ಶುಕ್ರವಾರ, ಅಕ್ಟೋಬರ್ 20, 2023

ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಗೂ ಹೆಚ್ಚಿನ ಪ್ರೋತ್ಸಾಹ ನೀಡಿ : ಕೃಷ್ಣೇಗೌಡ

ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ನಗರಸಭೆಯಿಂದ ಆಯೋಜಿಸಲಾಗಿದ್ದ ದಸರಾ ಕ್ರೀಡಾಕೂಟದ ಕಬಡ್ಡಿ ಪಂದ್ಯಾವಳಿ ಅಂತಾರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಕೃಷ್ಣೇಗೌಡ ಉದ್ಘಾಟಿಸಿದರು.  
    ಭದ್ರಾವತಿ: ಪ್ರತಿಯೊಬ್ಬ ಪೋಷಕರು ಮಕ್ಕಳನ್ನು ಸತ್ಪ್ರಜೆಗಳನ್ನಾಗಿಸಲು ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಯಲ್ಲಿಯೂ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕೆಂದು ಅಂತಾರಾಷ್ಟ್ರೀಯ ಕಬಡ್ಡಿ ಕ್ರೀಡಾಪಟು ಕೃಷ್ಣೇಗೌಡ ಕರೆ ನೀಡಿದರು.
    ಹಳೇನಗರದ ಕನಕಮಂಟಪ ಮೈದಾನದಲ್ಲಿ ನಗರಸಭೆಯಿಂದ ಆಯೋಜಿಸಲಾಗಿದ್ದ ದಸರಾ ಕ್ರೀಡಾಕೂಟದ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
    ಕಬಡ್ಡಿ ಗಟ್ಟಿತನದ ಕ್ರೀಡೆಯಾದರೂ ಸಹ ವ್ಯಕ್ತಿಯ ಸಾಮರ್ಥ್ಯ ಬಲಪಡಿಸುವಲ್ಲಿ ಸಹಕಾರಿಯಾದ ಕ್ರೀಡೆ. ಭದ್ರಾವತಿಗೆ ಹೆಸರು ತರಲು ಆಸಕ್ತಿಯಿಂದ ಕ್ರೀಡಾಪಟುಗಳು ಕಬಡ್ಡಿ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದರು.
    ನಗರಸಭೆ ಪೌರಾಯುಕ್ತ ಮನುಕುಮಾರ್ ಮಾತನಾಡಿ, ದಸರಾ ಕ್ರೀಡಾಕೂಟದ ಯಶಸ್ಸಿಗೆ ಕಾರಣರಾದ ಕ್ರೀಡಾ ಸಮಿತಿ ಅಧ್ಯಕ್ಷ ಚೆನ್ನಪ್ಪರ ಪರಿಶ್ರಮವನ್ನು ಶ್ಲಾಘಿಸಿದರು.
    ಶಿವಮೊಗ್ಗ ಜಿಲ್ಲಾ ಕಬಡ್ಡಿ ಅಮೆಚೂರ್ ಅಸೋಷಿಯೇಷನ್ ಕಾರ್ಯದರ್ಶಿ ಗೋಪಿ, ಹಿರಿಯ ಕ್ರೀಡಾಪಟುಗಳಾದ ಕೋದಂಡರಾವ್ ಪಿಳ್ಳೈ, ರಂಗನಾಥ್, ತೀರ್ಪುಗಾರರಾದ ಬಸವರಾಜ್, ಸಿದ್ದಯ್ಯ, ಜಗದೀಶ್, ಮಂಜಣ್ಣ, ಪ್ರೇಮ್, ಆನಂದ್, ಶಾಂತಪ್ಪ, ಸ್ನೇಹ, ನಗರಸಭೆ ಸದ್ಯರಾದ ಚೆನ್ನಪ್ಪ, ಬಸವರಾಜ್ ಆನೇಕೊಪ್ಪ, ರೇಖಾ ಪ್ರಕಾಶ್, ಮಾಜಿ ಸದಸ್ಯ ಬದರಿನಾರಾಯಣ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಆರಂಭಿಕ ಪಂದ್ಯಾವಳಿಯಾಗಿ ನಗರಸಭೆ ಪೌರಕಾರ್ಮಿಕರು ಹಾಗು ನಗರಸಭೆ ಸಿಬ್ಬಂದಿ ಸೌಹಾರ್ಧ ಪಂದ್ಯಾವಳಿ ಆಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು.

