ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್
ಭದ್ರಾವತಿ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆರೋಗ್ಯ ರಕ್ಷಾ ಸಮಿತಿ ಸಾಮಾನ್ಯ ಸಭೆ ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆಯಿತು. ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್, ಉಪಾಧ್ಯಕ್ಷ ಎಂ. ಮಣಿ ಎಎನ್‌ಎಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಭದ್ರಾವತಿ : ಆಸ್ಪತ್ರೆಗೆ ಬರುವ ರೋಗಿಗಳೊಂದಿಗೆ ವೈದ್ಯರು ಮತ್ತು ಸಿಬ್ಬಂದಿಗಳು ಸೌಜನ್ಯತೆಯಿಂದ ನಡೆದುಕೊಳ್ಳಬೇಕು, ರೋಗಿಗಳಿಗೆ ವಿನಾಕಾರಣ ತೊಂದರೆ ಕೊಡಬಾರದು. ಯಾವುದೇ ರೋಗದಿಂದ ಬಳಲುತ್ತಿದ್ದರೂ ಅವರಿಗೆ ಮೊದಲು ಧೈರ್ಯ ತುಂಬುವ ಕೆಲಸ ಮಾಡುವ ಮೂಲಕ ಸೂಕ್ತ ಚಿಕಿತ್ಸೆ ನೀಡಬೇಕು. ಆ ಮೂಲಕ ವೈದ್ಯರು ಮತ್ತು ಸಿಬ್ಬಂದಿಗಳ ಮೇಲೆ ಜನರು ಹೊಂದಿರುವ ಭಾವನೆಗಳಿಗೆ ಧಕ್ಕೆಬಾರದಂತೆ ಕಾರ್ಯ ನಿರ್ವಹಿಸಬೇಕೆಂದು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಕಿವಿ ಮಾತು ಹೇಳಿದರು.
ಅವರು ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದ್ದ ಆರೋಗ್ಯ ರಕ್ಷಾ ಸಮಿತಿ ಸಾಮಾನ್ಯ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು.
ಸುಮಾರು ೩-೪ ತಿಂಗಳ ಹಿಂದೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ರವರು ನಗರಕ್ಕೆ ಆಗಮಿಸಿ ಭದ್ರಾ ಕಾಲೋನಿಯಲ್ಲಿರುವ ೮ ಎಕರೆ ಭೂಮಿಯಲ್ಲಿ ೧೫೦ ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಾಣ ಮಾಡಲು ಪರಿಶೀಲನೆ ಮಾಡಿ ಹೋಗಿದ್ದಾರೆ. ಆದರೆ ಇಲಾಖೆ ಅಧಿಕಾರಿಗಳು ಭೂಮಿಗೆ ಸಂಬಂಧಿಸಿದಂತೆ ಇನ್ನೂ ಖಾತೆ ಮಾಡಿಸಿಲ್ಲ. ಅಧಿಕಾರಿಗಳ ನಿರ್ಲಕ್ಷತನ ಹೆಚ್ಚಾಗಿದೆ. ಜನರಿಂದ ಸಾಕಷ್ಟು ದೂರುಗಳು ಬರುತ್ತಿವೆ. ನ್ಯೂನತೆಗಳನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ನಗರ ಮತ್ತು ಗ್ರಾಮಾಂತರ ಪ್ರದೇಶದದಲ್ಲಿನ ಆಸ್ಪತ್ರೆಗಳು ಸರಿಯಾಗಿ ನಿರ್ವಹಣೆಯಾಗುತ್ತಿಲ್ಲ. ಆಸ್ಪತ್ರೆಯಲ್ಲಿ ಊಟ, ಸ್ವಚ್ಚತೆ ಸರಿಯಾಗಿಲ್ಲ ಎಂಬ ದೂರುಗಳು ಬಂದಿವೆ. ಇನ್ನು ಮುಂದೆ ಪ್ರತಿ ೧೫ ದಿನಕ್ಕೊಮ್ಮೆ ಸಮಿತಿ ಸಭೆ ಹಾಗೂ ವೈದ್ಯರ ಮತ್ತು ಸಿಬ್ಬಂದಿಗಳ ಪ್ರತ್ಯೇಕ ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಸಲಹೆ ವ್ಯಕ್ತಪಡಿದರು.
