ಪ್ರಾಧ್ಯಾಪಕ ಡಾ. ವರದರಾಜ್
ಭದ್ರಾವತಿ, ಜ. ೨: ನಗರದ ನ್ಯೂಟೌನ್ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ವರದರಾಜ್‌ರವರು ಭಾರ ಎತ್ತುವ ಸ್ಪರ್ಧೆ(ವೇಯ್ಟ್ ಲಿಫ್ಟಿಂಗ್)ಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸರ್ಕಾರಿ ನೌಕರರ ಕ್ರೀಡಾಕೂಟ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನವದೆಹಲಿಯ ತ್ಯಾಗರಾಜ್ ಕ್ರೀಡಾಂಗಣದಲ್ಲಿ ಜ.೪ ರಿಂದ ೯ರ ವರೆಗೆ ಆಯೋಜಿಸಲಾಗಿರುವ ಅಖಿಲ ಭಾರತ ನಾಗರೀಕ ಸೇವಾ ವೇಯ್ಟ್ ಲಿಫ್ಟಿಂಗ್ ಪಂದ್ಯಾವಳಿಯಲ್ಲಿ ವರದರಾಜ್‌ರವರು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಿದ್ದಾರೆ.
ವರದರಾಜ್‌ರವರು ಈಗಾಗಲೇ ಜಿಲ್ಲಾ ಹಾಗು ರಾಜ್ಯಮಟ್ಟದ ಹಲವಾರು ಪಂದ್ಯಾವಳಿಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಇಂದಿನ ಯುವ ಪೀಳಿಗೆ ಕ್ರೀಡಾ ಹಾಗು ಸಾಂಸ್ಕೃತಿಕ ಚಟುವಟಿಕೆಗಳಿಂದ ದೂರ ಉಳಿದಿದ್ದು, ಹೆಚ್ಚಾಗಿ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ವಿಪರ್ಯಾಸ ಸಂಗತಿಯಾಗಿದೆ. ವರದರಾಜ್‌ರವರು ಉಪನ್ಯಾಸಕ ವೃತ್ತಿ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.
ವರದರಾಜ್‌ರವರು ರಾಷ್ಟ್ರಮಟ್ಟದಲ್ಲೂ ಉತ್ತಮ ಸಾಧನೆ ಮಾಡುವ ಮೂಲಕ ರಾಜ್ಯಕ್ಕೆ ಕೀರ್ತಿ ತರುವಂತಾಗಲಿ ಎಂದು ಕಾಲೇಜು ಅಭಿವೃದ್ಧಿ ಸಮಿತಿ, ಪ್ರಾಂಶುಪಾಲರು, ಬೋಧಕ ಹಾಗು ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು, ಸ್ನೇಹಿತರು, ಹಿತೈಷಿಗಳು ಶುಭ ಹಾರೈಸಿದ್ದಾರೆ.
No comments:
Post a Comment