Monday, January 2, 2023

ಪ್ರಾಧ್ಯಾಪಕ ವರದರಾಜ್ ಭಾರ ಎತ್ತುವ ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಪ್ರಾಧ್ಯಾಪಕ ಡಾ. ವರದರಾಜ್‌
    ಭದ್ರಾವತಿ, ಜ. ೨: ನಗರದ ನ್ಯೂಟೌನ್ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ವರದರಾಜ್‌ರವರು ಭಾರ ಎತ್ತುವ ಸ್ಪರ್ಧೆ(ವೇಯ್ಟ್ ಲಿಫ್ಟಿಂಗ್)ಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
    ಸರ್ಕಾರಿ ನೌಕರರ ಕ್ರೀಡಾಕೂಟ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನವದೆಹಲಿಯ ತ್ಯಾಗರಾಜ್ ಕ್ರೀಡಾಂಗಣದಲ್ಲಿ ಜ.೪ ರಿಂದ ೯ರ ವರೆಗೆ ಆಯೋಜಿಸಲಾಗಿರುವ ಅಖಿಲ ಭಾರತ ನಾಗರೀಕ ಸೇವಾ ವೇಯ್ಟ್ ಲಿಫ್ಟಿಂಗ್ ಪಂದ್ಯಾವಳಿಯಲ್ಲಿ ವರದರಾಜ್‌ರವರು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ.
    ವರದರಾಜ್‌ರವರು ಈಗಾಗಲೇ ಜಿಲ್ಲಾ ಹಾಗು ರಾಜ್ಯಮಟ್ಟದ ಹಲವಾರು ಪಂದ್ಯಾವಳಿಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಇಂದಿನ ಯುವ ಪೀಳಿಗೆ ಕ್ರೀಡಾ ಹಾಗು ಸಾಂಸ್ಕೃತಿಕ ಚಟುವಟಿಕೆಗಳಿಂದ ದೂರ ಉಳಿದಿದ್ದು, ಹೆಚ್ಚಾಗಿ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ವಿಪರ್ಯಾಸ ಸಂಗತಿಯಾಗಿದೆ. ವರದರಾಜ್‌ರವರು ಉಪನ್ಯಾಸಕ ವೃತ್ತಿ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.
    ವರದರಾಜ್‌ರವರು ರಾಷ್ಟ್ರಮಟ್ಟದಲ್ಲೂ ಉತ್ತಮ ಸಾಧನೆ ಮಾಡುವ ಮೂಲಕ ರಾಜ್ಯಕ್ಕೆ ಕೀರ್ತಿ ತರುವಂತಾಗಲಿ ಎಂದು ಕಾಲೇಜು ಅಭಿವೃದ್ಧಿ ಸಮಿತಿ, ಪ್ರಾಂಶುಪಾಲರು, ಬೋಧಕ ಹಾಗು ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು, ಸ್ನೇಹಿತರು, ಹಿತೈಷಿಗಳು ಶುಭ ಹಾರೈಸಿದ್ದಾರೆ.  

