Thursday, November 25, 2021

ವಿಜೃಂಭಣೆಯಿಂದ ಜರುಗಿದ ಶ್ರೀ ಚಿದಂಬರ ಜಯಂತಿ

ಭದ್ರಾವತಿ ಹಳೆನಗರದ ಶ್ರೀ ರಾಮೇಶ್ವರಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಗುರುವಾರ ೨೫ನೇ ವರ್ಷದ ಶ್ರೀ ಚಿದಂಬರ ಜಯಂತಿ ವಿಜೃಂಭಣೆಯಿಂದ ನೆರವೇರಿತು.
    ಭದ್ರಾವತಿ, ನ. ೨೫: ಹಳೆನಗರದ ಶ್ರೀ ರಾಮೇಶ್ವರಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಗುರುವಾರ ೨೫ನೇ ವರ್ಷದ ಶ್ರೀ ಚಿದಂಬರ ಜಯಂತಿ ವಿಜೃಂಭಣೆಯಿಂದ ನೆರವೇರಿತು.
    ಜಯಂತಿ ಅಂಗವಾಗಿ ಬೆಳಿಗ್ಗೆ ಕಾಕಡಾರತಿ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಸಹಸ್ರನಾಮ ಹಾಗೂ ಶ್ರೀ ಚಿದಂಬರ ಮೂಲಮಂತ್ರ ಹೋಮ, ರಾಜಬೀದಿ ಉತ್ಸವ ಮತ್ತು ಮಹಾಮಂಗಳಾರತಿ, ಪೂರ್ಣಾಹುತಿ, ಶ್ರೀ ಚಿದಂಬರ ತೊಟ್ಟಿಲು ಸೇವೆ ಹಾಗೂ ಹಾಗೂ ಲಲಿತ ಮಹಿಳಾ ಮಂಡಳಿಯಿಂದ ದೀಪೋತ್ಸವ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ  ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
    ಚಿದಂಬರ ಸೇವಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ ದೇಶಪಾಂಡೆ, ಪ್ರಧಾನ ಕಾರ್ಯದರ್ಶಿ ಇಂದ್ರಸೇನರಾವ್, ಉಪಾಧ್ಯಕ್ಷ ಮಂಜುನಾಥ್, ಖಜಾಂಚಿ ಜೆ.ಎಂ ಬಾಲಚಂದ್ರ ಗುತ್ತಲ್, ಆನಂದರಾವ್, ಪ್ರಭಾಕರರಾವ್, ರಾಮಚಂದ್ರ, ದತ್ತಾತ್ರಿ, ವಾಸುದೇವ್, ರಾಜಣ್ಣ ಸೇರಿದಂತೆ ಇನ್ನಿತರ ಭಕ್ತಾಧಿಗಳು ಪಾಲ್ಗೊಂಡಿದ್ದರು.

ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಮೇಲೆ ನಿಗಾವಹಿಸಿ : ಎಸಿಬಿ ಮಹಾನಿರ್ದೇಶಕರಿಗೆ ಮನವಿ

 


ಭದ್ರಾವತಿ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಲವಾರು ವರ್ಷಗಳಿಂದ ಒಂದೇ ಕಡೆ  ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಮೇಲೆ ನಿಗಾ ವಹಿಸುವಂತೆ ಭ್ರಷ್ಟಾಚಾರ ನಿಗ್ರಹ ದಳದ ಅಪರ ಪೊಲೀಸ್ ಮಹಾನಿರ್ದೇಶಕರಿಗೆ ತಾಲೂಕಿನ ಉಕ್ಕುಂದ ಗ್ರಾಮದ ಸಾಮಾಜಿಕ ಹೋರಾಟಗಾರ ಶಿವಕುಮಾರ್ ಮನವಿ ಮಾಡಿದ್ದಾರೆ. 

ಸರ್ಕಾರದ ಬಹುತೇಕ ಇಲಾಖೆಗಳಲ್ಲಿ ಸುಮಾರು  10 ರಿಂದ 15 ವರ್ಷಗಳವರೆಗೆ ಒಂದೇ ಕಡೆ ಕೆಲವು ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದು,  ಇವರಿಗೆ ಇಲಾಖೆ ಹಾಗೂ ಕಚೇರಿಯ ಸಂಪೂರ್ಣ ಮಾಹಿತಿ ಇದ್ದು, ಅಕ್ರಮವಾಗಿ ಹಣ, ಆಸ್ತಿ  ಸಂಪಾದಿಸಬೇಕೆಂಬ ಉದ್ದೇಶದೊಂದಿಗೆ ತಮ್ಮದೇ ಆದ ಪ್ರಭಾವ ಬಳಸಿಕೊಂಡು ಒಂದೇ ಸ್ಥಳದಲ್ಲಿಯೇ ಉಳಿದುಕೊಂಡು ಬಲಿಷ್ಠರಾಗಿದ್ದಾರೆ.   ಹಣವನ್ನು ಯಾವ ರೀತಿ ಪಡೆಯಬೇಕು. ಯಾರ ಮುಖಾಂತರ ಪಡೆಯಬೇಕು. ಯಾವ ರೀತಿ ಹಣ, ಆಸ್ತಿ ಹೊಂದಬೇಕೆಂಬ  ತಂತ್ರಗಾರಿಕೆಗಳನ್ನು ಅರಿತು ಕೊಂಡಿದ್ದಾರೆ.   

