Thursday, October 20, 2022

ಹೆಣ್ಣು ಮಕ್ಕಳ ಸಬಲಿಕರಣಕ್ಕೆ ಎಲ್ಲರೂ ಕೈಜೋಡಿಸಿ : ಟಿ. ಮಲ್ಲಿಕಾರ್ಜುನ್

ಭದ್ರಾವತಿ ಸಮೀಪದ ನಿದಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಮಾಚೇನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ೩೫ನೇ ಶ್ರಮದಾನ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಆಡಳಿತ ವಿಭಾಗದ ಉಪಕಾರ್ಯದರ್ಶಿ ಟಿ. ಮಲ್ಲಿಕಾರ್ಜುನ್ ಸೇರಿದಂತೆ ಇನ್ನಿತರರು ಬಣ್ಣ ಬಳಿಯುವ ಮೂಲಕ ಚಾಲನೆ ನೀಡಿದರು.
    ಭದ್ರಾವತಿ, ಅ. ೨೦: ಹೆಣ್ಣು ಮಕ್ಕಳು ಈ ದೇಶದ ಸಂಸ್ಕೃತಿಯ ಪ್ರತೀಕ ಅವರನ್ನು ಸಬಲಿಕರಣಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕೆಂದು ಜಿಲ್ಲಾ ಪಂಚಾಯಿತಿ ಆಡಳಿತ ವಿಭಾಗದ ಉಪಕಾರ್ಯದರ್ಶಿ ಟಿ. ಮಲ್ಲಿಕಾರ್ಜುನ್ ಹೇಳಿದರು.
    ಅವರು ಇಲ್ಲಿಗೆ ಸಮೀಪದ ನಿದಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಮಾಚೇನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ೩೫ನೇ ಶ್ರಮದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಹೆಣ್ಣು ಮಕ್ಕಳ ಭವಿಷ್ಯ ಉಜ್ವಲಗೊಳ್ಳಬೇಕು. ಈ ಹಿನ್ನಲೆಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಗಮನ ಹರಿಸಬೇಕೆಂದರು.
    ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಉತ್ತಮ ಪರಿಸರ ರೂಪಿಸಿಕೊಳ್ಳಬೇಕು. ಪರಿಸರ ಪ್ರೇಮ ತಂಡದ ವತಿಯಿಂದ ಈ ವ್ಯಾಪ್ತಿಯಲ್ಲಿ ಜನಿಸಿದ ಹೆಣ್ಣು ಮಕ್ಕಳ ಹೆಸರಿನಲ್ಲಿ ಶಾಲೆಗೆ ಸುಮಾರು ೨೫ ಸಸಿಗಳನ್ನು ನೀಡಲಾಗಿದೆ. ಪ್ರತಿಯೊಬ್ಬರು ಸರ್ಕಾರಿ ಶಾಲೆ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಸರ್ಕಾರಿ ಶಾಲೆಯಲ್ಲಿಯೇ ತಮ್ಮ ವಿದ್ಯಾಭ್ಯಾಸ ಮುಂದುವರೆಸಬೇಕೆಂದರು.
    ಗ್ರಾಮ ಪಂಚಾಯತಿ ಅಧ್ಯಕ್ಷೆ ವಿಶಾಲ ರಮೇಶ್, ಉಪಾಧ್ಯಕ್ಷೆ ರೀನಾ ಸನತ್, ಪರಿಸರ ಪ್ರೇಮ ತಂಡದ ಅಧ್ಯಕ್ಷ ಶಿವ್ಯಾನಾಯ್ಕ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ರುದ್ರಮ್ಮ, ಪಿ.ಕೆ ಸತೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಅರಳಿಹಳ್ಳಿ ಅಣ್ಣಪ್ಪ ಉಪನ್ಯಾಸ ನಡೆಸಿಕೊಟ್ಟರು. ಶಾಲೆಯಲ್ಲಿ ಬಣ್ಣ ಬಳಿಯುವ ಹಾಗು ಸ್ವಚ್ಛತಾ ಕಾರ್ಯ ಕೈಗೊಳ್ಳುವ  ಮೂಲಕ ಶ್ರಮದಾನ ನಡೆಸಲಾಯಿತು.
 