ಮೈದೊಳಲು ಗ್ರಾಮದಲ್ಲಿ ಆರೋಗ್ಯ ತಪಾಸಣಾ ಶಿಬಿರ

ಸಿಆರ್‌ಎಸ್ ಚಟುವಟಿಕೆಯಡಿ ಸೈಲ್-ವಿಐಎಸ್‌ಎಲ್ ಆಯೋಜನೆ

ಸೈಲ್-ವಿಐಎಸ್‌ಎಲ್ ಕಾರ್ಖಾನೆ ವತಿಯಿಂದ ನಗರದ ವಿಐಎಸ್‌ಎಲ್ ಆಸ್ಪತ್ರೆ, ಶಿವಮೊಗ್ಗ ಸಹ್ಯಾದ್ರಿ ನಾರಾಯಣಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಭದ್ರಾವತಿ ತಾಲೂಕಿನ ಮೈದೊಳಲು ಗ್ರಾಮದಲ್ಲಿ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ(ಸಿಎಸ್‌ಆರ್) ಕಾರ್ಯಕ್ರಮದ ಅಡಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
    ಭದ್ರಾವತಿ: ಸೈಲ್-ವಿಐಎಸ್‌ಎಲ್ ಕಾರ್ಖಾನೆ ವತಿಯಿಂದ ನಗರದ ವಿಐಎಸ್‌ಎಲ್ ಆಸ್ಪತ್ರೆ, ಶಿವಮೊಗ್ಗ ಸಹ್ಯಾದ್ರಿ ನಾರಾಯಣಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ತಾಲೂಕಿನ ಮೈದೊಳಲು ಗ್ರಾಮದಲ್ಲಿ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ(ಸಿಎಸ್‌ಆರ್) ಕಾರ್ಯಕ್ರಮದ ಅಡಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
    ಸೈಲ್-ವಿಐಎಸ್‌ಎಲ್ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್. ಚಂದ್ವಾನಿ, ಮುಖ್ಯ ಮಹಾಪ್ರಬಂಧಕರು (ಸ್ಥಾವರ) ಕೆ.ಎಸ್. ಸುರೇಶ್ ಹಾಗೂ ಮೈದೊಳಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ  ಗೀತಮ್ಮ ಉದ್ಘಾಟಿಸಿದರು.
    ವಿಐಎಸ್‌ಎಲ್ ಆಸ್ಪತ್ರೆ ತಜ್ಞ ವೈದ್ಯರಾದ ಡಾ. ಎಮ್.ವೈ ಸುರೇಶ್ ಮತ್ತು ಡಾ. ಎಸ್.ಎನ್ ಸುರೇಶ್ ನೇತೃತ್ವ ತಂಡ ಸಾಮಾನ್ಯ ಆರೋಗ್ಯ, ಮೂಳೆ ಮತ್ತು ದಂತ ಸಮಸ್ಯೆಗಳ ಬಗ್ಗೆ ತಜ್ಞರ ಸಲಹೆಯನ್ನು ನೀಡಿತು. ತಂಡದಲ್ಲಿ ಅಪರ್ಣ, ಟಿ.ಎನ್. ಕೃಷ್ಣ, ಅಲೆನ್ ಜುಡೊ ಪಿಂಟೊ, ಮಧುಕರ್, ತುಳಸಿ ಮತ್ತು  ಆರ್. ಮಂಜುನಾಥ್ ಉಪಸ್ಥಿತರಿದ್ದರು.
    ಶಂಕರ ಕಣ್ಣಿನ ಆಸ್ಪತ್ರೆ ತಜ್ಞರಾದ ಡಾ. ಅಮೃತ ಮಧು, ಜುಮನ, ಕಾವ್ಯ ಮತ್ತು ಚಂದನ ಹಾಗು ಮಹೇಶ್ ರಾಯ್ಕರ್ ತಂಡ ನೇತ್ರ ಪರೀಕ್ಷೆ ನಡೆಸಿ ನೇತ್ರ ಆರೈಕೆಯ ಬಗ್ಗೆ ತಜ್ಞರ ಸಲಹೆಯನ್ನು ನೀಡಿತು.
    ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ತಜ್ಞರಾದ ಡಾ. ಜೀನಾ, ಡಾ. ಹಂಸಲೇಖ, ತಾಸಿನಾ, ಪೂಜಾ, ಅತುಲ್ಯ ಮತ್ತು ಗಣೇಶ್ ನೇತೃತ್ವದ ತಂಡ ಹೃದಯ ಸಂಬಂಧಿ, ೨ಡಿ, ಇಸಿಎಚ್‌ಓ ಹಾಗು ಇಸಿಜಿ ಪರೀಕ್ಷೆಗಳನ್ನು ನಡೆಸಿ, ಹೃದ್ರೋಗ ಆರೈಕೆಯ ಬಗ್ಗೆ ತಜ್ಞರ ಸಲಹೆಯನ್ನು ನೀಡಿತು.
    ಮಹಾಪ್ರಬಂಧಕರು(ಸಿಬ್ಬಂದಿ ಮತ್ತು ಸಾರ್ವಜನಿಕ ಸಂಪರ್ಕ) ಎಲ್, ಪ್ರವೀಣ್ ಕುಮಾರ್, ಸಹಾಯಕ ಪ್ರಬಂಧಕರು (ಸಿಬ್ಬಂದಿ) ಕೆ.ಎಸ್. ಶೋಭ, ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಎಮ್.ವೈ ಸುರೇಶ್, ಎಸ್.ಎನ್ ಸುರೇಶ್, ಸಹ್ಯಾದ್ರಿ ನಾರಾಯಣ ಹೃದಯಾಲಯದ ಹಾಗೂ ಶಂಕರ ಕಣ್ಣಿನ ಆಸ್ಪತ್ರೆಯ ವೈದ್ಯಕೀಯ ತಂಡ, ಮೈದೊಳಲು ಗ್ರಾಮಪಂಚಾಯಿತಿಯ ಸದಸ್ಯರು ಉಪಸ್ಥಿತರಿದ್ದರು.  
    ಸಾಮಾನ್ಯ ಆರೋಗ್ಯ, ಹೃದಯ, ಕಣ್ಣು, ಮೂಳೆ, ದಂತ ಚಿಕಿತ್ಸೆ ತಪಾಸಣೆ ಮತ್ತು ಉಚಿತ ಔಷಧಿಯ ವಿತರಣೆ ನಡೆಯಿತು. ೨೫೪ ಗ್ರಾಮಸ್ಥರು ಶಿಬಿರದ ಸದುಪಯೋಗ ಪಡೆದುಕೊಂಡರು.

