Friday, August 19, 2022

ಬ್ರಹ್ಮಾಕುಮಾರಿಸ್ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ


ಭದ್ರಾವತಿ ನ್ಯೂಟೌನ್ ಬ್ರಹ್ಮಾಕುಮಾರಿಸ್ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ವಿಜೃಂಭಣೆಯಿಂದ ಜರುಗಿತು. 
    ಭದ್ರಾವತಿ, ಜ. ೧೯: ನ್ಯೂಟೌನ್ ಬ್ರಹ್ಮಾಕುಮಾರಿಸ್ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ವಿಜೃಂಭಣೆಯಿಂದ ಜರುಗಿತು.
    ಶ್ರೀ ಕೃಷ್ಣ ಜನ್ಮಾಷ್ಠಮಿ ಸಂದೇಶ ನೀಡಿದ ವಿಶ್ವ ವಿದ್ಯಾಲಯದ ಸಂಚಾಲಕರಾದ ಬ್ರಹ್ಮಾ ಕುಮಾರಿ ಮಾಲಾ ಅಕ್ಕ, ಭಗವಾನ್ ಶ್ರೀಕೃಷ್ಣನ ಶ್ರೇಷ್ಠತೆಗೆ ಕಾರಣಗಳನ್ನು ವಿವರಿಸಿ ಸಣ್ಣ ಕಥೆಯ ಮೂಲಕ ಕೊಳಲು ಹೇಗೆ ಶ್ರೀ ಕೃಷ್ಣನ ಜೊತೆ ಸದಾ ಇರುತ್ತದೆಯೋ ಹಾಗೆ ನಾವು ಸಹ ಪರಮಾತ್ಮನೊಂದಿಗೆ ಸದಾ ಇರಬೇಕೆಂಬ ನೀತಿಯನ್ನು ತಿಳಿಸಿಕೊಟ್ಟರು.
    ನಗರದ ಪ್ರಧಾನ ಅಂಚೆ ಕಛೇರಿ ಪೋಸ್ಟ್ ಮಾಸ್ಟರ್ ಆಶಾ ಜೆ. ಪ್ರಭು, ಅಂಚೆ ನೌಕರ ನಿತ್ಯಾನಂದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ರಾಧೆ ಮತ್ತು ಶ್ರೀ ಕೃಷ್ಣನ ವೇಷಭೂಷಣದೊಂದಿಗೆ ಮಕ್ಕಳು ಕಣ್ಮನ ಸೆಳೆದರು. ವಿಶ್ವ ವಿದ್ಯಾಲಯದ ಸೇವಾಕರ್ತರು, ಭಕ್ತರು ಪಾಲ್ಗೊಂಡಿದ್ದರು. ಮಹಾಭೋಜನ ವ್ಯವಸ್ಥೆ ಏರ್ಪಡಿಸಲಾಗಿತ್ತು.  