ಭದ್ರಾವತಿ ಸಮೀಪದ ನಿದಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಮಾಚೇನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ೩೫ನೇ ಶ್ರಮದಾನ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಆಡಳಿತ ವಿಭಾಗದ ಉಪಕಾರ್ಯದರ್ಶಿ ಟಿ. ಮಲ್ಲಿಕಾರ್ಜುನ್ ಸೇರಿದಂತೆ ಇನ್ನಿತರರು ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ಚಾಲನೆ ನೀಡಿದರು.

ಮಡಿವಳ ಸಮುದಾಯ ಪರಿಶಿಷ್ಟ ಜಾತಿಗೆ ಸೇರಿಸಿ ಸಾಮಾಜಿಕ ನ್ಯಾಯ ಒದಗಿಸಿ : ಪುರುಷೋತ್ತಮ್

ಭದ್ರಾವತಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಶ್ರೀ ಗುರುವೀರ ಮಡಿವಳ ಮಾಚಿದೇವ ಸಂಘದ ಅಧ್ಯಕ್ಷ ಪುರುಷೋತ್ತಮ್ ಮಾತನಾಡಿದರು. 
    ಭದ್ರಾವತಿ, ಅ. ೨೦: ಸಮಾಜದಲ್ಲಿ ಅತ್ಯಂತ ಕೆಳಸ್ಥರದಲ್ಲಿರುವ ಇಂದಿಗೂ ಶುಚಿಗೊಳಿಸುವ ಕಾಯಕನಿಷ್ಠೆಯಲ್ಲಿ ತೊಡಗಿರುವ ಮಡಿವಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವ ಮೂಲಕ ಸಾಮಾಜಿಕ ನ್ಯಾಯ ದೊರಕಿಸಿಕೊಡುವಂತೆ ಶ್ರೀ ಗುರುವೀರ ಮಡಿವಳ ಮಾಚಿದೇವ ಸಂಘದ ಅಧ್ಯಕ್ಷ ಪುರುಷೋತ್ತಮ್ ಆಗ್ರಹಿಸಿದರು.
  ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಮಡಿವಾಳ ಸಮುದಾಯವನ್ನು ದೇಶದ ೧೮ ರಾಜ್ಯಗಳಲ್ಲಿ ಪರಿಶಿಷ್ಟಜಾತಿಗೆ ಸೇರಿಸಲಾಗಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಈ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸದೆ ಕಡೆಗಣಿಸಲಾಗಿದೆ ಎಂದು ದೂರಿದರು.
    ಎಲ್ಲಾ ರಾಜಕೀಯ ಪಕ್ಷಗಳು, ಸರ್ಕಾರಗಳು ಈ ಸಮುದಾಯವನ್ನು ನಿರ್ಲಕ್ಷ್ಯತನದಿಂದ ಕಾಣುವ ಮೂಲಕ ಮಡಿವಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ದಲಿತರ ವಿರೋಧವಿದೆ ಎಂದು ಸಚಿವ ಕೋಟ ಶ್ರಿನಿವಾಸ ಪೂಜಾರಿಯವರು
    ಲಿಖಿತ ಉತ್ತರ ನೀಡುವ ಮೂಲಕ ಬೇಜವಾಬ್ದಾರಿಯಿಂದ ವರ್ತಿಸಿದ್ದು, ಸಮಾಜವನ್ನು ಅವಹೇಳನ ಮಾಡಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಈಗಾಗಲೇ ರಾಜ್ಯ ಸರ್ಕಾರ ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಿಸಿರುವುದನ್ನು ಸಮಾಜ ಸ್ವಾಗತಿಸುತ್ತದೆ. ನಾವು ಯಾವುದೇ ಜಾತಿಯ ವಿರೋಧಿಗಳಲ್ಲ, ಪರಿಶಿಷ್ಟಜಾತಿಗೆ ಒಳಪಡುವ ಎಲ್ಲಾ ಅರ್ಹತೆಗಳನ್ನು ಮಡಿವಳ ಸಮಾಜ ಹೊಂದಿದೆ ಎಂದು ಈ ಹಿಂದೆಯೇ ಅನ್ನಪೂರ್ಣಮ್ಮ ಆಯೋಗ ವರದಿ ನೀಡಿದ್ದರೂ ಜಾರಿಗೊಳಿಸುವಲ್ಲಿ ಸರ್ಕಾರಗಳು ಮಲತಾಯಿ ಧೋರಣೆ ಅನುಸರಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಸರ್ಕಾರ ತಕ್ಷಣ ಜಾತಿವಾರು ಸಮೀಕ್ಷೆ ವರದಿ ಬಿಡುಗಡೆ ಮಾಡಬೇಕು. ಮುಂದಿನ ದಿನಗಳಲ್ಲಿ ಮೀಸಲಾತಿಗೆ ಒತ್ತಾಯಿಸಿ ಸಮುದಾಯದ ಶ್ರೀಗಳ ನೇತೃತ್ವದಲ್ಲಿ ಹೋರಾಟ ಆರಂಭಿಸಲಾಗುವುದು ಎಂದರು.
    ಉಪಾಧ್ಯಕ್ಷರಾದ ಎನ್.ಆರ್ ಮಂಜುನಾಥ್, ಸಿದ್ದಾಪುರ ಮಂಜಪ್ಪ, ಪ್ರಧಾನ ಕಾರ್ಯದರ್ಶಿ ರಮೇಶ್, ಖಜಾಂಚಿ ದಿನೇಶ್, ಸಹಕಾರ್ಯದರ್ಶಿಗಳಾದ ಚಲುವಯ್ಯ, ತಿಪ್ಪೇಶ್ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು

ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ : ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ೧೦ ಕ್ವಿಂಟಲ್ ಅಕ್ಕಿ ವಶ


ಭದ್ರಾವತಿ ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ಮೊಹ್ಮದ್ ಯೂನಸ್ ಎಂಬಾತ ಅಕ್ರಂ ಮತ್ತು ನವೀದ್ ಎಂಬುವರ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಒಟ್ಟು ೨೨ ಸಾವಿರ ರು. ಮೌಲ್ಯದ ೧೦ ಕ್ವಿಂಟಲ್ ಅಕ್ಕಿಯನ್ನು ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿರುವುದು.
    ಭದ್ರಾವತಿ, ಅ. ೨೦: ಇತ್ತೀಚೆಗೆ ತಾಲೂಕಿನಾದ್ಯಂತ ಪಡಿತರ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ರಮಗಳು ಹೆಚ್ಚಾಗುತ್ತಿರುವುದು ಬೆಳಕಿಗೆ ಬರುತ್ತಿವೆ. ಮತ್ತೊಂದೆಡೆ ಈ ಅಕ್ರಮ ನ್ಯಾಯಬೆಲೆ ಅಂಗಡಿಗಳ ವಿರುದ್ಧ ನಿರಂತರ ಹೋರಾಟ ಸಹ ನಡೆಯುತ್ತಿದೆ. ಈ ನಡುವೆ ಇದೀಗ ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಮತ್ತೊಂದು ಹೊಸ ಪ್ರಕರಣ ಬಯಲಿಗೆ ಬಂದಿದೆ.
    ಕಳೆದ ೨ ದಿನಗಳ ಹಿಂದೆ ಪಡಿತರ ಅಕ್ಕಿಯನ್ನು ಹೋಲುವ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ಮೊಹ್ಮದ್ ಯೂನಸ್ ಎಂಬಾತ ಅಕ್ರಂ ಮತ್ತು ನವೀದ್ ಎಂಬುವರ ಮನೆಯಲ್ಲಿ ಒಟ್ಟು ೨೨ ಸಾವಿರ ರು. ಮೌಲ್ಯದ ೧೦ ಕ್ವಿಂಟಲ್ ಅಕ್ಕಿಯನ್ನು ಸಂಗ್ರಹಿಸಿಟ್ಟಿದ್ದು, ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ವೃತ್ತ ನಿರೀಕ್ಷಕ ಎನ್.ಎಂ ಗುರುರಾಜ್ ನೇತೃತ್ವದ ತಂಡ ದಾಳಿ ನಡೆಸಿದೆ.
    ಈ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಲು ಸಂಗ್ರಹಿಸಿಡಲಾಗಿತ್ತು ಎನ್ನಲಾಗಿದೆ. ಆದರೆ ಈ ಅಕ್ಕಿ ಕಳಪೆ ಗುಣಮಟ್ಟದ ಅಕ್ಕಿಯೋ, ಇಲ್ಲವೋ ಎಂಬುದು ಇನ್ನೂ ತಿಳಿದು ಬಂದಿಲ್ಲ. ಈ ಸಂಬಂಧ ಆಹಾರ ಇಲಾಖೆ ನಿರೀಕ್ಷಕ ಮಂಜು ದೂರು ನೀಡಿದ್ದಾರೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಕೃಷ್ಣಮೂರ್ತಿ, ಕುಮಾರನಾಯ್ಕ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಹೊಸ ಸಿದ್ದಾಪುರ ಗ್ರಾಮಕ್ಕೆ ಕಾಡಾ ಅಧ್ಯಕ್ಷೆ ಭೇಟಿ : ಸಮಸ್ಯೆಗಳಿಗೆ ಪೂರಕ ಸ್ಪಂದನೆ