ನ್ಯಾಯಬೆಲೆ ಅಂಗಡಿ ಮಾಲೀಕ ಗಂಗಪ್ಪ ನಿಧನ

ಗಂಗಪ್ಪ
    ಭದ್ರಾವತಿ :  ತಾಲೂಕಿನ ಮಾವಿನಕೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ, ನ್ಯಾಯಬೆಲೆ ಅಂಗಡಿ ಮಾಲೀಕ ಗಂಗಪ್ಪ(೬೫) ನಿಧನ ಹೊಂದಿದರು.
     ಪತ್ನಿ, ೪ ಪುತ್ರಿಯರು, ಓರ್ವ ಪುತ್ರ ಇದ್ದರು. ಗಂಗಪ್ಪ ಕೆಂಚನಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಗ್ರಾಮ ಪಂಚಾಯಿತಿಗೆ ೩ ಬಾರಿ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಒಂದು ಬಾರಿ ಅಧ್ಯಕ್ಷರಾಗಿ, ಮತ್ತೊಂದು ಬಾರಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ಕಾಳಿಂಗನಹಳ್ಳಿ ಮತ್ತು ಕೆಂಪೇಗೌಡ ನಗರ ನ್ಯಾಯಬೆಲೆ ಅಂಗಡಿ ಮಾಲೀಕರಾಗಿದ್ದರು.  
    ಇವರ ಅಂತ್ಯಕ್ರಿಯೆ ಕೆಂಚನಹಳ್ಳಿ ಗ್ರಾಮದಲ್ಲಿ ಶುಕ್ರವಾರ ನೆರವೇರಿತು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್ ಕುಮಾರ್, ಯುವ ಮುಖಂಡ ಬಿ. ಎಸ್ ಗಣೇಶ್, ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷರಾದ ಸಿದ್ದಲಿಂಗಯ್ಯ ಸೇರಿದಂತೆ ನ್ಯಾಯಬೆಲೆ ಅಂಗಡಿಗಳ ಮಾಲೀಕರು, ಗ್ರಾಮ ಪಂಚಾಯಿತಿ ಸದಸ್ಯರು ಹಾಗು ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.