ರಕ್ಷಾ ಸಮಿತಿ ಸದಸ್ಯ ಬಿ.ಎಸ್ ಅಭಿಲಾಶ್ ಮಾತನಾಡಿ, ಆಸ್ಪತ್ರೆ ಸಮರ್ಪಕವಾಗಿ ಕಾರ್ಯ ನಿರ್ವಹಿಸಿಕೊಂಡು ಹೋಗುವಲ್ಲಿ ಆಡಳಿತ ಮಂಡಳಿ ವಿಫಲವಾಗಿದೆ. ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಜನರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿಲ್ಲ. ಆಸ್ಪತ್ರೆ ವೈದ್ಯರು ಕರ್ತವ್ಯದ ಅವಧಿಯಲ್ಲಿ ಕ್ಲಿನಿಕ್‌ನಲ್ಲಿರುತ್ತಾರೆ. ಕೇಳಿದರೆ ಕಾಫಿಗೆ ಹೋಗಿದ್ದಾರೆ. ಮತ್ತಿತರೆ ಸಬೂಬು ಹೇಳುತ್ತಾರೆ. ತೀರಾ ಒತ್ತಾಯಿಸಿದರೆ ಫೋನ್ ಮಾಡಿ ಕರೆಸುತ್ತಾರೆ. ೧೦೮ ವಾಹನ ಮತ್ತು ಆಂಬುಲೆನ್ಸ್ ಚಾಲಕರು ಕರ್ತವ್ಯದ ವೇಳೆ ಮದ್ಯ ಸೇವನೆ ಮಾಡಲು ಕುಳಿತಿರುತ್ತಾರೆ. ವೃದ್ದರು ವಯಸ್ಸಿನ ಹಾಗು ಮತ್ತಿತರೆ ದೃಢೀಕರಣಕ್ಕೆ ೫೦೦ ರು. ಲಂಚ ಪಡೆಯುತ್ತಿದ್ದಾರೆಂದು ದೂರಿದರು.
ಹೆರಿಗೆಗೆ ಬರುವ ಮಹಿಳೆಯರು ಕಡಿಮೆಯಾಗಿದ್ದಾರೆ. ಆರಂಭದಿಂದ ೯ ತಿಂಗಳವರೆಗೆ ಚಿಕಿತ್ಸೆಪಡೆದು ಕೊನೆ ಹಂತದಲ್ಲಿ ಇಲ್ಲಿನ ವೈದ್ಯರಿಂದ ಖಾಸಗಿ ಆಸ್ಪತ್ರೆಗೆ ಹೋಗಿ ಹೆರಿಗೆಗೆ ದಾಖಲಾಗುತ್ತಿದ್ದಾರೆ. ಇದರಿಂದ ಸಕಲ ವ್ಯವಸ್ಥೆ ಹೊಂದಿರುವ ಆಸ್ಪತ್ರೆಗೆ ಕೆಟ್ಟ ಹೆಸರು ಬರುತ್ತಿದೆ. ಹೊಸ ಮಹಿಳಾ ಆಸ್ಪತ್ರೆ ನಿರ್ಮಾಣಕ್ಕೂ ಕಾನೂನು ತೊಡಕುಂಟಾಗಿದೆ. ಔಷಧಿಗಳನ್ನು ಸರಿಯಾಗಿ ತರಿಸದೆ ಚೀಟಿ ಬರೆದುಕೊಡುವುದು ವಾಡಿಕೆಯಾಗಿದೆ. ಟೆಂಡರ್ ಕರೆಯದೆ ಇಷ್ಟಬಂದಂತೆ ಔಷಧ, ಮತ್ತಿತರೆ ವಸ್ತುಗಳನ್ನು ಖರೀದಿಸುವುದು ಹೆಚ್ಚಾಗಿದೆ. ವೈದ್ಯರು ಮತ್ತು ಸಿಬ್ಬಂದಿಗಳ ಬೇಡಿಕೆಯಂತೆ ಅನುದಾನ, ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿದ್ದರೂ ಸಹ ಆಸ್ಪತ್ರೆಗೆ ಕೆಟ್ಟ ಹೆಸರು ಬರುತ್ತಿದೆ ವಿಷಾದ ವ್ಯಕ್ತಪಡಿಸಿದರು. ಇವರ ಆರೋಪಕ್ಕೆ ನಗರಸಭೆ ಸದಸ್ಯ ಬಷೀರ್ ಆಹಮದ್, ರಕ್ಷಾ ಸಮಿತಿ ಸದಸ್ಯರಾದ ರೇಷ್ಮಾಬಾನು, ಮಹಾದೇವ, ವಾಹಿದ್ ಮುಂತಾದವರು ಧ್ವನಿಗೂಡಿಸಿದರು.
ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾ ರಾಜಕುಮಾರ್, ಉಪಾಧ್ಯಕ್ಷ ಎಂ..ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಮಾಜಿ ಉಪಾಧ್ಯಕ್ಷ ಚನ್ನಪ್ಪ, ರಕ್ಷಾ ಸಮಿತಿ ಸದಸ್ಯರಾದ ಶಿವರಾಜ್, ಚಂದ್ರಶೇಖರ್, ಮೋಹನ್, ರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಶಂಕರಪ್ಪ ಮತ್ತು ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಸಮಜಾಯಿಸಿ ನೀಡಿ ನ್ಯೂನತೆಗಳನ್ನು ಸರಿಪಡಿಸುವುದಾಗಿ ಹೇಳಿದರು. ಸಿಬ್ಬಂದಿಗಳು, ದಾದಿಯರು, ಪಿಡಬ್ಲ್ಯೂಡಿ ಎಇಇ ಶ್ರೀನಿವಾಸ್, ಸಹಾಯಕ ಎಂಜಿನಿಯರ್ ಗಿರಿಧರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.