ಶ್ರೀ ಕ್ಷೇತ್ರ ನಾಗರಕಟ್ಟೆಯಲ್ಲಿ ವಿಜೃಂಭಣೆಯಿಂದ ಜರುಗಿದ ವೈಕುಂಠ ಏಕಾದಶಿ, ದೀಪೋತ್ಸವ

ಭದ್ರಾವತಿ ಕಾಗದನಗರ ೭ನೇ ವಾರ್ಡ್ ಶ್ರೀ ಕ್ಷೇತ್ರ ನಾಗಕಟ್ಟೆಯಲ್ಲಿ ಸೋಮವಾರ ವಿಜೃಂಭಣೆಯಿಂದ ಜರುಗಿದ ವೈಕುಂಠ ಏಕಾದಶಿ ಕಾರ್ಯಕ್ರಮದಲ್ಲಿ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ ಪಾಲ್ಗೊಂಡು ವೈಕುಂಠನಾಥ ದರ್ಶನ ಪಡೆದರು.
    ಭದ್ರಾವತಿ, ಜ. ೨: ಕಾಗದನಗರ ೭ನೇ ವಾರ್ಡ್ ಶ್ರೀ ಕ್ಷೇತ್ರ ನಾಗಕಟ್ಟೆಯಲ್ಲಿ  ಸೋಮವಾರ ವಿಜೃಂಭಣೆಯಿಂದ ಜರುಗಿದ ವೈಕುಂಠ ಏಕಾದಶಿ ಕಾರ್ಯಕ್ರಮದಲ್ಲಿ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ ಪಾಲ್ಗೊಂಡು ವೈಕುಂಠನಾಥ ದರ್ಶನ ಪಡೆದರು.
    ಪ್ರತಿವರ್ಷದಂತೆ ಈ ಬಾರಿ ಸಹ ದೇವಸ್ಥಾನದಲ್ಲಿ ದೀಪೋತ್ಸವ ಹಾಗು ವೈಕುಂಠ ಏಕಾದಶಿ ವಿಜೃಂಭಣೆಯಿಂದ ಜರುಗಿತು. ಸಂಜೆ ದೀಪೋತ್ಸವಕ್ಕೂ ಮೊದಲು ಪ್ರಮುಖ ರಸ್ತೆಯಲ್ಲಿ ಶ್ರೀ ಸ್ವಾಮಿಯ ಉತ್ಸವ ಮೆರವಣಿಗೆ ನಡೆಯಿತು. ನಂತರ ಶಾರದ ಅಪ್ಪಾಜಿ ದೀಪ ಬೆಳಗಿಸುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಿದರು.
    ನಗರಸಭಾ ಸದಸ್ಯ ಬಸವರಾಜ ಬಿ. ಆನೇಕೊಪ್ಪ ನೇತೃತ್ವದಲ್ಲಿ ಶಾರದ ಅಪ್ಪಾಜಿ ಹುಟ್ಟುಹಬ್ಬ ಆಚರಿಸಿ ಕೇಕ್ ಕತ್ತರಿಸಿ ಲಾಡು ವಿತರಿಸಲಾಯಿತು. ದೇವಸ್ಥಾನ ಸಮಿತಿ ವತಿಯಿಂದ ಶಾರದ ಅಪ್ಪಾಜಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ದೇವಸ್ಥಾನದಲ್ಲಿರುವ ಎಲ್ಲಾ ಮೂಲ ವಿಗ್ರಹಗಳಿಗೂ ವಿಶೇಷ ಅಲಂಕಾರದೊಂದಿಗೆ ಪೂಜೆ, ಹೋಮ-ಹವನ, ತೀರ್ಥಪ್ರಸಾದ ವಿನಿಯೋಗ ನಡೆಯಿತು. ಪ್ರಧಾನ ಅರ್ಚಕ ರಮೇಶ್ ಭಟ್ಟರು ತರಳಿಮಠ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು.


    ಜೆಡಿಎಸ್ ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ನಗರಸಭಾ ಸದಸ್ಯರಾದ ರೂಪಾವತಿ ಗುಣಶೇಖರ್, ಸವಿತಾ ಉಮೇಶ್, ಪಲ್ಲವಿ ದಿಲೀಪ್, ಉದಯ್‌ಕುಮಾರ್, ಕುಶಾಲ್, ಭಾಗ್ಯಮ್ಮ, ದೇವಸ್ಥಾನ ಸಮಿತಿ ಪ್ರಮುಖರಾದ ನಿಂಗಪ್ಪ, ಗೋಪಿನಾಥ್ ಸೇರಿದಂತೆ ಭಕ್ತಾಧಿಗಳು ಪಾಲ್ಗೊಂಡಿದ್ದರು.

ಉಕ್ಕಿನ ನಗರದಲ್ಲಿ ವಿಜೃಂಭಣೆಯಿಂದ ಜರುಗಿದ ವೈಕುಂಠ ಏಕಾದಶಿ


ಭದ್ರಾವತಿ ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಶ್ರೀನಿವಾಸ ಸ್ವಾಮಿ ದೇವಸ್ಥಾನದಲ್ಲಿ ಏಕಾದಶಿ ಪ್ರಯುಕ್ತ ಸೋಮವಾರ ಭವ್ಯ ವೇದಿಕೆಯಲ್ಲಿ ನಿರ್ಮಿಸಲಾಗಿದ್ದ ವೈಕುಂಠ ದರ್ಶನ ಭಕ್ತರ ಗಮನ ಸೆಳೆಯಿತು.
    ಭದ್ರಾವತಿ, ಜ. ೨: ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ, ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಶ್ರೀನಿವಾಸ ಸ್ವಾಮಿ ದೇವಸ್ಥಾನ, ಬಿ.ಎಚ್ ರಸ್ತೆ ಲೋಯರ್ ಹುತ್ತಾ, ಶ್ರೀ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಹಾಗು ಕಾಗದನಗರ ೭ನೇ ವಾರ್ಡ್ ಶ್ರೀ ಕ್ಷೇತ್ರ ನಾಗಕಟ್ಟೆ ಹಾಗು ಬಾರಂದೂರು ಶ್ರೀ ಲಕ್ಷ್ಮೀ ವೆಂಕಟೇಶ್ವರ ಪದ್ಮಾವತಿ ದೇವಾಲಯ ಸೇರಿದಂತೆ ವಿವಿಧೆಡೆ ಸೋಮವಾರ ವೈಕುಂಠ ಏಕಾದಶಿ ವಿಜೃಂಭಣೆಯಿಂದ ನಡೆಯಿತು.
    ಬೆಳಿಗ್ಗೆಯಿಂದಲೇ ಭಕ್ತರು ಸರದಿ ಸಾಲಿನಲ್ಲಿ ನಿಂತು ವೈಕುಂಠ ದರ್ಶನ ಪಡೆಯುವ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾದರು. ಪ್ರತಿ ವರ್ಷದಂತೆ ಈ ಬಾರಿ ಸಹ ಭವ್ಯ ವೇದಿಕೆಯಲ್ಲಿ ನಿರ್ಮಿಸಲಾದ ವೈಕುಂಠ ದರ್ಶನ ಭಕ್ತರನ್ನು ಆಕರ್ಷಿಸಿದವು.
    ಹಳೇನಗರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ವೇದಬ್ರಹ್ಮ ಎಸ್. ರಂಗನಾಥಶರ್ಮ, ಮಿಲ್ಟ್ರಿಕ್ಯಾಂಪ್‌ನಲ್ಲಿರುವ ಶ್ರೀನಿವಾಸ ಸ್ವಾಮಿ ದೇವಸ್ಥಾನದಲ್ಲಿ ಅರ್ಚಕ ಪ್ರಮೋದ್ ಕುಮಾರ್, ಕಾಗದನಗರ ೭ನೇ ವಾರ್ಡ್ ಶ್ರೀ ಕ್ಷೇತ್ರ ನಾಗಕಟ್ಟೆಯಲ್ಲಿ ಪ್ರಧಾನ ಅರ್ಚಕ ರಮೇಶ್ ಭಟ್ಟರು ತರಳಿಮಠ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು.
    ಬೆಳಿಗ್ಗೆಯೇ ಗಣ್ಯರು, ಜನಪ್ರತಿನಿಧಿನಗಳು, ವಿವಿಧ ರಾಜಕೀಯ ಪಕ್ಷಗಳ, ಸಂಘ-ಸಂಸ್ಥೆಗಳ ಪ್ರಮುಖರು ನೂತನ ವರ್ಷದ ಆರಂಭದಲ್ಲಿಯೇ ಆಗಮಿಸಿರುವ ವೈಕುಂಠ ಏಕಾದಶಿ ಶುಭಾಶಯ ಕೋರುವ ಮೂಲಕ ದೇವಸ್ಥಾನಗಳಿಗೆ ತೆರಳಿ ವೈಕುಂಠ ದರ್ಶನ ಪಡೆದು ಪ್ರಾರ್ಥಿಸಿದರು.  
    ಬಹುತೇಕ ದೇವಾಲಯಗಳಲ್ಲಿ ಭಕ್ತರಿಗೆ ಕೇವಲ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ತೀರ್ಥಪ್ರಸಾದ ವಿನಿಯೋಗ ನಡೆಯಿತು.