ಅರಣ್ಯ ಇಲಾಖೆ, ಪಂಚಾಯತ್ ರಾಜ್ ಖಾತೆ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳಲ್ಲಿ ಕೆಲವು ನೌಕರರು ತಮ್ಮ ನಿವೃತ್ತಿ ಅವಧಿಯನ್ನು ಸಂಪೂರ್ಣವಾಗಿ ಮುಗಿಸಿರುತ್ತಾರೆ. ಒಂದೇ ಕಡೆ ಕರ್ತವ್ಯ ನಿರ್ವಹಿಸಿರುವ ನೌಕರರ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಸುಮಾರು ೪-೫ ವರ್ಷ ಮೇಲ್ಪಟ್ಟು ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಮೇಲೆ ನಿಗಾವಹಿಸಿದ್ದಲ್ಲಿ ಭ್ರಷ್ಟಾಚಾರಗಳು ಕಡಿಮೆಯಾಗುವ ಜೊತೆಗೆ  ಸಾ‍ರ್ವಜನಿಕರಿಗೆ ಲಂಚ ನೀಡುವ ಅನಿವಾರ್ಯತೆ, ಒತ್ತಡಗಳು ಕಡಿಮೆಯಾಗಲಿವೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.  

ಸಾಧು ವೀರಶೈವ ಸಮಾಜದ ಅಧ್ಯಕ್ಷ ಕೆ.ಸಿ ವೀರಭದ್ರಪ್ಪ ನಿಧನ


  ಕೆ.ಸಿ ವೀರಭದ್ರಪ್ಪ
 ಭದ್ರಾವತಿ, ನ. ೨೫: ತಾಲೂಕು ನಗರಸಭೆ ವ್ಯಾಪ್ತಿಯ ಭದ್ರಾ ಕಾಲೋನಿ ಕಣಕಟ್ಟೆ ನಿವಾಸಿ, ಸಾಧು ವೀರಶೈವ ಸಮಾಜದ ಅಧ್ಯಕ್ಷ ಕೆ.ಸಿ ವೀರಭದ್ರಪ್ಪ(೬೯) ಗುರುವಾರ ಮಧ್ಯಾಹ್ನ ನಿಧನ ಹೊಂದಿದರು.
    ಪತ್ನಿ, ಸಹೋದರ, ಸಹೋದರಿಯರನ್ನು ಹೊಂದಿದ್ದರು. ಸದಾಕಾಲ ಕ್ರಿಯಾಶೀಲರಾಗಿದ್ದ ಕೆ.ಸಿ ವೀರಭದ್ರಪ್ಪರವರು ಕಳೆದ ಕೆಲವು ದಿನಗಳ ಹಿಂದೆ ಹೃದಯಾಘಾತಕ್ಕೆ ಒಳಗಾಗಿ ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
    ಮೂಲತಃ ಜಮೀನ್ದಾರ್ ಕುಟುಂಬದವರಾದ ವೀರಭದ್ರಪ್ಪ, ಪ್ರಸ್ತುತ ಸಾಧು ವೀರಶೈವ ಸಮಾಜದ ತಾಲೂಕು ಅಧ್ಯಕ್ಷರಾಗಿ, ಭದ್ರಾ ಕಾಲೋನಿ ಶ್ರೀ ರಾಮಾಂಜನೇಯ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷರಾಗಿ, ಹಾಲಪ್ಪವೃತ್ತ ಭದ್ರಾ ಪ್ರೌಢಶಾಲೆ ಆಡಳಿತ ಮಂಡಳಿ ನಿರ್ದೇಶಕರಾಗಿ ಹಾಗು ಜನ್ನಾಪುರ ಶ್ರೀ ಬಸವೇಶ್ವರ ವಿದ್ಯಾವರ್ಧಕ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಅಲ್ಲದೆ ೧೯೯೯ ರಿಂದ ೨೦೦೧ರವರೆಗೆ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ಅಧ್ಯಕ್ಷರಾಗಿ, ೧೯೮೬ ರಿಂದ ೧೯೯೬ರವರೆಗೆ ವೀರಾಪುರ ರೈತರ ಸಹಕಾರ ಸಂಘ ಬ್ಯಾಂಕ್ ಅಧ್ಯಕ್ಷರಾಗಿ ಮತ್ತು ೨೦೦೫ ರಿಂದ ೨೦೧೭ರವರೆಗೆ ಸೀಗೆಬಾಗಿ ರೈತರ ನೀರು ಬಳಕೆದಾರರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
    ೧೯೮೭ರಿಂದ ಲಯನ್ಸ್ ಕ್ಲಬ್‌ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ವೀರಭದ್ರಪ್ಪನವರು, ಖಜಾಂಚಿಯಾಗಿ, ಅಧ್ಯಕ್ಷರಾಗಿ, ವಲಯಾಧ್ಯಕ್ಷರಾಗಿ, ವಲಯ ಸಲಹೆಗಾರರಾಗಿ, ವಲಯ ರಾಯಬಾರಿಯಾಗಿ, ಡಿ.ಜಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ, ಸಮುದಾಯ ಸೇವೆ, ಜಿಲ್ಲಾ ಗೌರ್‍ನರ್ ಪ್ರತಿನಿಧಿಯಾಗಿ, ಜಿಎಲ್‌ಟಿ ಮತ್ತು ಜಿಎಂಟಿ ಸಂಯೋಜಕರಾಗಿ, ಜಿಲ್ಲಾ ರಾಯಬಾರಿಯಾಗಿ ಹಾಗು ಪ್ರಸ್ತುತ ಲಯನ್ಸ್ ಕ್ಲಬ್ ೩೧೭-ಸಿ ಮೊದಲನೇ ಜಿಲ್ಲಾ ಉಪಗೌರ್‍ನರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
    ವೀರಶೈವ ಸಮಾಜದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಲಯನ್ಸ್ ಕ್ಲಬ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಗಣ್ಯರು ವೀರಭದ್ರಪ್ಪ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.