ಸ್ಕಾಟ್‌ಲ್ಯಾಂಡ್‌ನಲ್ಲಿ ಜನಿಸಿದ ಹೆಣ್ಣು ಮಗುವಿಗೆ ಹಿಂದೂ ಸಂಪ್ರದಾಯದಂತೆ ನಾಮಕರಣ

ಸ್ಕಾಟ್‌ಲ್ಯಾಂಡ್‌ನಲ್ಲಿ ವಾಸವಿರುವ ಎಚ್.ಆರ್ ಶ್ರೀಕಾಂತ್ ಮತ್ತು ಶ್ರೀದೇವಿ ದಂಪತಿಗೆ ಜನಿಸಿರುವ ಹೆಣ್ಣು ಮಗು ಸ್ಕಾಟ್‌ಲ್ಯಾಂಡ್ ಪ್ರಜೆ ಸ್ಪಟಿಕ ಶ್ರೀಕಾಂತ್.
    ಭದ್ರಾವತಿ, ಆ. ೧೯: ಸ್ಕಾಟ್‌ಲ್ಯಾಂಡ್‌ನಲ್ಲಿ ಜನಿಸಿದ ಹೆಣ್ಣು ಮಗುವಿನ ನಾಮಕರಣ ತುಂಗಾ ನದಿ ತೀರದಲ್ಲಿ ಹಿಂದೂ ಸಂಪ್ರದಾಯದಂತೆ ನೆರವೇರಿತು.
    ನಗರದ ಎಂಪಿಎಂ ಕಾರ್ಖಾನೆಯ ನಿವೃತ್ತ ಕಾರ್ಮಿಕ ಡಿ. ರುದ್ರಯ್ಯನವರ ಪುತ್ರ ಎಚ್.ಆರ್ ಶ್ರೀಕಾಂತ್ ಮತ್ತು ಕೇಶವಪುರ ಬಡಾವಣೆ(ಗಾಂಧಿನಗರ) ನಿವಾಸಿ ನಾಗರಾಜ್‌ರವರ ಪುತ್ರಿ ಶ್ರೀದೇವಿ  ಸ್ಕಾಟ್‌ಲ್ಯಾಂಡ್ ಎಡಿನ್‌ಬರ್ಗ್‌ನಲ್ಲಿ ವಾಸವಿದ್ದು, ಈ ದಂಪತಿಗೆ ಫೆ.೫ರಂದು ಹೆಣ್ಣು ಮಗು ಜನಸಿದೆ.
    ಕಳೆದ ವಾರ ಮಗುವಿನೊಂದಿಗೆ ತಾಯ್ನಾಡಿಗೆ ಆಗಮಿಸಿದ ದಂಪತಿ ಕುಟುಂಬ ಸದಸ್ಯರು, ಬಂಧು-ಬಳಗದವರೊಂದಿಗೆ ಶಿವಮೊಗ್ಗ ಗಾಜನೂರು ತುಂಗಾ ಜಲಾಶಯ ಸಮೀಪದಲ್ಲಿರುವ ತುಂತುರು ಫಾರಂ ಹೌಸ್‌ನಲ್ಲಿ ಹಿಂದೂ ಸಂಪ್ರದಾಯದಂತೆ ನಾಮಕರಣ ನೆರವೇರಿಸುವ ಮೂಲಕ ಮಗುವಿಗೆ ಸ್ಪಟಿಕ ಶ್ರೀಕಾಂತ್ ಎಂದು ಹೆಸರಿಡುವ ಮೂಲಕ ಸಂಭ್ರಮಿಸಿದರು.


    ಶ್ರೀಕಾಂತ್ ಮತ್ತು ಶ್ರೀದೇವಿ ಇಬ್ಬರು ಇಂಜಿನಿಯರ್ ಆಗಿದ್ದು, ಶ್ರೀಕಾಂತ್ ವಿಪ್ರೋ ಕಂಪನಿ ಉದ್ಯೋಗಿಯಾಗಿ ನೇಮಕಗೊಂಡು ಕಳೆದ ಕೆಲವು ವರ್ಷಗಳಿಂದ ಸ್ಕಾಟ್‌ಲ್ಯಾಂಡ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಗು ವಿದೇಶದಲ್ಲಿ ಜನಿಸಿದರೂ ಸಹ ತಾಯ್ನಾಡಿನ ಅಭಿಮಾನ, ಪ್ರೀತಿ, ಹಿಂದೂ ಸಂಪ್ರದಾಯದಂತೆ ನಾಮಕರಣ ನೆರವೇರಿಸಬೇಕೆಂಬ ದಂಪತಿ ಕನಸು ಒಂದೆಡೆ ನನಸಾಗಿದೆ. ಮತ್ತೊಂದೆಡೆ ಈ ದಂಪತಿ ವಿದೇಶದಲ್ಲಿ ನೆಲೆಸಿರುವ ಭಾರತೀಯರಿಗೆ ಸ್ಪೂರ್ತಿದಾಯಕ ಎಂದರೆ ತಪ್ಪಾಗಲಾರದು.


ಸ್ಕಾಟ್‌ಲ್ಯಾಂಡ್‌ನಲ್ಲಿ ಜನಿಸಿದ ಹೆಣ್ಣು ಮಗುವಿನ ನಾಮಕರಣ ತುಂಗಾ ನದಿ ತೀರದಲ್ಲಿ ಹಿಂದೂ ಸಂಪ್ರದಾಯದಂತೆ ನೆರವೇರಿತು.