ಜ.8ರಂದು ಉದ್ಯೋಗ ಮೇಳ


ಭದ್ರಾವತಿ, ಜ. 2: ಮಂಗೋಟೆ ಮುರಿಗೆಪ್ಪ ಚಾರಿಟಬಲ್ ಟ್ರಸ್ಟ್ ವತಿಯಿಂದ ಜ.8ರಂದು ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕ ಮಂಗೋಟೆ ರುದ್ರೇಶ್ ತಿಳಿಸಿದರು. 
ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ನಮ್ಮ ತಂದೆಯವರ ಸ್ಮರಣಾರ್ಥ ಚಾರಿಟಬಲ್ ಟ್ರಸ್ಟ್ ಅಸ್ತಿತ್ವಕ್ಕೆ ತರಲಾಗಿದೆ.  ಈ ಟ್ರಸ್ಟ್ ಮೂಲಕ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಬೇಕೆಂಬ ಉದ್ದೇಶದಿಂದ ಉದ್ಯೋಗ ಮೇಳ ಆಯೋಜಿಸಲಾಗಿದೆ. ಪ್ರಸ್ತುತ ಕ್ಷೇತ್ರದಲ್ಲಿ ನಿರುದ್ಯೋಗಿಗಳ ಸಮಸ್ಯೆ ಹೆಚ್ಚಾಗಿರುವುದರಿಂದ ಈ  ಮೇಳ ಅವಶ್ಯಕವಾಗಿದೆ ಎಂದರು. 
    ಜ.8ರಂದು ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ವಿದ್ಯಾ ಸಂಸ್ಥೆ ಆವರಣದಲ್ಲಿ ಬೆಳಗ್ಗೆ 9 ರಿಂದ ಸಂಜೆ 4ರವರೆಗೆ ಮೇಳ ನಡೆಯಲಿದ್ದು ಸುಮಾರು 25ಕ್ಕೂ ಹೆಚ್ಚು ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿವೆ.  ಎಸ್.ಎಸ್.ಎಲ್.ಸಿ, ಪಿಯುಸಿ, ಡಿಪ್ಲೊಮ, ನರ್ಸಿಂಗ್, ಲ್ಯಾಬ್ ಟೆಕ್ನಿಷಿಯನ್ ಸೇರಿದಂತೆ ಪದವಿ ಹಾಗೂ ಸ್ನಾತಕೋತ್ತರ ಪದವೀಧರ ನಿರುದ್ಯೋಗಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದರು.
   ಪತ್ರಿಕಾಗೋಷ್ಠಿಯಲ್ಲಿ ಬಿ.ಎಮ್ ಸಂತೋಷ್, ಆನಂದ್ ಕುಮಾರ್, ಬಿ.ಎಸ್ ಮಂಜುನಾಥ್,  ಸುನಿಲ್ ಗಾಯಕ್ವಾಡ್, ರವಿ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.