್, ಗ್ರಾಮಾಂತರ ಹಾಗು ಬಿ.ಆರ್.ಪಿ(ಗ್ರಾಮಾಂತರ ಉಪ ಠಾಣೆ) ಮತ್ತು ಸಂಚಾರಿ ಹಾಗೂ ಹೊಳೆಹೊನ್ನೂರು ಪೊಲೀಸ್ ಠಾಣೆಗಳಿದ್ದು, ಅಲ್ಲದೆ ಪೊಲೀಸ್ ಉಪಾಧೀಕ್ಷಕರ ಹಾಗು ನಗರ ಮತ್ತು ಗ್ರಾಮಾಂತರ ವೃತ್ತ ನಿರೀಕ್ಷಕರ ಕಛೇರಿಗಳಿವೆ. ಎಲ್ಲಾ ಪೊಲೀಸ್ ಠಾಣೆಗಳಿಗೂ ಸಹ ಉಚಿತವಾಗಿ ಕಂಪ್ಯೂಟರ್‌ಗಳನ್ನು ಭಾನುವಾರ ಶಾಸಕರ ಗೃಹ ಕಛೇರಿಯಲ್ಲಿ ವಿತರಿಸಲಾಯಿತು. 
    ಪೊಲೀಸ್ ಉಪಾಧೀಕ್ಷಕ ಕೆ.ಆರ್ ನಾಗರಾಜು, ನಗರ ವೃತ್ತ ನಿರೀಕ್ಷಕ ಶ್ರೀಶೈಲ ಕುಮಾರ್, ಪೇಪರ್ ಟೌನ್ ಠಾಣಾ ನಿರೀಕ್ಷಕಿ ನಾಗಮ್ಮ, ಹೊಸಮನೆ ಶಿವಾಜಿ ಸರ್ಕಲ್ ಠಾಣಾ ಸಹಾಯಕ ನಿರೀಕ್ಷಕ ಕೃಷ್ಣಕುಮಾರ್ ಮಾನೆ, ನ್ಯೂಟೌನ್ ಪೊಲೀಸ್ ಠಾಣಾ ಸಹಾಯಕ ನಿರೀಕ್ಷಕ ರಮೇಶ್, ಸಂಚಾರಿ ಠಾಣಾ ಸಹಾಯಕ ನಿರೀಕ್ಷಕಿ ಶಾಂತಲ, ಬಗರ್ ಹುಕುಂ ಸಮಿತಿ ತಾಲೂಕು ಅಧ್ಯಕ್ಷ ಎಸ್. ಮಣಿಶೇಖರ್, ಮುಖಂಡರಾದ ಬಿ.ಎಸ್ ಗಣೇಶ್, ಬಿ.ಎಸ್ ಬಸವೇಶ್ ಹಾಗು ಎಲ್ಲಾ ಠಾಣೆಗಳ ಠಾಣಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.