ತಾಲೂಕು ಆಡಳಿತದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ

ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶುಕ್ರವಾರ ತಾಲೂಕು ಕಛೇರಿ ಸಭಾಂಗಣದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.
    ಭದ್ರಾವತಿ, ಆ. ೧೯: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶುಕ್ರವಾರ ತಾಲೂಕು ಕಛೇರಿ ಸಭಾಂಗಣದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು.
    ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಭಗವಾನ್ ಶ್ರೀ ಕೃಷ್ಣನಿಗೆ ಪೂಜೆ ಸಲ್ಲಿಸುವ ಮೂಲಕ ಪುಷ್ಪಾರ್ಚನೆ ನೆರವೇರಿಸಲಾಯಿತು.  ತಹಸೀಲ್ದಾರ್ ಆರ್. ಪ್ರದೀಪ್, ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಸದಸ್ಯರಾದ ಬಿ.ಕೆ ಮೋಹನ್, ರಿಯಾಜ್ ಅಹಮದ್, ಕಂದಾಯಾಧಿಕಾರಿ ರಾಜ್‌ಕುಮಾರ್, ಬಿಜೆಪಿ ಮುಖಂಡ ಟಿ. ವೆಂಕಟೇಶ್, ಗೊಲ್ಲ ಯಾದವ ಸಮಾಜದ ಹಿರಿಯರಾದ ಗೋವಿಂದಪ್ಪ, ಸಮಾಜದ ಅಧ್ಯಕ್ಷ ವೆಂಕಟೇಶ್ ಹಾಗು ಪದಾಧಿಕಾರಿಗಳು, ನಿರ್ದೇಶಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಗೋವಿಂದಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ತಳ್ಳಿಕಟ್ಟೆ ಪ್ರಕಾಶ್ ಸ್ವಾಗತಿಸಿದರು. ಸರ್ಕಾರಿ ಐಟಿಐ ತರಬೇತಿದಾರ ಪುಟ್ಟಲಿಂಗ ಮೂರ್ತಿ ಮತ್ತು ಎಂ. ರಮೆಶ್ ನಿರೂಪಿಸಿದರು. ನ್ಯಾಯವಾದಿ ಟಿ.ಎಸ್ ರಾಜು ವಂದಿಸಿದರು.

ಶ್ರೀ ಸಂತ ಸೇವಾಲಾಲ್ ಜನ್ಮಸ್ಥಳದಲ್ಲಿ ಆರ್‌ಎಸ್‌ಎಸ್ ಶಿಬಿರಕ್ಕೆ ಅವಕಾಶ ನೀಡುವುದಿಲ್ಲ : ಪಿ. ಕೃಷ್ಣಾನಾಯ್ಕ

