Friday, June 23, 2023

ಸರ್‌ಎಂವಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ

ಕುವೆಂಪು ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಮಹಿಳಾ ಕ್ರೀಡಾ ಕೂಟದಲ್ಲಿ ಭದ್ರಾವತಿ ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
    ಭದ್ರಾವತಿ, ಜೂ. ೨೩ : ಶೃಂಗೇರಿ ಜೆಸಿಬಿಎಂ ಪ್ರಥಮ ದರ್ಜೆ ಕಾಲೇಜಿನಲ್ಲಿ ಜೂ.೨೧ರವರೆಗೆ ಜರುಗಿದ ಕುವೆಂಪು ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಮಹಿಳಾ ಕ್ರೀಡಾ ಕೂಟದಲ್ಲಿ ನಗರದ ನ್ಯೂಟೌನ್ ಸರ್‌ಎಂವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
    ಕಾಲೇಜಿನ ೩೦ ವಿದ್ಯಾರ್ಥಿನಿಯರು ಭಾಗವಹಿಸಿದ್ದು, ಸಾಫ್ಟ್‌ಬಾಲ್‌ನಲ್ಲಿ ದ್ವಿತೀಯ ಹಾಗು ಬಾಲ್‌ಬ್ಯಾಡ್ಮಿಂಟನ್‌ನಲ್ಲಿ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ. ಕಾಲೇಜಿಗೆ ಕೀರ್ತಿ ತಂದಿರುವ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲ ಡಾ. ಬಿ.ಎಂ ನಾಸಿರ್‌ಖಾನ್, ಕ್ರೀಡಾ ವಿಭಾಗದ ಮುಖ್ಯಸ್ಥ ಡಾ. ಎಚ್.ಎಸ್ ಶಿವರುದ್ರಪ್ಪ ಹಾಗು ದೈಹಿಕ ಶಿಕ್ಷಣ ವಿಭಾಗದ ಉಪನ್ಯಾಸಕರು, ಅಧ್ಯಾಪಕ ಹಾಗು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.  

ಜೂ.೨೭ರಂದು ನಾಡಪ್ರಭು ಕೆಂಪೇಗೌಡ ಜಯಂತಿ

    ಭದ್ರಾವತಿ, ಜೂ. ೨೩ : ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಜೂ.೨೭ರಂದು ನಾಡಪ್ರಭು ಕೆಂಪೇಗೌಡರ ಜಯಂತ್ಯೋತ್ಸವ ಹಮ್ಮಿಕೊಳ್ಳಲಾಗಿದೆ.
    ಬೆಳಿಗ್ಗೆ ೯.೩೦ಕ್ಕೆ ಬಿ.ಎಚ್ ರಸ್ತೆ ಹುತ್ತಾ ಬಸ್ ನಿಲ್ದಾಣದಿಂದ ತಾಲೂಕು ಕಛೇರಿವರೆಗೂ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಯಲಿದ್ದು, ಮಧ್ಯಾಹ್ನ ಅಪ್ಪರ್ ಹುತ್ತಾದಲ್ಲಿರುವ ಕೆಂಪೇಗೌಡ ಸಮುದಾಯ ಭವನದಲ್ಲಿ ವೇದಿಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ.
    ಒಕ್ಕಲಿಗ ಸಮುದಾಯದ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯ ವಹಿಸಲಿದ್ದು, ಸಂಘದ ಅಧ್ಯಕ್ಷ ಎ.ಟಿ ರವಿ ಅಧ್ಯಕ್ಷತೆ ವಹಿಸಲಿದ್ದಾರೆ. ಒಕ್ಕಲಿಗ ಸಮುದಾಯದವರು ಸೇರಿದಂತೆ ಸಮಸ್ತ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಭಂಡಾರಹಳ್ಳಿ ಕೋರಿದ್ದಾರೆ.  

