Thursday, October 20, 2022

ಮಡಿವಳ ಸಮುದಾಯ ಪರಿಶಿಷ್ಟ ಜಾತಿಗೆ ಸೇರಿಸಿ ಸಾಮಾಜಿಕ ನ್ಯಾಯ ಒದಗಿಸಿ : ಪುರುಷೋತ್ತಮ್

ಭದ್ರಾವತಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಶ್ರೀ ಗುರುವೀರ ಮಡಿವಳ ಮಾಚಿದೇವ ಸಂಘದ ಅಧ್ಯಕ್ಷ ಪುರುಷೋತ್ತಮ್ ಮಾತನಾಡಿದರು. 
    ಭದ್ರಾವತಿ, ಅ. ೨೦: ಸಮಾಜದಲ್ಲಿ ಅತ್ಯಂತ ಕೆಳಸ್ಥರದಲ್ಲಿರುವ ಇಂದಿಗೂ ಶುಚಿಗೊಳಿಸುವ ಕಾಯಕನಿಷ್ಠೆಯಲ್ಲಿ ತೊಡಗಿರುವ ಮಡಿವಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವ ಮೂಲಕ ಸಾಮಾಜಿಕ ನ್ಯಾಯ ದೊರಕಿಸಿಕೊಡುವಂತೆ ಶ್ರೀ ಗುರುವೀರ ಮಡಿವಳ ಮಾಚಿದೇವ ಸಂಘದ ಅಧ್ಯಕ್ಷ ಪುರುಷೋತ್ತಮ್ ಆಗ್ರಹಿಸಿದರು.
  ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಮಡಿವಾಳ ಸಮುದಾಯವನ್ನು ದೇಶದ ೧೮ ರಾಜ್ಯಗಳಲ್ಲಿ ಪರಿಶಿಷ್ಟಜಾತಿಗೆ ಸೇರಿಸಲಾಗಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಈ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸದೆ ಕಡೆಗಣಿಸಲಾಗಿದೆ ಎಂದು ದೂರಿದರು.
    ಎಲ್ಲಾ ರಾಜಕೀಯ ಪಕ್ಷಗಳು, ಸರ್ಕಾರಗಳು ಈ ಸಮುದಾಯವನ್ನು ನಿರ್ಲಕ್ಷ್ಯತನದಿಂದ ಕಾಣುವ ಮೂಲಕ ಮಡಿವಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ದಲಿತರ ವಿರೋಧವಿದೆ ಎಂದು ಸಚಿವ ಕೋಟ ಶ್ರಿನಿವಾಸ ಪೂಜಾರಿಯವರು
    ಲಿಖಿತ ಉತ್ತರ ನೀಡುವ ಮೂಲಕ ಬೇಜವಾಬ್ದಾರಿಯಿಂದ ವರ್ತಿಸಿದ್ದು, ಸಮಾಜವನ್ನು ಅವಹೇಳನ ಮಾಡಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಈಗಾಗಲೇ ರಾಜ್ಯ ಸರ್ಕಾರ ಎಸ್‌ಸಿ/ಎಸ್‌ಟಿ ಮೀಸಲಾತಿ ಹೆಚ್ಚಿಸಿರುವುದನ್ನು ಸಮಾಜ ಸ್ವಾಗತಿಸುತ್ತದೆ. ನಾವು ಯಾವುದೇ ಜಾತಿಯ ವಿರೋಧಿಗಳಲ್ಲ, ಪರಿಶಿಷ್ಟಜಾತಿಗೆ ಒಳಪಡುವ ಎಲ್ಲಾ ಅರ್ಹತೆಗಳನ್ನು ಮಡಿವಳ ಸಮಾಜ ಹೊಂದಿದೆ ಎಂದು ಈ ಹಿಂದೆಯೇ ಅನ್ನಪೂರ್ಣಮ್ಮ ಆಯೋಗ ವರದಿ ನೀಡಿದ್ದರೂ ಜಾರಿಗೊಳಿಸುವಲ್ಲಿ ಸರ್ಕಾರಗಳು ಮಲತಾಯಿ ಧೋರಣೆ ಅನುಸರಿಸುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಸರ್ಕಾರ ತಕ್ಷಣ ಜಾತಿವಾರು ಸಮೀಕ್ಷೆ ವರದಿ ಬಿಡುಗಡೆ ಮಾಡಬೇಕು. ಮುಂದಿನ ದಿನಗಳಲ್ಲಿ ಮೀಸಲಾತಿಗೆ ಒತ್ತಾಯಿಸಿ ಸಮುದಾಯದ ಶ್ರೀಗಳ ನೇತೃತ್ವದಲ್ಲಿ ಹೋರಾಟ ಆರಂಭಿಸಲಾಗುವುದು ಎಂದರು.
    ಉಪಾಧ್ಯಕ್ಷರಾದ ಎನ್.ಆರ್ ಮಂಜುನಾಥ್, ಸಿದ್ದಾಪುರ ಮಂಜಪ್ಪ, ಪ್ರಧಾನ ಕಾರ್ಯದರ್ಶಿ ರಮೇಶ್, ಖಜಾಂಚಿ ದಿನೇಶ್, ಸಹಕಾರ್ಯದರ್ಶಿಗಳಾದ ಚಲುವಯ್ಯ, ತಿಪ್ಪೇಶ್ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು

No comments:

Post a Comment