ಭದ್ರಾವತಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಂಜಾರ ಯುವಕರ ಸಂಘದ ಅಧ್ಯಕ್ಷ ಪಿ. ಕೃಷ್ಣನಾಯ್ಕ ಹಾಗು ಬಂಜಾರ ಸಮಾಜದ ಪ್ರಮುಖರು ಮಾತನಾಡಿದರು.
    ಭದ್ರಾವತಿ, ಆ. ೧೯: ಶ್ರೀ ಸಂತ ಸೇವಾಲಾಲ್ ಜನ್ಮಸ್ಥಳ ಮಹಾಮಠ, ಬಂಜಾರ ಸಮಾಜದ ಪುಣ್ಯ ಕ್ಷೇತ್ರವಾದ ದಾವಣಗೆರೆ ಹೊನ್ನಾಳಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉದ್ಯೋಗಿ ಪ್ರಾಥಮಿಕ ಶಿಕ್ಷಾ ವರ್ಗ(ಆರ್‌ಎಸ್‌ಎಸ್ ಶಿಬಿರ) ಯಾವುದೇ ಕಾರಣಕ್ಕೂ ನಡೆಯಲು ಅವಕಾಶ ನೀಡುವುದಿಲ್ಲ ಎಂದು ಬಂಜಾರ ಯುವಕರ ಸಂಘದ ಅಧ್ಯಕ್ಷ ಪಿ. ಕೃಷ್ಣಾನಾಯ್ಕ ಹೇಳಿದರು.
    ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶ್ರೀ ಸಂತ ಸೇವಾಲಾಲ್ ಜನ್ಮಸ್ಥಳ ತನ್ನದೇ ಆದ ಪರಂಪರೆ, ಧಾರ್ಮಿಕ ಸಂಸ್ಕೃತಿಯನ್ನು ಹೊಂದಿದೆ. ಇಂತಹ ಸ್ಥಳದಲ್ಲಿ ಧಾರ್ಮಿಕ ಸಂಸ್ಕೃತಿಗೆ ಧಕ್ಕೆ ತರುವಂತಹ ಬೇರೆ ಯಾವುದೇ ರೀತಿಯ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಪುಣ್ಯ ಸ್ಥಳದ ಅಭಿವೃದ್ಧಿ ಹಾಗು ಬಂಜಾರ ಸಮಾಜದವರ ಏಳಿಗೆಗೆ ಪೂರಕವಾದ ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಬೇಕು. ಆದರೆ ಬಂಜಾರ ಸಮಾಜದವರ ಗಮನಕ್ಕೆ ಬಾರದಂತೆ ಸೆ.೧೧ ರಿಂದ ೧೯ರ ವರೆಗೆ ಉದ್ಯೋಗಿ ಪ್ರಾಥಮಿಕ ಶಿಕ್ಷಾ ವರ್ಗ ನಡೆಯುತ್ತಿರುವ ಬಗ್ಗೆ ಈಗಾಗಲೇ ಕರಪತ್ರಗಳನ್ನು ಹಂಚಲಾಗಿದೆ. ಈ ಮೂಲಕ ಬಂಜಾರ ಸಮಾಜದ ಧಾರ್ಮಿಕ ಸಂಸ್ಕೃತಿ ಮೇಲೆ ದಾಳಿ ನಡೆಲು ಪ್ರಯತ್ನಿಸಲಾಗುತ್ತಿದೆ. ಇದಕ್ಕೆ ಕುಡಚಿ ಕ್ಷೇತ್ರದ ಶಾಸಕರು, ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಿ. ರಾಜೀವ್ ಕಾರಣ ಎಂಬ ಆರೋಪ ಕೇಳಿಬರುತ್ತಿವೆ. ಪಿ. ರಾಜೀವ್ ಅವರಿಗೆ ಅನುಮತಿ ನೀಡಲು ಯಾವುದೇ ಅಧಿಕಾರವಿಲ್ಲ. ಒಂದು ವೇಳೆ ಶಿಕ್ಷಾ ವರ್ಗ ನಡೆಯಬೇಕಾದರೆ ಮಹಾಮಠದ ಟ್ರಸ್ಟ್ ಅನುಮತಿ ಕಡ್ಡಾಯವಾಗಿದೆ ಎಂದರು.


    ಈ ವಿಚಾರಕ್ಕೆ ಸಂಬಂಧಿಸಿದಂತೆ ಆ.೨೧ರಂದು ಮಹಾಮಠದಲ್ಲಿ ಬೃಹತ್ ಬಾಯ್ ಘಡ್ ಅಂದೋಲನ ನಡೆಯಲಿದ್ದು, ಈ ಅಂದೋಲನದಲ್ಲಿ ರಾಜ್ಯದ ವಿವಿಧೆಡೆಗಳಿಂದ ಬಂಜಾರ ಸಮಾಜದವರು ಪಾಲ್ಗೊಳ್ಳಲಿದ್ದಾರೆ. ಅಂದೋಲನದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಒಂದು ವೇಳೆ ಇದಕ್ಕೆ ವಿರೋಧ ವ್ಯಕ್ತವಾದಲ್ಲಿ ಮುಂದಿನ ಹೋರಾಟ ನಡೆಸಲಾಗುವುದು ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಪ್ರೇಮ್‌ಕುಮಾರ್, ಶಂಕರ್‌ನಾಯ್ಕ, ಚಂದ್ರು, ವೀರೇಶ್, ನಾಗನಾಯ್ಕ, ಸುಮಾಬಾಯಿ, ಸೋಮಿಬಾಯಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.