ಚಿಕ್ಕಮ್ಮ ನಿಧನ

ಚಿಕ್ಕಮ್ಮ
    ಭದ್ರಾವತಿ, ಜೂ. ೨೩ : ತಾಲೂಕಿನ ಕಲ್ಲಳ್ಳಿ ನಿವಾಸಿ ದಿವಂಗತ ಮುದ್ದೆಗೌಡರ ಪತ್ನಿ ಚಿಕ್ಕಮ್ಮ(೯೦) ಶುಕ್ರವಾರ ಬೆಳಿಗ್ಗೆ ನಿಧನ ಹೊಂದಿದರು.
    ತಾಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷ ನಂಜುಂಡೇಗೌಡ ಸೇರಿದಂತೆ ೪ ಗಂಡು, ೧ ಹೆಣ್ಣು ಮಕ್ಕಳು ಇದ್ದರು. ಇವರ ಅಂತ್ಯಕ್ರಿಯೆ ಸಂಜೆ ಇವರ ತೋಟದಲ್ಲಿ ನೆರವೇರಿತು.
    ಸಂತಾಪ : ಜೆಡಿಎಸ್ ಮುಖಂಡರಾದ ಶಾರದಾ ಅಪ್ಪಾಜಿ, ಕರ್ನಾಟಕ ಸರ್ಕಾರಿ ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷ ಸಿದ್ದಲಿಂಗಯ್ಯ, ನಗರಸಭೆ ಮಾಜಿ ಉಪಾಧ್ಯಕ್ಷ ಚನ್ನಪ್ಪ, ಸದಸ್ಯ ಮಣಿ ಎಎನ್‌ಎಸ್, ಒಕ್ಕಲಿಗ ಸಂಘದ ಅಧ್ಯಕ್ಷ ಎ.ಟಿ ರವಿ, ಖಜಾಂಚಿ ಆರ್. ನಾಗೇಶ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಗ್ರಾಮ ಪಂಚಾಯತಿ, ನಗರಸಭಾ ಸದಸ್ಯರು ಸಂತಾಪ ಸೂಚಿಸಿದ್ದಾರೆ.

ಜನಸಂಘ ಸಂಸ್ಥಾಪಕ ಡಾ. ಶಾಮ್‌ಪ್ರಸಾದ್ ಮುಖರ್ಜಿ ಬಲಿದಾನ ದಿನ

ಜನಸಂಘದ ಸಂಸ್ಥಾಪಕರಾದ ಡಾ. ಶಾಮ್‌ಪ್ರಸಾದ್ ಮುಖರ್ಜಿಯವರ ಬಲಿದಾನ ದಿನ ಭಾರತೀಯ ಜನತಾ ಪಕ್ಷ ಭದ್ರಾವತಿ ತಾಲೂಕು ಮಂಡಲ ವತಿಯಿಂದ ಶುಕ್ರವಾರ ಆಚರಿಸಲಾಯಿತು.
    ಭದ್ರಾವತಿ, ಜೂ. ೨೩ : ಜನಸಂಘದ ಸಂಸ್ಥಾಪಕರಾದ ಡಾ. ಶಾಮ್‌ಪ್ರಸಾದ್ ಮುಖರ್ಜಿಯವರ ಬಲಿದಾನ ದಿನ ಭಾರತೀಯ ಜನತಾ ಪಕ್ಷ ತಾಲೂಕು ಮಂಡಲ ವತಿಯಿಂದ ಶುಕ್ರವಾರ ಆಚರಿಸಲಾಯಿತು.
    ಪಕ್ಷದ ಕಾರ್ಯಾಲಯದಲ್ಲಿ ಬೆಳಿಗ್ಗೆ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಸಂಸ್ಥಾಪಕರ ತ್ಯಾಗ ಬಲಿದಾನಗಳನ್ನು ಸ್ಮರಿಸಿ ಪುಷ್ಪ ನಮನ, ನುಡಿ ನಮನ ಸಲ್ಲಿಸಲಾಯಿತು.
    ಶ್ಯಾಮ್‌ಪ್ರಸಾದ್ ಮುಖರ್ಜಿಯವರ ಭಾವಚಿತ್ರ ಬಿಡುಗಡೆ ಮಾಡಿ ಎಲ್ಲಾ ಬೂತ್‌ಗಳಲ್ಲಿ ಕಾರ್ಯಕ್ರಮ ಆಯೋಜಿಸುವಂತೆ ಮಹಾಶಕ್ತಿ ಕೇಂದ್ರಗಳಿಗೆ ಕರೆ ನೀಡಲಾಯಿತು.
    ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಂ. ಪ್ರಭಾಕರ್, ತಾಲೂಕು ಮಂಡಲ ಪ್ರಧಾನ ಕಾರ್ಯದರ್ಶಿ ಚನ್ನೇಶ್. ಪ್ರಮುಖರಾದ ನಗರಸಭೆ ಹಿರಿಯ ಸದಸ್ಯ ವಿ. ಕದಿರೇಶ್, ಮಂಗೋಟೆ ರುದ್ರೇಶ್, ಕೂಡ್ಲಿಗೆರೆ ಹಾಲೇಶ್. ಎಂ. ಮಂಜುನಾಥ್, ಎಂ.ಎಸ್ ಸುರೇಶಪ್ಪ. . ರಾಮಲಿಂಗಯ್ಯ. ಟಿ.ವಿ ವೆಂಕಟೇಶ್, ಮಹಾಶಕ್ತಿ ಕೇಂದ್ರ ಸೇರಿದಂತೆ ಪಕ್ಷದ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಸಂಘ ಪರಿವಾರದ ಹಿರಿಯ ಕಾರ್ಯಕರ್ತರು ಉಪಸ್ಥಿತರಿದ್ದರು.