Thursday, October 20, 2022

ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ : ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ೧೦ ಕ್ವಿಂಟಲ್ ಅಕ್ಕಿ ವಶ


ಭದ್ರಾವತಿ ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ಮೊಹ್ಮದ್ ಯೂನಸ್ ಎಂಬಾತ ಅಕ್ರಂ ಮತ್ತು ನವೀದ್ ಎಂಬುವರ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಒಟ್ಟು ೨೨ ಸಾವಿರ ರು. ಮೌಲ್ಯದ ೧೦ ಕ್ವಿಂಟಲ್ ಅಕ್ಕಿಯನ್ನು ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿರುವುದು.
    ಭದ್ರಾವತಿ, ಅ. ೨೦: ಇತ್ತೀಚೆಗೆ ತಾಲೂಕಿನಾದ್ಯಂತ ಪಡಿತರ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ರಮಗಳು ಹೆಚ್ಚಾಗುತ್ತಿರುವುದು ಬೆಳಕಿಗೆ ಬರುತ್ತಿವೆ. ಮತ್ತೊಂದೆಡೆ ಈ ಅಕ್ರಮ ನ್ಯಾಯಬೆಲೆ ಅಂಗಡಿಗಳ ವಿರುದ್ಧ ನಿರಂತರ ಹೋರಾಟ ಸಹ ನಡೆಯುತ್ತಿದೆ. ಈ ನಡುವೆ ಇದೀಗ ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಮತ್ತೊಂದು ಹೊಸ ಪ್ರಕರಣ ಬಯಲಿಗೆ ಬಂದಿದೆ.
    ಕಳೆದ ೨ ದಿನಗಳ ಹಿಂದೆ ಪಡಿತರ ಅಕ್ಕಿಯನ್ನು ಹೋಲುವ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ತಾಲೂಕಿನ ದೊಣಬಘಟ್ಟ ಗ್ರಾಮದಲ್ಲಿ ಮೊಹ್ಮದ್ ಯೂನಸ್ ಎಂಬಾತ ಅಕ್ರಂ ಮತ್ತು ನವೀದ್ ಎಂಬುವರ ಮನೆಯಲ್ಲಿ ಒಟ್ಟು ೨೨ ಸಾವಿರ ರು. ಮೌಲ್ಯದ ೧೦ ಕ್ವಿಂಟಲ್ ಅಕ್ಕಿಯನ್ನು ಸಂಗ್ರಹಿಸಿಟ್ಟಿದ್ದು, ಖಚಿತ ಮಾಹಿತಿ ಮೇರೆಗೆ ಗ್ರಾಮಾಂತರ ವೃತ್ತ ನಿರೀಕ್ಷಕ ಎನ್.ಎಂ ಗುರುರಾಜ್ ನೇತೃತ್ವದ ತಂಡ ದಾಳಿ ನಡೆಸಿದೆ.
    ಈ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಲು ಸಂಗ್ರಹಿಸಿಡಲಾಗಿತ್ತು ಎನ್ನಲಾಗಿದೆ. ಆದರೆ ಈ ಅಕ್ಕಿ ಕಳಪೆ ಗುಣಮಟ್ಟದ ಅಕ್ಕಿಯೋ, ಇಲ್ಲವೋ ಎಂಬುದು ಇನ್ನೂ ತಿಳಿದು ಬಂದಿಲ್ಲ. ಈ ಸಂಬಂಧ ಆಹಾರ ಇಲಾಖೆ ನಿರೀಕ್ಷಕ ಮಂಜು ದೂರು ನೀಡಿದ್ದಾರೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಕೃಷ್ಣಮೂರ್ತಿ, ಕುಮಾರನಾಯ್ಕ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

No comments:

Post a Comment