ಭಾರತ್ ಬಂದ್ ಹಿನ್ನಲೆಯಲ್ಲಿ ಸೋಮವಾರ ಭದ್ರಾವತಿ ನಗರದ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಅಂಬೇಡ್ಕರ್ ವೃತ್ತದಿಂದ ತಾಲೂಕು ಕಛೇರಿ ವರೆಗೂ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ಪ್ರತಿಭಟನಾ ಮೆರವಣಿಗೆ ನಂತರ ಪ್ರಮುಖರು ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಭದ್ರಾವತಿ, ಸೆ. ೨೭: ಈಗಿನ ಕೇಂದ್ರ ಸರ್ಕಾರ ದೇಶದ ಆಸ್ತಿಗಳನ್ನು ಬಂಡವಾಳಶಾಹಿಗಳಿಗೆ ಮಾರಾಟ ಮಾಡುವ ಜೊತೆಗೆ ಅನೇಕ ಜನ ವಿರೋಧಿ ನೀತಿಗಳನ್ನು ಜಾರಿಗೆ ತಂದಿರುವುದು ಭವಿಷ್ಯದಲ್ಲಿ ಆತಂಕಕ್ಕೆ ಎಡೆಮಾಡಿಕೊಟ್ಟಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಪ್ರಮುಖರು ಆರೋಪಿಸಿದರು.
ಸೋಮವಾರ ಭಾರತ್ ಬಂದ್ ಹಿನ್ನಲೆಯಲ್ಲಿ ನಗರದ ಬಿ.ಎಚ್ ರಸ್ತೆ ಅಂಡರ್‌ಬ್ರಿಡ್ಜ್ ಅಂಬೇಡ್ಕರ್ ವೃತ್ತದಿಂದ ತಾಲೂಕು ಕಛೇರಿ ವರೆಗೂ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಮೆರವಣಿಯ ನೇತೃತ್ವವಹಿಸಿ ಮಾತನಾಡಿದ ಪ್ರಮುಖರು, ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಡವರು, ರೈತರು ಮತ್ತು ಕಾರ್ಮಿಕರು ನೆಮ್ಮದಿ ಕಳೆದುಕೊಳ್ಳಲುವಂತಾಗಿದೆ. ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜೊತೆಗೆ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಈ ನಡುವೆ ಹಲವಾರು ಜನ ವಿರೋಧಿ ನೀತಿಗಳಿಂದಾಗಿ ಬದುಕುವುದು ಅಸಾಧ್ಯವಾಗಿದೆ ಎಂದು ದೂರಿದರು.
ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿ, ಅಗತ್ಯ ವಸ್ತುಗಳ ನಿಯಂತ್ರಣ ಕಾಯ್ದೆಗೆ ತಂದಿರುವ ತಿದ್ದುಪಡಿ, ವಿದ್ಯುಚ್ಛಕ್ತಿ ಖಾಸಗೀಕರಣ, ರಾಜ್ಯ ಸರ್ಕಾರದ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಭವಿಷ್ಯದಲ್ಲಿ ಮಾರಕವಾಗಿದ್ದು, ಇದರಿಂದಾಗಿ ಬಡ ವರ್ಗದವರು, ರೈತರು ಮತ್ತು ಕಾರ್ಮಿಕರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಇಂದಿನ ಸರ್ಕಾರ ದೇಶದ ಆಸ್ತಿಗಳನ್ನು ಮಾರಾಟ ಮಾಡಲು ಮುಂದಾಗಿರುವುದು ದುರಾದುಷ್ಟಕರ ಬೆಳವಣಿಗೆಯಾಗಿದ್ದು, ದೇಶವನ್ನು ಸಂಪೂರ್ಣವಾಗಿ ಬಂಡವಾಳಶಾಹಿಗಳ ಕೈಗೊಪ್ಪಿಸುವ ಹುನ್ನಾರ ನಡೆಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಎಲ್ಲರೂ ಎಚ್ಚತ್ತುಕೊಂಡು ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಕ್ಷಣ ಜನ ವಿರೋಧಿ ನೀತಿಗಳನ್ನು ಕೈಬಿಡಬೇಕು. ದೇಶಕ್ಕೆ ಮಾರಕವಾಗಿರುವ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ಪ್ರತಿಭಟನೆ ಅಂಬೇಡ್ಕರ್ ವೃತ್ತದಿಂದ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ ಮತ್ತು ರಂಗಪ್ಪ ವೃತ್ತ ಮೂಲಕ ತಾಲೂಕು ಕಚೇರಿ ತಲುಪಿತು. ನಂತರ ತಹಸೀಲ್ದಾರ್ ಆರ್. ಪ್ರದೀಪ್ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ರೈತಪರ ಸಂಘಟನೆಗಳು, ದಲಿತಪರ ಸಂಘಟನೆಗಳು, ಕಾರ್ಮಿಕಪರ ಸಂಘಟನೆಗಳು, ಮಹಿಳಾಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳ ಒಕ್ಕೂಟ ಭಾರತ್ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.
ಪ್ರಮುಖರಾದ ಹಿರಿಯ ಕಾರ್ಮಿಕ ಮುಖಂಡ ಡಿ.ಸಿ ಮಾಯಣ್ಣ, ರೈತ ಮುಖಂಡರಾದ ಯಶವಂತರಾವ್ ಘೋಷರ್ಪಡೆ, ಹಿರಿಯಣ್ಣಯ್ಯ, ಡಿ.ವಿ ವೀರೇಶ್, ಶರತ್ಚಂದ್ರ, ಮಂಜಪ್ಪಗೌಡ, ಪ್ರಗತಿಪರ ಮುಖಂಡರಾದ ಸುರೇಶ್(ಪ್ರಜಾಪ್ರತಿನಿಧಿ), ಜಿ. ರಾಜು, ಯಲ್ಲೋಜಿರಾವ್, ದಲಿತ ಮುಖಂಡರಾದ ಚಿನ್ನಯ್ಯ, ಪಳನಿರಾಜ್, ಕಾಣಿಕ್‌ರಾಜ್, ಬಿಪಿಎಲ್ ಸಂಘದ ಅಧ್ಯಕ್ಷ ಜಗದೀಶ್, ಎಎಪಿ ಪ್ರಮುಖರಾದ ಎಚ್. ರವಿಕುಮಾರ್, ಪರಮೇಶ್ವರಚಾರ್, ಎನ್.ಪಿ ಜೋಸೆಫ್, ರೇಷ್ಮಾ, ಎ. ಮಸ್ತಾನ್, ಜೋಸೆಫ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.