    ಭದ್ರಾವತಿ, ಅ. ೨೦ : ನಗರಸಭೆ ವ್ಯಾಪ್ತಿಯ ಹೊಸ ಸಿದ್ದಾಪುರ ಗ್ರಾಮಕ್ಕೆ ಗುರುವಾರ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷೆ ಕೆ.ಬಿ ಪವಿತ್ರ ರಾಮಯ್ಯ ಭೇಟಿ ನೀಡಿ ನಿವಾಸಿಗಳ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸಿದರು.
    ಈ ಭಾಗದ ನಗರಸಭಾ ಸದಸ್ಯೆ ನಾಗರತ್ನ ಅನಿಲ್‌ಕುಮಾರ್ ಹಾಗು ಸ್ಥಳೀಯ ಪ್ರಮುಖರು ಮತ್ತು ರೈತರು ಬುಧವಾರ ಕಾಡಾ ಕಛೇರಿ ತೆರಳಿ ಅಧ್ಯಕ್ಷರನ್ನು ಭೇಟಿಯಾಗಿ ಖುದ್ದಾಗಿ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಭೇಟಿ ನೀಡಿ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸಿದರು.
    ಗ್ರಾಮದ ಶನೇಶ್ವರ ಮತ್ತು ಆದಿಶಕ್ತಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿಪಡಿಸುವ ಸಂಬಂಧ  ಮನವಿ ಸ್ವೀಕರಿಸಿದರು.  ಶನೇಶ್ವರ ಮತ್ತು ಆದಿಶಕ್ತಿ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಸದಸ್ಯರು ಮತ್ತು ಭಜನಾ ಮಂಡಳಿ ಸದಸ್ಯರುಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


ಭದ್ರಾವತಿ ನಗರಸಭೆ ವ್ಯಾಪ್ತಿಯ ಹೊಸ ಸಿದ್ದಾಪುರ ಗ್ರಾಮಕ್ಕೆ ಗುರುವಾರ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷೆ ಕೆ.ಬಿ ಪವಿತ್ರ ರಾಮಯ್ಯ ಭೇಟಿ ನೀಡಿ ನಿವಾಸಿಗಳ ಸಮಸ್ಯೆಗಳಿಗೆ ಪೂರಕವಾಗಿ ಸ್ಪಂದಿಸಿದರು.